ಶಿವಮೊಗ್ಗ, ಜುಲೈ. 17 ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳನ್ನು ಚುರುಕುಗೊಳಿಸಿ ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಅವರು ತಿಳಿಸಿದರು.

ಅವರು ಸ್ಮಾರ್ಟ್ ಸಿಟಿ ಕಚೇರಿ ಸಭಾಂಗಣದಲ್ಲಿ ಯೋಜನೆಯ ಅನುಷ್ಟಾನ ಪ್ರಗತಿ ಪರಿಶೀಲನೆ ನಡೆಸಿ, ಕಾಮಗಾರಿಗಳ ತ್ವರಿತ ಅನುಷ್ಟಾನಕ್ಕೆ ಸೂಚನೆ ನೀಡಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ 52 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಇದರಲ್ಲಿ 2 ಯೋಜನೆಗಳು ಪೂರ್ಣಗೊಂಡಿವೆ. 24 ಯೋಜನೆಗಳು ಪ್ರಗತಿಯಲ್ಲಿವೆ. 11 ಯೋಜನೆಗಳು ಟೆಂಡರ್ ಪ್ರಕ್ರಿಯೆಯಲ್ಲಿವೆ. 9 ಯೋಜನೆಗಳು ಡಿ.ಪಿ.ಆರ್ ಹಂತದಲ್ಲಿದ್ದು, 6 ಯೋಜನೆಗಳು ಕಾನ್ಸೆಪ್ಟ್ ವರದಿ ಹಂತದಲ್ಲಿವೆ. ಯೋಜನೆಯಡಿ ಕೇಂದ್ರ ಸರ್ಕಾರದಿಂದ 111 ಕೋಟಿ ರೂ. ಹಾಗೂ ರಾಜ್ಯ ಸರ್ಕಾರದಿಂದ 111 ಕೋಟಿ ರೂ. ಅನುದಾನ ಸ್ವೀಕರಿಸಲಾಗಿದ್ದು, ಕಾಮಗಾರಿಗಳಿಗೆ ಇದುವರೆಗೆ 22.17ಕೋಟಿ ರೂ. ವೆಚ್ಚ ಭರಿಸಲಾಗಿದೆ ಎಂದು ಅವರು ಹೇಳಿದರು.

ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ವಿಮಾ ಸೌಲಭ್ಯ ಸೇರಿದಂತೆ ಎಲ್ಲಾ ಶಾಸನಬದ್ಧ ಸವಲತ್ತುಗಳನ್ನು ಒದಗಿಸಬೇಕು. ಐಬಿ ಸರ್ಕಲ್‍ನಿಂದ ಆಲ್ಕೋಳ ಸರ್ಕಲ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಚುರುಕುಗೊಳಿಸಬೇಕು. ಮೆಸ್ಕಾಂ, ರಾಷ್ಟ್ರೀಯ ಹೆದ್ದಾರಿ, ಕೆಯುಡಬ್ಲುಎಸ್‍ಎಸ್‍ಬಿ ಸೇರಿದಂತೆ ಯೋಜನಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಸ್ಮಾರ್ಟ್ ಸಿಟಿ ಕಾಮಗಾರಿಗಳ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸಲಾಗುವುದು. ಇಂಜಿನಿಯರ್‍ಗಳು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟವನ್ನು ಖಾತ್ರಿಪಡಿಸಬೇಕು ಎಂದು ಹೇಳಿದರು.

ಕಾಂಕ್ರೀಟ್ ರಸ್ತೆ ನಿರ್ಮಾಣದ ನಂತರ ಯಾವುದೇ ಕಾರಣಕ್ಕೂ ರಸ್ತೆಯನ್ನು ಕಟ್ ಮಾಡಬಾರದು. ವಿದ್ಯುತ್, ಕುಡಿಯುವ ನೀರು ಸಂಪರ್ಕ ಇತ್ಯಾದಿಗಳಿಗಾಗಿ ರಸ್ತೆಯ ಎರಡು ಬದಿಗಳಲ್ಲಿ ಡಿಸ್ಟ್ರಿಬ್ಯೂಷನ್ ಲೈನ್ ಅಳವಡಿಸಬೇಕು. ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಸೂಚನಾ ಫಲಕಗಳ ಅಳವಡಿಕೆ ಸೇರಿದಂತೆ ನಾಗರಿಕರ ಓಡಾಟಕ್ಕೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ವಿವಿಧ ಇಲಾಖೆಗಳ ಅಧಿಕಾರಿಗಳು, ಇಂಜಿನಿಯರ್‍ಗಳು, ಕಾಮಗಾರಿ ಗುತ್ತಿಗೆದಾರರು ಸಭೆಯಲ್ಲಿ ಹಾಜರಿದ್ದರು.

error: Content is protected !!