
ಅಡಿಕೆ ಕರ್ನಾಟಕ ರಾಜ್ಯದ ಒಂದು ಪ್ರಮುಖ ವಾಣಿಜ್ಯ ಬೆಳೆ. ಅಡಿಕೆಯನ್ನು ರಾಜ್ಯ ಕರಾವಳಿ ಘಟ್ಟಪ್ರದೇಶ ಮತ್ತು ಮೈದಾನ ಪ್ರದೇಶಗಳಾದ ತುಮಕೂರು, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಅಡಿಕೆಯ ಒಟ್ಟು ಪ್ರದೇಶ 54482 ಹೆಕ್ಟೇರ್ಗಳು. ಅಡಿಕೆಯಿಂದ ಹೆಚ್ಚಿನ ಲಾಭವನ್ನು ಗಳಿಸಲು ರೈತರು ಆಯಾ ಪ್ರದೇಶಗಳಿಗೆ ಸೂಕ್ತವಾದ ಅಧಿಕ ಇಳುವರಿ ನೀಡುವ ಹಾಗೂ ರೋಗ, ಕೀಟಗಳಿಂದ ಮುಕ್ತವಾಗಿರುವ ಆರೋಗ್ಯಯುತ ಸಸಿಗಳನ್ನು ಆಯ್ಕೆ ಮಾಡಿಕೊಳ್ಳುವುದರ ಬಗ್ಗೆ ಮುತುವರ್ಜಿ ವಹಿಸಬೇಕಾಗಿದ

ಅಡಿಕೆಯ ನರ್ಸರಿ ಮಾಡಲು ಗೋಟುಗಳ ಅಯ್ಕೆ:

- ಶೀಘ್ರ ಇಳುವರಿ ಕೊಡಲು ಪ್ರಾರಂಭಿಸಿರುವ ಹದಿನೈದರಿಂದ ಇಪ್ಪತೈದು ವರ್ಷಕ್ಕಿಂತಲೂ ಹೆಚ್ಚು ಪ್ರಾಯದ ಮತ್ತು ಉತ್ತಮ ಕಾಯಿ ಕಚ್ಚುವಿಕೆ ಹೊಂದಿರುವ ಮರಗಳನ್ನು ತಾಯಿ ಮರಗಳೆಂದು ಆಯ್ಕೆ ಮಾಡಿಕೊಳ್ಳಬೇಕು
- ತಾಯಿ ಮರಗಳಿಂದ ಸುಮಾರು 35 ಗ್ರಾಂಗಿಂತಲೂ ಹೆಚ್ಚು ತೂಕವಿರುವ ಮತ್ತು ಪೂರ್ಣವಾಗಿ ಹಣ್ಣಾದ ಅಡಿಕೆಯನ್ನು ಬೀಜದ ಅಡಿಕೆ ಎಂದು ಆಯ್ದುಕೊಳ್ಳಬೇಕು

ಅಡಿಕೆ ಗಿಡಗಳ ನರ್ಸರಿ ಮಾಡುವ ವಿಧಾನ ಹಾಗೂ ನಿರ್ವಹಣೆ: ಆಯ್ಕೆ ಮಾಡಿದ ಅಡಿಕೆಗಳನ್ನು ಅವುಗಳ ತೊಟ್ಟಿನ ಭಾಗ ಮೇಲ್ಮುಖವಾಗಿರುವಂತೆ ಮರಳು ಮಣ್ಣಿನ ಪಾತಿಯಲ್ಲಿ 5 ಸೆಂ.ಮೀ.ಅಂತರದಲ್ಲಿ ಹೂಳಬೇಕು. ಅನಂತರ ಕಾಯಿಗಳು ಮುಚ್ಚುವಂತೆ ಪಾತಿಯನ್ನು ಅಡಿಕೆ ಸೋಗೆ ಅಥವಾ ಭತ್ತದ ಹುಲ್ಲಿನಿಂದ ಮುಚ್ಚಿ ಪ್ರತಿದಿನವೂ ನೀರುಣಿಸಬೇಕು. ಸುಮಾರು 40 ದಿನಗಳಲ್ಲಿ ಬೀಜಗಳು ಮೊಳಕೆಯೊಡೆಯಲು ಪ್ರಾರಂಭವಾಗುತ್ತವೆ. ಮೂರು ತಿಂಗಳ ನಂತರ ಮೊಳಕೆಗಳನ್ನು ಎರಡನೇ ಹಂತದ ಪಾತಿಗೆ ವರ್ಗಾಹಿಸಬೇಕು. ಈ ಪಾತಿಯ ಅಗಲ 120 ಸೆಂ.ಮೀ. ಎತ್ತರ 15 ಸೆಂ.ಮೀ. ಇದ್ದು ಉದ್ದವನ್ನು ಅನುಕೂಲಕ್ಕೆ ತಕ್ಕಂತೆ ಇಟ್ಟುಕೊಳ್ಳಬೇಕು. ಪ್ರತಿಯೊಂದು ಪಾತಿಗೂ ಹೆಕ್ಟೇರ್ ಗೆ 2.5 ಟನ್ಗಳ ಪ್ರಮಾಣದಲ್ಲಿ ಹಟ್ಟಿಗೊಬ್ಬರವನ್ನು ಹಾಕಬೇಕು. ನಂತರ ಮಳೆಗಾಲದ ಪ್ರಾರಂಭದಲ್ಲಿ 30 ಸೆಂ.ಮೀ. X 30 ಸೆಂ.ಮೀ. ಅಂತರವಿರುವಂತೆ ಮೊಳಕೆಗಳನ್ನು ನಾಟಿ ಮಾಡಿ , ಪಾತಿಗಳಿಗೆ ಆಂಶಿಕ ನೆರಳನ್ನು ಒದಗಿಸಬೇಕು. ಡಿಸೆಂಬರ್ ನಿಂದ ಮೇ ತಿಂಗಳವರೆಗೆ ದಿನಕ್ಕೆರಡು ಬಾರಿಯಂತೆ ನೀರು ಕೊಡಬೇಕು. ಮಳೆಗಾಲದಲ್ಲಿ ನೀರು ಹರಿದುಹೋಗುವಂತೆ ಕಾಲುವೆಗಳನ್ನು ನಿರ್ಮಾಣ ಮಾಡಿ, ಕಾಲಕಾಲಕ್ಕೆ ಕಳೆಗಳನ್ನು ಕಿತ್ತು ಪಾತಿಗಳನ್ನು ಸ್ವಚ್ಛಗೊಳಿಸುತ್ತಿರಬೇಕು.ಪರ್ಯಾಯವಾಗಿ ಅಡಿಕೆಗಳನ್ನು ಪಾಲಿಥಿನ್ ಚೀಲಗಳಲ್ಲಿ ಕೂಡ ನಾಟಿ ಮಾಡಬಹುದು . ಇವುಗಳಲ್ಲಿ ತುಂಬುವ ಮಿಶ್ರಣವು 3 ಭಾಗ ಮೇಲ್ಮಣ್ಣು, 1 ಭಾಗ ಕೊಟ್ಟಿಗೆ ಗೊಬ್ಬರ ಮತ್ತು 1 ಭಾಗ ಮರಳಿನಿಂದ ಕೂಡಿರಬೇಕು
ಗಿಡಗಳ ಆಯ್ಕೆ : 12 ರಿಂದ 18 ತಿಂಗಳ ,5 ಕ್ಕಿಂತ ಹೆಚ್ಚು ಎಲೆಗಳಿರುವ, ಸಮ ಪ್ರಮಾಣದ ಎತ್ತರವಿರುವ ಗಿಡಗಳನ್ನು ಆಯ್ದುಕೊಳ್ಳಬೇಕು.
ಗಿಡ ನೆಡುವ ಸಮಯ : ಉತ್ತಮ ಬಸಿಯುವಿಕೆ ಇರುವ ಮಣ್ಣಿನಲ್ಲಿ ಮೇ-ಜೂನ್ ತಿಂಗಳಲ್ಲಿ ಗಿಡಗಳನ್ನು ನೆಡಬಹುದು. ನೀರು ನಿಲ್ಲುವ ಸಾಧ್ಯತೆ ಇರುವ ಜೇಡಿಮಣ್ಣಿನಲ್ಲಿ ಹಾಗೂ ಅಧಿಕ ಮಳೆ ಬೀಳುವ ಪ್ರದೇಶಗಳಲ್ಲಿ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಗಿಡಗಳನ್ನು ನೆಡಬಹುದು. ‘
ಹೆಚ್ಚಿನ ಮಾಹಿತಿಗಾಗಿ ಸಂಪಕಿ೯ಸಿ
Smitha G. B. Scientist, (Horticulture), ICAR KVK, Shivamogga Phone No.-9611726001 |