*ಎಲ್ಲರೂ ಮರಗಳನ್ನು ನೆಟ್ಟು ಅದನ್ನು ಆರೈಕೆ ಮಾಡಬೇಕು : ತುಳಿಸಿಗೌಡ*
ಶಿವಮೊಗ್ಗ ಮಾರ್ಚ್ 09 : ನಾನು ಈಗಾಗಲೇ ನೂರಾರು ಜಾತಿ ಮರಗಳನ್ನು ಬೆಳೆಸಿದ್ದೇನೆ. ಕೆಲವು ಫಲ ಕೊಡುತ್ತವೆ, ಕೆಲವು ನೆರಳು ಕೊಡುತ್ತವೆ ಹಾಗೂ ಕೆಲವು ಮರಗಳನ್ನು ಕಡಿದರೂ ಮತ್ತೆ ಚಿಗುರಿ ಬೆಳೆಯುತ್ತವೆ. ನನ್ನ ಹಾಗೆ ಎಲ್ಲರೂ ಮರಗಳನ್ನು ನೆಟ್ಟು ಮತ್ತು ಅದನ್ನು ಆರೈಕೆ ಮಾಡಬೇಕು ಎಂದು ಪದ್ಮಶ್ರೀ ಮತ್ತು ಮದರ್ ತೆರೇಸಾ ರಾಷ್ಟ್ರೀಯ ಪ್ರಶಸ್ತಿ ಪುರಸ್ಕøತರಾದ ಅಂಕೋಲದ ತುಳಸಿಗೌಡ ಕರೆ ನೀಡಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದ ವತಿಯಿಂದ ಮಾ.8 ರಂದು ನವಿಲೆ ಆವರಣದ ಕೃಷಿ ಮಹಾವಿದ್ಯಾಲಯದ ಎಂ. ಎಸ್. ಸ್ವಾಮಿನಾಥನ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕಟೀಲು ಅಶೋಕ ಪೈ ಸ್ಮಾರಕ ಕಾಲೇಜು ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಮಾತನಾಡಿ, ನೈಸರ್ಗಿಕವಾಗಿ, ಜೀವಿವೈವಿಧ್ಯತೆಯನ್ನು ಉಳಿಸಿಕೊಳ್ಳುತ್ತಲೇ ಮಹಿಳೆಯರು ಸುಸ್ಥಿರತೆ ಕಾಪಾಡಿಕೊಳ್ಳಬೇಕು. ಹಾಗೂ ಪ್ರತಿಯೊಬ್ಬರೂ ಹೆಣ್ಣನ್ನು ಗೌರವದಿಂದ ಕಾಣಬೇಕು ಎಂದು ಹೇಳಿದರು.
ಹೆಣ್ಣನ್ನು ಗೌರವಿಸುವ ಸಂಸ್ಕøತಿ ಮನೆಯಿಂದಲೇ, ತಾಯಿ-ತಂದೆಯರಿಂದಲೇ ಬರಬೇಕಿದೆ. ವೈಜ್ಞಾನಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಜಾತಿ ಧರ್ಮ, ವರ್ಗದ ನೆಲೆಯಲ್ಲಿ ಮಹಿಳೆಯರನ್ನು ಸಮಾನತೆಯಿಂದ ಕಾಣಬೇಕಾಗಿದೆ. ಹೆಣ್ಣನ್ನು ಶೋಷಣೆ ಮುಕ್ತವಾಗಿಸಿ ಅಲ್ಲಿ ಪ್ರೀತಿ ಮತ್ತು ಗೌರವದಿಂದ ಕಾಣುವಂತೆ ಆಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಡಾ. ಎಂ. ಕೆ. ನಾಯಕ್ ಮಾತನಾಡಿ, ಎಲ್ಲಾ ವರ್ಗದ ಮಹಿಳೆಯರಿಗೆ ಸಮಾನತೆಯನ್ನು ಕಲ್ಪಿಸಿಕೊಟ್ಟಂತಹ ದಿನವಾಗಿ ನಾವು ಮಹಿಳಾ ದಿನವನ್ನು ಆಚರಿಸುತ್ತಿದ್ದೇವೆ. ಕಳೆದ ಎರಡು ವರ್ಷದಿಂದ ಪ್ರತಿ ಸಾವಿರ ಪುರುಷರಿಗೆ ಮಹಿಳೆಯರ ಸಂಖ್ಯೆ ಸಮಾನವಾಗಿಲ್ಲ.
ಹೆಣ್ಣಿಲ್ಲದ ಸಮಾಜವನ್ನು ಊಹಿಸಲೂ ಸಾಧ್ಯವಿಲ್ಲ. ದೇವರು ಎಲ್ಲಾ ಕಡೆ ಇರನು, ಅದಕ್ಕಾಗಿ ತಾಯಂದಿರನ್ನು ಸೃಷ್ಟಿಸಿದ್ದಾನೆ. ತಾಯಂದಿರ ತ್ಯಾಗ, ಸಂಯವದಿಂದಲೇ ಪ್ರಪಂಚ ನಡೆಯುತ್ತಿದೆ ಇದಕ್ಕೆ ನೆಪೋಲಿಯನ್ ಬೋನಾಪಾರ್ಟೆ ಹೇಳಿದಂತೆ ಒಳ್ಳೆಯ ತಾಯಂದಿರನ್ನು ನೀಡಿದರೆ ಉತ್ತಮ ದೇಶವನ್ನು ಕಟ್ಟುವೆ ಎಂದಿರುವುದನ್ನು ಉಲ್ಲೇಖಸಿದಿರು. ಹಾಗಾಗಿ ನಾವುಗಳೆಲ್ಲರೂ ಹೆಣ್ಣನ್ನು ಪೂಜಿಸಿ, ಪ್ರೀತಿಸಿ, ಗೌರವಾದರಗಳಿಂದ ಕಾಣಬೇಕಿದೆ. ಆಗ ಮಾತ್ರ ಸಮಾನ ಜಗತ್ತು ಸಶಕ್ತ ಜಗತ್ತು ಆಗಲು ಸಾಧ್ಯವಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀಮತಿ ಎನ್. ಲೀಲಾವತಿ ಶುಶ್ರೂಷಕಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆಸ್ಪತ್ರೆ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ಜಯಲಕ್ಷ್ಮಿ ನಾರಾಯಣ ಹೆಗಡೆ, ಪ್ರಾಧ್ಯಾಪಕರು ಮತ್ತು ನೋಡಲ್ ಅಧಿಕಾರಿ (ಜೆಂಡರ್ ಬಜೆಟ್) ಇವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿವರ್ಷ ನಮ್ಮ ವಿಶ್ವವಿದ್ಯಾಲಯದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಹಿಂದೆ ಮಹಿಳೆ ಮತ್ತು ಪುರುಷರ ನಡುವೆ ವೇತನ ತಾರತಮ್ಯ ಮಾಡಿದ್ದರ ಪ್ರತಿಫಲ ಮಹಿಳೆಯರು ಒಟ್ಟುಗೂಡಿ ಸಮಾನತೆ ಬೇಕೆಂದು ಧರಣಿ ಮಾಡಿದ ದಿನವನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದು ಆಚರಿಸಲಾಗುತ್ತಿದೆ. ಅಕ್ಷರಸ್ಥ ಕುಟುಂಬದಲ್ಲೂ ಮಹಿಳೆಯರ ಶೋಷಣೆ ನಡೆಯುತ್ತಿದೆ. ಇದು ನಿಲ್ಲಬೇಕೆಂದರೆ ನಾವೆಲ್ಲರೂ ಜಾಗೃತರಾಗಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಶಿಕ್ಷಣ ನಿರ್ದೇಶಕ ಡಾ. ಎಂ. ಹನುಮಂತಪ್ಪ, ಸಂಶೋಧನಾ ನಿರ್ದೇಶಕ
ಡಾ. ಮೃತ್ಯುಂಜ ಸಿ. ವಾಲಿ, ಕುಲಸಚಿವ ಡಾ. ಆರ್. ಲೋಕೇಶ, ಡೀನ್ (ಸ್ನಾತಕೋತ್ತರ) ಡಾ. ಎಂ. ದಿನೇಶ್ ಕುಮಾರ್, ಗ್ರಂಥಪಾಲಕ ಡಾ. ಡಿ. ತಿಪ್ಪೇಶ, ಆಡಳಿತಾಧಿಕಾರಿ ಡಾ. ಜಿ. ಕೆ. ಗಿರಿಜೇಶ್, ವಿಸ್ತರಣಾ ನಿರ್ದೇಶಕ ಡಾ. ಬಿ. ಹೇಮ್ಲಾನಾಯಕ್, ಡೀನ್(ವಿದ್ಯಾರ್ಥಿಕಲ್ಯಾಣ)ಹಣಕಾಸು ನಿಯಂತ್ರಣಾಧಿಕಾರಿ ಡಾ. ಎನ್. ಶಿವಶಂಕರ್ ಹಾಗೂ ವಿಶ್ವ ವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಕಾರ್ಮಿಕ ವರ್ಗದವರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
