ಶಿವಮೊಗ್ಗ, ಜನವರಿ 24 : ನಗರದ ಗಾಂಧಿ ಪಾರ್ಕ್ ಬಳಿಯಿರುವ ತೋಟಗಾರಿಕಾ ಇಲಾಖೆ ಆವರಣದಲ್ಲಿ ಆಯೋಜಿಸಲಾಗಿರುವ ನಾಲ್ಕು ದಿನಗಳ ಫಲಪುಷ್ಪ  ಪ್ರದರ್ಶನ ಹಾಗೂ ಹಣ್ಣುಗಳ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಶುಕ್ರವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರು ಫಲಪುಷ್ಪ ಬೆಳೆಯಂತಹ ವಾಣಿಜ್ಯ ಕೃಷಿ ಚಟುವಟಿಕೆಗಳಿಗೆ ಆಕರ್ಷಿತರಾಗಬೇಕು ಎಂಬ ಉದ್ದೇಶದಿಂದ ಇಂತಹ ಮೇಳಗಳನ್ನು ಆಯೋಜಿಸಲಾಗುತ್ತಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಮೇಳಕ್ಕೆ ಆಗಮಿಸಿ ಮೇಳದಿಂದ ಸ್ಪೂರ್ತಿ ಪಡೆಯಬೇಕು. ಫಲಪುಷ್ಪ ಚಟುವಟಿಕೆಗಳನ್ನು ಕೈಗೊಳ್ಳುವ ರೈತರಿಗೆ ಸರ್ಕಾರದಿಂದ ಎಲ್ಲಾ ನೆರವು ಸಹ ಒದಗಿಸಲಾಗುವುದು ಎಂದು ಹೇಳಿದರು.

ಚಿತ್ತಾಕರ್ಷಕ ಹೂವಿನ ಸಿಂಗಾರ:  ವಿವಿಧ ಬಗೆಯ ಹೂವಿನ ಅಲಂಕಾರದ ಆಕೃತಿ ಜನರ ಗಮನ ಸೆಳೆಯುತ್ತಿದೆ. ಅಲ್ಲದೇ ವಿವಿಧ ಬಸವಣ್ಣ ಮತ್ತು ರೈತನ ಆಕೃತಿಗಳಿಗೆ ಹೂವಿನ ಅಲಂಕಾರ ಮಾಡಿ ಸಿಂಗಾರ ಮಾಡಲಾಗಿದೆ. ಹಣ್ಣುಗಳಲ್ಲಿ ಅರಳಿದ ಕಲಾಕೃತಿಗಳು ಗಮನ ಸೆಳೆಯುತ್ತಿವೆ.

ಔಷಧೀಯ ಸಸ್ಯಗಳು ಸೇರಿದಂತೆ ವಿವಿಧ ಬಗೆಯ ಫಲಪುಷ್ಪಗಳು ನೋಡುಗರ ಕಣ್ಣಿಗೆ ಖುಷಿಯನ್ನು ನೀಡುತ್ತಿವೆ. ಒಂದೇ ವೇದಿಕೆಯಲ್ಲಿ ಫಲಪುಷ್ಪ ಪ್ರದರ್ಶನ, ಹೂವಿನಲ್ಲಿ ಅರಳಿದ ನಾನಾ ಕಾಲಾಕೃತಿಗಳು, ತರಕಾರಿ, ಹಣ್ಣುನಲ್ಲಿ ಮಾಡಿದ ವಿವಿಧ ಕಲಾಕೃತಿಗಳು ಆಕರ್ಷಕವಾಗಿವೆ.

ಫಲ ಪುಷ್ಪ ಪ್ರದರ್ಶದಲ್ಲಿ ಭೇಟಿ ಬಚಾವೋ ಬೇಟಿ ಪಡಾವೋ ಹಾಗೂ ಮಹಿಳೆಯ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಸಂದೇಶವನ್ನು ಸಾರುವ ಪ್ರಯತ್ನ ಮಾಡಲಾಗಿದೆ. ಪ್ರದರ್ಶನದ ಸುತ್ತ ನೂರಾರು ಹೂವಿನ ಕುಂಡ, ವಿವಿಧ ಪ್ರಕಾರ ಕೆಂಪು, ಬಿಳ್ಳಿ, ಹಳದಿ ಬಣ್ಣದ ಪುಷ್ಪಗಳು ಜನರನ್ನು ಕೈಬೀಸಿ ಕರೆಯುತ್ತಿವೆ.

ಹಸಿರಿನ ಸೌಂದರ್ಯದ ಜತೆಗೆ ವೈವಿಧ್ಯಮಯ ತೋಟಗಾರಿಕಾ ಉತ್ಪನ್ನಗಳು, ವಿವಿಧ ಬಗೆಯ ಹೂವುಗಳು, ಹಣ್ಣು, ತರಕಾರಿ, ತೋಟದ ಬೆಳೆಗಳ ಸೇರಿದಂತೆ ಹೂವಿನಿಂದ ಮಾಡಿದ ಕಲಾಕೃತಿಗಳ ಪ್ರದರ್ಶನ ನೋಡುಗರನ್ನು ಬೇರೆ ಲೋಕಕ್ಕೆ ಸೆಳೆದಂತೆ ಭಾಸವಾಗುತ್ತಿದೆ.

ಬಣ್ಣ ಬಣ್ಣದ ಹೂವುಗಳಿಂದ ಬಸಬಣ್ಣ ಮತ್ತು ನೇಗಿಲು ಹಿಡಿದು ನಿಂತಿರು ರೈತ ಹಾಗೂ ಮಿಸ್ಟರ್ ಭೀಮ್ ಸೇರಿದಂತೆ ಹಲವು ಆಕರ್ಷಣೆಯ ಕಲಾಕೃತಿಗಳು ಗಮನ ಸೆಳೆಯುತ್ತಿವೆ. ಮೇಳ ಜನವರಿ 27ರವರೆಗೆ ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ನಡೆಯಲಿದೆ.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಸಿಇಒ ಎಂ.ಎಲ್.ವೈಶಾಲಿ, ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ.ನಾಯಕ್, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಡಾ.ಎಚ್.ಆರ್.ಯೋಗೇಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!