ಶಿವಮೊಗ್ಗ, ಫೆಬ್ರವರಿ-19 : ಶಿವಮೊಗ್ಗ ಜಿಲ್ಲೆಯ ಕೆಲವು ಭಾಗಗಳಲ್ಲಿ ಅಡಿಕೆ ಬೆಳೆಯಲ್ಲಿ ಹಿಂಗಾರ ಒಣಗುವ ರೋಗ ಹಾಗೂ ಹಿಂಗಾರ ತಿನ್ನುವ ಹುಳುವಿನ ಬಾಧೆಯು ಕಂಡುಬಂದಿರುತ್ತದೆ. ರೈತರು ಈ ಬಾಧೆಯ ನಿರ್ವಹಣೆಗೆ ಈಗಾಗಲೇ ಔಷಧ ಸಿಂಪರಣೆ ಮಾಡಿರುವುದು ಇಲಾಖೆಯ ಗಮನಕ್ಕೆ ಬಂದಿದ್ದು, ಇನ್ನು ಸಿಂಪರಣೆ ಮಾಡುವ ಔಷಧಗಳು ಪರಿಸರಕ್ಕೆ ಯವುದೇ ಹಾನಿಯುಂಟು ಮಾಡದ0ತಿರಬೇಕು. ಈ ಔಷಧಗಳನ್ನು ಹಿಂಗಾರಕ್ಕೆ ರಾಸಯನಿಕಯುಕ್ತ ಔಷದಗಳ ಸಿಂಪರಣೆಯಿಂದಾಗಿ, ಹೂವಿನ ಮಕರಂದ ಹೀರಲು ಅಡಿಕೆ ತೋಟಗಳಿಗೆ ಬಂದು ಹೋಗುವ ಜೇನು ನೊಣಗಳಿಗೆ ಹಾನಿಯಾಗುವ ಸಂಭವವಿದ್ದು, ಜೇನು ನೊಣಗಳ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ತೋಟಗಾರಿಕೆ ಉಪನಿರ್ದೇಶಕರು ರೈತರಿಗೆ ಕರೆ ನೀಡಿರುತ್ತಾರೆ.
ರೈತರು ಇನ್ನು ಮುಂದೆ ಸಿಂಪರಣೆ ಕೈಗೊಳ್ಳುವ ಮೊದಲು ಇಲಾಖೆ ಅಧಿಕಾರಿಗಳು ಅಥವಾ ವಿಜ್ಞಾನಿಗಳನ್ನು ಸಂಪರ್ಕಿಸಿ ಔಷಧಗಳ ಬಗ್ಗೆ ಸೂಕ್ತ ಮಾಹಿತಿ ಹಾಗೂ ಶಿಫಾರಸ್ಸು ಪಡೆದ ನಂತರವೇ ಹತೋಟಿ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತವಾಗಿರುತ್ತದೆ. ಯಾವುದೇ ಖಾಸಗಿ ವ್ಯಕ್ತಿಗಳು/ ಕಂಪನಿಯವರು/ಏಜೆನ್ಸಿಯವರು ಶಿಪಾರಸ್ಸು ಮಾಡಿದರೆ, ಸೂಕ್ತವಾಗಿ ಪರಿಶೀಲಿಸಿದ ನಂತರವೇ ಔಷಧಗಳನ್ನು ಸಿಂಪರಣೆ ಮಾಡುವುದು.
ಈ ಬಾಧೆಯ ಪ್ರಮುಖ ಲಕ್ಷಣಗಳೆಂದರೆ ಅಡಿಕೆ ಹಿಂಗಾರವನ್ನು ಕೆರೆದು ತಿನ್ನುವ ಈ ಹುಳುಗಳು ಹಿಂಗಾರದಲ್ಲಿ ಗೂಡು ಕಟ್ಟಿಕೊಂಡು ಜೀವಿಸುತ್ತವೆ. ಈ ಗೂಡಿನಲ್ಲಿ ಹುಳುವಿನ ಹಿಕ್ಕೆ ಹಾಗೂ ಹಿಂಗಾರದಿಂದ ಕೆರೆದು ಉಳಿದಿರುವ ಭಾಗಗಳು ಅಲ್ಲಿಯೇ ಶೇಖರಣೆಯಾಗುತ್ತದೆ. ಇದರಿಂದ ಹಿಂಗಾರದ ಎಸಳುಗಳು ಒಣಗಲು ಆರಂಭವಾಗಿ ಹಿಂಗಾರ ಕಂದುಬಣ್ಣಕ್ಕೆ ತಿರುಗಿ ಉದುರಲು ಆರಂಭವಾಗುವುದು ಮುಖ್ಯ ಲಕ್ಷಣಗಳಾಗಿರುತ್ತವೆ.
ಔಷಧ ಸಿಂಪರಣೆ ಮಾಡುವ ಸಮಯದಲ್ಲಿ ಜೇನುನೊಣಗಳ ಸುರಕ್ಷತೆಗೆ ಕೈಗೊಳ್ಳಬೇಕಾದ ಕ್ರಮಗಳು: ಕೀಟ ಬಾಧೆ ಕಂಡುಬಂದಲ್ಲಿ ಮಾತ್ರ ರೈತರು ಬೇವಿನೆಣ್ಣೆ ಸಿಂಪರಣೆ ಮಾಡಬೇಕು. ಈಗಾಗಲೇ ಹುಳುವಿನ ಬಾಧೆ ಕಡಿಮೆಯಾಗಿರುತ್ತದೆ ಹಾಗೂ ಈ ಹುಳುವಿನ ಜೀವಿನ ಚಕ್ರ ಸಂಪೂರ್ಣವಾಗಿರುವುದರಿಂದ ಸಂತಾನೊತ್ಪತ್ತಿ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಔಷಧ ಸಿಂಪರಣೆಯ ಅವಶ್ಯಕತೆ ತುಂಬಾ ಕಡಿಮೆ. ಜೇನು ಸಾಕಾಣಿಕೆ ಮಾಡುವ ರೈತರು, ಜೇನುಪೆಟ್ಟಿಗೆಗಳನ್ನು ಔಷಧ ಸಿಂಪರಣೆಯಾದ ಸಮಯದಲ್ಲಿ ಸುಮಾರು 3 ರಿಂದ 4 ದಿವಸಗಳ ಕಾಲ ಬೇರೆ ಪ್ರದೇಶಕ್ಕೆ ಸ್ಥಳಾಂತರಿಸಬೇಕು. ಸಿಂಪರಣೆಯಾದ ತೋಟದಲ್ಲಿ ಆದರೆ ಜೇನುಪೆಟ್ಟಿಗೆ ಸುತ್ತ ಪರದೆಯನ್ನು ಹಾಕಿ ಜೇನುನೊಣಗಳಿಗೆ ಕೃತಕ ಆಹಾರವನ್ನು( ಸಕ್ಕರೆ ಪಾಕ) ಒದಗಿಸಬೇಕು.
ಕೀಟ ಹಾಗೂ ರೋಗದ ಬಾಧೆಗೆ ಹತೋಟಿ ಕ್ರಮಗಳು: ಹಿಂಗಾರ ಒಣಗುವ ರೋಗದ ನಿಯಂತ್ರಣಕ್ಕೆ ಕಾಪರ್ ಆಕ್ಸಿ ಕ್ಲೋರೈಡ್ 2 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಹಿಂಗಾರಗಳಿಗೆ ಸಿಂಪಡಿಸಬೇಕು. ಹಿಂಗಾರದ ಒಳಗಡೆ ಹುಳುಗಳು ಹಾನಿಯುಂಟು ಮಾಡಿದಲ್ಲಿ ಕೀಟದ ನಿರ್ವಹಣೆಗೆ ಶೇ. 1 ರ ಬೇವಿನೆಣ್ಣೆ 2 ಮಿ.ಲೀ. 1 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಕೀಟಗಳ ಬಾಧೆ ಖಚಿತವಾಗಿದಲ್ಲಿ ಮಾತ್ರ ಬೇವಿನೆಣ್ಣೆ ಸಿಂಪರಣೆ ಮಾಡುವುದು ಸೂಕ್ತ. ಈ ಮೇಲಿನ ಔಷಧ ಸಿಂಪರಣೆಯು ಜೇನುನೊಣಗಳಿಗೆ ಹಾನಿಯುಂಟು ಮಾಡದಿರದ ಕಾರಣ ರೈತರು ಅವಶ್ಯವಾಗಿ ಈ ಸಿಂಪರಣೆಯನ್ನು ಕೈಗೊಳ್ಳಬಹುದಾಗಿರುತ್ತದೆ ಎಂದು ತೋಟಗಾರಿಕೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.