ಶಿವಮೊಗ್ಗ, ಅಕ್ಟೋಬರ್ 23: ಕಳೆದ ಒಂದು ವಾರದಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆಯಿಂದ ಉಂಟಾಗಿರುವ ಹಾನಿ ಹಾಗೂ ನೆರೆ ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಎಲ್ಲಾ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು, ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯ ಬಗ್ಗೆ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಪರಿಶೀಲನೆ ನಡೆಸಿದ ಅವರು ಜನರು ಗಾಬರಿಗೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.
ನೆರೆ ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ಅಧಿಕಾರಿಗಳು ಸನ್ನದ್ಧ ಸ್ಥಿತಿಯಲ್ಲಿರಬೇಕು. ಕಂದಾಯ ಇಲಾಖೆ, ಪಂಚಾಯತ್‍ರಾಜ್ ಇಲಾಖೆ, ಪೊಲೀಸ್, ಅಗ್ನಿಶಾಮಕ ತುರ್ತು ಸೇವೆಗಳ ಇಲಾಖೆ, ಆರೋಗ್ಯ, ಕೃಷಿ ಸೇರಿದಂತೆ ಪ್ರಮುಖ ಇಲಾಖೆಗಳು, ಯಾವುದೇ ಸಂದರ್ಭ ನಿಭಾಯಿಸಲು ಸಿದ್ಧರಿರಬೇಕು. ಬೆಳೆ ಹಾನಿ ಸಂಭವಿಸಿರುವ ಪ್ರದೇಶಗಳಿಗೆ ಭೇಟಿ ನೀಡಿ ನಷ್ಟದ ಅಂದಾಜು ಮಾಡಬೇಕು. ಮನೆ ಕುಸಿತ, ಜಾನುವಾರು ಹಾಗೂ ಮಾನವ ಜೀವ ಹಾನಿ ಪ್ರಕರಣಗಳಲ್ಲಿ ಸ್ಥಳ ಪರೀಕ್ಷೆ ನಡೆಸಿ ತಕ್ಷಣ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಎಲ್ಲಿಯೂ ಕಾಳಜಿ ಕೇಂದ್ರವನ್ನು ತೆರೆಯಲಾಗಿಲ್ಲ. ಅಗತ್ಯ ಬಿದ್ದರೆ ಕಾಳಜಿ ಕೇಂದ್ರ ತೆರೆಯಲು ಎಲ್ಲಾ ಸಿದ್ಧತೆಗಳನ್ನು ಮಾಡಿರಬೇಕು ಎಂದು ಅವರು ಹೇಳಿದರು.
ಹಾನಿ ಪ್ರಾಥಮಿಕ ವಿವರ: ಸೊರಬ, ಶಿಕಾರಿಪುರ, ಶಿವಮೊಗ್ಗ, ಹೊಸನಗರ ಸೇರಿದಂತೆ ಕೆಲವು ತಾಲೂಕುಗಳಲ್ಲಿ ಮಳೆಯಿಂದಾಗಿ ಹಾನಿ ಸಂಭವಿಸಿದೆ. ಒಟ್ಟು 38 ರಸ್ತೆಗಳು ಹಾನಿಗೀಡಾಗಿದ್ದು, 44ಕೆರೆಗಳು ಒಡೆದು ಹೋಗಿದ್ದು 5ಸೇತುವೆಗಳಿಗೆ ಹಾನಿ ಸಂಭವಿಸಿದೆ. ಅತಿ ಹೆಚ್ಚು ಅಂದರೆ ಸೊರಬ ತಾಲೂಕಿನಲ್ಲಿ ಪ್ರವಾಹದಿಂದ 18ಕಡೆ ರಸ್ತೆ ಸಂಪರ್ಕ ಹಾಳಾಗಿದ್ದು, 19ಕೆರೆಗಳು ಒಡೆದು ಹೋಗಿವೆ. ಶಿಕಾರಿಪುರದಲ್ಲಿ 15ಕೆರೆಗಳು ಒಡೆದು ಹೋಗಿವೆ.
ಅತಿವೃಷ್ಟಿಯಿಂದ ಭದ್ರಾವತಿಯಲ್ಲಿ ಒಂದು ಜೀವಹಾನಿ ಸಂಭವಿಸಿದ್ದು, ಶಿಕಾರಿಪುರದಲ್ಲಿ 2ಜಾನುವಾರುಗಳು ಸಾವಿಗೀಡಾಗಿವೆ. ಒಟ್ಟು 35ಮನೆಗಳು ಪೂರ್ಣ ಹಾನಿಯಾಗಿದ್ದು, 365ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ. ಶಿವಮೊಗ್ಗದಲ್ಲಿ 10, ಭದ್ರಾವತಿ 13, ಸೊರಬ 9 ಮತ್ತು ಹೊಸನಗರಲ್ಲಿ 2ಮನೆಗಳಿಗೆ ಸಂಪೂರ್ಣ ಹಾನಿ ಉಂಟಾಗಿದೆ. 644 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿರುವ ಬಗ್ಗೆ ಪ್ರಾಥಮಿಕವಾಗಿ ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಅಪರ ಜಿಲ್ಲಾಧಿಕಾರಿ ಅನುರಾಧ, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

error: Content is protected !!