ಸಾಗರ: ಪ್ರಾಚೀನ ದೇಗುಲಗಳ ಮೂಲ ಸ್ವರೂಪಕ್ಕೆ ಧಕ್ಕೆ ಬರದ ರೀತಿಯಲ್ಲಿ ಸಂರಕ್ಷಣೆ ಮಾಡುವ ಕಾರ್ಯ ಅತ್ಯಂತ ಮಹತ್ವದ್ದಾಗಿದೆ ಎಂದು ಶ್ರೀ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ನಿರ್ದೇಶಕ ಹರೇರಾಂ ಶೆಟ್ಟಿ ಹೇಳಿದರು.

ಹೊಸಗುಂದ ಉತ್ಸವ ಪ್ರಯುಕ್ತ ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ಹಾಗೂ ಶ್ರೀ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ‘ಶಿಥಿಲಾವಸ್ಥೆಯ ದೇಗುಲಗಳು ಮತ್ತೆ ಮೈದೆಳೆಯುವ ಬಗೆ’ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡುತ್ತಿದ್ದರು.

ರಾಜ್ಯ, ದೇಶದಲ್ಲಿ ಸಾವಿರಾರು ಪ್ರಾಚೀನ ದೇಗುಲಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರ, ಧಾರ್ಮಿಕ ಇಲಾಖೆ ಗಮನಕ್ಕೆ ಬರದೇ ಶಿಥಿಲಾವಸ್ಥೆಯಲ್ಲಿವೆ. ಅಂತಹ ದೇಗುಲಗಳ ಸಂರಕ್ಷಣೆಗೆ ಎಲ್ಲರ ಸಹಕಾರ ಹಾಗೂ ಬೆಂಬಲ ಬೇಕಿದೆ ಎಂದು ತಿಳಿಸಿದರು.

ಧರ್ಮಸ್ಥಳ ಧಮೋತ್ಥಾನ ಟ್ರಸ್ಟ್‌ ನಿಂದ ರಾಜ್ಯದಲ್ಲಿ 247 ಕ್ಕೂ ಹೆಚ್ಚು ಪ್ರಾಚೀನ ದೇಗುಲಗಳ ಜೀಣೋದ್ಧಾರ ಕಾರ್ಯ ಪೂರ್ಣಗೊಂಡಿದೆ. ಟ್ರಸ್ಟ್ ಯಾವುದೇ ಕಾರಣಕ್ಕೂ ಮೂಲ ಸ್ವರೂಪಕ್ಕೆ ಧಕ್ಕೆ ತರುವುದಿಲ್ಲ. ಯಥಾಸ್ಥಿತಿಯಲ್ಲಿ ದೇಗುಲ ಪುನರ್ ನಿರ್ಮಾಣ ಮಾಡುವ ಕಾರ್ಯ ನಡೆಸುತ್ತಿದ್ದೇವೆ ಎಂದರು.

ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ಸಂಸ್ಥಾಪಕ ಮತ್ತು ಮ್ಯಾನೇಜಿಂಗ್ ಟ್ರಸ್ಟಿ ಸಿ.ಎಂ.ಎನ್.ಶಾಸ್ತ್ರಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಮಾರ್ಗದರ್ಶನ, ಶೃಂಗೇರಿಯ ಶಾರದಾ ಪೀಠದ ಜಗದ್ಗುರುಗಳ ದಿವ್ಯಾನುಗ್ರಹದೊಂದಿಗೆ ಹೊಸಗುಂದ ದೇವಸ್ಥಾನ ಪುನರುತ್ಥಾನ ಕಾರ್ಯ ಹಾಗೂ ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳಲಾಯಿತು ಎಂದು ಹೇಳಿದರು.

ಪ್ರಾಚೀನ ದೇಗುಲಗಳ ಸಂರಕ್ಷಣೆಗೆ ಧಮೋತ್ಥಾನ ಟ್ರಸ್ಟ್ ನೇತೃತ್ವದಲ್ಲಿ ನಡೆಯುತ್ತಿರುವ ಮಹತ್ಕಾರ್ಯದ ಬಗ್ಗೆ ಜನರಿಗೆ ಅರಿವು ಮೂಡಿಸಲು ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ಇದೇ ಮೊದಲ ಬಾರಿಗೆ ಹೊಸಗುಂದ ಉತ್ಸವ ನಡೆಸುತ್ತಿದ್ದು, ನಮ್ಮ ಕಲೆ, ಸಾಹಿತ್ಯ, ಸಂಸ್ಕøತಿ ಹಾಗೂ ಪ್ರಾದೇಶಿಕ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.

ಶ್ರೀ ಕ್ಷೇತ್ರ ಸಿಗಂದೂರು ಧರ್ಮದರ್ಶಿ ಡಾ. ರಾಮಪ್ಪ ಮಾತನಾಡಿ, ಸಾವಿರ ವರ್ಷದ ಹಿಂದೆ ಅರಸರ ಆಳ್ವಿಕೆಯಲ್ಲಿ ಹೊಸಗುಂದದಲ್ಲಿ ಅತ್ಯಂತ ಶ್ರೀಮಂತ ಕಲೆ, ಸಂಸ್ಕøತಿ ಬಿಂಬಿಸುತ್ತಿದ್ದನ್ನು ಪ್ರಾಚ್ಯ ವಸ್ತುಗಳ ದಾಖಲೆಗಳಿಂದ ತಿಳಿಯಬಹುದಾಗಿದೆ. ಅದೇ ರೀತಿಯಲ್ಲಿ ಹೊಸಗುಂದದಲ್ಲಿ ಮತ್ತೆ ಸಾಂಸ್ಕøತಿಕ ಮಹತ್ವ ಕಾರ್ಯ ಆರಂಭಗೊಂಡಿರವುದು ಅಭಿನಂದನೀಯ ಎಂದು ಹೇಳಿದರು.

ನವದೆಹಲಿಯ ಶ್ರೀ ಸರ್ವಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಪ್ರಾಚೀನ ಅಂಶಗಳು ಮರೆ ಆಗುತ್ತಿದ್ದಂತೆ ಸಂಸ್ಕøತಿ ಪರಂಪರೆಯು ಅವನತಿ ಹೊಂದುತ್ತದೆ. ದೇಶದ ಅಮೂಲ್ಯ ಪ್ರಾಚೀನ ಸಂಸ್ಕøತಿಯ ಸಂರಕ್ಷಣೆಯು ಅವಶ್ಯಕವಾಗಿದೆ ಎಂದು ಹೇಳಿದರು.

ದೇಶದ ವಿಭಿನ್ನ ವಾಸ್ತುಶೈಲಿಯುಳ್ಳ ದೇವಾಲಯಗಳ ಅಧ್ಯಯನದ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಚೀನ ದೇವಾಲಯಗಳು ಮತ್ತು ಇತಿಹಾಸ ಪ್ರಸಿದ್ಧ ಕಾಶಿ, ಹರಿದ್ವಾರ ಸೇರಿದಂತೆ ಮಹತ್ವದ ಪ್ರಾಚೀನ ಸ್ಥಳಗಳ ಪುನರುತ್ಥಾನಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ ಎಂದು ತಿಳಿಸಿದರು.

ಧಾರ್ಮಿಕ ಕೇಂದ್ರಗಳ ಸಂರಕ್ಷಣೆಯಿಂದ ಸಂಸ್ಕøತಿ, ಮೌಲ್ಯಗಳ ಅರಿವು ಮೂಡಿಸಲು ಸಾಧ್ಯವಿದೆ. ಮುಂದಿನ ಪೀಳಿಗೆಗೆ ದೇಶದ ಇತಿಹಾಸದ ಬಗ್ಗೆ ಜಾಗೃತಿ ಮಾಡಬೇಕಿದೆ. ಐತಿಹಾಸಿಕ ದೇಗುಲಗಳ ಮಹತ್ವ ಅರಿತುಕೊಳ್ಳಬೇಕು ಎಂದು ತಿಳಿಸಿದರು.

ಹೊಸಗುಂದ ಇತಿಹಾಸವನ್ನು ನಾಡಿನ ಜನತೆಗೆ ಪರಿಚಯಿಸುವಲ್ಲಿ ಸಹಕರಿಸಿದ ಇತಿಹಾಸ ಸಂಶೋಧಕ ಡಾ. ಎಸ್.ಜಿ.ಸಾಮಕ್, ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆ ನಿವೃತ್ತ ನಿರ್ದೇಶಕ ಡಾ. ಸಿದ್ಧನಗೌಡರ್, ಕೆಳದಿ ಪ್ರಾಚ್ಯವಸ್ತು ಸಂಗ್ರಹಾಲಯ ಅಸಿಸ್ಟೆಂಟ್ ಕ್ಯೂರೇಟರ್ ಡಾ. ಜಿ.ವಿ.ಕಲ್ಲಾಪುರ, ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ, ಜಾನಪದ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಟಾಕಪ್ಪ ಅವರನ್ನು ಸನ್ಮಾನಿಸಲಾಯಿತು.

ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ಕಾರ್ಯದರ್ಶಿ ಗಿರೀಶ್ ಕೋವಿ, ಬಸವರಾಜಪ್ಪ ಗೌಡ, ಶೇಷಗಿರಿ ಹೆಗ್ಡೆ, ಮಹೇಶ್ ಮಂಕಾಳೆ, ಗಿರೀಶ್ ಗೌಡ, ಜ್ಯೋತಿ ಮುರಳೀಧರ್, ರವಿ ಜಂಬೆಕೊಪ್ಪ, ಸ್ವಾಮಿರಾವ್, ಗಣಪತಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಹೊಸಗುಂದ ಕ್ಷೇತ್ರದ ಜೀಣೋದ್ಧಾರ ನೂರಾರು ಐತಿಹಾಸಿಕ ಪ್ರಾಚೀನ ದೇಗುಲಗಳ ಸಂರಕ್ಷಣೆಗೆ ಪ್ರೇರಣೆ ಎಂದು ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ ಹೇಳಿದರು.

ವಿಚಾರ ಸಂಕಿರಣದಲ್ಲಿ ಹೊಸಗುಂದ ಒಂದು ಪಕ್ಷಿನೋಟ ವಿಷಯ ಕುರಿತು ಮಾತನಾಡಿ, ವರ್ಷಗಳ ಹಿಂದೆ ಇಲ್ಲಿಗೆ ಬರಲು ಅಸಾಧ್ಯ ವಾತಾವರಣವಿತ್ತು. ಕಾಡು ಪ್ರಾಣಿಗಳ ವಾಸಸ್ಥಾನ ಆಗಿದ್ದು, ಪುನರುತಾಸ್ಥನ ಕಾರ್ಯ ಅಸಾಧ್ಯ ಎಂಬಂತ್ತಿತ್ತು ಎಂದು ತಿಳಿಸಿದರು.

ದೇವರಿಲ್ಲದ ಗುಡಿ ಹೊಸಗುಂದ ಎಂಬ ಲೇಖನವನ್ನು ಹಿಂದೊಮ್ಮೆ ಬರೆದಿದ್ದೆ. ದೇವಾಲಯದ ಜೀಣೋದ್ಧಾರ ಕಾರ್ಯಕ್ಕೆ ಗ್ರಾಮಸ್ಥರು, ಮಾಧ್ಯಮ ಸೇರಿ ಎಲ್ಲರೂ ಸಹಕಾರ ನೀಡಿದರು. ಜೀಣೋದ್ಧಾರ ವೇಳೆ ಅವಧಿಯಲ್ಲಿ ಕಾನೂನು ತೊಡಕು ಸಹ ಎದುರಾಯಿತು ಎಂದರು.

ಸಂಶೋಧನೆ ವೇಳೆಯಲ್ಲಿ ಮೂಲ ದೇವಾಲಯದ ಬಗ್ಗೆ ಭಿನ್ನ ಅನಿಸಿಕೆಗಳು ವ್ಯಕ್ತ ಆಗಿದ್ದವು. ಎಲ್ಲ ಅಡೆತಡೆಗಳನ್ನು ದಾಟಿ ಇದೀಗ ಶ್ರೀ ಉಮಾಮಹೇಶ್ವರ ದೇವಾಲಯ ಜೀಣೋದ್ಧಾರಗೊಂಡಿದೆ. ಸಿಎನ್‍ಎಂ ಶಾಸ್ತ್ರಿ ಕನಸಿನ ಹೊಸಗುಂದ ದೇವಾಲಯ ನೋಡಬಹುದಾಗಿದೆ ಎಂದು ತಿಳಿಸಿದರು.

error: Content is protected !!