ಶಿವಮೊಗ್ಗ, ಮೇ.: ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡರೆ ಡೆಂಗ್ಯೂ ಹಾಗೂ ಇನ್ನಿತರೆ ಕೀಟಜನ್ಯ ರೋಗಗಳಿಂದ ದೂರ ಉಳಿಯಬಹುದೆಂದು ಜಿಲ್ಲಾಧಿಕಾರಿ ಕೆ.ಎ ದಯಾನಂದ್ ಹೇಳಿದರು.
ಅವರು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಎದುರು ಗುರುವಾರ ರಾಷ್ಟ್ರೀಯ ಡೆಂಗ್ಯೂ ವಿರೋಧ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಜಾಗ್ರತಿ ಜಾಥಕ್ಕೆ ಚಾಲನೆ ನೀಡಿದರು.
ಮನೆಯ ಸುತ್ತಮುತ್ತ ಒಡೆದ ಪ್ಲಾಸ್ಟಿಕ್ ವಸ್ತುಗಳು, ತೆಂಗಿನ ಚಿಪ್ಪು, ಟೈರ್ ಇನ್ನಿತರೆ ವಸ್ತುಗಳನ್ನು ಮಳೆನೀರು ನಿಲ್ಲದಂತೆ ವಿಲೆವಾರಿ ಮಾಡಬೇಕು. ಮನೆಯ ನೀರಿನ ತೊಟ್ಟಿಗಳನ್ನು ವಾರಕೊಮ್ಮೆ ಖಾಲಿಮಾಡಿ ಸ್ವಚ್ಚಗೊಳಿಸಿ ಒಣಗಿಸಿ ನೀರನ್ನು ಭರ್ತಿಮಾಡಿ ಬೇಕು. ಸೊಳ್ಳೆ ಪರದೆ ಹಾಗೂ ಸೊಳ್ಳೆ ಬತ್ತಿ ಇನ್ನಿತರೆ ವಸ್ತುಗಳನ್ನು ಬಳಸಿ ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಬೇಕು ಎಂದು ಅವರು ಸಲಹೆ ಕೊಟ್ಟರು.
ಡೆಂಗ್ಯೂ, ಮಲೇರಿಯ ಹಾಗೂ ಇತರೆ ಕೀಟಜನ್ಯ ರೋಗಗಳು ರಕ್ತ ಪರೀಕ್ಷೆಯಿಂದ ಮಾತ್ರ ಪತ್ತೆ ಹಚ್ಚಲು ಸಾಧ್ಯ ಆ ಕಾರಣದಿಂದಾಗಿ ಜ್ವರ, ಕಣ್ಣಿನ ಹಿಂಭಾಗದಲ್ಲಿ ನೋವು, ಪ್ರಙÉ್ಜ ತಪ್ಪುವುದು, ವಸಡು, ಮೂಗಿನಲ್ಲಿ ರಕ್ತಸ್ರಾವ ಹಾಗೂ ಇನ್ನಿತರೆ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರ ಬಳಿ ತೆರಳಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಕುಟುಂಬ ಕಲ್ಯಾಣ ಇಲಾಖೆ ಆವರಣದಿಂದ ಆರಂಭವಾದ ಜಾಥಾ ನಗರದ ಪ್ರಮುಖ ವೃತ್ತಗಳ ಮೂಲಕ ಹಾದು ಐಎಂಎ ಹಾಲ್‍ವರೆಗೆ ನಡೆಯಿತು. ಜಾಥದಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಮಹಿಳಾ ಸಂಘಟನೆಯ ಸದಸ್ಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ನರ್ಸಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಿಲ್ಲಾಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಮೇಗೌಡ, ಜಿಲ್ಲಾ ಆರೋಗ್ಯ ಹಾಗು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಹಾಗೂ ಇನ್ನಿತರ ಗಣ್ಯರು ಹಾಜರಿದ್ದರು.

error: Content is protected !!