ಶಿವಮೊಗ್ಗ, ಸೆಪ್ಟಂಬರ್ 05 : ಕಳೆದ ಮಾಹೆಯಲ್ಲಿ ಜಿಲ್ಲೆಯಾದ್ಯಂತ ಸತತವಾಗಿ ಮಳೆಯಾಗಿರುವ ಕಾರಣ ರೈತರ ತಾಕುಗಳು ತೀವ್ರವಾಗಿ ಕೊಳೆರೋಗಕ್ಕೆ ತುತ್ತಾಗುವ ಸಂಭವವಿರುತ್ತದೆ. ರೈತರು ಮುಂಜಾಗ್ರತಾ ಕ್ರಮವಾಗಿ ಬೋರ್ಡೋ ಸಿಂಪರಣೆಯನ್ನು ಕೈಗೊಂಡಿದ್ದರೂ ಕೂಡ ಸತತವಾಗಿ ಸುರಿದ ಮಳೆಯಿಂದಾಗಿ ಸಿಂಪರಣೆ ಮಾಡಿದ ಔಷಧವು ಮಳೆನೀರಿನಿಂದ ಸಂಪೂರ್ಣವಾಗಿ ತೊಳೆದುಹೊಗಿರುವ ಸಂಭವವಿರುತ್ತದೆ.
ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ಶಿಫಾರಸ್ಸು ಮಾಡಿದ ಅರ್ಧದಷ್ಟು ಗೊಬ್ಬರವನ್ನು ಸೆಪ್ಟಂಬರ್-ಅಕ್ಟೋಬರ್ ತಿಂಗಳಿನಲ್ಲಿ ನೀಡಬೇಕು. ಸಾಮಾನ್ಯ ಶಿಫಾರಸ್ಸಿನ ಪ್ರಮಾಣ 100:40:140 ಸಾರಜನಕ:ರಂಜಕ:ಪೊಟ್ಯಾಶ್ ಗ್ರಾಂ/ಗಿಡ/ವರ್ಷಕ್ಕೆ ನೀಡುವುದು. ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಗಿಡಗಳಿಗೆ ಶಿಫಾರಸ್ಸು ಮಾಡಿದ 1/3 ಹಾಗೂ 2ವರ್ಷ ನಂತರದ ಗಿಡಗಳಿಗೆ 2/3 ಭಾಗದಷ್ಟು ಮಾತ್ರ ಗೊಬ್ಬರವನ್ನು ನೀಡಬೇಕು. ಮೂರು ವರ್ಷದ ನಂತರ ಶಿಫಾರಸ್ಸು ಮಾಡಿದ ಪೂರ್ಣ ಪ್ರಮಾಣದ ಗೊಬ್ಬರವನ್ನು ನೀಡುವುದು. ಮಣ್ಣು ಪರೀಕ್ಷೆಯ ಆಧಾರದ ಮೇಲೆ ರೈತರು ಗೊಬ್ಬರವನ್ನು ನೀಡುವುದು ಸೂಕ್ತವಾಗಿರುತ್ತದೆ. ಆದ್ದರಿಂದ ಅಡಿಕೆ ಮತ್ತು ಕಾಳುಮೆಣಸು ಬೆಳೆಯ ಸಂರಕ್ಷಣೆಗೆ ರೈತರು, ರೋಗದ ಸಮಗ್ರ ನಿಯಂತ್ರಣಕ್ಕೆ ಕೆಲವು ನಿರ್ವಹಣಾ ಕ್ರಮಗಳನ್ನು ತಪ್ಪದೇ ಅನುಸರಿಸಲು ತೋಟಗಾರಿಕೆ ಇಲಾಖೆ ತಿಳಿಸಿದೆ.
ಅಡಿಕೆ ಕೊಳೆರೋಗದ ಸಮಸ್ಯೆ ಕಂಡುಬಂದಲ್ಲಿ ನಿರ್ವಹಣಾ ಕ್ರಮಗಳು: ಕೊಳೆರೋಗವನ್ನು ತಡೆಗಟ್ಟಲು ಶೇ. 1 ರ ಬೋರ್ಡೋದ್ರಾವಣ ಅಥವಾ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಅಥವಾ 2 ಗ್ರಾಂ ಮೆಟಲಾಕ್ಸಿಲ್ + ಮ್ಯಾಂಕೋಜೆಬ್ 75 WP 2 ಗ್ರಾಂ ಒಂದು ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು. ರೋಗಪೀಡಿತ ಎಲೆಗಳನ್ನು ಕತ್ತರಿಸಿ ಸ್ವಚ್ಛಗೊಳಿಸಿ ಆ ಭಾಗಕ್ಕೆ ಶೇ. 1 ರ ಬೋರ್ಡೋದ್ರಾವಣವನ್ನು ಅಥವಾ 2 ಗ್ರಾಂ ಮೆಟಲಾಕ್ಸಿಲ್ + ಮ್ಯಾಂಕೋಜೆಬ್ 75 WP 2 ಗ್ರಾಂ ಒಂದು ಲೀಟರ್ ನೀರಿನಲ್ಲಿ ಕರಗಿಸಿ ಸುಳಿ ಭಾಗಕ್ಕೆ ಹಾಕಬೇಕು. ಇದಲ್ಲದೆ ಕಾಯಿಗೊಂಚಲುಗಳನ್ನು ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚುವುದರಿಂದ ಕೊಳೆರೋಗವನ್ನು ನಿಯಂತ್ರಿಸಬಹುದು.
ಕಾಳುಮೆಣಸಿನಲ್ಲಿ ಸೊರಗು ರೋಗದ ಸಮಸ್ಯೆ ಕಂಡುಬಂದಲ್ಲಿ ನಿರ್ವಹಣಾ ಕ್ರಮಗಳು: ಗಿಡಗಳ ಬುಡಕ್ಕೆ ಕಾಪರ್ ಆಕ್ಸಿಕ್ಲೋರೈಡ್ 3 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ದ್ರಾವಣವನ್ನು ಬಳ್ಳಿಯ ಬುಡಕ್ಕೆ ಹಾಕಬೇಕು. ಇದರ ಜೊತೆಗೆ ಕಾಳುಮೆಣಸು ಎಲೆ ಮತ್ತು ಕಾಂಡದ ಭಾಗಗಳಿಗೆ ಬೋರ್ಡೋ ದ್ರಾವಣವನ್ನು ಸಿಂಪಡಿಸುವಂತೆ ತಿಳಿಸಲಾಗಿದೆ.