ಶಿವಮೊಗ್ಗ, ಸೆಪ್ಟಂಬರ್. 21 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳ ಮೂಲಕ ಅಂಗನವಾಡಿ ಕೇಂದ್ರಗಳಿಗೆ ಬಾರದಿರುವ 6ತಿಂಗಳಿನಿಂದ 3ವರ್ಷದೊಳಗಿನ ಮಕ್ಕಳಿಗೆ ಹಾಗೂ ಅಂಗನವಾಡಿಗೆ ದಾಖಲಾಗಿ ನಿತ್ಯ ಕೇಂದ್ರಕ್ಕೆ ಬರುತ್ತಿರುವ 3 ವರ್ಷ ಮೇಲ್ಪಟ್ಟ ಮಕ್ಕಳಿಗೆ ನೀಡಲಾಗುತ್ತಿರುವ ಪೌಷ್ಠಿಕ ಆಹಾರ ಗುಣಮಟ್ಟದ್ದಾಗಿರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶೇಷಪ್ಪ ಅವರಿಗೆ ಸೂಚಿಸಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಂಗನವಾಡಿ ಕೇಂದ್ರಗಳ ಫಲಾನುಭವಿಗಳಿಗೆ ಸರಬರಾಜು ಮಾಡುತ್ತಿರುವ ಆಹಾರ ಪದಾರ್ಥಗಳ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ನೀಡಲಾಗುತ್ತಿರುವ ಪೌಷ್ಠಿಕ ಆಹಾರವು ಮಕ್ಕಳ ದೈಹಿಕ ಮತ್ತು ಬೌದ್ಧಿಕ ವಿಕಾಸಕ್ಕೆ ಪೂರಕವಾಗಿರಬೇಕು. ಅದಕ್ಕಾಗಿ ಪೌಷ್ಠಿಕ ಆಹಾರದ ಗುಣಮಟ್ಟವನ್ನು ತಜ್ಞರಿಂದ ತಿಳಿದು, ನೀಡಬೇಕಾದ ಪೌಷ್ಠಿಕ ಆಹಾರದ ಗುಣಮಟ್ಟದಲ್ಲಿ ಯಾವುದೇ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಆರಂಭದಲ್ಲಿ ಜಿಲ್ಲೆಯ ಒಂದು ಕೇಂದ್ರದಲ್ಲಿ ಪ್ರಾಯೋಗಿಕವಾಗಿ ಆರಂಭಿಸಿ, ಯಶಸ್ವಿ ಫಲಿತಾಂಶದ ನಂತರ ಜಿಲ್ಲೆಗೆ ವಿಸ್ತರಿಸಲು ಕ್ರಮ ಕೈಗೊಳ್ಳುವಂತೆ ಅವರು ಸಲಹೆ ನೀಡಿದರು.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿರುವ ಮಹಿಳಾ ಪೂರಕ ಪೌಷ್ಠಿಕ ಆಹಾರ ತಯಾರಿಕಾ ಘಟಕಗಳಿಂದ ಪೌಷ್ಠಿಕ ಆಹಾರ ಉತ್ಪಾದಿಸಿ ಸರಬರಾಜು ಮಾಡುತ್ತಿರುವ ‘ಪುಷ್ಠಿ’ ಆಹಾರದ ಪ್ರಮಾಣದ 3ಕೆ.ಜಿ. ಇದ್ದು, ಮಕ್ಕಳ ಅಗತ್ಯಕ್ಕಿಂತ ಹೆಚ್ಚಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ಪರಿಶೀಲಿಸಿ, ಪ್ರಮಾಣ ಕಡಿಮೆ ಮಾಡುವ ಹಾಗೂ ಆಹಾರ ಉತ್ಪನ್ನದಲ್ಲಿ ಇನ್ನಷ್ಟು ಪೌಷ್ಠಿಕಾಂಶಯುಕ್ತ ಕಾಳು-ಬೇಳೆಗಳನ್ನು ಸೇರಿಸುವುದರ ಬಗ್ಗೆಯೂ ತಜ್ಞರಿಂದ ಮಾಹಿತಿ ಪಡೆದು, ಶೀಘ್ರವಾಗಿ ಮಾಹಿತಿ ನೀಡುವಂತೆ ಅವರು ಸೂಚಿಸಿದರು.
ಮಹಿಳಾ ಪೂರಕ ಪೌಷ್ಠಿಕ ಆಹಾರ ತಯಾರಿಕಾ ಘಟಕಗಳಲ್ಲಿ ಉತ್ಪಾದಿಸುತ್ತಿರುವ ಆಹಾರದ ಕಚ್ಚಾ ಸಾಮಗ್ರಿಗಳ ಬೆಲೆ ಹೆಚ್ಚಳ, ಸ್ವಚ್ಚಗೊಳಿಸುವುದು, ಸಾಗಾಣಿಕೆ, ಆಡಳಿತಾತ್ಮಕ ವೆಚ್ಚ, ತೆರಿಗೆ ಹಾಗೂ ನಿರ್ವಹಣೆ ಅತ್ಯಂತ ದುಬಾರಿಯಾಗಿದ್ದು ಘಟಕಗಳು ನಷ್ಟದಲ್ಲಿ ನಡೆಯುತ್ತಿವೆ ಆದ್ದರಿಂದ ದರಪರಿಷ್ಕರಣೆ ಮಾಡುವಂತೆ ಘಟಕಗಳ ಮುಖ್ಯಸ್ಥರು ಈಗಾಗಲೇ ಮನವಿ ಸಲ್ಲಿಸಿದ್ದಾರೆ. ಅದಕ್ಕಾಗಿ ನೆರೆಯ ಜಿಲ್ಲೆಗಳಲ್ಲಿ ವಿತರಿಸಲಾಗುತ್ತಿರುವ ಆಹಾರದ ಗುಣಮಟ್ಟ, ಪ್ರಮಾಣ ಮತ್ತು ನಿಗದಿಪಡಿಸಿರುವ ದರವನ್ನು ತುಲನಾತ್ಮಕವಾಗಿ ಪರಿಶೀಲಿಸಿ, ದರಪರಿಷ್ಕರಣೆ ಮಾಡಲು ವಿಷಯವನ್ನು ಸಭೆಗೆ ಮಂಡಿಸುವಂತೆ ಸೂಚಿಸಿದರು.
ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇದಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಆಹಾರದ ಪ್ಯಾಕಿಂಗ್ಗೆ ಬಳಸಲಾಗುತ್ತಿರುವ ಪ್ಲಾಸ್ಟಿಕ್ ಕವರ್ಗಳಿಗೆ ಪರ್ಯಾಯವಾಗಿರುವ ಪ್ಯಾಕಿಂಗ್ ಪದ್ದತಿಯನ್ನು ಅನುಸರಿಸಲು ಸೂಚನೆ ನೀಡಬೇಕು. ಈ ನಿಟ್ಟಿನಲ್ಲಿ ಹೆಚ್ಚಾಗಬಹುದಾದ ದರವನ್ನೂ ಕೂಡ ದರಪರಿಷ್ಕರಣೆ ಸಮಯದಲ್ಲಿ ಗಮನಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಪ್ರಸ್ತುತ ಅಂಗನವಾಡಿ ಮಕ್ಕಳಿಗೆ ಪ್ರತಿದಿನ ಬೆಳಿಗ್ಗೆ ಮೊಳಕೆ ಬರಿಸಿದ ಹೆಸರುಕಾಳು ಅಥವಾ ಕಡಲೆ ಬೀಜವನ್ನು ನೀಡಲಾಗುತ್ತಿದೆ. ಮಧ್ಯಾಹ್ನ ಅನ್ನ-ಸಾಂಬಾರ್, ವಾರದಲ್ಲಿ ಎರಡು ದಿನ ಮೊಟ್ಟೆ, ಸಂಜೆ ಹಾಲು ಮತ್ತು ಸೇಂಗಾ ಚಿಕ್ಕಿ ನೀಡಲಾಗುತ್ತಿದೆ ಎಂದು ಮಹಿಳಾ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶೇಷಪ್ಪ ಅವರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಪೌಷ್ಠಿಕ ಆಹಾರ ಘಟಕಗಳ ಮುಖ್ಯಸ್ಥರು, ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.