ಶಿವಮೊಗ್ಗ: ಆತ್ಮವಿಶ್ವಾಸ ಹಾಗೂ ಶ್ರದ್ಧೆಯಿಂದ ಮುನ್ನಡೆದರೆ ಮಹಿಳೆಯರು ಉದ್ಯಮ ಕ್ಷೇತ್ರದಲ್ಲಿ ಯಶಸ್ವಿಯಾಗುವ ಜತೆಯಲ್ಲಿ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬಹುದಾಗಿದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ನಗರದ ಮಥುರಾ ಪಾರಾಡೈಸ್ ಸಭಾಂಗಣದಲ್ಲಿ ಸ್ವೇದ ಮಹಿಳಾ ಸಂಘಟನೆ ಮತ್ತು ಭಾರತೀಯ ರೆಡ್ಕ್ರಾಸ್ ಸಂಸ್ಥೆ ಶಿವಮೊಗ್ಗ ಜಿಲ್ಲಾ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಕೌಶಲಾಭಿವೃದ್ಧಿ ಕಾರ್ಯಕ್ರಮ ಮತ್ತು ಕ್ಯಾನ್ಸರ್ ಉಚಿತ ತಪಾಸಣಾ ಜಾಗೃತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸ್ವೇದ ಮಹಿಳಾ ಸಂಸ್ಥೆಯು ಮಹಿಳೆಯರಿಗೆ ಕೌಶಲ್ಯಯುತ ತರಬೇತಿ ನೀಡುವ ಜತೆಯಲ್ಲಿ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಮಹಿಳೆಯರು ಮನೆಗಳಲ್ಲಿ ತಯಾರಿಸುವ ಆಹಾರ, ತಿನಿಸು, ಕರಕುಶಲ ವಸ್ತುಗಳ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ಕೆಲಸ ಮಾಡುತ್ತಿದೆ. ಮಹಿಳೆಯರು ಸರ್ಕಾರದ ಆರ್ಥಿಕ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ರೆಡ್ ಕ್ರಾಸ್ ಸಂಸ್ಥೆಯು ತುರ್ತು ಸಂದರ್ಭಗಳಲ್ಲಿ ಅಪಾರ ಸೇವೇಗಳನ್ನು ಸಲ್ಲಿಸುವ ಕಾರ್ಯ ನಡೆಸುತ್ತಿದೆ. ದೇಶಾದ್ಯಂತ ಲಕ್ಷಾಂತರ ಜನರ ಸೇವೆಯಿಂದ ಹೆಚ್ಚು ಜನರಿಗೆ ಆರೋಗ್ಯ ಜಾಗೃತಿ ಮೂಡಿಸುವ ಕೆಲಸ ಮಾಡಿಕೊಂಡು ಬರುತ್ತಿದೆ ಎಂದು ಹೇಳಿದರು.
ಸ್ವೇದ ಮಹಿಳಾ ಸಂಘಟನೆ ಅಧ್ಯಕ್ಷೆ ಲಕ್ಷ್ಮೀದೇವಿ ಗೋಪಿನಾಥ್ ಮಾತನಾಡಿ, ಮಹಿಳೆಯರು ಸಬಲೀಕರಣಗೊಳ್ಳಲು ಮತ್ತು ಉದ್ಯಮಶೀಲತೆ ಮಾದರಿ ಮೂಲಕ ಸಂಪೂರ್ಣ ಸಾಮಾರ್ಥ್ಯ ಅರಿತುಕೊಳ್ಳಲು ವೇದಿಕೆ ಒದಗಿಸುವ ಕೆಲಸವನ್ನು ಸ್ವೇದ ಸಂಘಟನೆ ಮಾಡುತ್ತಿದೆ. ಮಹಿಳಾ ಸ್ವಸಹಾಯ ಸಂಘಗಳಿಗೆ, ಸ್ವಂತ ಸಾಮಾರ್ಥ್ಯದಿಂದ ದುಡಿದು ಜೀವನ ರೂಪಿಸಿಕೊಳ್ಳಲು ಆಸಕ್ತಿ ಇರುವ ಮಹಿಳೆಯರಿಗೆ ಸೂಕ್ತ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.
ಸ್ವೇದ ಮಹಿಳಾ ಸಂಘಟನೆ ಕಾರ್ಯದರ್ಶಿ ಶಿಲ್ಪಾ ಗೋಪಿನಾಥ್ ಮಾತನಾಡಿ, ಸ್ವಸಹಾಯ ಗುಂಪುಗಳಲ್ಲಿ ತಯಾರಿಸುವ ವಸ್ತುಗಳಿಗೆ ಮಾರುಕಟ್ಟೆ ಕಲ್ಪಿಸುವ ವೇದಿಕೆಯಾಗಿ ಸ್ವೇದ ಕಾರ್ಯ ನಿರ್ವಹಿಸುತ್ತಿದೆ. ಮಹಿಳೆಯರು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಹೆಚ್ಚು ಹೆಚ್ಚು ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಶಿವಮೊಗ್ಗ ಜಿಲ್ಲಾ ಘಟಕದ ಅಜೀವ ಸದಸ್ಯ ಜಿ.ವಿಜಯ್ಕುಮಾರ್ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಂಗಳೂರಿನ ಮಹಾದೇವ್ ಅವರು ವಿಶೇಷ ಉಪನ್ಯಾಸ ನೀಡಿದರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿರ್ದೇಶಕ, ಕೌಶಲ್ಯಾಭಿವೃದ್ಧಿ ಚೇರ್ಮನ್ ಗಣೇಶ್ ಅಂಗಡಿ, ಸ್ವೇದ ಸಂಸ್ಥೆಯ ಅನು, ಸಹನಾ ಚೇತನ್ ಮತ್ತಿತರರು ಉಪಸ್ಥಿತರಿದ್ದರು.
