ಶಿವಮೊಗ್ಗ, ಡಿಸೆಂಬರ್ 07: ಸರ್ಕಾರಿ ಅಧಿಕಾರಿ/ನೌಕರರು ಕರ್ನಾಟಕ ನಾಗರೀಕ ಸೇವಾ(ನಡತೆ) ನಿಯಮಗಳನ್ನು ಪೂರ್ಣವಾಗಿ ಅರ್ಥ ಮಾಡಿಕೊಂಡಲ್ಲಿ ಸರಾಗವಾಗಿ ಮತ್ತು ಉತ್ತಮವಾಗಿ ಕಾರ್ಯ ನಿರ್ವಹಿಸಬಹುದು. ಆದ್ದರಿಂದ ಕೆಸಿಎಸ್‍ಆರ್ ನಿಯಮಗಳು ಹಾಗೂ ಇತ್ತೀಚಿನ ತಿದ್ದುಪಡಿಗಳನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಂಡು ಕರ್ತವ್ಯ ನಿರ್ವಹಿಸಬೇಕೆಂದು ಜಿ.ಪಂ ಸಿಇಓ ಎಂ.ಎಲ್.ವೈಶಾಲಿ ತಿಳಿಸಿದರು.
      ಉಪನಿರ್ದೇಶಕರ ಕಚೇರಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಇವರ ವತಿಯಿಂದ ಇಂದು ಸಿಎಂಸಿ ಕಟ್ಟಡದಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರದ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಪಶು ವೈದ್ಯಾಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ಆಡಳಿತ ಮತ್ತು ತಾಂತ್ರಿಕ ವಿಷಯಗಳ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
     ಕೆಸಿಎಸ್‍ಆರ್ ನಿಯಮಗಳು, ಅದರ ಇತ್ತಿಚಿನ ತಿದ್ದುಪಡಿ, ಆಸ್ತಿ ಮತ್ತು ಋಣದಾಯಿತ್ವ ಪಟ್ಟಿ ಸಲ್ಲಿಕೆ, ಸಂಸ್ಥೆಗಳಲ್ಲಿ ನಿರ್ವಹಿಸಬೇಕಾದ ವಹಿಗಳು ಹಾಗೂ ಇತರೆ ವಿಷಯ ಕುರಿತು ಪಶು ವೈದ್ಯಾಧಿಕಾರಿಗಳಿಗೆ ತರಬೇತಿ ಏರ್ಪಡಿಸಿರುವುದು ಅತ್ಯಂತ ಉಪಯುಕ್ತವಾಗಿದೆ. ಎಲ್ಲರೂ ಕೆಸಿಎಸ್‍ಆರ್ ನಿಯಮಗಳನ್ನು ಕೂಲಂಕಷವಾಗಿ ಮತ್ತು ಸೂಕ್ಷ್ಮವಾಗಿ ತಿಳಿಯುವ ಅವಶ್ಯಕತೆ ಇದೆ. 2021 ರ ತಿದ್ದುಪಡಿಗಳನ್ನು ಸಹ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಆಗ ಕೆಲಸಗಳು ಸರಾಗವಾಗಿ ಆಗಲು ಸಾಧ್ಯವಾಗುತ್ತದೆ.
      ಎಲ್ಲ ಅಧಿಕಾರಿ/ಸಿಬ್ಬಂದಿಗಳು ನಡತೆ ನಿಯಮಗಳನ್ನು  ಪೂರ್ಣವಾಗಿ ತಿಳಿದುಕೊಳ್ಳಬೇಕು. ಹೊಸ ಹೊಸ ನಿಯಮಗಳು, ತಿದ್ದುಪಡಿಗಳ ಬಗ್ಗೆ ತಿಳಿದು ಅಪ್‍ಡೇಟ್ ಆಗಬೇಕು. ಎಸ್ಟ್ಯಾಬ್ಲಿಷ್‍ಮೆಂಟ್ ವಿಭಾಗ ನೋಡಿಕೊಳ್ಳುವ ಸಿಬ್ಬಂದಿಗಳಿಗೆ ಈ ತರಬೇತಿ ನೀಡಿದರೆ ಇನ್ನೂ ಅನುಕೂಲವಾಗುತ್ತದೆ. ನಮ್ಮ ನಮ್ಮ ಇಲಾಖೆ ಸಿಬ್ಬಂದಿಗಳ ಮುಂಬಡ್ತಿ, ವೇತನ ಬಡ್ತಿ ಇತರೆ ಕೆಲಸ ಕಾರ್ಯಗಳಲ್ಲಿ ಕಿರಿಕಿರಿ ಮಾಡಬಾರದು. ಎಲ್ಲರೂ ಸಮನ್ವಯತೆಯಿಂದ ಕೆಲಸ ಮಾಡಿದಲ್ಲಿ ಕೆಲಸ ಕಾರ್ಯಗಳು ಸರಾಗವಾಗಿ ಆಗಿ ಉತ್ತಮ ಆಡಳಿತ ಕೂಡ ಸಾಧ್ಯವಾಗುತ್ತದೆ ಎಂದ ಅವರು ಎಲ್ಲ ಇಲಾಖೆಗಳು ತಮ್ಮ ಸಿಬ್ಬಂದಿಗಳಿಗೆ ಈ ಕುರಿತು ತರಬೇತಿ ನೀಡುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.
        ಚಿಕ್ಕಮಗಳೂರು ಜಿಲ್ಲೆಯ ಪಾಲಿಕ್ಲಿನಿಕ್ ಉಪನಿರ್ದೇಶಕರಾದ ಡಾ.ನಾಗರಾಜ್ ಬಿ.ಕೆ ಕೆಸಿಎಸ್‍ಆರ್ ನಿಯಮಗಳು, ಕರ್ನಾಟಕ ನಾಗರೀಕ ಸೇವಾ(ನಡತೆ) ನಿಯಮ 2021 ಮತ್ತು ಆಸ್ತಿ ಮತ್ತು ಋಣದಾಯಿತ್ವ ಪಟ್ಟಿ ಸಲ್ಲಿಸುವ ಬಗ್ಗೆ ಹಾಗೂ ಪಶುವೈದ್ಯಕೀಯ ಸಂಸ್ಥೆಗಳಲ್ಲಿ ಇಡಬೇಕಾದ ವಹಿಗಳ ಕುರಿತು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು.
     ಸಾಗರದ ಸಂ.ಪ.ಚಿ ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಹೆಚ್.ವಿ.ದಯಾನಂದ್ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯಕ್ಕೆ ಮಾದರಿಗಳನ್ನು ಶೇಕರಿಸಿ ಸಲ್ಲಿಸುವ ಕುರಿತು ಮಾಹಿತಿ ನೀಡಿದರು.
    ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ(ಆಡಳಿತ) ಡಾ.ಎಸ್.ಕಲ್ಲಪ್ಪ ಸ್ವಾಗತಿಸಿದರು. ಶಿವಮೊಗ್ಗ ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ಹನುಮಂತಪ್ಪ ಸಿ.ಡಿ, ಸಹಾಯಕ ನಿರ್ದೇಶಕರಾದ ಡಾ.ಬಸವರಾಜ್, ಡಾ.ನಟರಾಜ್, ಡಾ.ಉಮಾದೇವಿ, ಡಾ.ಶ್ರೀಪಾದ್‍ರಾವ್, ಸಹಾಯಕ ಆಡಳಿತಾಧಿಕಾರಿ ಟಿ.ವಿ.ರಾಧಾ, ಪಶು ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು. ಡಾ.ನಾಗರಾಜ್ ನಿರೂಪಿಸಿದರು.

error: Content is protected !!