ಶಿವಮೊಗ್ಗ, ಸೆಪ್ಟೆಂಬರ್ 16 : ಜಿಲ್ಲೆಯಲ್ಲಿ ವಿವಿಧ ಯೋಜನೆಗಳಡಿ ಮಂಜೂರಾಗಿರುವ ಮತ್ತು ಅರ್ಧಕ್ಕೆ ನಿಂತಿರುವ ಅಂಗನವಾಡಿ ಕಟ್ಟಡಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಗತ್ಯವಾದ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ತಿಳಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಇಂದು ಏರ್ಪಡಿಸಲಾಗಿದ್ದ ವಿವಿಧ ಯೋಜನೆಗಳಡಿ ಮಂಜೂರಾದ ಅಂಗನವಾಡಿ ಕಟ್ಟಡಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ ನರೇಗಾ, ಎಸ್‍ಡಿಪಿ, ಅಮೃತ ಯೋಜನೆ, ಅನುಸೂಚಿತ ಜಾತಿ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ, ಪ್ರಧಾನ ಮಂತ್ರಿ ಜನ ವಿಕಾಸ ಕಾರ್ಯಕ್ರಮ ಸೇರಿದಂತೆ ವಿವಿಧ ಯೋಜನೆಯಡಿ ಅಂಗನವಾಡಿ ಕಟ್ಟಡಗಳು ಮಂಜೂರಾಗಿ, ಸ್ಥಳ ಸಮಸ್ಯೆ, ಕಾಮಗಾರಿ ಬದಲಾವಣೆ, ಅನುದಾನ ಕೊರತೆ ಹೀಗೆ ಹಲವಾರು ಕಾರಣಗಳಿಗೆ ಅರ್ಧದಲ್ಲೇ ನಿಂತಿರುವ ಮತ್ತು ಇನ್ನೂ ಕಾಮಗಾರಿ ಆರಂಭವಾಗದ ಕಟ್ಟಡ ಕಾಮಗಾರಿಗಳನ್ನು ಅಗತ್ಯ ಕ್ರಮ ವಹಿಸಿ ಶೀಘ್ರದಲ್ಲಿ ಪೂರ್ಣಗೊಳಿಸಬೇಕು.
ವಿವಿಧ ಯೋಜನೆಗಳಡಿ 2015-16 ನೇ ಸಾಲಿನಿಂದ ಇಲ್ಲಿಯತನಕ ಅನೇಕ ಅಂಗನವಾಡಿ ಕಟ್ಟಡಗಳು ಅಪೂರ್ಣವಾಗಿದ್ದು, ಅವುಗಳ ಪಟ್ಟಿ ತಯಾರು ಮಾಡಿ ಪೂರ್ಣಗೊಳಿಸಲು ಕ್ರಮ ವಹಿಸಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು ಜಿಲ್ಲೆಯಲ್ಲಿ ತಾಲ್ಲೂಕುವಾರು ಮಂಜೂರಾದ, ಪ್ರಗತಿಯಲ್ಲಿರುವ, ಪೂರ್ಣಗೊಂಡ ಮತ್ತು ಆರಂಭ ಆಗದೇ ಇರುವ ಅಂಗನವಾಡಿ ಕಟ್ಟಡಗಳ ಪಟ್ಟಿ ಮಾಡಿ ನೀಡಬೇಕು. ಪ್ರತಿ ತಿಂಗಳು ಈ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಬೇಕು ಎಂದರು.
ನಗರ ಭಾಗದಲ್ಲಿ ಅಂಗನವಾಡಿ ಕಟ್ಟಡಗಳು ಅಪೂರ್ಣವಾಗಿದ್ದರೆ ಅಥವಾ ಕಟ್ಟಡದ ಅಗತ್ಯವಿದ್ದಲ್ಲಿ ಪಟ್ಟಿ ಮಾಡಿ ನೀಡಿದಲ್ಲಿ ನಗರ ಸ್ಥಳೀಯ ಸಂಸ್ಥೆಗಳೊಂದಿಗೆ ಮಾತನಾಡಿ ಹಣ ಮಂಜೂರು ಮಾಡಿಸಲು ಕ್ರಮ ಕೈಗೊಳ್ಳುತ್ತೇನೆ. ಗ್ರಾಮೀಣ ಭಾಗದಲ್ಲಿ ಅನೇಕ ಅಂಗನವಾಡಿಗಳು ಅಪೂರ್ಣವಾಗಿದ್ದು ಜಿಲ್ಲಾ ಪಂಚಾಯತ್ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ವಹಿಸಬೇಕು ಎಂದರು.
ನಿರ್ಮಿತಿ ಕೇಂದ್ರ, ಪಿಆರ್‍ಇಡಿ, ಪಿಡಬ್ಲ್ಯುಡಿ ಮತ್ತು ಗ್ರಾ.ಪಂ ಗೆ ವಹಿಸಲಾದ ಅಂಗನವಾಡಿ ಕಟ್ಟಡಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ ನೀಡಬೇಕು. ಅಂಗನವಾಡಿ ಕಟ್ಟಡಗಳ ಕಾಮಗಾರಿಯನ್ನು ಈ ಇಂಜಿನಿಯರಿಂಗ್ ವಿಭಾಗಗಳಿಗೆ ನೀಡುವುದಕ್ಕಿಂತ ಆಯಾ ಗ್ರಾ.ಪಂ, ತಾ.ಪಂ ಗಳಿಗೆ ನೀಡಿದರೆ ಉತ್ತಮ. ಮತ್ತು ಶೀಘ್ರವಾಗಿ ಕೆಲಸ ಸಾಧ್ಯವಾಗುತ್ತದೆ. ಪ್ರಸ್ತುತ ಬಾಕಿ ಇರುವ ಅಂಗನವಾಡಿ ಕಟ್ಟಡಗಳನ್ನು ಜಿ.ಪಂ, ತಾ.ಪಂ ಮತ್ತು 15 ನೇ ಹಣಕಾಸು ಮತ್ತು ಇತರೆ ಅನುದಾನದಲ್ಲಿ ಪೂರ್ಣಗೊಳಿಸುವಂತೆ ತಿಳಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ(ಪ್ರಭಾರ) ಚಂದ್ರಪ್ಪ, ನಿರ್ಮಿತಿ ಕೇಂದ್ರ, ಪಿಆರ್‍ಇಡಿ, ಪಿಡಬ್ಲ್ಯುಡಿ ಅಧಿಕಾರಿಗಳು, ವಿವಿಧ ತಾಲ್ಲೂಕುಗಳ ಸಿಡಿಪಿಓ ಗಳು ಹಾಜರಿದ್ದರು.

error: Content is protected !!