ಶಿವಮೊಗ್ಗ, ಅಕ್ಟೋಬರ್ 23 : ಕಳೆದ ಒಂದು ವಾರದಿಂದ ಸುರಿದ ಭಾರೀ ಮಳೆಗೆ ಹಾನಿಗೀಡಾಗಿರುವ ಪ್ರದೇಶಗಳಿಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕ್ಯಾ.ಮಣಿವಣ್ಣನ್ ಅವರು ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮನೆಗಳಿಗೆ ನೀರು ನುಗ್ಗಿ ಹಾನಿಗೀಡಾಗಿರುವ ಮಂಡ್ಲಿ, ಮಲವಗೊಪ್ಪ ಪ್ರದೇಶಕ್ಕೆ ಭೇಟಿ ನೀಡಿದ ಅವರು, ಮಳೆಯಿಂದ ಉಂಟಾಗಿರುವ ಹಾನಿ ಪರಿಶೀಲನೆ ನಡೆಸಿದರು. ಮಲವಗೊಪ್ಪದಲ್ಲಿ ಭಾರೀ ಮಳೆಯಿಂದ ಕುಸಿದಿರುವ ಮನೆಯನ್ನು ಪರಿಶೀಲಿಸಿದ ಅವರು, ತಾತ್ಕಾಲಿಕ ವ್ಯವಸ್ಥೆಯನ್ನು ತಕ್ಷಣ ಕಲ್ಪಿಸುವಂತೆ ಹಾಗೂ ಅಗತ್ಯವಿದ್ದರೆ ಕಾಳಜಿ ಕೇಂದ್ರವನ್ನು ಪ್ರಾರಂಭಿಸುವಂತೆ ಜಿಲ್ಲಾಧಿಕಾರಿ ಅವರಿಗೆ ತಿಳಿಸಿದರು.
ಭದ್ರಾವತಿ ತಾಲೂಕಿನಲ್ಲಿ ಹಾನಿಗೀಡಾಗಿರುವ ರಸ್ತೆ ಹಾಗೂ ಸೇತುವೆ ಪರಿಶೀಲನೆ ನಡೆಸಿದ ಅವರು, ಮಳೆಯಿಂದ ರಸ್ತೆ, ಸೇತುವೆ ಸೇರಿದಂತೆ ಸಾರ್ವಜನಿಕ ಆಸ್ತಿಪಾಸ್ತಿಗೆ ಉಂಟಾಗಿರುವ ಹಾನಿಯ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.
ಇದಕ್ಕೂ ಮೊದಲು ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು, ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಭದ್ರಾವತಿ ತಾಲೂಕಿನಲ್ಲಿ ಒಂದು ಜೀವಹಾನಿ ಸಂಭವಿಸಿದ್ದು, ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಕೃಷಿ ಭೂಮಿಗೆ ಉಂಟಾಗಿರುವ ಹಾನಿಯ ಬಗ್ಗೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ. ಮನೆ ಕಳೆದುಕೊಂಡವರಿಗೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಪರಿಹಾರವನ್ನು ಒದಗಿಸಲಾಗುವುದು. ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿರುವ ಪ್ರಕರಣಗಳಲ್ಲಿ ತುರ್ತು ಪರಿಹಾರ ಒದಗಿಸಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಮಾಹಿತಿ ನೀಡಿದರು.
ಮಳೆಯಿಂದ ಕುಸಿಯಲು ಸಾಧ್ಯತೆಯಿರುವ ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳನ್ನು ತಕ್ಷಣ ಗುರುತಿಸಬೇಕು. ಯಾವುದೇ ಕಾರಣಕ್ಕೂ ಅಂತಹ ಕಟ್ಟಡಗಳಲ್ಲಿ ತರಗತಿಗಳನ್ನು ನಡೆಸದೆ ಪರ್ಯಾಯ ವ್ಯವಸ್ಥೆ ಮಾಡಬೇಕು. ನೀರು ನುಗ್ಗಿರುವ ಕಡೆಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ನೀರು ತುಂಬಿ ಒಡ್ಡು ಒಡೆಯಬಹುದಾದ ಕೆರೆಗಳನ್ನು ಗುರುತಿಸಿ ಒಡೆಯದಂತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಣಿವಣ್ಣನ್ ಅವರು ಸೂಚನೆ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಅಪರ ಜಿಲ್ಲಾಧಿಕಾರಿ ಅನುರಾಧ, ತಹಶೀಲ್ದಾರ್ ಗಿರೀಶ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.