ಒಂದೇ ಬೆಳೆಯನ್ನು ನಂಬಿ ಕೃಷಿ ಮಾಡಿದಲ್ಲಿ ಕೈಸುಟ್ಟುಕೊಳ್ಳಬೇಕಾದ ಸಾಧ್ಯತೆ ಹೆಚ್ಚು. ಆದ್ದರಿಂದಲೇ ಮುಖ್ಯ ಕೃಷಿಯೊಡನೆ ಉಪ ಬೆಳೆಗಳನ್ನು ಬೆಳೆಯಬೇಕು. ಈ ನಿಟ್ಟಿನಲ್ಲಿ ರೈತರಿಗೆ ಕಡಿಮೆ ವೆಚ್ಚದಲ್ಲಿ ಬೆಳೆಯಬಹುದಾದ ಉಪ ಬೆಳೆ ಜಾಯಿಕಾಯಿ. ಜಾಯಿಕಾಯಿ ಮರಗಳಿಗೆ ವಿಶೇಷ ಆರೈಕೆಯ ಅಗತ್ಯವಿಲ್ಲ. ತೆಂಗು ಮತ್ತು ಅಡಿಕೆ ತೋಟದಲ್ಲಿ ಒಂದು ಮಿಶ್ರ ಬೆಳೆಯಾಗಿ ಬೆಳೆಯಲು ಅನುಕೂಲಕರ. ಹೀಗಾಗಿ ಎಲ್ಲಾ ರೈತರು ಇದನ್ನು ಸುಲಭವಾಗಿ ಅತೀ ಕಡಿಮೆ ವೆಚ್ಚದಲ್ಲಿ ಬೆಳೆಯಬಹುದು. ಆಂಗ್ಲ ಭಾಷೆಯಲ್ಲಿ ನಟ್ ಮೆಗ್ ಎಂದು ಕರೆಯಲಾಗುವ ಇದರ ವೈಜ್ಞಾನಿಕ ಹೆಸರು ಮೈರಿಸ್ಟಿಕಾ ಫ್ರಾಗ್ರನ್ಸ್ .ಜಾಯಿಕಾಯಿ ಮೈರಿಸ್ಟಿಕಾಸಿ ಎಂಬ ಸಸ್ಯ ಕುಟುಂಬಕ್ಕೆ ಸೇರಿದ್ದು ಇದರಿಂದ ಜಾಯಿಕಾಯಿ ಮತ್ತು ಜಾಪತ್ರೆ ಎಂಬ ಎರಡು ಪದಾರ್ಥಗಳನ್ನು ಪಡೆಯಬಹುದು.
ಅಡಿಗೆಗಾಗಿ ಮತ್ತು ಸುವಾಸನೆ ಕೊಡುವ ವಸ್ತುವಾಗಿ ಉಪಯೋಗಿಸುತ್ತಾರೆ. ಉಪ್ಪಿನಕಾಯಿ ಮತ್ತು ಜೆಲ್ಲಿ ತಯಾರಿಕೆಯಲ್ಲೂ ಉಪಯೋಗಿಸುತ್ತಾರೆ. ಇದನ್ನು ಜೀರ್ಣತೆ ಮತ್ತು ಪ್ರಚೋದಕವಾಗಿ ಔಷಧಿಯಲ್ಲಿ ಉಪಯೋಗಿಸುತ್ತಾರೆ. ಹೆಚ್ಚು ಸಾವಯವ ಪದಾರ್ಥಗಳಿಂದ ಕೂಡಿದ ನದೀ ತೀರದ ಜೇಡಿಗೋಡು, ಮರಳುಗೋಡು ಅಥವಾ ಜಂಬಿಟ್ಟಿಗೆ ಮಣ್ಣು ಜಾಯಿಕಾಯಿ ಗಿಡದ ಬೆಳವಣಿಗೆಗೆ ಉತ್ತಮ. ಅತಿಯಾಗಿ ಒಣಗುವ ಹಾಗೂ ಜೌಗು ಮಣ್ಣುಗಳು ಸೂಕ್ತವಲ್ಲ. ತೇವಾಂಶಯುಕ್ತ ಉಷ್ಣವಲಯದಲ್ಲಿ ವಾರ್ಷಿಕ 1500 ರಿಂದ 3000 ಮಿ.ಮೀ. ಮಳೆ ಬೀಳುವ ಪ್ರದೇಶಗಳಲ್ಲಿ ಹಾಗೂ ಸಮುದ್ರ ಮಟ್ಟದಿಂದ 1300 ಮಿ. ಎತ್ತರವರೆಗೆ ಬೆಳೆಯಬಹುದು.
ಅಡಿಕೆಯೊಂದಿಗೆ ಮಿಶ್ರಬೆಳೆ: ಜಾಯಿಕಾಯಿ ಮರಗಳನ್ನು ಅಡಿಕೆಯಲ್ಲಿ ಸುಲಭವಾಗಿ ಬೆಳೆಸಬಹುದು.ಇದಕ್ಕೆ ಸ್ವಲ್ಪ ಮಟ್ಟಿನ ನೆರಳಿದ್ದರೆ ಸಾಕಾಗುತ್ತದೆ. ತೋಟದ ಸುತ್ತಲೂ 15 ರಿಂದ 20 ಅಡಿ ಅಂತರವನ್ನು ಕಾಯ್ದುಕೊಂಡು ಅಲ್ಲಲ್ಲಿ ನಾಟಿ ಮಾಡಬಹುದು. ಬೀಜದಿಂದ ಹಾಗೂ ಕಸಿ ವಿಧಾನದಿಂದ ವೃದ್ಧಿ ಮಾಡಿದ ಗಿಡಗಳನ್ನು ನಾಟಿಗೆ ಬಳಸಬಹುದು. ಈ ಮರಗಳು ಅಂದಾಜು ಒಂದೇ ರೀತಿಯಲ್ಲಿ ವಿಸ್ತಾರವಾಗಿ ಹರಡಿ ಫಸಲು ಬಿಡುತ್ತವೆ. ಕಸಿ ಗಿಡಗಳು ಫಸಲು ನೀಡಲು ಸಾಮಾನ್ಯವಾಗಿ 3 ವರ್ಷಗಳನ್ನು ತೆಗೆದುಕೊಂಡರೆ ಸಾಮಾನ್ಯವಾಗಿ ಮೊಳಕೆಯೊಡೆದ ಗಿಡಗಳು 6 ವರ್ಷಗಳನ್ನು ತೆಗೆದುಕೊಳ್ಳುತ್ತವೆ. ಈ ಗಿಡಗಳಿಗೆ ಜಾಸ್ತಿ ಆರೈಕೆಯ ಅವಶ್ಯಕತೆಯಿರುವುದಿಲ್ಲ .ವರ್ಷಕ್ಕೆ ಎರಡು ಬಾರಿ ಫಲ ನೀಡುತ್ತವೆ. ಜೂನ್ ಇಂದ ಸೆಪ್ಟೆಂಬರ್ ತಿಂಗಳ ಅವಧಿ ಹೇರಳವಾಗಿ ಜಾಯಿಕಾಯಿ ಫಸಲು ನೀಡುವ ಕಾಲವಾಗಿವೆ.
ತಳಿಗಳು:
- ಕೊಂಕಣ ಸುಗಂಧ : ಈ ತಳಿಯು ದ್ವಿಲಿಂಗ ಹೂಗಳನ್ನು ಹೊಂದಿರುತ್ತದೆ. ಕೆಲವು ಕಟ್ಟಿದ ಸಸಿಯಿಂದ 3ನೇ ವರ್ಷದ ನಂತರ ಕಾಯಿಗಳನ್ನು ಪಡೆಯ ಬಹುದು.
- ವಿಶ್ವಶ್ರೀ : ಉತ್ತಮ ಗುಣಮಟ್ಟದ ಅಧಿಕ ಇಳುವರಿ ಕೊಡುವ (8ನೇ ವಯಸ್ಸಿನ ಗಿಡ ಒಂದಕ್ಕೆ 1000 ಕಾಯಿಗಳು) ಈ ತಳಿಯು ಪೊದೆಯಾಗಿ ಬೆಳೆಯುತ್ತದೆ. ಪ್ರತಿ ಹೆಕ್ಟೇರ್ ನಿಂದ ಸುಮಾರು 3125 ಕಿ. ಗ್ರಾಂ ಒಣ ಕಾಯಿಗಳನ್ನು ಹಾಗೂ 480 ಕಿ. ಗ್ರಾಂ ಒಣಗಿರುವ ಜಾಪತ್ರೆಯನ್ನು ಪಡೆಯಬಹುದು (360 ಗಿಡಗಳು ಪ್ರತಿ ಹೆಕ್ಟೇರ್ಗೆ)
ಹಣ್ಣಾದ ಮೇಲೆ ಜಾಯಿಕಾಯಿಗಳು ಮರದಿಂದ ಕೆಳಗೆ ಬೀಳುತ್ತವೆ ಮಳೆಗಾಲದಲ್ಲಿ ಹಣ್ಣಾಗಿ ಬೀಳುವುದರಿಂದ ಜಾಪತ್ರೆ ಹಾಳಾಗುವ ಸಾಧ್ಯತೆ ಹೆಚ್ಚು. ಜಾಪತ್ರೆ ಕೆಂಬಣ್ಣದಿಂದ ಕೂಡಿದ್ದು ಜಾಯಿಕಾಯಿಗೆ ಕವಚದಂತೆ ಇರುತ್ತದೆ. ಹೀಗಾಗಿ ಮರದಿಂದ ಹಣ್ಣಾದ ಜಾಯಿಕಾಯಿಗಳನ್ನು ಬೇರ್ಪಡಿಸಿ ಒಣಗಿಸುವುದು ಒಳ್ಳೆಯದು. ಹೀಗೆ ಬೇರ್ಪಡಿಸಲಾದ ಜಾಯಿಕಾಯಿ ಮತ್ತು ಜಾಪತ್ರೆಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಒಟ್ಟಿನಲ್ಲಿ ಅಡಿಕೆಯಲ್ಲಿ ಮಿಶ್ರ ಬೆಳೆಯಾಗಿ ಜಾಯಿಕಾಯಿ ರೈತರಿಗೆ ಲಾಭದ ಭರವಸೆಯನ್ನು ನೀಡುತ್ತದೆ
ಹೆಚ್ಚಿನ ಮಾಹಿತಿಗಾಗಿ ಸಂಪಕಿ೯ಸಿ
Smitha. G.B, Scientist, (Horticulture), Krishi Vigyana Kendra Navule, Savalanga Road, Shivamogga.
Ph. No. 9611726001