ಶಿವಮೊಗ್ಗ : ಯಾವುದೇ ಪ್ರತಿಫಲಾಕ್ಷೆ ಇಲ್ಲದೆ ಸಮಾಜಮುಖಿಯಾಗಿ ನಡೆಸುವ ಕಾರ್ಯ ಸೇವೆಯ ನಿಜವಾದ ಅರ್ಥವಾಗಿದ್ದು ಸೇವಾ ಧರ್ಮವೇ ಜಗತ್ತಿನ ಅತ್ಯಂತ ಶ್ರೇಷ್ಠವಾದ ಧರ್ಮ ಎಂದು ರಾಷ್ಟ್ರೀಯ ಸೇವಾ ಸಂಘ ಕಾರ್ಯವಾಹ ಪಟ್ಟಾಭಿರಾಮ ಮತ್ತೂರು ಅಭಿಪ್ರಾಯಪಟ್ಡರು.
ಭಾನುವಾರ ನಗರದ ಶಿವಗಂಗಾ ಯೋಗ ಕೇಂದದಲ್ಲಿ ವಿವಿಧ ಸಂಘ ಸಂಸ್ಥೆಗಳು ಹಾಗೂ ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ಸ್ ವತಿಯಿಂದ ಕೊರೊನಾ ತಡೆಗಟ್ಟಲು ಶ್ರಮಿಸಿದ ಸಹೃದಯರಿಗೆ ಅಭಿನಂದನೆ ಸಮಾರಂಭ ಮತ್ತು ಮೂರನೇ ಅಲೆ ತಡೆಗಟ್ಟಲು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ಸೇವೆ ಎಂಬುದು ಆಂಗ್ಲ ಭಾಷೆಯ ವರ್ಣನೆಯಲ್ಲ. ಕೊವಿಡ್ ಆತಂಕದ ಸಂದರ್ಭದಲ್ಲಿ ತಮ್ಮ ಕುಟುಂಬದ ವಾರಸುದಾರರಿಲ್ಲದ ಶವಗಳನ್ನು ನಾವು ಕಂಡಿದ್ದೇವೆ. ಅದೇ ಸಂದರ್ಭದಲ್ಲಿ ಯಾವುದೇ ಅಪೇಕ್ಷೆ ಇಲ್ಲದ ನಿಸ್ವಾರ್ಥ ಸೇವಾ ಮನಸ್ಸುಗಳು ಕಷ್ಟದ ಸಂದರ್ಭದಲ್ಲಿ ಸಹಾಯ ಹಸ್ತ ಚಾಚಿದನ್ನು ಗಮನಿದ್ದೇವೆ. ಬದುಕಿನ ಚಿಂತನಾ ಶೈಲಿ ಬದಲಾಗಬೇಕಿದೆ. ನಮ್ಮ ಮುಂದೇ ಬರುವ ಆಪತ್ತನ್ನು ಸಂಪತ್ತಾಗಿಸುವವರು ನಿಜವಾದ ಸಾಧಕರು. ನಾವು ಅಂತಹ ಅದ್ಬುತ ಸಂದರ್ಭಗಳನ್ನು ಭಾರತದ ಇತಿಹಾಸದಲ್ಲಿ ಕಂಡಿದ್ದೇವೆ. ಆತಂಕಗಳ ಬದಲಿಗೆ ಧೃತಿಗೆಡದೆ ಆಪತ್ತಿನ ವಿರುದ್ಧ ಹೋರಾಟ ನಡೆಸುವ ನೈತಿಕ ಸ್ಥೈರ್ಯ ತುಂಬುವ ಕಾರ್ಯ ಭಾರತದ ಇತಿಹಾಸದ ನಮಗೆ ನೀಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ಸ್ ತಂಡದ ಸದಸ್ಯರನ್ನು ಅಭಿನಂದಿಸಲಾಯಿತು. ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ಸ್ ಸಂಚಾಲಕರಾದ ಕೆ.ಸಿ. ಬಸವರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರೋಟರಿ ಜಿಲ್ಲಾ ಗೌರ್ನರ್ ರೋ.ಎಂ.ಜಿ.ರಾಮಚಂದ್ರಮೂರ್ತಿ, ಕ್ಷೇಮಾ ಟ್ರಸ್ಟ್ ಅಧ್ಯಕ್ಷ ಡಾ|| ಕೆ.ಆರ್. ಶ್ರೀಧರ್, ಅಭಿರುಚಿ ಸಂಸ್ಥೆಯ ಅಧ್ಯಕ್ಷರಾದ ಡಾ|| ಶಿವರಾಮಕೃಷ್ಣ, ಶಿವಗಂಗಾ ಯೋಗಾ ಕೇಂದ್ರದ ಅಧ್ಯಕ್ಷರಾದ ರುದ್ರಾರಾಧ್ಯ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ|| ಪರಮೇಶ್ವರ ಶಿಗ್ಗಾಂವ್, ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಭಾರತ್ ಟಿ.ವಿ ಮುಖ್ಯಸ್ಥರಾದ ಹಾಲಸ್ವಾಮಿ, ಫೆವೋಸ್ ಶಿವಮೊಗ್ಗ ಗೌರವ ಅಧ್ಯಕ್ಷರಾದ ಜನಾರ್ದನ ಜೆ.ಎಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.