ಶಿವಮೊಗ್ಗ, ಆ.01 : ಸರ್ಕಾರದ ನಿರೀಕ್ಷೆ ಹಾಗೂ ವೇಗಕ್ಕೆ ತಕ್ಕಂತೆ ಎಲ್ಲಾ ಇಲಾಖಾ ಅಧಿಕಾರಿಗಳು ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಅಭಿವೃದ್ಧಿ ಕಾಮಗಾರಿಗಳ ಅನುಷ್ಟಾನಕ್ಕಾಗಿ ಗರಿಷ್ಟ ಪ್ರಯತ್ನ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ನೂತನ ಸಭಾಂಗಣದಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳ ಸಭೆ ನಡೆಸಿದರು.
ಶಿಸ್ತುಕ್ರಮ ಎಚ್ಚರಿಕೆ: ಮುಖ್ಯಮಂತ್ರಿ ಅವರ ಜಿಲ್ಲೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳ ಜವಾಬ್ದಾರಿಯೂ ಹೆಚ್ಚಾಗಿದೆ. ಅಭಿವೃದ್ಧಿ ಕಾರ್ಯದಲ್ಲಿ ಶಿವಮೊಗ್ಗ ಜಿಲ್ಲೆಯನ್ನು ನಂಬರ್ ವನ್ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯ ನಿರ್ವಹಿಸಬೇಕು. ಜನರ ಅಹವಾಲುಗಳಿಗೆ ಸರಿಯಾಗಿ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಕಳೆದ ಎರಡು ದಿನಗಳಲ್ಲಿ ಜಿಲ್ಲೆಯ ಹಲವು ತಾಲೂಕುಗಳಿಗೆ ಭೇಟಿ ನೀಡಿದ್ದು, ಇಲ್ಲಿನ ಸಮಸ್ಯೆಗಳ ಅರಿವಾಗಿದೆ. ಅರಣ್ಯ ಇಲಾಖೆ ಕಾಯ್ದೆಯ ವ್ಯಾಪ್ತಿಯಲ್ಲಿ ಜನರಿಗೆ ಸ್ಪಂದಿಸುವ ಕಾರ್ಯವನ್ನು ಮಾಡಬೇಕು. ಜನರ ಅರ್ಜಿಗಳನ್ನು ತಿಂಗಳುಗಟ್ಟಲೆ ವಿಲೇವಾರಿ ಮಾಡದೆ ಬಾಕಿಯಿರಿಸುವ ಪರಿಪಾಟ ಸಲ್ಲದು. ವಿದ್ಯುತ್ ಸಮಸ್ಯೆ ಹಾಗೂ ರಸ್ತೆ ಸಂಪರ್ಕ ಕಲ್ಪಿಸುವ ಕುರಿತಾದ ಅಹವಾಲುಗಳನ್ನು ಆದ್ಯತೆ ಮೇರೆಗೆ ಬಗೆಹರಿಸಬೇಕಾಗಿದೆ ಎಂದು ಅವರು ಹೇಳಿದರು.
ವಾಟ್ಸಾಪ್ ಗ್ರೂಪ್ ರಚನೆ: ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಒಳಗೊಂಡ ವಾಟ್ಸಾಪ್ ಗ್ರೂಪ್ ಈಗಾಗಲೇ ರಚಿಸಲಾಗಿದ್ದು, ಇನ್ನು ಮುಂದೆ ಇಲಾಖಾ ಸಮಸ್ಯೆಗಳು, ಆಗಬೇಕಾದ ಕೆಲಸ ಕಾರ್ಯಗಳ ಕುರಿತು ಮಾತ್ರವಲ್ಲದೆ ಸಾರ್ವಜನಿಕ ಅಹವಾಲುಗಳನ್ನು ಅದರಲ್ಲಿ ಹಾಕಲಾಗುವುದು. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಅದಕ್ಕೆ ಸ್ಪಂದಿಸಿ ಅಲ್ಲಿಯೇ ಸಂದೇಶ ಹಾಕಬೇಕು. ಶೀಘ್ರ ಸಂವಹನಕ್ಕೆ ವಾಟ್ಸಾಪ್ ಅತ್ಯಂತ ಉತ್ತಮ ಮಾರ್ಗವಾಗಿದ್ದು, ಅದನ್ನು ಗರಿಷ್ಟ ಬಳಕೆ ಮಾಡಬೇಕು. ಯಾವುದೇ ಅಧಿಕಾರಿಗಳು ವಾಟ್ಸಾಪ್ ಸಂದೇಶಗಳನ್ನು ನಿರ್ಲಕ್ಷ್ಯ ಮಾಡಿದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಕೆ.ಎ.ದಯಾನಂದ, ಪೊಲೀಸ್ ವರಿಷ್ಟಾಧಿಕಾರಿ ಡಾ.ಅಶ್ವಿನಿ, ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್, ಅಪರ ಜಿಲ್ಲಾಧಿಕಾರಿ ಅನುರಾಧ, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಟನಿ ಮರಿಯಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಅಭಿವೃದ್ಧಿ ಪ್ರಸ್ತಾವನೆಗಳ ಪರಿಶೀಲನೆ: ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಬಳಿಕ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಜಿಲ್ಲೆಯಲ್ಲಿ ಕೈಗೊಳ್ಳಬೇಕಾಗಿರುವ ಹಾಗೂ ಅನುಷ್ಟಾನದಲ್ಲಿ ತೊಡಕುಂಟಾಗಿರುವ ಯೋಜನೆಗಳ ಮಾಹಿತಿ ನೀಡಿದರು.
ಶಿವಮೊಗ್ಗ ಹೊರವಲಯದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ವಿಮಾನ ನಿಲ್ದಾಣಕ್ಕಾಗಿ 590ಎಕ್ರೆ ಭೂಮಿಯನ್ನು ಈಗಾಗಲೇ ಹಸ್ತಾಂತರಿಸಲಾಗಿದೆ. ಆದರೆ ಅದರಲ್ಲಿ ಕೆಲವು ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸಬೇಕಾಗಿದೆ. ಶಿವಮೊಗ್ಗ- ಹರಿಹರ ರೈಲು ಮಾರ್ಗ ಡಬ್ಲಿಂಗ್ ಪ್ರಸ್ತಾವನೆಯಿದ್ದು, ಭೂಸ್ವಾಧೀನಕ್ಕಾಗಿ 38ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗ ಯೋಜನೆ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ. ಭದ್ರಾವತಿ-ಸಾಗರ ಬೈಪಾಸ್ ಕಾಮಗಾರಿ ಪ್ರಗತಿಯಲ್ಲಿದ್ದು, ಅದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ನಗರದಲ್ಲಿ 17ಕಿಮಿ ವರ್ತುಲ ರಸ್ತೆ ನಿರ್ಮಾಣ ಯೋಜನೆಯಿದೆ. ಕೆಶಿಪ್ ಅಡಿ ಅಭಿವೃದ್ಧಿಪಡಿಸಲಾಗಿರುವ ನವಿಲಕೆರೆ ರಸ್ತೆ ಕಾಮಗಾರಿ ತಾಂತ್ರಿಕ ತೊಡಕಿನಿಂದ ಅರ್ಧದಲ್ಲಿಯೇ ಸ್ಥಗಿತಗೊಂಡಿದೆ. ಶಿಕಾರಿಪುರದಲ್ಲಿ ಯುಜಿಡಿ ನಿರ್ಮಾಣ ಕಾಮಗಾರಿ ನೆನಗುದಿಗೆ ಬಿದ್ದಿದ್ದು, ಅದನ್ನು ಪೂರ್ಣಗೊಳಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಒಟ್ಟು 507 ಕೋಟಿ ರೂ. ಮೊತ್ತದ 24 ಕಾಮಗಾರಿಗಳು ನಡೆಯುತ್ತಿವೆ. ಆದರೆ ಇದುವರೆಗೆ ಬಿಡುಗಡೆಯಾದ ಅನುದಾನದಲ್ಲಿ ಶೇ.14ರಷ್ಟು ಆರ್ಥಿಕ ಪ್ರಗತಿ ಸಾಧಿಸಲಾಗಿದ್ದು, ನಿಗದಿತ ಅವಧಿಯ ಒಳಗಾಗಿ ಕಾಮಗಾರಿಗಳನ್ನು ಪೂರ್ತಿಗೊಳಿಸಿ ಯೋಜನೆ ಪೂರ್ಣಗೊಳಿಸಬೇಕು ಎಂದು ಮಣಿವಣ್ಣನ್ ಅವರು ಸೂಚನೆ ನೀಡಿದರು.