ಶಿವಮೊಗ್ಗ, ಅಕ್ಟೋಬರ್ 22 : ಭಾರತ ಸರ್ಕಾರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ, ಮಹಾನಗರಪಾಲಿಕೆ, ಪಶು ವೈದ್ಯಕೀಯ ಮಹಾವಿದ್ಯಾಲಯ, ಎನ್ಎಸ್ಎಸ್ ಘಟಕ, ರೋಟರಿ ಶಿವಮೊಗ್ಗ ಪೂರ್ವ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಶೀಪುರ ಇವರ ಸಂಯುಕ್ತಾಶ್ರಯದಲ್ಲಿ ಭಾರತ ಸರ್ಕಾರದ ಸ್ವಚ್ಛ ಭಾರತ್ ಅಭಿಯಾನದ ಅಡಿಯಲ್ಲಿ ಅಕ್ಟೋಬರ್ 1 ರಿಂದ 31 ರವರೆಗೆ ಪರಿಸರವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಅಂಗವಾಗಿ ಅ.22 ರಂದು ಕಾಶಿಪುರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಚ ಭಾರತ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಸಿಇಓ ಎಂ.ಎಲ್.ವೈಶಾಲಿ ಉದ್ಘಾಟಿಸಿ ಮಾತನಾಡಿ, ಸ್ವಚ್ಚ ಭಾರತದ ಕನಸು ಗಾಂಧೀಜಿಯವರ ಕಾಲದಿಂದ ಇದ್ದು, ಎಲ್ಲರೂ ಈ ಕಾರ್ಯಕ್ರಮದ ಯಶಸ್ಸಿಗಾಗಿ ಸಹಕರಿಸಬೇಕು. ಸ್ವಚ್ಚತೆಯು ಎಲ್ಲರ ಮನೆಗಳಿಂದ ಶುರುವಾಗಬೇಕು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿಯವರು ಪ್ಲಾಸ್ಟಿಕ್ ನಿರ್ಮೂಲನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪರಿಸರವನ್ನು ಸಚ್ಚವಾಗಿಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದರ ಜೊತೆಗೆ, ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ನಿಲ್ಲಿಸಬೇಕು. ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಹಾನಿಯಾಗಿ, ರೋಗರುಜಿನಕ್ಕೆ ಕಾರಣವಾಗುತ್ತಿರುವುದರಿಂದ ಸಮರ್ಪಕ ವಿಲೇವಾರಿ ಮಾಡಬೇಕೆಂದರು.
ಮಹಾನಗರಪಾಲಿಕೆ ಸದಸ್ಯೆ ಅನಿತಾ ರವಿಶಂಕರ್, ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಪ್ರಕಾಶ್ ಮಾತನಾಡಿ ಪರಿಸರ ಜಾಗೃತಿ ಮೂಡಿಸಿದರು.
ಇದೇ ವೇಳೆ ವಿದ್ಯಾರ್ಥಿಗಳಿಂದ ಕಾಶಿಪುರ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಸ್ವಚ್ಚತಾ ಕಾರ್ಯ ಮತ್ತು ಜಾಗೃತಿ ಜಾಥಾ ನಡೆಸಲಾಯಿತು. ಎನ್ಎಸ್ಎಸ್ ವಿದ್ಯಾರ್ಥಿಗಳು ಪರಿಸರ ಜಾಗೃತಿ ಕುರಿತು ಬೀದಿ ನಾಟಕ ಪ್ರದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ಕೆ.ಟಿ.ಕೆ, ಲೆಕ್ಕಾಧಿಕಾರಿ ರಮೇಶ್, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಡಾ.ಪರಿಸರ ನಾಗರಾಜ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸ್ವಾಮಿ, ಕ್ಷೇತ್ರ ಪ್ರಚಾರ ಅಧಿಕಾರಿ ತುಕಾರಾಂಗೌಡ, ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷ ಮಂಜುನಾಥರಾವ್, ಕಾರ್ಯದರ್ಶಿ ಸತೀಶ್ಚಂದ್ರ, ಎನ್ಎಸ್ಎಸ್ ಅಧಿಕಾರಿಗಳಾದ ಧೂಳಪ್ಪ, ಡಾ.ವೆಂಕಟೇಶ್, ಸಮುದಾಯ ಸೇವೆಗಳ ನಿರ್ದೇಶಕ ಜಿ.ವಿಜಯಕುಮಾರ್, ಪರಿಸರ ಪ್ರೇಮಿ ಟಿ.ಎಸ್.ಮಹಾದೇವಸ್ವಾಮಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಹಾಲಾನಾಯ್ಕ್, ಯುವ ಕಾರ್ಯಕರ್ತ ಶೇಖ್ ಹಸನ್, ದುತೇಂದ್ರ ಹಾಗೂ ಎನ್ಎಸ್ಎಸ್ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
