ಶಿವಮೊಗ್ಗ: ಮುಂದಿನ ಐದು ವರ್ಷಗಳಲ್ಲಿ ಶಿವಮೊಗ್ಗದಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳನ್ನು ಸಾರ್ವಜನಿಕರ ನೀರಿಕ್ಷೆಯಂತೆ ಕಾರ್ಯರೂಪಕ್ಕೆ ತರಲಾಗುವುದು ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಸಂಯೋಜಿತ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ “ಜಿಲ್ಲೆಯ ನೂತನ ಶಾಸಕರಿಗೆ ಅಭಿನಂದನಾ” ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳ ಕಾರ್ಯ ಎಲ್ಲ ಶಾಸಕರಿಂದಲೂ ನಿರಂತರವಾಗಿ ಮುಂದುವರೆಯುತ್ತದೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ದೃಷ್ಠಿಯಿಂದ ಎಲ್ಲ ಶಾಸಕರು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ವಿವಿಧ ರೀತಿಯ ಸಮಸ್ಯೆಗಳಿದ್ದು, ಎಲ್ಲ ಶಾಸಕರು ಪರಸ್ಪರ ಒಟ್ಟಾಗಿ ಬೆಂಬಲಿಸಿ ರಾಜ್ಯಮಟ್ಟದಲ್ಲಿ ಜಿಲ್ಲೆಯ ಬಗ್ಗೆ ಗಮನ ಸೆಳೆಯುತ್ತೇವೆ. ಜಿಲ್ಲೆಯ ಅವಶ್ಯಕತೆ ಹಾಗೂ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರದ ಹಂತದಲ್ಲಿ ಸಕಲ ರೀತಿ ಪ್ರಯತ್ನ ನಡೆಸುತ್ತೇನೆ ಎಂದರು.
ಶಿವಮೊಗ್ಗ ನಗರ ವಿಧಾನಸಭಾ ದೃಷ್ಠಿಯಿಂದ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುತ್ತಿದ್ದು, ಆಗಬೇಕಿರುವ ಕೆಲಸಗಳ ಬಗ್ಗೆ ಸಮಗ್ರ ಸಮಾಲೋಚನೆ ನಡೆಸುತ್ತೇನೆ. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳೊಂದಿಗೆ ಶೀಘ್ರದಲ್ಲಿಯೇ ಚರ್ಚಿಸುತ್ತೇನೆ. ಶಿವಮೊಗ್ಗ ಕೈಗಾರಿಕಾ ಹಾಗೂ ಉದ್ಯಮ ದೃಷ್ಠಿಯಿಂದ ಆಗಬೇಕಿರುವ ಕೆಲಸಗಳಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನೇಕ ನಾಯಕರು ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಪ್ರತಿ ಕ್ಷೇತ್ರದ ಶಾಸಕರು ಜಿಲ್ಲೆಯ ಸಮಗ್ರ ದೃಷ್ಠಿಕೋನ ಗಮನದಲ್ಲಿಸಿಕೊಡು ಕೆಲಸ ಮಾಡುವುದರಿಂದ ಜಿಲ್ಲೆಯ ಅಭಿವೃದ್ಧಿ ವೇಗ ಪಡೆದುಕೊಳ್ಳುತ್ತದೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಉದ್ಯಮ, ಕೈಗಾರಿಕೆ, ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಉತ್ತಮ ಅವಕಾಶಗಳಿದ್ದು, ಎಲ್ಲ ಶಾಸಕರು ಒಟ್ಟಾಗಿ ರಾಜ್ಯ ಸರ್ಕಾರಕ್ಕೆ ಶಿವಮೊಗ್ಗ ಜಿಲ್ಲೆಯ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಡ ಹಾಕಬೇಕು. ಎಲ್ಲರು ಒಟ್ಟಾಗಿ ಕೆಲಸ ಮಾಡುವುದರಿಂದ ಶಿವಮೊಗ್ಗ ಜಿಲ್ಲೆಯು ರಾಜ್ಯದಲ್ಲಿಯೇ ಅತ್ಯಂತ ವೇಗಗವಾಗಿ ಅಭಿವೃದ್ಧಿಯಾಗುವ ಜಿಲ್ಲೆಯಾಗಲಿದೆ ಎಂದರು.
ಶಿವಮೊಗ್ಗದ ಬೇರೆ ಬೇರೆ ವಿಧಾನಸಭಾ ಕ್ಷೇತ್ರದಲ್ಲಿ ಬೇರೆ ಬೇರೆ ಪಕ್ಷಗಳಿಂದ ಬೇರೆ ಬೇರೆ ರೀತಿಯ ತತ್ವ-ಸಿದ್ಧಾಂತ ಗಳನ್ನು ಇಟ್ಟುಕೊಂಡು ಚುನಾವಣೆಯಲ್ಲಿ ವಿಜಯ ಗಳಾಗಿದ್ದಾರೆ. ಅವರವರ ಕ್ಷೇತ್ರದ ಸಮಸ್ಯೆ ಗಳನ್ನು ಪರಿಹರಿಸಿ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಜವಾಬ್ದಾರಿ ಆಯಾ ಕ್ಷೇತ್ರದ ವಿಧಾನಸಭಾ ಸದಸ್ಯರಾದ ಆಗಿರುತ್ತೆ. ಆದರೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಪ್ರಶ್ನೆ ಬಂದಾಗ ಎಲ್ಲಾ ಶಾಸಕರು ಒಂದಾಗಿ ಕೆಲಸ ಮಾಡಿ ಯಶಸ್ಸು ಗಳಿಸಬೇಕಾಗುತ್ತದೆ ಎಂದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಬಿ.ಗೋಪಿನಾಥ್, ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ಮಾಜಿ ಅಧ್ಯಕ್ಷ ಡಿ.ಎಂ.ಶಂಕರಪ್ಪ, ಟಿ.ಆರ್.ಅಶ್ವತ್ಥ ನಾರಾಯಣಶೆಟ್ಟಿ, ಜೆ.ಆರ್.ವಾಸುದೇವ, ರಮೇಶ್ ಹೆಗಡೆ, ಬಿ.ಆರ್.ಸಂತೋಷ್, ಗಣೇಶ್ ಎಂ.ಅಂಗಡಿ, ಪ್ರದೀಪ್ ಯಲಿ, ಮಧುಸೂದನ್ ಐತಾಳ್, ಉದಯ್‌ಕುಮಾರ್, ಮರಿಸ್ವಾಮಿ, ಇ.ಪರಮೇಶ್ವರ್, ಸುಕುಮಾರ್, ಸಂಯೋಜಿತ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.