ಇದು ಶಾರೀರಿಕ ವ್ಯತ್ಯಾಸದಿಂದ ಬರುವ ಖಾಯಿಲೆ, ಇದಕ್ಕೆ ಯಾವುದೇ ರೋಗಾಣು ಅಥವಾ ಕೀಟಾಣು ಕಾರಣವಲ್ಲವೆಂದು ತಿಳಿದುಬಂದಿದೆ. ಹಿಡಿಮುಂಡಿಗೆ ರೋಗವು ಅಡಿಕೆ ಬೆಳೆಯುವ ಮೈದಾನ ಪ್ರದೇಶಗಳಲ್ಲಿ ಹಾಗೂ ನಾಲೆ ನೀರಾವರಿ ತೋಟಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ರೋಗದ ತೀವ್ರತೆ ಸುಮಾರು ಶೇ.5 ರಿಂದ 50 ರ ವರೆವಿಗೂ ಇರುವುದು ಕಂಡುಬಂದಿದೆ. ರೋಗ ಪೀಡಿತ ಮರಗಳ ಬೆಳವಣಿಗೆ ಕುಂಠಿತವಾಗುವುದರಿಂದ ಇದಕ್ಕೆ ಬಂದ್ ರೋಗವೆಂತಲೂ ಕರೆಯುತ್ತಾರೆ.
ಈ ರೋಗಕ್ಕೆ ಕಾರಣಗಳು :
ಅಷ್ಷೇನೂ ಯೋಗ್ಯವಲ್ಲದ ಅಂಟು ಮತ್ತು ಗೋಡು ಮಣ್ಣಿನ ಪ್ರದೇಶಗಳಲ್ಲಿ ಅಡಿಕೆ ಬೆಳೆದಿರುವುದು.
ಸದಾ ನೀರು ನಿಲ್ಲುವ ಅಣೆಕಟ್ಟು ಪ್ರದೇಶದಲ್ಲಿ ಬೆಳೆ ಬೆಳೆಯುವುದು.
ತೋಟಕ್ಕೆ ಹೆಚ್ಚು ಕೆರೆಗೋಡು ಮಣ್ಣನ್ನು ಹಾಕುತ್ತಿರುವುದು.
ತೋಟದಲ್ಲಿ ಸೂಕ್ತವಾದ ಬಸಿಗಾಲುವೆ ವ್ಯವಸ್ಥೆ ಇಲ್ಲದಿರುವುದು.
ಪದೇ ಪದೇ ಟ್ರ್ಯಾಕ್ಟರ್ ಉಳುಮೆ ಮಾಡುವುದು.
ಪ್ರತಿವರ್ಷ ಅಡಿಕೆ ಬೆಳೆಯ ಬೇರುಗಳನ್ನು ಕತ್ತರಿಸುತ್ತಿರುವುದು.
ಸಾರಜನಕಯುಕ್ತ ಸಾವಯವ ವಸ್ತುಗಳಾದ ಕೊಟ್ಟಿಗೆ ಗೊಬ್ಬರ, ಕುರಿಗೊಬ್ಬರ ಮುಂತಾದವುಗಳನ್ನು ಯಥೇಚ್ಛವಾಗಿ ಒದಗಿಸುತ್ತಿರುವುದು.
ದೀರ್ಘಕಾಲ ತೋಟಗಳಲ್ಲಿ ನೀರನ್ನು ನಿಲ್ಲಿಸುತ್ತಿರುವುದು.
ಅಸಮತೋಲನ ರಸಗೊಬ್ಬರಗಳ ಬಳಕೆ.
ಇಂತಹ ಸನ್ನಿವೇಶವಿರುವ ತೋಟಗಳಲ್ಲಿ ಗಟ್ಟಿ ಮಣ್ಣಿನ ಪದರಗಳುಂಟಾಗಿ ಬೇರಿನ ಉಸಿರಾಟಕ್ಕೆ ತೊಂದರೆಯಾಗುವುದು. ಇದರಿಂದ ಆರೋಗ್ಯವಂತ ಬೇರುಗಳ ಸಂಖ್ಯೆ ಕಡಿಮೆಯಾಗಿ ನೀರು ಮತ್ತು ಆಹಾರ ಹೀರಿಕೊಳ್ಳುವ ಬೇರುಗಳ ಸಂಖ್ಯೆ ಕಡಿಮೆ ಇರುವುದು ಕಂಡುಬಂದಿದೆ.
ರೋಗ ಲಕ್ಷಣಗಳು :
ರೋಗಪೀಡಿತ ಮರಗಳ ಸೋಗೆಗಳು ಚಿಕ್ಕದಾಗಿ ಕಡು ಹಸಿರು ಬಣ್ಣಕ್ಕೆ ತಿರುಗುತ್ತವೆ.
ತುದಿ ಅಥವಾ ಸುಳಿಭಾಗದಲ್ಲಿ ಸೋಗೆಗಳು ಗುಂಪಾಗಿ ಸೇರಿ ಬೆಳೆಯುವುದರಿಂದ ಸುಳಿ ತಿಗಣೆ ಮತ್ತು ಹಿಟ್ಟು ತಿಗಣೆಗಳ ಬಾಧೆ ಹೆಚ್ಚಾಗಿ ಕಂಡುಬರುತ್ತದೆ.
ಗೆಣ್ಣುಗಳ ಅಂತರ ಕಡಿಮೆಯಾಗುವುದು.
ಸುಳಿ ಭಾಗದಲ್ಲಿ ನೀರು ನಿಲ್ಲುವುದರಿಂದ ಸುಳಿ ಕೊಳೆರೋಗ ಬರುವುದು.
ಬೇರುಗಳು ರೋಗ ಪೀಡಿತವಾಗಿದ್ದು, ಗಡುಸಾಗಿ ಕಂದು ಬಣ್ಣಕ್ಕೆ ತಿರುಗುತ್ತವೆ.
ಹಿಂಗಾರ ಮತ್ತು ಅಡಿಕೆ ಕಾಯಿಗಳ ಇಳುವರಿ ಕಡಿಮೆಯಾಗುತ್ತದೆ.
ಹಿಡಿಮುಂಡಿಗೆ ಚಿಹ್ನೆಗಳು ಕಂಡು ಬಂದ ಕೆಲವೇ ವರ್ಷಗಳಲ್ಲಿ ರೋಗ ಪೀಡಿತ ಮರ ಸಾಯುತ್ತದೆ.
ನಿರ್ವಹಣಾ ಕ್ರಮಗಳು :
ಪ್ರತಿ 2 ಸಾಲಿಗೊಂದರಂತೆ ಒಂದೂವರೆ ಯಿಂದ ಎರಡು ಅಡಿ ಆಳ ಹಾಗೂ ಒಂದು ಅಡಿ ಅಗಲದ ಉಪ ಬಸಿಗಾಲುವೆಗಳನ್ನು ನಿರ್ಮಿಸುವುದು. ತೋಟದ ಸುತ್ತ ಎರಡೂವರೆ ಅಡಿಯಿಂದ ಮೂರು ಅಡಿ ಆಳ ಮತ್ತು ಎರಡು ಅಡಿ ಅಗಲದ ಮುಖ್ಯ ಬಸಿಗಾಲುವೆಗಳನ್ನು ನಿರ್ಮಿಸುವುದು.
ಪ್ರತಿ ಮರಕ್ಕೆ 25 ಕೆ.ಜಿ ಯಷ್ಟು ಕೊಟ್ಟಿಗೆ ಗೊಬ್ಬರ / ಕಾಂಪೋಸ್ಟ್ ಕೊಡುವುದು.
ಮಣ್ಣು ಪರೀಕ್ಷೆ ಆಧಾರದ ಮೇಲೆ ಶಿಫಾರಸ್ಸು ಮಾಡಿದ ಸಾ:ರಂ:ಪೊ (100:40:140 ಗ್ರಾಂ) ರಸಗೊಬ್ಬರಗಳನ್ನು ಪ್ರತಿ ಮರಕ್ಕೆ 6 ತಿಂಗಳಿಗೊಮ್ಮೆ ಎರಡು ಬಾರಿ ಕೊಡುವುದು. ಕೊರತೆ ಇದ್ದರೆ ಮಾತ್ರ ಸೂಕ್ಷ್ಮ ಪೋಷಕಾಂಶಗಳನ್ನು ಒದಗಿಸುವುದು.
ಬೇಸಾಯದ ಸಮಯದಲ್ಲಿ ಬೇರುಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುವುದು.
ಕೆರೆಗೋಡು ಮಣ್ಣನ್ನು ತೋಟಕ್ಕೆ ಹಾಕುವ ಪದ್ಧತಿಯನ್ನು ಕಡಿಮೆ ಮಾಡುವುದು.
ಅಡಿಕೆ ಮರದ ಸುತ್ತ ಎರಡು ಅಡಿ ದೂರದವರೆಗೂ ಟ್ರ್ಯಾಕ್ಟರ್ ನಿಂದ ತೋಟದಲ್ಲಿ ಉಳುಮೆ ಮಾಡುವುದನ್ನು ನಿಲ್ಲಿಸುವುದು.
ಕೋಕೋ ಅಥವಾ ಬಾಳೆ ಬೆಳೆಯನ್ನು ಮಿಶ್ರ ಬೆಳೆಯಾಗಿ ಬಾಧಿತ ತೋಟಗಳಲ್ಲಿ ಬೆಳೆಸುವುದು.
ಸಾಧ್ಯವಾದ ಮಟ್ಟಿಗೆ ಹನಿ ನೀರಾವರಿ ಹಾಗೂ ಸಿಂಚನ ನೀರಾವರಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು.
ತೋಟದಲ್ಲಿ ದೊರೆಯುವ ತ್ಯಾಜ್ಯ ವಸ್ತುಗಳಿಂದ ಮರದ ಬುಡಕ್ಕೆ ಹೊದಿಕೆ ಮಾಡುವುದು.
ರಸ ಹೀರುವ ಕೀಟಗಳ ಬಾಧೆಯನ್ನು ಸೂಕ್ತವಾಗಿ ನಿಯಂತ್ರಿಸುವುದು.
ತೋಟಗಾರಿಕೆ ಉಪ ನಿರ್ದೇಶಕರು
ಶಿವಮೊಗ್ಗ.