ಶಿವಮೊಗ್ಗ. ಜೂನ್ 11: ಸ್ಥಳೀಯ/ ನೈಸರ್ಗಿಕವಾಗಿ ದೊರಕುವ ವಸ್ತುಗಳನ್ನು ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಕೃಷಿ ಮಾಡುವುದರಿಂದ ರೈತರಿಗೆ ಉತ್ಪಾದನಾ ವೆಚ್ಚವನ್ನು ಕಡಿತಗೊಳಿಸಿ, ಹವಾಮಾನ ವೈಪರಿತ್ಯದಿಂದ ಎದುರಾಗುವ ಅಪಾಯವನ್ನು ತಗ್ಗಿಸಬಹದಾಗಿದೆ ಹಾಗೂ ಮಣ್ಣಿನಲ್ಲಿನ ಸೂಕ್ಷ್ಮಜೀವಿಗಳ ಸಂಖ್ಯೆಯನ್ನು ವೃದ್ಧಿಸಬಹುದಾಗಿದೆಯೆಂದು ಕುಲಪತಿಗಳಾದ ಡಾ. ಮಂಜುನಾಥ್ ಕೆ. ನಾಯ್ಕ್ರವರು ಅಭಿಪ್ರಾಯಪಟ್ಟರು.
ಅವರು ಕೃಷಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆ ದಕ್ಷಿಣ ಅರೆಮಲೆನಾಡು ವಲಯ-07ರ ಕಾರ್ಯವಾಹಿ ಸಂಶೋಧನಾ ಯೋಜನಾ ಸಭೆಯ ಅಧ್ಯಕ್ಷತೆ ವಹಿಸಿ, ನೈಸರ್ಗಿಕ ಕೃಷಿ ಯೋಜನೆಯ ಹಸ್ತ ಪತ್ರಿಕೆಗಳನ್ನು ಬಿಡುಗಡೆ ಮಾಡಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು,
ಯೋಜನಾ ಸಭೆಯ ಮುಖ್ಯಸ್ಥರಾದ ಡಾ. ಹೆಚ್. ಕೆ. ವೀರಣ್ಣರವರು ಈ ಯೋಜನೆಯಡಿ ಐದು ಜಿಲ್ಲೆಗಳ 14 ತಾಲ್ಲೂಕುಗಳಲ್ಲಿ 37 ಕ್ಲಸ್ಟರ್ ಗಳನ್ನು ಆಯ್ಕೆ ಮಾಡಲಾಗಿದ್ದು, 97 ಹಳ್ಳಿಗಳ 2000 ಹೆಕ್ಟೇರ್ ರೈತರ ತಾಖಿನಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಈ ವಲಯದ ಮುಖ್ಯ ಬೆಳೆಗಳಾದ ಅಡಿಕೆ, ತೆಂಗು, ಮೆಕ್ಕೆಜೋಳ, ಭತ್ತ, ತಂಬಾಕು, ಆಲೂಗಡ್ಡೆ, ಬಾಳೆ, ಕಾಳುಮೆಣಸು, ಶುಂಠಿ, ಟೊಮ್ಯಾಟೊ, ಮೆಣಸಿನಕಾಯಿ ಮುಂತಾದ ಬೆಳೆಗಳನ್ನು ನೈಸರ್ಗಿಕ ಕೃಷಿ ಪದ್ದತಿ ಅಡಿಯಲ್ಲಿ ಪ್ರಾತ್ಯಕ್ಷಿಕೆ ಕೈಗೊಳ್ಳಲಾಗಿದೆ ಎಂದು ಪ್ರಾಸ್ತಾವಿಕ ಭಾಷಣದಲ್ಲಿ ತಿಳಿಸಿದರು.
ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆಯ ವಲಯ-07 ಕ್ಕೆ ಒಳಪಡುವ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಹಾಸನ ಮತ್ತು ಮೈಸೂರು ಜಿಲ್ಲೆಗಳಿಂದ ರೈತ ಪ್ರತಿನಿಧಿಗಳು, ಕೃಷಿ ಇಲಾಖೆಯ ಅಧಿಕಾರಿಗಳು ಹಾಗು ಕಾರ್ಯವಾಹಿ ಸಂಶೋಧನಾ ಯೋಜನಾ ತಂಡದ ವಿಜ್ಞಾನಿಗಳು ಭಾಗವಹಿಸಿದ್ದರು.
ಅತಿಥಿಗಳಾದ ಡಾ. ಬಿ. ಆರ್. ಗುರುಮೂರ್ತಿ ಸಂಶೋಧನಾ ನಿರ್ದೇಶಕರು ಕೃ,ತೋ.ವಿ.ವಿ ಶಿವಮೊಗ್ಗ, ಮತ್ತು ಡಾ. ಹೆಚ್.ಎಮ್. ಚಿದಾನಂದಪ್ಪ ಡೀನ್ (ಕೃಷಿ) ಕೃಷಿ ಮಹಾವಿದ್ಯಾಲಯ ಶಿವಮೊಗ್ಗ ಇವರು ನೈಸರ್ಗಿಕ ಕೃಷಿ ಯೋಜನೆಯ ಹಸ್ತ ಪತ್ರಿಕೆಗಳನ್ನು ಬಿಡುಗಡೆ ಮಾಡಿದರು.
ಯೋಜನೆ ಅನುಷ್ಠಾನದಲ್ಲಿ ಎದುರಾಗುವ ಸಮಸ್ಯೆಗಳು ಮತ್ತು ಪೂರಕವಾದ ವಿಷಯಗಳ ಕುರಿತು ಕೃಷಿ ಅಧಿಕಾರಿಗಳು, ರೈತ ಪ್ರತಿನಿಧಿಗಳು ಹಾಗೂ ಕಾರ್ಯವಾಹಿ ಸಂಶೋಧನಾ ಯೋಜನಾ ತಂಡದ ವಿಜ್ಞಾನಿಗಳು ಚರ್ಚೆ ನಡೆಸಿದರು. ಡಾ. ಬಿ. ಸಿ. ಧನಂಜಯ (ಮಣ್ಣುವಿಜ್ಞಾನಿ) ವಂದಿಸಿದರು, ಡಾ. ಶರಣಬಸಪ್ಪರವರು (ಕೀಟಶಾಸ್ರ್ತಜ್ಞರು) ಕಾರ್ಯಕ್ರಮ ನಿರೂಪಿಸಿದರು.