ಶಿವಮೊಗ್ಗ, ಸೆ.04 : ಮುಜರಾಯಿ ದೇವಾಲಯಗಳ ಅರ್ಚಕರಿಗೆ ಆರೋಗ್ಯ ವಿಮೆ ಸೌಲಭ್ಯವನ್ನು ಜಾರಿಗೊಳಿಸುವ ಪ್ರಸ್ತಾವನೆಯನ್ನು ಪರಿಶೀಲಿಸಲಾಗುವುದು ಎಂದು ಮುಜರಾಯಿ, ಒಳನಾಡು ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಜಿಲ್ಲೆಯಲ್ಲಿ ಒಟ್ಟು 523 ದೇವಾಲಯಗಳಿಗೆ ತಸ್ತೀಕ್ ಯೋಜನೆಯಡಿ ವಾರ್ಷಿಕ 48ಸಾವಿರ ರೂ. ನೀಡಲಾಗುತ್ತಿದೆ. ಇದರಲ್ಲಿ ಪೂಜಾ ಸಾಮಾಗ್ರಿ ಖರೀದಿಗೆ ಹಾಗೂ ಉಳಿದ ಮೊತ್ತವನ್ನು ಅರ್ಚಕರಿಗೆ ಗೌರವ ಧನವಾಗಿ ಬಳಸಲಾಗುತ್ತಿದೆ. ಈ ಮೊತ್ತವನ್ನು ಹೆಚ್ಚಿಸುವ ಬೇಡಿಕೆಯನ್ನು ಪರಿಶೀಲಿಸಲಾಗುವುದು. ನಗರದ ಕೋಟೆ ಆಂಜನೇಯ ದೇವಾಲಯದ ಜಮೀನಿನ ಸರ್ವೇ ಕಾರ್ಯ ಕೈಗೊಳ್ಳುವಂತೆ ಅವರು ಜಿಲ್ಲಾಧಿಕಾರಿ ಅವರಿಗೆ ಸೂಚಿಸಿದರು.
ಮುಜರಾಯಿ ದೇವಾಲಯಗಳ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ಅವರಿಗಿದ್ದ ಹಣಕಾಸು ಅಧಿಕಾರವನ್ನು 50ಲಕ್ಷ ರೂ. ನಿಂದ ಒಂದು ಕೋಟಿಗೆ ಏರಿಸಲು ಕ್ರಮ ಕೈಗೊಳ್ಳಲಾಗುವುದು. ದೇವಾಲಯಗಳ ಪುನರುಜ್ಜೀವನ ಇತ್ಯಾದಿ ಕುಶಲ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುವಂತೆ ಮುಜರಾಯಿ ಇಲಾಖೆಯಲ್ಲಿ ಪ್ರತ್ಯೇಕ ಇಂಜಿನಿಯರಿಂಗ್ ವಿಭಾಗ ಆರಂಭಿಸಲು ಉದ್ದೇಶಿಸಲಾಗಿದೆ ಎಂದರು.
ಹಣಗೆರೆಕಟ್ಟೆಯಲ್ಲಿರುವ ಆರಾಧನಾ ಕೇಂದ್ರದಲ್ಲಿ ಭಕ್ತಾಧಿಗಳಿಗೆ ಸೂಕ್ತ ಸೌಲಭ್ಯ ಒದಗಿಸಲು ಯೋಜನೆ ರೂಪಿಸಬೇಕು. ಪಾರ್ಕಿಂಗ್, ಪ್ರಾಣಿ ಬಲಿಗೆ ಸೂಕ್ತ ವ್ಯವಸ್ಥೆ, ಭದ್ರತೆ, ಅಡಿಗೆ ವ್ಯವಸ್ಥೆ, ಸ್ವಚ್ಛತೆಗೆ ಸಮಗ್ರ ಯೋಜನೆ ಅಗತ್ಯವಿದೆ. ಭಕ್ತಾಧಿಗಳಿಗೆ ಹುಂಡಿಗೆ ಕಾಣಿಕೆ ಹಾಕದಂತೆ ತಡೆಯುವ ಕುರಿತು ಇರುವ ದೂರುಗಳ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಅವರಿಗೆ ತಿಳಿಸಿದರು.
ಮತ್ಸ್ಯ ದರ್ಶಿನಿಗಳ ಆರಂಭ: ಬೆಂಗಳೂರಿನ ಕಬ್ಬನ್‍ಪಾರ್ಕ್‍ನಲ್ಲಿ ಇರುವ ಮಾದರಿಯಲ್ಲಿ ನಗರ ಹಾಗೂ ತಾಲೂಕು ಕೇಂದ್ರಗಳಲ್ಲಿ ಮತ್ಸ್ಯ ದರ್ಶಿನಿ ಹೊಟೇಲುಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಇನ್ನಷ್ಟು ಮೀನು ಮಾರಾಟ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಅವರು ತಿಳಿಸಿದರು.
ಜಿಲ್ಲೆಯಲ್ಲಿ ನಿಷ್ಕ್ರಿಯವಾಗಿರುವ ಮೀನುಗಾರಿಕಾ ಸಹಕಾರ ಸಂಘಗಳನ್ನು ಗುರುತಿಸಿ ಅವುಗಳಿಗೆ ಸರ್ಕಾರದಿಂದ ನೀಡಲಾಗುವ ಸೌಲಭ್ಯಗಳನ್ನು ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಬೇಕು. ಮೀನುಗಾರರಿಗೆ ಈ ವರ್ಷ ಎರಡುವರೆ ಸಾವಿರ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಸ್ಥಳೀಯವಾಗಿ ಶಾಸಕರಿಂದ ಫಲಾನುಭವಿಗಳ ಪ್ರಸ್ತಾವನೆಗಳನ್ನು ಪಡೆಯುವಂತೆ ಅವರು ಸೂಚಿಸಿದರು.
ಜಿಲ್ಲೆಯಲ್ಲಿ ಒಳನಾಡು ಜಲಸಾರಿಗೆ ಆರಂಭಿಸಲು ಸಾಧ್ಯವಿರುವ ಜಲಮಾರ್ಗಗಳನ್ನು ಗುರುತಿಸುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದರು.
ಶಾಸಕರಾದ ಅರಗ ಜ್ಞಾನೇಂದ್ರ, ಆಯನೂರು ಮಂಜುನಾಥ, ರುದ್ರೇಗೌಡ, ಪ್ರಸನ್ನಕುಮಾರ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಮೇಯರ್ ಲತಾ ಗಣೇಶ್, ಉಪ ಮೇಯರ್ ಚನ್ನಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!