ಶಿವಮೊಗ್ಗ: ಸರ್ವ ಕಾಲಕ್ಕೂ ಸಲ್ಲುವ ಗಟ್ಟಿತನದ, ಸಮಾಜದಲ್ಲಿನ ಸಂಗತಿಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಸಾಹಿತ್ಯ ಕೃತಿಗಳಲ್ಲಿ ರಚಿಸಿದ ಲೇಖಕ ನಾ. ಡಿಸೋಜ ಎಂದು ವಿದ್ವಾಂಸ, ನಾಡೋಜ ಡಾ. ಹಂಪ ನಾಗರಾಜಯ್ಯ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ಸಂಘದಲ್ಲಿ  ಜನಸ್ಪಂದನ ಟ್ರಸ್ಟ್ , ಸುವ್ವಿ ಪಬ್ಲಿಕೇಷನ್ಸ್ ವತಿಯಿಂದ ಜುಬೇದಾ ವಿದ್ಯಾಸಂಸ್ಥೆ ಶಿಕಾರಿಪುರ ಹಾಗೂ ಕುವೆಂಪು ವಿಶ್ವವಿದ್ಯಾಲಯ ಪದವಿ ಕಾಲೇಜು ಕನ್ನಡ ಅಧ್ಯಾಪಕರ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ “ಕನ್ನಡದ ನಾಡಿ ಡಾ. ನಾ.ಡಿಸೋಜ ಸಾಹಿತ್ಯೋತ್ಸವ 2023” ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಶೋಷಿತ ಸಮಾಜಕ್ಕೆ ಧ್ವನಿಯಾಗಿ ಮನ ಮುಟ್ಟುವ ರೀತಿಯ ಶೈಲಿಯಲ್ಲಿ ಸಾಹಿತ್ಯ ರಚಿಸುವ ಮೂಲಕ ಹೊಸತನದ ಕೃತಿಗಳನ್ನು ಬರೆದವರು ಡಿಸೋಜ. ಸಮಾಜದ ಸಮಸ್ಯೆಗಳ ಬಗ್ಗೆ ಕೃತಿಯ ಮೂಲಕ‌‌ ಬೆಳಕು ಚೆಲ್ಲುವ ಕೆಲಸ‌ ಮಾಡಿದರು. ಪರಿಸರ, ಸಾಮಾಜಿಕ ಹೋರಾಟಗಳಲ್ಲಿ ಧ್ವನಿಯಾಗಿದ್ದವರು ನಾ. ಡಿಸೋಜ ಎಂದು ತಿಳಿಸಿದರು.

ಗಿನ್ನೆಸ್ ದಾಖಲೆಯಲ್ಲಿ ಸೇರಬಹುದಾದ ಸಂಪುಟ “ನಾಡಿಮಿಡಿತ”, ಸುವ್ವಿ‌ ಪಬ್ಲಿಕೇಷನ್ ವತಿಯಿಂದ ಹೊರತಂದಿರುವ ನಾ. ಡಿಸೋಜ ಅವರ ಸಮಗ್ರ ಕಾದಂಬರಿಗಳ ಸಂಪುಟ‌ ಆರು ಸಾವಿರ ಪುಟಗಳನ್ನು ಒಳಗೊಂಡಿದೆ. ಇಂತಹ ಸಾಹಿತ್ಯವು ಲೇಖಕರಿಗೆ ಸಲ್ಲುವ ದೊಡ್ಡ ಗೌರವ ಎಂದರು.

ಸರ್ಕಾರವು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್ ಕಲಿಕೆಗೆ ಅವಕಾಶ ನೀಡಬೇಕು. ಸರ್ಕಾರಿ ಕನ್ನಡ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಕನ್ನಡ ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಕರೆತರುವ ಕೆಲಸ ಆಗಬೇಕು.  ಕನ್ನಡ ಶಾಲೆಗಳ‌ ಉಳಿವಿನ‌ ದೃಷ್ಟಿಯಿಂದ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಾಹಿತಿ ಡಾ. ನಾ.ಡಿಸೋಜ, ಬೇರೆ ಭಾಷೆಯ ಅತಿಯಾದ ಮೋಹ ನಮಗೆ ಅಗತ್ಯ ಇಲ್ಲ, ಕನ್ನಡ ಭಾಷೆಯ ಮೇಲೆ ಹೆಚ್ಚು ಪ್ರೀತಿ ಅಭಿಮಾನ ಹೊಂದುವುದು ಮುಖ್ಯ. ಕನ್ನಡ ಸಾಹಿತ್ಯವನ್ನು ಹೆಚ್ಚು ಅಧ್ಯಯನ ನಡೆಸಬೇಕು ಎಂದು ಹೇಳಿದರು.

ಮುಳುಗಡೆಯ ಜನರು ಕಷ್ಟಗಳನ್ನು ‌ನುಂಗಿಗೊಂಡು ಜೀವನ ನಡೆಸುತ್ತಿದ್ದಾರೆ. ಶರಾವತಿ ಸಂತ್ರಸ್ತರ ನೋವು ಸಂಕಟ ಇಂದಿಗೂ ಕಡಿಮೆ‌ ಆಗಿಲ್ಲ. ಜನರ‌ ನೋವನ್ನು ಬಹಳ ಹತ್ತಿರದಿಂದ‌ ನೋಡಿದ್ದೇನೆ. ಸಂತ್ರಸ್ತರ ಬದುಕು ಉತ್ತಮ ಆಗಬೇಕು ಎಂಬುದು‌ ನನ್ನ ಆಸೆ. ಸರ್ಕಾರಗಳು ಸಂತ್ರಸ್ತರಿಗೆ ನೆಮ್ಮದಿ ಜೀವನ ಕೊಡಲು ಮುಂದಾಗಬೇಕು ಎಂದು ತಿಳಿಸಿದರು.

ಕೇಂದ್ರ ಬಾಲ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಹಾಫೀಜ್ ಕರ್ನಾಟಕಿ ಮಾತನಾಡಿ, ಕನ್ನಡ ಭಾಷೆಗೆ ಗೌರವಿಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು. ಮನೆಗಳಲ್ಲಿ ಮಕ್ಕಳಿಗೆ ಮಾತೃಭಾಷೆ ಕನ್ನಡ ಕಲಿಸಬೇಕು. ಕನ್ನಡ ಸಾಹಿತ್ಯ ಕೃತಿಗಳನ್ನು ಸಾಹಿತ್ಯ ಆಸಕ್ತರು ಖರೀದಿಸಿ ಓದುವ ಮೂಲಕ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಬಿ.ಎನ್.ಸುನೀಲ್ ಕುಮಾರ್ ಪ್ರಾಸ್ತಾವಿಕ ಮಾತನಾಡಿ, ನಾಡಿನ ಖ್ಯಾತ ಸಾಹಿತಿ ನಾ. ಡಿಸೋಜ ಅವರ ಬದುಕು ಬರಹದ ಕುರಿತು ಸಾಹಿತ್ಯದ ಉತ್ಸವ ನಡೆಸುವ ವಿಶೇಷ ಕಾರ್ಯಕ್ರಮ ಇದಾಗಿದ್ದು, ಡಿಸೋಜ ಅವರು ಇಡೀ ಸಮಾಜಕ್ಕೆ ಮಾದರಿ ವ್ಯಕ್ತಿತ್ವ ಆಗಿದ್ದಾರೆ. ಸಾವಿರಾರು ಲೇಖನ, ಕಾದಂಬರಿ, ಬರಹಗಳ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಹೊಸ ಬರಹಗಾರರಿಗೂ ಪ್ರೋತ್ಸಾಹಿಸುವ ಕಾರ್ಯ ಜೀವನಪೂರ್ತಿ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ನಾ.ಡಿಸೋಜ ಅವರ ಸಮಗ್ರ ಕಾದಂಬರಿಗಳ ಸಂಪುಟವನ್ನು ವಿದ್ವಾಂಸ ನಾಡೋಜ ಡಾ. ಹಂಪ ನಾಗರಾಜಯ್ಯ ಬಿಡುಗಡೆಗೊಳಿಸಿದರು. “ಸೆಲ್ವಿಯಾ ಎಂಬ ಹುಡುಗಿ” ಕಿರುಚಿತ್ರ ಬಿಡುಗಡೆ ಮತ್ತು ಪ್ರದರ್ಶನ ನಡೆಯಿತು.

ಫೀಲೋಮಿನಾ ಡಿಸೋಜ, ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್, ಚಿತ್ರ ನಿರ್ದೇಶಕ ನವೀನ್ ಡಿಸೋಜ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗದ ಉಪಾಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ, ಕುವೆಂಪು ವಿಶ್ವವಿದ್ಯಾಲಯ ಪದವಿ ಕಾಲೇಜು ಕನ್ನಡ ಅಧ್ಯಾಪಕರ ವೇದಿಕೆ ಅಧ್ಯಕ್ಷ ಡಾ. ಕೆ.ಅಂಜನಪ್ಪ, ಡಾ. ಪವಿತ್ರ.ಎಸ್.ಟಿ. ಮತ್ತಿತರರು ಉಪಸ್ಥಿತರಿದ್ದರು.

error: Content is protected !!