ಅಡಿಕೆ ಬೆಳೆಯು ಮುಖ್ಯವಾಗಿ ಮಲೆನಾಡು, ಕರಾವಳಿ ಹಾಗೂ ಮೈದಾನ ಪ್ರಾಂತ್ಯದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಈ ಭಾಗದ ರೈತರ ಜೀವನಾಡಿಯಾಗಿದೆ. ಅಡಿಕೆಗೆ ದೊರೆಯುತ್ತಿರುವ ಹೆಚ್ಚಿನ ಮೌಲ್ಯ ಮತ್ತು ಉತ್ತಮ ಮಾರುಕಟ್ಟೆ ವ್ಯವಸ್ಥೆಯಿಂದಾಗಿ ಹೆಚ್ಚು ಹೆಚ್ಚು ರೈತರು ಅಡಿಕೆ ಕೃಷಿಯತ್ತ ಒಲವು ತೋರುತ್ತಿದ್ದಾರೆ. ಪ್ರಸ್ತುತ ಭಾರತದಲ್ಲಿ 7.30 ಲಕ್ಷ ಹೆಕ್ಟರ್ ಪ್ರದೇಶದಿಂದ 9.02 ಲಕ್ಷ ಟನ್ ಉತ್ಪಾದನೆ ಆಗುತ್ತಿದ್ದು, ಭಾರತದ ಒಟ್ಟು ಉತ್ಪಾದನೆಯ ಶೇ.65 ರಷ್ಟು ಅಡಿಕೆ ಬೆಳೆ ಕರ್ನಾಟಕದಲ್ಲಿ ಉತ್ಪಾದನೆಯಾಗುತ್ತಿದೆ. ಅಡಿಕೆ ಬೆಳೆಯು ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದು, ಈ ಹಿಂದೆ ಅಡಿಕೆಯಲ್ಲಿ ಕಡಿಮೆ ಹಾನಿ ಉಂಟು ಮಾಡುತ್ತಿದ್ದ ರೋಗಗಳು ಇತ್ತೀಚಿನ ವರ್ಷಗಳಲ್ಲಿ ವಾತಾವರಣದಲ್ಲಿ ಉಂಟಾಗುತ್ತಿರುವ ವೈಪರಿತ್ಯದಿಂದಾಗಿ ಹೆಚ್ಚು ಹಾನಿಯನ್ನುಂಟುಮಾಡುತ್ತಿವೆ.
ಅವುಗಳಲ್ಲಿ ಎಲೆಚುಕ್ಕೆ ರೋಗವು ಪ್ರಮುಖವಾಗಿದ್ದು, ಮಲೆನಾಡಿನೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವುದು ಈ ಭಾಗದ ಬೆಳೆಗಾರರಲ್ಲಿ ಹೆಚ್ಚು ಆತಂಕಕ್ಕೆ ಕಾರಣವಾಗುತ್ತಿದೆ. ಅಡಿಕೆಗೆ ರೋಗ ಹಾಗೂ ಕೀಟಗಳ ಬಾಧೆಯಿಂದ ಇಳುವರಿ ಕುಂಠಿತವಾಗುತ್ತಿದ್ದು, ನಿರ್ದಿಷ್ಟ ಅವಧಿಯಲ್ಲಿ ಸರಿಯಾದ ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಂಡಿದ್ದೇ ಆದಲ್ಲಿ, ಈ ರೋಗದ ಬಾಧೆ ಹಾಗೂ ಹರಡುವಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಆದ್ದರಿಂದ ಈ ರೋಗದ ಲಕ್ಷಣಗಳು, ಹರಡುವಿಕೆ ಮತ್ತು ತೆಗೆದುಕೊಳ್ಳಬೇಕಾದ ನಿರ್ವಹಣಾ ಕ್ರಮಗಳನ್ನು ಈ ಕೆಳಗೆ ವಿವರಿಸಲಾಗಿದೆ.
ರೋಗಕಾರಕಗಳು: ಕೊಲ್ಲೆಟೋಟ್ರೈಕಮ್ ಗ್ಲೀಯೋಸ್ಪೊರೈಡ್ಸ್, ಫಿಲ್ಲೊಸ್ಟಿಕ್ಟ ಅರಕೆ ಮತ್ತು ಪೆಸ್ಟಲೋಪ್ಸಿಸ್ ಅರಕೆ
ರೋಗದ ಲಕ್ಷಣಗಳು:
• ಫಿಲ್ಲೊಸ್ಟಿಕ್ಟ ಶಿಲೀಂಧ್ರವು ಮರಗಳ ಸೋಗೆಗಳ ಮೇಲ್ಭಾಗದಲ್ಲಿ ದೊಡ್ಡ ಗಾತ್ರದ ಕಂದು ಮತ್ತು ಕಪ್ಪು ಬಣ್ಣದ ಚುಕ್ಕೆಗಳ ರೂಪದಲ್ಲಿ ಕಾಣಿಸುತ್ತವೆ.
• ಕೊಲ್ಲೆಟೋಟ್ರೈಕಮ್ ಶಿಲೀಂಧ್ರವು ಸೋಗೆಗಳ ಗರಿಗಳ ಮೇಲೆ ಹಳದಿ ಮತ್ತು ಕಪ್ಪು ಬಣ್ಣದ ಚಿಕ್ಕ ಗಾತ್ರದ ಚುಕ್ಕೆಗಳು ಕಾಣಿಸುತ್ತವೆ ಹಾಗೂ ಗರಿಗಳು ತುದಿಯಿಂದ ಒಣಗಲು ಪ್ರಾರಂಭಿಸುತ್ತವೆ.
• ಪೆಸ್ಟಲೋಷಿಯಾ ಶಿಲೀಂಧ್ರವು ಗರಿಗಳ ಮೇಲೆ ನಸು ಹಳದಿ ಬಣ್ಣದ ಚುಕ್ಕೆಗಳು ಕಾಣಿಸುತ್ತವೆ.
• ಈ ಚುಕ್ಕೆಗಳು ಕೆಳಗಿನ ಎಲೆಗಳಿಂದ ಪ್ರಾರಂಭವಾಗಿ ಶೀಘ್ರವಾಗಿ ಒಂದಕ್ಕೊಂದು ಕೂಡಿಕೊಂಡು ಪೂರ್ತಿ ಹೆಡೆಗಳನ್ನು ಆವರಿಸುತ್ತವೆ.
• ರೋಗ ಉಲ್ಬಣಗೊಂಡಾಗ ಹೆಡೆಗಳು ಒಣಗಲಾರಂಭಿಸುತ್ತವೆ, ಇಂತಹ ಒಣಗಿದ ಎಲ್ಲಾ ಹೆಡೆಗಳು ಕಾಂಡಕ್ಕೆ ಜೋತು ಬಿದ್ದು ಮರ ಶಕ್ತಿಕಳೆದುಕೊಂಡು ಇಳುವರಿ ಕುಂಠಿತಗೊಳ್ಳುತ್ತದೆ.
ರೋಗಕ್ಕೆ ಪೂರಕವಾದ ಅಂಶಗಳು
ಶಿಲೀಂದ್ರವು ರೋಗಗ್ರಸ್ಥ ಗರಿಗಳಲ್ಲಿ ವಾಸಿಸುವುದು, ಮಳೆಹನಿಗಳ ಚಿಮ್ಮುವುವಿಕೆಯಿಂದ ಶಿಲೀಂಧ್ರದ ಕಣಗಳು ಗಾಳಿಯಲ್ಲಿ ಸೇರಿ ಹೊಸ ಗರಿಗಳನ್ನು ತಲುಪುತ್ತವೆ. ಹಾಗೆಯೇ ತೇವಭರಿತ ಬಿಸಿಲಿನ ವಾತಾವರಣ, ಕಡಿಮೆ ಉಷ್ಣಾಂಶ (180 ರಿಂದ 240 ಸೆ) ಮತ್ತು ಹೆಚ್ಚಿನ ಆದÀ್ರತೆ (>85 %) ಈ ರೋಗದ ತೀವ್ರತೆ ಮತ್ತು ಹರಡುವಿಕೆಗೆ ಪೂರಕವಾದ ಅಂಶಗಳಾಗಿರುತ್ತವೆ. ರೋಗವು ವರ್ಷ ಪೂರ್ತಿ ಕಂಡುಬಂದರೂ ಸಹ ಮಾರ್ಚ್ ನಿಂದ ಸೆಪ್ಟಂಬರ್ ತಿಂಗಳ ವರೆಗೂ ಹೆಚ್ಚಾಗಿ ಬಾಧೆಯನ್ನು ಉಂಟುಮಾಡುತ್ತದೆ.
ನಿರ್ವಹಣೆ
ರೋಗ ಬಾಧಿತ ಒಣಗಿದ ಗರಿಗಳನ್ನು ಕತ್ತರಿಸಿ ತೆಗೆದು ನಾಶಪಡಿಸುವುದರಿಂದ ರೋಗ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯಬಹುದು.
ಬಿಸಿಲು ಬೀಳುವಂತೆ ಮಾಡಲು ಅಂತರ ಬೆಳೆಗಳ ಅಥವಾ ಕಾಡು ಮರಗಳ ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಿ ತೆಗೆಯುವುದು.
ಮರಗಳ ಉತ್ತಮ ಬೆಳವಣಿಗೆಗೆ ಕೊಟ್ಟಿಗೆ ಗೊಬ್ಬರದ ಜೊತೆಗೆ ಶಿಫಾರಿತ ಪೋಷಕಾಂಶ ಸಾರಜನಕ:ರಂಜಕ:ಪ್ರೆಟ್ಯಾಷ್ (100:40:140 ಗ್ರಾಂ/ಪ್ರತಿ ಮರಕ್ಕೆ) ನೀಡಬೇಕು.
ಶೇ. 1ರ ಬೋರ್ಡೋ ದ್ರಾವಣ ಅಥವಾ ಶೇ. 0.3ರ ತಾಮ್ರದ ಆಕ್ಸಿಕ್ಲೋರೈಡ್ ಸಿಂಪಡಿಸುವುದು.
ಅಥವಾ
ರೋಗ ಲಕ್ಷಣದ ಪ್ರಾರಂಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಶಿಲೀಂಧ್ರನಾಶಕಗಳಾದ ಮ್ಯಾಂಕೋಜೆóóಬ್ 63% + ಕಾರ್ಬೆನ್ಡೈಜೀಮ್ 12%, 2 ಗ್ರಾಂ ಜೊತೆಗೆ ಅಂಟು ದ್ರಾವಣ (1 ಮಿ.ಲೀ.) ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಅಥವಾ
ರೋಗ ಮತ್ತೆ ಕಾಣಿಸಿಕೊಂಡಲ್ಲಿ ಹೆಕ್ಸಕೊನಜೋಲ್ 5% ಎಸ್.ಸಿ/ಇ.ಸಿ ಅಥವಾ ಪ್ರೊಪಿಕೊನಜೋಲ್ 25% ಇ.ಸಿ ಅಂತರವ್ಯಾಪಿ ಶಿಲೀಂಧ್ರನಾಶಕಗಳನ್ನು 1 ಮಿ.ಲೀ. ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಮುಖ್ಯಸ್ಥರು
ಕೃಷಿ ವಿಜ್ಞಾನ ಕೇಂದ್ರ
ಶಿವಮೊಗ್ಗ
ಸಂಪರ್ಕ: 94808 38976