ಅಡಿಕೆ ಮಲೆನಾಡು ಪ್ರದೇಶದ ಮುಖ್ಯ ವಾಣಿಜ್ಯ ಬೆಳೆಯಾಗಿದ್ದು ಕೃಷಿಕರ ಆರ್ಥಿಕ ಮತ್ತು ಸಾಮಾಜಿಕ ಸುಭದ್ರತೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ವಾಣಿಜ್ಯ ಬೆಳೆಗೆ ಹಲವಾರು ಕೀಟ ಮತ್ತು ರೋಗಗಳ ಸಮಸ್ಯೆಯಿಂದ ಇಳುವರಿ ಗಣನೀಯವಾಗಿ ಕಡಿಮೆಯಾಗುತ್ತಿದೆ. ಅದರಲ್ಲೂ ಪ್ರಮುಖವಾದ ಕೀಟ, ಬೇರು ಹುಳು.
ಹೆಚ್ಚು ಮಳೆ ಬೀಳುವ ಪ್ರದೇಶಗಳಾದ ಮಲೆನಾಡು ಹಾಗು ಕರಾವಳಿಯಾದ್ಯಂತ ಅಡಿಕೆ ಮರಗಳಿಗೆ ಬರುವ ಬಹು ಮುಖ್ಯವಾದ ಕೀಟಗಳಲ್ಲಿ ಬೇರು ತಿನ್ನುವ ಹುಳುವು ಒಂದು. ಗದ್ದೆ, ಜಮೀನು, ಹಳ್ಳ ಮತ್ತು ತೊರೆದಂಡೆಗಳ ಜಮೀನಿನಲ್ಲಿರುವ ಅಡಿಕೆ ತೋಟಗಳಲ್ಲಿ ಈ ಬೇರು ಹುಳುಗಳು ಹೆಚ್ಚಾಗಿ ಕಂಡುಬರುತ್ತದೆ. ಗೋಡು ಮತ್ತು ಮರಳು ಮಿಶ್ರಿತವಾದ ಸಾವಯವ ಪದಾರ್ಥವಿರುವ ಮಣ್ಣಲ್ಲಿ ಶೇಕಡ 25-75 ಹಾನಿ ಮಾಡುತ್ತವೆ. ಇಂಗ್ಲೀಷ್‍ನ ‘ಸಿ’ (ಅ)- ಆಕಾರದ ಮರಿ ಹುಳುಗಳು ಭೂಮಿಯ ಒಳಗೇ ಇದ್ದು ಬೇರುಗಳನ್ನು ತಿನ್ನುವುದರಿಂದ ಅವುಗಳ ಹಾನಿಯ ತೀವ್ರತೆಯನ್ನು ತಿಳಿದುಕೊಳ್ಳುವುದು ಕಷ್ಟ. ಇವುಗಳಿರುವ ತೋಟಗಳಲ್ಲಿ ಹತೋಟಿ ಕ್ರಮ ಕೈಗೊಳ್ಳದಿದ್ದಲ್ಲಿ ಕ್ರಮೇಣ ಅಡಿಕೆಮರಗಳೆಲ್ಲ ನಾಶವಾಗುವ ಸಂಭವ ಹೆಚ್ಚು.
ಅಡಿಕೆ ಬೇರು ಹುಳುಗಳ ಪ್ರಭೇದಗಳು :
ಮಲೆನಾಡಿನ ಅಡಿಕೆ ತೊಟಗಳಲ್ಲಿ ಮೂರು ಪ್ರಭೇದಗಳಾದ ಲ್ಯೂಕೋಪೋಲಿಸ್ ಲೆಪಿಡೋಪೋರ, ಲ್ಯೂ. ಕೋನಿಯೋಪೋರ ಮತ್ತು ಲ್ಯೂ. ಬರ್ಮೀಸ್ಟ್ರಿ ಇವೆ. ಹೆಚ್ಚು ಮಳೆ ಬೀಳುವ ಮಲೆನಾಡು ಹಾಗು ಕರಾವಳಿಯಾದ್ಯಂತ ಈ ಬೇರು ಹುಳುಗಳು ಕಂಡುಬರುತ್ತವೆ. ಲ್ಯೂ. ಲೆಪಿಡೋಪೋರ ಪ್ರಭೇದದ ಬೇರು ಹುಳುಗಳು ಮಲೆನಾಡಿನಾದ್ಯಂತ ಕಂಡುಬರುವ ಬಹು ಮುಖ್ಯ ಅಡಿಕೆ ಬೇರು ಹುಳು. ಅಲ್ಲಲ್ಲಿ ಮಲೆನಾಡಿನಲ್ಲಿಯೇ ಲ್ಯೂ. ಬರ್ಮೀಸ್ಟ್ರಿಯೂ ಸಹ ಇದೆ. ಆದರೆ, ಲ್ಯೂ. ಕೋನಿಯೊಪೋರ ಕರಾವಳಿಯಲ್ಲಿ ಮಾತ್ರ ಕಂಡುಬರುವ ಕೀಟ.
ಬೇರು ಹುಳಗಳ ಜೀವನ ಚಕ್ರ
ಅಡಿಕೆ ಬೇರು ಹುಳುಗಳು ನಾಲ್ಕು ಹಂತದ ಜೀವನ ಕ್ರಮ ಹೊಂದಿದ್ದು, ಮೊಟ್ಟೆ, ಮರಿಹುಳು, ಕೋಶ ಹಾಗು ಪ್ರೌಢ (ದುಂಬಿ) ಕೀಟಗಳಾಗಿ ಕಂಡುಬರುತ್ತವೆ. ಲ್ಯೂ. ಲೆಪಿಡೋಪೋರ ಮತ್ತು ಲ್ಯೂ. ಬರ್ಮೀಸ್ಟ್ರಿ ಈ ಎಲ್ಲ ಹಂತಗಳನ್ನು ದಾಟಲು ಎರಡು ವರುಷಗಳ ಅಗತ್ಯ ಇದೆ. ಕೆಲವು ತೋಟಗಳಲ್ಲಿ ಎರಡು ಸಂತತಿಗಳಿದ್ದು ಪ್ರತಿ ವರ್ಷವೂ ದುಂಬಿಗಳು ಹಾರುತ್ತವೆ. ಆದರೆ ಅನೇಕ ತೋಟಗಳಲ್ಲಿ ಕೇವಲ ಒಂದೇ ಸಂತತಿಯಿದ್ದು ವರ್ಷ ಬಿಟ್ಟು ವರ್ಷಕ್ಕೊಮ್ಮೆ ದುಂಬಿಗಳು ಹಾರುವುದನ್ನು ನೋಡಬಹುದು ಆದರೆ ಕರಾವಳಿಯ ಲ್ಯೂ. ಕೋನಿಯೋಪೋರದ ಜೀವನ ಚಕ್ರ ಒಂದೇ ವರ್ಷದ್ದು ಹಾಗಾಗಿ ಅವು ಪ್ರತಿ ವರ್ಷವೂ ಹಾರುತ್ತವೆ.
ಮೊಟ್ಟೆ, ಮರಿ ಹುಳು ಹಾಗೂ ಕೋಶ ಯಾವಾಗಲೂ ಮಣ್ಣಿನಲ್ಲೇ ಇದ್ದು ಅಗತೆ ಮಾಡುವಾಗ ಮಾತ್ರ ಕಾಣಬರುತ್ತವೆ. ದುಂಬಿಗಳು ಮಾತ್ರ ವರ್ಷದ ನಿರ್ದಿಷ್ಟ ಸಮಯದಲ್ಲಿ ಮುಸ್ಸಂಜೆ ಅಥವಾ ರಾತ್ರಿವೇಳೆಯಲ್ಲಿ ಭೂಮಿಯಿಂದ ಮೇಲೆ ಬಂದು, ಕೆಲವು ಆಸರೆ ಸಸ್ಯಗಳ ಮೇಲೆ ಕುಳಿತು, ಹೆಣ್ಣು ಗಂಡು ಲೈಂಗಿಕ ಸಂಪರ್ಕ ಹೊಂದಿ, ಆಹಾರ ಸೇವಿಸಿ ಬೆಳಗಾಗುವುದರೊಳಗೆ ಪುನಃ ಭೂಮಿಯೊಳಗೆ ಸೇರುತ್ತವೆ. ದುಂಬಿಗಳು ಮಿಲನದ ನಂತರ ಭೂಮಿಯಲ್ಲಿ 15-20 ಸೆಂ.ಮೀ ಆಳದಲ್ಲಿ 10-40 ಬಿಳಿ ಮೊಟ್ಟೆಗಳಿಡುತ್ತವೆ. ಪ್ರತಿ ಋತುವಿನಲ್ಲೂ ಇವು ಈ ರೀತಿ ಅನೇಕ ಬಾರಿ ಮಣ್ಣಿನಿಂದ ಹೊರ ಬಂದು ಮತ್ತೆ ಮಣ್ಣು ಸೇರುತ್ತವೆ. ಹಾಗೆ ಹೊರಬಂದ ದುಂಬಿಗಳಿಗೆ ಅನೇಕ ಜಾತಿಯ ಮರದ ಎಲೆಗಳೇ (ಉದಾ: ಬಾರೇ ಹಣ್ಣು, ಅಕೇಶಿಯ, ಬೇವಿನ ಮರ) ಆಹಾರ. ಇವು ಅಡಿಕೆಯ ಬೇರನ್ನಾಗಲಿ, ಎಲೆಗಳನ್ನಾಗಲಿ ತಿನ್ನುವುದಿಲ್ಲ. ಹದಿನೈದು ದಿನಗಳಲ್ಲಿ ಮೊಟ್ಟೆಯಿಂದ ಹೊರಬಂದ ಮರಿಹುಳು ಕೆಂಪು ಬಣ್ಣದ ದಪ್ಪತಲೆಯುಳ್ಳದ್ದಾಗಿದ್ದು ಬಿಳಿ ಮೈ ಬಣ್ಣ ಹೊಂದಿರುತ್ತದೆ. ಇದರ ಮೂರು ಕಾಲುಗಳು ತುಸು ಹಳದಿ ಬಣ್ಣದಾಗಿರುತ್ತವೆ. ಸುಮಾರು ಒಂದು ಸೆಂ. ಮೀ. ಉದ್ದದ ಈ ಎಳೇ ಮರಿ ಹುಳುಗಳು ಮಣ್ಣಿನಲ್ಲಿನ ಸಾವಯವ ಅಂಶಗಳನ್ನು ಮಾತ್ರ ತಿನ್ನುತ್ತವೆ. ಸುಮಾರು ಒಂದು-ಒಂದೂವರೆ ತಿಂಗಳಿನಲ್ಲಿ ಎರಡನೇ ಹಂತ ತಲುಪುತ್ತವೆ. ಈ ಹಂತದಲ್ಲಿ ಅವು ಅಡಿಕೆ ಬೇರನ್ನು ತಿನ್ನಲು ಸಜ್ಜಾಗಿದ್ದು ಮರದ ಸುತ್ತಲೂ ಕಾಣಬಹುದು. ಸರಿ ಸುಮಾರು ಎರಡು- ಎರಡೂವರೆ ತಿಂಗಳು ಕೆಲವೊಮ್ಮೆ ಇನ್ನೂ ಹೆಚ್ಚು ಸಮಯ ಹುಳುಗಳು ಈ ಹಂತದಲ್ಲಿದ್ದು ಮೂರನೇ ಹಂತ ತಲುಪುತ್ತದೆ. ಮೂರನೆ ಹಂತದಲ್ಲಿ ಅಡಿಕೆ ಬೇರು ತಿನ್ನುತ್ತವೆ. ಇವುಗಳು ದೊಡ್ಡ ಗಾತ್ರವಾಗಿದ್ದು ತಲೆ ಕಡುಗೆಂಪಾಗಿರುತ್ತದೆ. ಸುಮಾರು 1 ಮೀ ಆಳದವರೆಗೂ ಹೋಗಿ ಜೀವಿಸುತ್ತವೆ. ಲ್ಯೂ. ಲೆಪಿಡೋಪೋರ ಮತ್ತು ಲ್ಯೂ. ಬರ್ಮೀಸ್ಟ್ರಿ ಹದಿನಾಲ್ಕರಿಂದ ಹದಿನೆಂಟು ತಿಂಗಳ ಕಾಲ ಮೂರನೇ ಹಂತದಲ್ಲಿದ್ದು ಅಡಿಕೆ ಬೇರಿಗೆ ಅತೀ ಹಾನಿಕಾರಕವಾಗಿರುತ್ತವೆ. ಮುಂದೆ ಈ ಹಂತ ದಾಟಿ ಹುಳುಗಳು ಕೋಶಾವಸ್ಥೆ ತಲುಪುತ್ತವೆ. ಆದರೆ, ಈ ಕೋಶಗಳು ಯಾವಾಗಲೂ ಭೂಮಿಯಲ್ಲಿ ಅತೀ ಆಳದಲ್ಲಿರುತ್ತದೆ (2 ರಿಂದ 5 ಅಡಿ). ಕೋಶಗಳನ್ನು ಫೆಬ್ರವರಿಯಿಂದ ಜೂನ್ ತಿಂಗಳವರೆಗೆ ಭೂಮಿಯಲ್ಲಿ ಕಾಣಬಹುದು. ಸುಮಾರು ಹದಿನೈದು ದಿನದಲ್ಲಿ ಈ ಹಂತ ದಾಟಿ ಹುಳು ದುಂಬಿಯಾಗುತ್ತದೆ. ಆದರೆ ಈ ದುಂಬಿ ಮಣ್ಣಿನಲ್ಲಿಯೇ ಬೀಡು ಬಿಟ್ಟು ಮಳೆರಾಯನ ಕೃಪೆಗಾಗಿ ಕಾಯುತ್ತಾ ಕೂರುತ್ತದೆ. ಇನ್ನು ದುಂಬಿಗಳು ಮಾರ್ಚ್ ಕಡೆಯವಾರದಿಂದ ಪ್ರಭೇಧವನ್ನನುಸರಿಸಿ ಅವು ಹಾರುವವರೆಗೆ ಮಣ್ಣಿನಲ್ಲಿಯೇ ಕಾಣಸಿಗುತ್ತವೆ.
ಪ್ರೌಢ ದುಂಬಿ ಹಾರುವ ಕಾಲ:
ಲ್ಯೂ. ಲೆಪಿಡೋಪೋರ : ಜೂನ್‍ನಿಂದ ಅಕ್ಟೋಬರ್ ವರೆಗೆ
ಲ್ಯೂ. ಕೋನಿಯೋಪೋರ : ಜೂನ್
ಲ್ಯೂ. ಬರ್ಮೀಸ್ಟ್ರಿ : ಮೇ ತಿಂಗಳ ಎರಡನೇ ವಾರದಿಂದ
ಬೇರು ಹುಳುವಿನ ಹಾಯ ಲಕ್ಷಣಗಳು
ಕೆಲವು ತೋಟಗಳಲ್ಲಿ ಹೊರನೋಟಕ್ಕೆ ಯಾವುದೇ ಲಕ್ಷಣ ಕಾಣದಿದ್ದರೂ, ಗಿಡಗಳಲ್ಲಿ ಸಿಂಗಾರಗಳು ಕಡಿಮೆಯಾಗಿ ಫಸಲು ಕ್ರಮೇಣ ಕಡಿಮೆಯಾಗುವುದು ರೈತರಿಗೆ ಸಮಸ್ಯೆಯಾಗಿ ಗೋಚರಿಸುತ್ತದೆ. ಅಂತಹ ತೋಟದಲ್ಲಿ ಸರಿಯಾಗಿ ಗಮನಿಸಿದರೆ ನೆಲದಲ್ಲಿ ‘ಸಿ’ ಆಕೃತಿಯ ಹುಳುಗಳು, ತುಂಡು ಮಾಡಿದ ಬೇರುಗಳು ಹಾಗು ಮರದ ಬುಡದಲ್ಲಿ ಕಡಿಮೆ ಪ್ರಮಾಣದ ಬೇರುಗಳು, ಕುಂಠಿತ ಬೆಳವಣಿಗೆ, ಗಿಡ್ಡನೆಯ ಗೆಣ್ಣುಗಳು, ಚೂಪಾದ ಮರದ ತುದಿ, ಹಳದಿ ಬಣ್ಣದ ಎಲೆಗಳು ಮತ್ತು ಚಿಕ್ಕಗಾತ್ರದ ಹೊಂಬಾಳೆ/ಎಲೆಗಳು, ಸುಲಭವಾಗಿ ಅಲುಗಾಡುವ ಮರಗಳನ್ನು ಕಾಣಬಹುದಾಗಿದೆ.
ಬೇರು ಹುಳಗಳ ಸಮಗ್ರ ಹತೋಟಿ
ಬೇರು ಹುಳುವಿನ ಹತೋಟಿಗೆ ಯಾವುದೇ ಒಂದು ನಿರ್ದಿಷ್ಟವಾದ ಕ್ರಮದಲ್ಲಿ ಪೂರ್ಣ ಫಲ ದೊರೆಯದು. ಆದ್ದರಿಂದ ಸತತವಾಗಿ 3-4 ವರ್ಷಗಳ ಕಾಲ ಸಮಗ್ರ ಹತೋಟಿ ಕ್ರಮಗಳನ್ನು ಕೈಗೊಂಡಾಗ ಮಾತ್ರ ಇದನ್ನು ಕನಿಷ್ಟ ಹಂತಕ್ಕೆ ತರಬಹುದು.
- ಪ್ರೌಢ ದುಂಬಿಗಳನ್ನು ಹಿಡಿಯುವುದು
ಮೊದಲ ಮಳೆ ಬಿದ್ದ ಸಾಯಂಕಾಲದಲ್ಲಿ ಭೂಮಿಯಿಂದ ಹೊರ ಬರುವ ಹುಳುಗಳನ್ನು ಸೋಗೆ ಅಡಿಕೆ ಪಟ್ಟಿಯಿಂದ ಹೊಡೆದು ಸಾಯಿಸಿರಿ. ದುಂಬಿಗಳು ಮಣ್ಣಿನಿಂದ ಹಾರಿ ಅಲ್ಲಲ್ಲಿ ಯಾವುದೇ ರೀತಿಯ ಸಸ್ಯಗಳಾದರೂ ಸರಿ ಗುಂಪು- ಗುಂಪಾಗಿ ಕೂರುತ್ತವೆ (ಬೇವಿನ ಮರದ ಮೇಲೆ ಹೆಚ್ಚಾಗಿ ಸಿಗುತ್ತದೆ) ಕೆಲವೊಂದು ಹುಳುಗಳು ಬಹುವೇಗವಾಗಿ ಹಾರಬಹುದು, ಅಂತಹುಗಳು ಸಾಮಾನ್ಯವಾಗಿ ಗಂಡುಹುಳುಗಳಾಗಿರುವುದರಿಂದ ಕೈಗೆ ಸಿಗುವಂತಹ ಹುಳುಗಳ ಬಗ್ಗೆ ಮಾತ್ರ ಗಮನಿಸಿ ಹಿಡಿದರೂ ಸಾಕು, ಬಹುತೇಕ ದುಂಬಿಗಳನ್ನು ಮೊಟ್ಟೆ ಇಡುವ ಮುನ್ನವೇ ಕೊಲ್ಲಬಹುದು. ತಮ್ಮ ತಮ್ಮ ತೋಟದಲ್ಲಿ ದುಂಬಿಹಾರುವ ಸಮಯ ತಿಳಿದು ಆ ಸಮಯದಲ್ಲಿ ಮುಸ್ಸಂಜೆಯ ವೇಳೆಯಲ್ಲಿ ತೋಟದಲ್ಲಿ ಹಾರುವ ದುಂಬಿಗಳನ್ನು ಹಿಡಿದು ಕೊಲ್ಲಬಹುದು. - ಅಗತೆ ಮಾಡಿ ವಿವಿಧ ಹಂತದ ಹುಳುಗಳನ್ನು ಹಿಡಿಯುವುದು
ಜುಲೈ ಎರಡನೇ ವಾರದಿಂದ ಅಕ್ಟೋಬರ್ ಕೊನೆಯ ವಾರದವರೆಗೆ ತೋಟದ ಎಲ್ಲಾ ಕಡೆ 10-15 ಸೆಂ. ಮೀ. ಆಳದಷ್ಟು ಅಗತೆ ಮಾಡಿ, ಎಲ್ಲ ಹುಳುಗಳನ್ನೂ ಹೆÀಕ್ಕಿ ತೆಗೆದು ಹಾಕಬಹುದು. ಈ ಕ್ರಮ ಸರಿಯಾದ ರೀತಿಯಲ್ಲಿ ಅನುಸರಿಸಿದರೆ ಶೇಕಡ 99 ಭಾಗದಷ್ಟು ಪರಿಣಾಮಕಾರಿಯಾಗಿ ಹುಳುಗಳ ಹತೋಟಿ ಮಾಡಬಹುದು.
ನವೆಂಬರ್ ನಂತರ ಅಗತೆ ಮಾಡಿ ಮೂರನೆ ಹಂತದ ಹುಳು ಹಿಡಿಯುವುದು
ಅಕ್ಟೋಬರ್- ನವೆಂಬರ್ ನಲ್ಲಿ ಮೂರನೇ ಹಂತದ ಹುಳುಗಳು ಭೂಮಿಯಲ್ಲಿ ಸಾಕಷ್ಟು ಆಳದಲ್ಲಿ (ಸುಮಾರು 2 ರಿಂದ 3 ಅಡಿ) ಕಂಡು ಬರುತ್ತದೆ. ಆ ಕಾರಣ ಸುಮ್ಮನೇ ನೇರವಾಗಿ ಅಗತೆ ಮಾಡಿದರೆ ಕೇವಲ ಶೇಕಡ 10 ಕ್ಕೂ ಕಡಿಮೆ ಹುಳುಗಳು ಮಾತ್ರ ನಮಗೆ ಗೋಚರಿಸುವುವು ಮತ್ತು ಕೂಲಿಗಳ ಸಂಖ್ಯೆಯು ಹೆಚ್ಚು ಬೇಕಾಗುತ್ತದೆ. ಆ ಕಾರಣ, ಹುಳುಗಳನ್ನು ಭೂಮಿಯ ಮೇಲ್ಪದರಗಳಿಗೆ ಬರುವಂತೆ ಮಾಡಬೇಕು. ತೋಟಕ್ಕೆ ನೀರು ಆಯಿಸಿದರೆ ಭೂಮಿಯ ಮೇಲ್ಭಾಗದ ತೇವಾಂಶ ಹೆಚ್ಚಿ, ಹುಳುಗಳು ಮೇಲ್ಪದರಕ್ಕೆ ಬರುತ್ತವೆ.
ಮೊದಲಿಗೆ ಅಕ್ಕ-ಪಕ್ಕದ ಬಸಿಗಾಲುವೆಗಳಲ್ಲಿ ಕಂಠ ಮಟ್ಟ ನೀರು ನಿಲ್ಲಿಸಿ. ಭೂಮಿಯಲ್ಲಿನ ತೇವಾಂಶವನ್ನು ಆಧರಿಸಿ ಈ ರೀತಿ ಸಾಮಾನ್ಯವಾಗಿ ಮೂರು ನಾಲ್ಕು ದಿನ ನೀರು ನಿಲ್ಲಿಸ ಬೇಕಾಗಬಹುದು. ನಂತರ ಈ ಎರಡು ಬಸಿಗಾಲುವೆಗಳ ಮಧ್ಯ ಭಾಗದಲ್ಲಿ ಅಗತೆ ಮಾಡಿ ಹುಳುಗಳನ್ನು ಆರಿಸಿ ಕೊಲ್ಲಬೇಕು. ನಂತರ, ಇದೇ ರೀತಿ ಇನ್ನೇರಡು ಬಸಿಗಾಲುವೆಗಳಲ್ಲಿ ನೀರು ನಿಲ್ಲಿಸಿ ಮದ್ಯದ ಪಟದಲ್ಲಿ ಅಗತೆ ಮಾಡಿ ಹುಳುಗಳನ್ನು ತೆಗೆದು ಹಾಕಿ.
ಭೂಮಿ ಸಮತಟ್ಟಾಗಿದ್ದು, ನೀರು ಲಭ್ಯವಾಗುವ ಕಡೆ ಈ ಕ್ರಮ ಅನುಸರಿಸಬಹುದು. ಅಗತೆ ಮಾಡುವುವರು ಕ್ರಮಬದ್ಧವಾಗಿ ಹುಳುಗಳನ್ನು ಹೆಕ್ಕಿ ತೆಗೆದರೆ, ಶೇ. 98 ರಷ್ಟು ಹುಳುಗಳನ್ನು ಸಾಯಿಸಬಹುದಾಗಿದೆ. ಅವಶ್ಯವೆನಿಸಿದರೆ ಈ ಸಮಯದಲ್ಲಿ ಕೀಟನಾಶಕವನ್ನು ಬಳಸಬಹುದು. ಹೆ - ಜೈವಿಕ ನಿಯಂತ್ರಕಗಳ ಬಳಕೆ
ಕೆಲವು ಸೂಕ್ಷ್ಮಾಣು ಜೀವಿಗಳು ಬೇರು ಹುಳುಗಳಿಗೆ ರೋಗವನ್ನುಂಟು ಮಾಡಿ ಕೊಲ್ಲುತ್ತವೆ. ಇವು ಹೆಚ್ಚಾಗಿ ಸಣ್ಣ ಮರಿಗಳ ಮೇಲೆ ಪರಿಣಾಮಕಾರಿಯಾಗಿವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ, ಮೆಟಾರಿಜಿಯಂ ಅನಿಸೋಪ್ಲಿಯೆ ಎಂಬ ಶಿಲೀಂದ್ರ ಮತ್ತು ಹೆಟಿರೋರಾಬ್ಟಿಟಿಸ್ ಎಂಬ ನಂಜು ಹುಳು. ಮೆಟಾರಿಜಿಯಂ ಅನಿಸೋಪ್ಲಿಯೆ ಯನ್ನು ಗಿಡಕ್ಕೆ 20 ಗ್ರಾಂ ನ್ನು ಅಥವಾ ಹೆಟಿರೋರಾಬ್ಟಿಟಿಸ್ ಆದರೆ 20 ಗ್ರಾಂ ಪುಡಿಯನ್ನು ನೀರಿನಲ್ಲಿ (5-8 ಲೀ) ಬೆರೆÀಸಿ ಗಿಡದ ಬುಡ ಭಾಗಕ್ಕೆ ಹಾಕಬೇಕು. - ಕೀಟನಾಶಕಗಳ ಬಳಕೆ
ಮರವೊಂದಕ್ಕೆ 250 ಗ್ರಾಂ ಬೇವಿನ ಹಿಂಡಿ ಹಾಕಬೇಕು ಅಥವಾ 2 ಕೆ. ಜಿ. ಎರೆಹುಳು ಗೊಬ್ಬರ ಕೊಟ್ಟರೆ ಉತ್ತಮ.
ತೋಟವನ್ನು ಸ್ವಚ್ಚವಾಗಿಡಿರಿ ಮತ್ತು ಪೋರೇಟ್ 10 ಜಿ ಯನ್ನು ಪ್ರತಿ ಹೆಕ್ಟೇರಿಗೆ 10 ಕಿ.ಗ್ರಾಂ ನಂತೆ ಮಣ್ಣಲ್ಲಿ ಬೆರೆÀಸಿರಿ.
ಪ್ರತಿ ಎಕರೆಗೆ 2 ಲೀ. ಕ್ಲೋರ್‍ಫೈರಿಫಾಸ್ 20 ಇ.ಸಿ. ಅಥವಾ 400 ಮಿ.ಲೀ. ಇಮಿಡಾಕ್ಲೊಪಿಡ್ 200 ಎಸ್. ಎಲ್. ಕೀಟನಾಶಕವನ್ನು ಸಾಕಷ್ಟು ಮಟ್ಟಿಗೆ ಹೆಚ್ಚಿನ ನೀರಿನಲ್ಲಿ ಬೆರೆಸಿ ತೋಟದ ಎಲ್ಲಾ ಭಾಗಕ್ಕು ಗಟಾರ್ ಸ್ಪ್ರೇಯರ್ ನಿಂದ ನೆಲದ ಮೇಲೆ ಸಿಂಪಡಿಸಿ. ಈ ಕ್ರಮ ಸರಿಯಾದ ರೀತಿಯಲ್ಲಿ ಮಾಡಿದರೆ ಶೇ. 99 ರಷ್ಟು ಪರಿಣಾಮಕಾರಿಯಾಗಿ ಹುಳುಗಳನ್ನು ಹತೋಟಿ ಮಾಡಹುದು.
ಸಸಿಗಳನ್ನು ಕಾಪಾಡುವ ವಿಧಾನ :
ಬೇರು ಹುಳುಗಳ ಸಮಸ್ಯೆ ಇರುವಂತಹ ತೋಟಗಳಲ್ಲಿ ಹೊಸದಾಗಿ ಸಸಿ ನೆಡುವುದಿದ್ದರೆ, ಗುಂಡಿ ತೆಗೆದ ನಂತರ 10 ಗ್ರಾಂ, ಫೋರೇಟ್ ಹರಳನ್ನು ಅಥವಾ 3 ಮಿ. ಲೀ. ಕ್ಲೋರ್‍ಫೈರಿಫಾಸ್‍ನ್ನು 2 ಲೀ. ನೀರಿನಲ್ಲಿ ಬೆರೆಸಿ ಗುಂಡಿಗೆ ತುಂಬಿಸಿ ನಂತರ ಸಸಿ ನೆಡಿ. ಇಲ್ಲದಿದ್ದರೆ ಸಸಿಗಳು ಬೇಗನೆ ಹುಳುವಿನ ಹಾನಿಗೆ ತುತ್ತಾಗುತ್ತವೆ.
ಸೂಚನೆ: ಕೀಟನಾಶಕಗಳನ್ನು ಬಳಸುವಾಗ ಎಚ್ಚರದಿಂದ ಯೋಚಿಸಿ ನಿರ್ಧಾರ ತೆಗೆದು ಕೊಳ್ಳಬೇಕು. ಹಾನಿಯ ಮಟ್ಟವನ್ನು ಅರಿತು ಕೊಳ್ಳಲು ತೋಟದ ವಿವಿಧ ಭಾಗಗಳಲ್ಲಿ 1 ಮೀ. ಉದ್ದಗಲಕ್ಕೆ ಮತ್ತು ಗಿಡದ ಬುಡದ ಸುತ್ತಗಲಕ್ಕೆ ಅಗೆದು ಹುಳುಗಳ ಸಂಖ್ಯೆಯ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕು. ಅವಶ್ಯಕತೆ ಇದ್ದರೆ ಮಾತ್ರ ಕೀಟನಾಶಕಗಳ ಬಳಕೆ ಮಾಡುವುದು ಸೂಕ್ತ.
ಡಾ. ಕಲ್ಲೇಶ್ವರ ಸ್ವಾಮಿ ಸಿ. ಎಮ್.,
ಸಹಾಯಕ ಪ್ರಾಧ್ಯಾಪಕರು, ಕೀಟಶಾಸ್ತ್ರ ವಿಭಾಗ, ಕೃಷಿ ಮಹಾವಿದ್ಯಾಲಯ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ,
ನವಿಲೆ, ಶಿವಮೊಗ್ಗ Mobile No: 94495 37878