ಶಿವಮೊಗ್ಗ : ಫೆಬ್ರವರಿ 06 : ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ರಾಜ್ಯ ಸಂಘವು ಶಿವಮೊಗ್ಗದ ಹುಲಿ-ಸಿಂಹಧಾಮದ ಒಂದು ಹುಲಿಯನ್ನು ದತ್ತು ತೆಗೆದುಕೊಂಡಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಹೇಳಿದರು.
ಅವರು ಇಂದು ಶಿವಮೊಗ್ಗ ಸಮೀಪದ ತ್ಯಾವರೆಕೊಪ್ಪ ಹುಲಿ-ಸಿಂಹಧಾಮಕ್ಕೆ ಭೇಟಿ ನೀಡಿದ ನಂತರ ಅಲ್ಲಿನ ಅರಣ್ಯಾಧಿಕಾರಿಗಳೊಂದಿಗೆ ಹುಲಿ ಮತ್ತು ಸಿಂಹವನ್ನು ದತ್ತು ತೆಗೆದುಕೊಳ್ಳುವ ಬಗ್ಗೆ ಸಮಾಲೋಚನೆ ನಡೆಸಿದ ನಂತರ ದತ್ತು ಪಡೆದಿರುವುದನ್ನು ಘೋಷಿಸಿದರು. ಈ ದತ್ತು ಒಂದು ವರ್ಷದ ಅವಧಿಯದಾಗಿದ್ದು, ಮೃಗಾಲಯ ಪ್ರಾಧಿಕಾರವು ನಿಗಧಿಪಡಿಸಿದಂತೆ ರೂ.2.00ಲಕ್ಷ ಗಳನ್ನು ಪಾವತಿಸಲಿದೆ ಎಂದರು.
ಕೊರೋನ ನಂತರದ ದಿನಗಳಲ್ಲಿ ಮೃಗಾಲಯಗಳಲ್ಲಿನ ಪ್ರಾಣಿಗಳ ನಿರ್ವಹಣೆ ಪ್ರಾಧಿಕಾರಕ್ಕೆ ಸವಾಲಾಗಿ ಪರಿಣಮಿಸಿತ್ತು. ಅಂತಹ ದಿನಗಳಲ್ಲಿ ನೌಕರರ ಸಂಘದ ವತಿಯಿಂದ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯದಿಂದ ಒಂದು ಚಿರತೆಯನ್ನು ದತ್ತು ಪಡೆದುಕೊಳ್ಳಲಾಗಿತ್ತು ಎಂದು ತಿಳಿಸಿರುವ ಅವರು, ಸರ್ಕಾರದ ಕೋರಿಕೆಯಂತೆ ಈ ಹಿಂದೆ ಅನೇಕ ಜನ ಸೆಲೆಬ್ರಿಟಿಗಳು, ಚಿತ್ರ ತಾರೆಯರು, ಕ್ರೀಡಾಳುಗಳು ಮೃಗಾಲಯಗಳಲ್ಲಿ ಪ್ರಾಣಿಗಳನ್ನು ನಿಯಮಾನುಸಾರ ಶುಲ್ಕ ಪಾವತಿಸಿ, ನಿಗಧಿಪಡಿಸಿದ ಅವಧಿಗೆ ದತ್ತು ಪಡೆದಿದ್ದರು ಎಂದವರು ತಿಳಿಸಿದ್ದಾರೆ.
ಅಲ್ಲದೇ, ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಮಾಡಿಕೊಂಡ ಮನವಿಯಂತೆ ಪುಣ್ಯಕೋಟಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಸುಮಾರು 100ಕೋಟಿ ರೂ.ಗಳನ್ನು ನೌಕರರ ವೃಂದ ಸಂಘಗಳ ಪದಾಧಿಕಾರಿಗಳೊಂದಿಗೆ ಸರಣಿ ಸಮಾಲೋಚನೆ ನಡೆಸಿದ ಫಲಶೃತಿ ರಾಜ್ಯದ ಅನೇಕ ನೌಕರರು ತಮ್ಮ ವೇತನದಲ್ಲಿ ಹಣ ಕಟಾವಣೆಗೊಳಿಸಲು ಸ್ಪಂದಿಸಿದ್ದರು. ಸಂಘದ ಮನವಿಯಂತೆ ಹಣ ಕಟಾವಣೆಗೊಳಿಸಿ ಸಹಕರಿಸಿದ ನೌಕರರೆಲ್ಲರೂ ಅಭಿನಂದನಾರ್ಹರು ಎಂದ ಅವರು ನೌಕರರ ಸಂಘವು ಪ್ರಾಣಿಗಳನ್ನು ದತ್ತುಪಡೆಯುವ ಮೂಲಕ ವನ್ಯ ಮೃಗಗಳಿಗೂ ನೆರವಿನ ಹಸ್ತಚಾಚಿದೆ. ನೌಕರರ ಅನೇಕ ಬೇಕು ಬೇಡಗಳ ನಡುವೆ ಸಂಘವು ಎಂದಿನಂತೆ ಸಾಮಾಜಿಕ ಕಳಕಳಿ ಮೆರೆದಿದೆ. ಸಂಘದ ಈ ನಿರ್ಣಯದ ಬಗ್ಗೆ ಅನೇಕ ನೌಕರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘವು ನೌಕರರು ಮಾತ್ರವಲ್ಲದೇ ಅವರ ಕುಟುಂಬದ ಅವಲಂಬಿತರ ಹಿತಸುಖ ಕಾಯಲು ಬದ್ದವಾಗಿದೆ. ಅಂತೆಯೇ ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಅದರಲ್ಲೂ ವಿಶೇಷವಾಗಿ ಗಡಿನಾಡ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳ ಅಗತ್ಯತೆಗಳನ್ನು ತಿಳಿದು ಅವರಿಗೆ ಪೂರಕವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಗುಣಮಟ್ಟದ ಬ್ಯಾಗ್, ನೋಟ್‍ಪುಸ್ತಕ ಹಾಗೂ ಲೇಖನ ಸಾಮಾಗ್ರಿಗಳನ್ನು ಸ್ಥಳೀಯ ದಾನಿಗಳ ನೆರವಿನಿಂದ ವಿತರಿಸಲಾಗಿತ್ತು. ಅಲ್ಲದೇ ಸ್ಮಾರ್ಟ್‍ಕ್ಲಾಸ್‍ಗಳಿಗೆ ಅಗತ್ಯವಿರುವ ಕಲರ್ ಟಿ.ವಿ. ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳನ್ನು ಪೂರೈಸಿದೆ ಎಂದವರು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿಯೂ ಇಂತಹ ಅನೇಕ ಜನಪರ ಯೋಜನೆಗಳನ್ನು ರಾಜ್ಯದ ನೌಕರರ ಸಹಕಾರದಿಂದ ರಾಜ್ಯದುದ್ದಗಲದಲ್ಲಿ ಕೈಗೆತ್ತಿಕೊಳ್ಳುವ ಉದಾತ್ತ ಆಶಯ ನೌಕರರ ಸಂಘ ಹೊಂದಿದೆ ಎಂದವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು, ರಾಜ್ಯ ನೌಕರರ ಸಂಘದ ಉಪಾಧ್ಯಕ್ಷ ಆರ್.ಮೋಹನ್‍ಕುಮಾರ್ ಸೇರಿದಂತೆ ರಾಜ್ಯ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!