ಶಿವಮೊಗ್ಗ ಆಗಸ್ಟ್ 17ಸಮಾಜ ಕಲ್ಯಾಣ ಇಲಾಖಾ ಕಾರ್ಯಕ್ರಮಗಳ ಕುರಿತು
ಅರಿವು-ತರಬೇತಿ ನೀಡುವ ‘ಅಂತ್ಯೋದಯ’-ಒಂದು ದಿನದ ಕಾರ್ಯಾಗಾರವನ್ನು ಸೆ.03 ರಂದು ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ್ ತೊಗಲಬಾಗಿ ತಿಳಿಸಿದರು.
ಇಂದು ಜಿ.ಪಂ ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಂತ್ಯೋದಯ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕಾರ್ಯಾಗಾರವನ್ನು ಯಶಸ್ವಿಯಾಗಿಸಲು ಅಗತ್ಯವಾದ ಸಕಲ ಸಿದ್ದತೆಯನ್ನು ಮಾಡಿಕೊಳ್ಳುವಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ವಿವಿಧ ಇಲಾಖೆಗಳಲ್ಲಿನ ಯೋಜನೆಗಳು ಮತ್ತು ಕಾರ್ಯಕ್ರಮಗಳ ಕುರಿತು ಅರಿವು ಮೂಡಿಸುವುದು, ಮಾರ್ಗದರ್ಶನ ಮತ್ತು ತರಬೇತಿ ನೀಡುವ ಸಲುವಾಗಿ ‘ಅಂತ್ಯೋದಯ’ ಎಂಬ ಒಂದು ದಿನದ ಕಾರ್ಯಾಗಾರವನ್ನು ಸೆಪ್ಟೆಂಬರ್ 3 ರಂದು ನಗರದ ಪೆಸಿಟ್ ಕಾಲೇಜಿನಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಜಿ.ಪಂ ವತಿಯಿಂದ ಎನ್‍ಆರ್‍ಎಲ್‍ಎಂ(ನ್ಯಾಷನಲ್ ರೂರಲ್ ಲೈವ್ಲಿಹುಡ್ ಮಿಷನ್) ನಿಂದ 5 ಮತ್ತು ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಿಂದ 01 ಒಟ್ಟು 06 ಮಳಿಗೆಗಳನ್ನು ಸ್ಥಾಪಿಸಿ, ಈ ಯೋಜನೆಗಳ ಸಂಪೂರ್ಣ ಚಿತ್ರಣ ನೀಡಲಾಗುವುದು. ಅದೇ ರೀತಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಮೀನುಗಾರಿಕೆ, ತೋಟಗಾರಿಕೆ, ಕೃಷಿ, ರೇಷ್ಮೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ನಿಗಮಗಳು ಸೇರಿದಂತೆ ವಿವಿಧ 24 ಇಲಾಖೆಗಳ ಮಳಿಗೆಗಳನ್ನು ಸ್ಥಾಪಿಸುವಂತೆ ಸೂಚನೆ ನೀಡಿದರು. ಮಳಿಗೆಗಳು 10*10 ಅಡಿ ಇದ್ದು, ಇಲಾಖೆಯ ಬ್ಯಾನರ್, ಇಲಾಖೆಗಳಲ್ಲಿರುವ ಯೋಜನೆಗಳು, ಕಾರ್ಯಕ್ರಮಗಳ ವಿವರಣೆಗಳನ್ನು ಉತ್ತಮವಾಗಿ ಪ್ರದರ್ಶಿಸುವಂತೆ ಹಾಗೂ ಕಾರ್ಯಕ್ರಮಕ್ಕೆ ಅಗತ್ಯವಾದ ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳುವಂತೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಜಿ.ಪಂ ಉಪ ಕಾರ್ಯದರ್ಶಿ-2 ಜಯಲಕ್ಷ್ಮಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ನಾಗರಾಜ್, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
(ಫೋಟೊ ಇದೆ)