ಕೆಲವು ಹಣ್ಣುಗಳು ಗಾತ್ರದಲ್ಲಿ ದೊಡ್ಡದಾಗಿದ್ದುದರಿಂದ ತಿನ್ನುವುದಿಲ್ಲ, ಕೊಂಡೊಯ್ಯುವುದಿಲ್ಲ. ಹಲಸಿನ ಹಣ್ಣು ಎಷ್ಟೇ ರುಚಿಯಿದ್ದರೂ ಬಿಡಿಸಿಕೊಟ್ಟರೆ ಮಾತ್ರ ತಿನ್ನುತ್ತೇವೆ. ಹಾಗೆಯೇ ಪಪ್ಪಾಯಿ ಭಾರೀ ಗಾತ್ರದ್ದಿದ್ದರೆ ಮಾರುಕಟ್ಟೆಯಲ್ಲಿ ಖರೀದಿ ಆಗುವುದಿಲ್ಲ. ಗಾತ್ರ ಚಿಕ್ಕದಿರಬೇಕು, ತಿನ್ನಲು ರುಚಿಯಿರಬೇಕು, ಕತ್ತರಿಸಿ ನೋಡಿದರೆ ಹಳದಿ ಬಣ್ಣಕ್ಕಿಂತ ಕೆಂಪಾಗಿದ್ದರೆ ಅದಕ್ಕೆ ಹೆಚ್ಚು ಬೇಡಿಕೆ. ಈ ಎಲ್ಲಾ ಗುಣಗಳನ್ನೂ ಹೊಂದಿ ವ್ಯವಸ್ಥಿತವಾಗಿ ಪಪ್ಪಾಯಿ ಬೆಳೆದು ಬದುಕು ಅರಳಿಸಿಕೊಂಡವನು ನಾಡಕಲಸಿಯ ಗೋಪಾಲಕೃಷ್ಣ.
ಗುಡ್ಡದ ಕೆಳಗಿನ ತೋಟ
ಗುಡ್ಡಗಳು ಮಳೆಯನ್ನು ಹಿಡಿದಿಡುತ್ತವೆ. ಗುಡ್ಡ ಬಿಸಿಲಿನ ಝಳವನ್ನು ಕಡಿಮೆ ಮಾಡುತ್ತದೆ. ಗುಡ್ಡದ ಕೆಳಗಿನ ತೋಟಗಳನ್ನು ಕಾಪಾಡಿಕೊಳ್ಳುವುದು ಸುಲಭವಲ್ಲ. ಇಳಿಜಾರಿನಲ್ಲಿ ಮಳೆನೀರು ಓತಪ್ರೋತವಾಗಿ ಹರಿಯುತ್ತದೆ. ಇದಕ್ಕೆ ವ್ಯವಸ್ಥಿತವಾದ ಬದುಗಳು, ಇಂಗುಗುಂಡಿಗಳು ಬೇಕು. ಅಂತಹ ಎಲ್ಲಾ ಗಟ್ಟಿ ಸಾಮಥ್ರ್ಯವನ್ನೂ ಇಟ್ಟುಕೊಂಡು ಗೋಪಾಲ ತಮ್ಮ ನೆಲದಲ್ಲಿ ತೈವಾನಿನ ‘ರೆಡ್ ಲೇಡಿ’ ಪಪ್ಪಾಯಿ ಬೆಳೆದಿದ್ದಾರೆ. ಇದು ಆ ದೇಶದ್ದೇ ಆದ್ದರಿಂದ ತೈವಾನಿನ ಹೆಸರೂ ಸೇರಿಕೊಂಡಿದೆ. ತೈವಾನಿಗೂ, ಗೋಪಾಲನಿಗೂ ಏನು ಸಂಬಂಧ ಎಂದರೆ ಈ ಪಪ್ಪಾಯಿಯ ಬಣ್ಣ, ರುಚಿ ಮತ್ತು ಬೆಳವಣಿಗೆ ಗೋಪಾಲನನ್ನು ಆಕರ್ಷಿಸಿದೆ. ತೋಟದ ತುಂಬೆಲ್ಲಾ ಪಪ್ಪಾಯಿ ಬೆಳೆದು ಫಲವಂತಿಕೆಯನ್ನು ತಂದುಕೊಟ್ಟಿದೆ.
ಮೋಸದ ಮಧ್ಯೆ ಎದ್ದುನಿಂತ
ಯಾರೋ ಹೇಳಿದರು ಎಂದು ಗುಡ್ಡದ ತಲೆಗಟ್ಟಿನಲ್ಲಿರುವ ಪಪ್ಪಾಯಿ ಬೆಳೆದ ಗೋಪಾಲಕೃಷ್ಣ ಇದಕ್ಕೆ ಬೇಕಾದ ಸಸಿ ತಂದದ್ದು ಕೃಷಿ ವಿಜ್ಞಾನ ಕೇಂದ್ರ ನವಿಲೆಯಿಂದ. ಒಂದು ಗಿಡಕ್ಕೆ ಸಾಗಾಣಿಕೆ ವೆಚ್ಚ ಒಳಗೊಂಡಂತೆ 16 ರೂಪಾಯಿಗಳಾಯಿತು. ಒಂದು ಸಾವಿರ ಗಿಡ ನೆಟ್ಟು ಯಶಸ್ವಿಯಾದ. ಆದರೆ ಬೆಳೆದ ಬೆಳೆಯನ್ನು ಕೊಳ್ಳುವವರು ಕೆಲವರು ಹಣ ಕೊಡಲೇ ಇಲ್ಲ. ಇದರಿಂದ ಧೃಡಿಗೆಡದೇ ಮತ್ತೆ ಬೆಳೆ ಬೆಳೆದ. ಈತನ ತೋಟ, ಕಸುಬುಗಾರಿಕೆ, ಶ್ರದ್ಧೆಯನ್ನು ಗಮನಿಸಿದ ಮಾರಾಟಗಾರರು ಪಪ್ಪಾಯಿಯನ್ನು ಬಹುಬೇಡಿಕೆಯೊಂದಿಗೆ ಖರೀದಿ ಮಾಡುತ್ತಿದ್ದಾರೆ. ಮೋಸದ ಮಧ್ಯೆಯೂ ಗೋಪಾಲಕೃಷ್ಣ ವ್ಯವಸ್ಥಿತ ರೈತನಾಗಿ ಎದ್ದುನಿಂತಿದ್ದಾನೆ. ಈ ವರ್ಷ ಪಪ್ಪಾಯಿ ಬೆಳೆಯಲ್ಲಿ ಮೂರು ಲಕ್ಷ ಲಾಭ ತೆಗೆದಿದ್ದು, ಯಶಸ್ಸು ಕಂಡಿದ್ದಾನೆ. ತೋಟದ ತುಂಬಾ ಮಿಶ್ರ ಬೆಳೆಗಳಾದ ಪೈನಾಪಲ್, ಅಡಿಕೆ, ಬಾಳೆ, ಅಡಿಕೆ ಬೆಳೆದು ಸಮರ್ಥ ರೈತರಿಗೆ ಮಾದರಿಯಾಗಿದ್ದಾನೆ.
ತೋಟದ ತುಂಬಾ ಪಪ್ಪಾಯ
ಪಪ್ಪಾಯಿ ಹೆಚ್ಚು ಶ್ರಮ ಬೇಡದ ಲಾಭದಾಯಕ ಬೆಳೆ. ರೈತ ಈ ಬೆಳೆಯಲ್ಲಿ ಹೆಚ್ಚು ಆಸಕ್ತಿ ವಹಿಸಬೇಕು ಎನ್ನುವ ಗೋಪಾಲಕೃಷ್ಣ ತನ್ನ ಕೃಷಿಯಲ್ಲಿ ಸಹಕರಿಸುತ್ತಿರುವ ಪತ್ನಿ ಸುಮಾ ಅವರನ್ನು ನೆನೆಯುತ್ತಾನೆ. ಕೆಲಸದ ಜೊತೆಯಲ್ಲಿ ಕಾಲ ಕಾಲಕ್ಕೆ ಕರಾರುವಾಕ್ಕಾದ ಸಲಹೆ-ಸಹಕಾರ ನೀಡುತ್ತಿರುವ ಸಹಾಯಕ ತೋಟಗಾರಿಕಾ ಅಧಿಕಾರಿ ರಮೇಶ್ ಬಿ.ಯವರ ಚಿಂತನೆ ನನಗೆ ಬೆನ್ನೆಲುಬಾಗಿದೆ ಎನ್ನುತ್ತಾನೆ. ಗೋಪಾಲಕೃಷ್ಣ ಬೆಳೆದ ಪಪ್ಪಾಯ ಮಹಾನಗರಿಗಳನ್ನು ಸೇರುತ್ತಿದೆ. ಬೆಳೆದ ಬೆಳೆ ಬೇಗ ಮಾರುಕಟ್ಟೆಯನ್ನು ತಲುಪದಿದ್ದರೆ ಬೆಳೆಗಾರ ತೋಟಗಾರಿಕೆ ವಿಚಾರದಲ್ಲಿ ಭಾರೀ ನಷ್ಟ ಅನುಭವಿಸುತ್ತಾನೆ. ಕೃಷಿ ಉತ್ಪನ್ನ ಮಾರುಕಟ್ಟೆ ಶೀತಲ ಘಟಕವೊಂದನ್ನು ನಿರ್ಮಿಸಿ ಮಲೆನಾಡಿನಲ್ಲಿ ಬೆಳೆಯುವ ಎಲ್ಲಾ ಹಣ್ಣುಗಳಿಗೆ ಯೋಗ್ಯ ಬೆಲೆ ದೊರಕುವಂತೆ ಮಾಡಬೇಕು ಎನ್ನುತ್ತಾನೆ.
ಬಿಸಿಲು, ಮಳೆ, ಛಳಿ, ಗಾಳಿಯೆನ್ನದೇ ವರ್ಷವಿಡೀ ತೋಟದಲ್ಲಿಯೇ ಕೆಲಸ ಮಾಡುವ ಈ ಕಾಯಕಯೋಗಿ ತನ್ನ ಮೊಬೈಲನ್ನೂ ಮರಕ್ಕೆ ಸಿಕ್ಕಿಸಿರುತ್ತಾನೆ. ತಾನೂ ದುಡಿಯುತ್ತಾನೆ, ತನಗೆ ತಿಳಿದದ್ದನ್ನು ಇತರರಿಗೆ ಪರಿಚಯಿಸುತ್ತಾನೆ. ಇವನ ನಮ್ರತೆ, ಕೃಷಿಜ್ಞಾನ ಮೆಚ್ಚುವಂತಹುದು.
ಸಾಧನೆ -ಸಹಕಾರ-ಅನುಭವ ಹಂಚಿಕೊಳ್ಳಲು ಸಂಪರ್ಕ: 9945760757