ಶಿವಮೊಗ್ಗ, ಜುಲೈ-01: ಬಿದಿರು ಒಂದು ಬಹುಪಯೋಗಿ ಸಸ್ಯ ಗುಂಪಿಗೆ ಸೇರಿದ್ದು, ರೈತರಿಗೆ ಉತ್ತಮ ಆದಾಯದ ಮೂಲವಾಗಿದೆ. ಆದ್ದರಿಂದ ರಾಷ್ಟ್ರೀಯ ಬಾಂಬೂ ಮಿಷನ್ ಯೋಜನೆಯಡಿ ಬಿದಿರನ್ನು ಕೃಷಿ ಅರಣ್ಯದಲ್ಲಿ ಬೆಳೆಸಲು ಕಾರ್ಯಕ್ರಮ ರೂಪಿತವಾಗಿದೆ. ಸಾಮಾಜಿಕ ಅರಣ್ಯ ವಿಭಾಗದಿಂದ ಬಿದಿರು ಸಸಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದ್ದು ರೈತರು ಇದಕ್ಕಾಗಿ ನೋಂದಾಯಿಸಿಕೊಳ್ಳಬೇಕಿದೆ.
ಬಿದಿರು ಪರಿಸರ, ಆರ್ಥಿಕ ಮತ್ತು ಜೀವನ ಭದ್ರತೆ ಒದಗಿಸಲು ಸಕ್ಷಮವಾಗಿದೆ. ಬಿದಿರಿನ ಉತ್ಪನ್ನಗಳನ್ನು ಕಟ್ಟಡ ಕಟ್ಟಲು, ಪೀಠೋಪಕರಣಗಳಿಗೆ, ಕೈಗಾರಿಕೆಗಳಿಗೆ ಉಪಯೋಗಿಸಲಾಗುತ್ತಿದೆ. ಅಲ್ಲದೇ ಪೇಪರ್ ತಯಾರಿಕೆ, ಟೆಕ್ಸ್ಟೈಲ್ಸ್ ಉದ್ಯಮ, ಆಹಾರೋದ್ಯಮ ಮತ್ತು ಇಂಧನ ತಯಾರಿಕೆಗೆ ಬಳಸಲಾಗುತ್ತಿದೆ. ಭಾರತದ ಬಿದಿರು ಉದ್ಯಮದ ಮೌಲ್ಯ ವಾರ್ಷಿಕವಾಗಿ ರೂ.28,005 ಕೋಟಿಗಳಾಷ್ಟಗಿದೆ. ಆದರೆ ಬಿದಿರಿನ ಉತ್ಪಾದನೆ ಅಷ್ಟಾಗಿ ಆಗುತ್ತಿಲ್ಲ. ಇದರಿಂದಾಗಿ ಭಾರತವು ಸುಮಾರು ರೂ.213.65 ಕೋಟಿ ಮೌಲ್ಯದ ಬಿದಿರಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಭಾರತವು ಬಿದಿರಿನ ಉತ್ಪನ್ನವನ್ನು ಆಮದು ಮಾಡಿಕೊಳ್ಳುತ್ತಿರುವ ಪ್ರಮುಖ ರಾಷ್ಟ್ರವಾಗಿದ್ದು, ಬಿದಿರಿನ ಉದ್ಯಮವನ್ನು ಬೆಳೆಸಲು ಭಾರತದಲ್ಲಿ ವಿಫುಲ ಅವಕಾಶವಿದೆ.
ಆದ್ದರಿಂದ ಬಿದಿರಿನ ಕ್ಷೇತ್ರವನ್ನು ಹೆಚ್ಚಿಸುವುದು ಇಂದಿನ ಅವಶ್ಯಕತೆ ಆಗಿದೆ. ಕೃಷಿ ಅರಣ್ಯದಲ್ಲಿ ಬಿದಿರನ್ನು ಬೆಳೆಸುವುದರಿಂದ ರೈತರಿಗೆ ಆರ್ಥಿಕ ಲಾಭವಾಗುವುದರ ಜೊತೆಗೆ, ಅವರ ಆದಾಯವನ್ನು ದ್ವಿಗುಣಗೊಳಿಸಬಹುದಾಗಿದೆ. ಬಿದಿರನ್ನು ಆಧರಿಸಿ ಸಣ್ಣ ಕೈಗಾರಿಕೆಗಳು, ಕುಶಲಕರ್ಮಿಗಳಿಗೆ ನಿರಂತರ ಉದ್ಯೋಗ ಸೃಷ್ಟಿಯಾಗಿ ಅವರಿಗೆ ಜೀವನ ಭದ್ರತೆ ಸಿಗಲಿದೆ. ಆದ್ದರಿಂದ ಉತ್ತಮ ಗುಣಮಟ್ಟದ ಸಸಿಗಳನ್ನು ಬೆಳೆಸಿ ರೈತರಿಗೆ ಪೂರೈಸಿದಲ್ಲಿ ರೈತರು ತಮ್ಮ ಜಮೀನಿನಲ್ಲಿ ಬಿದಿರು ಬೆಳೆಸಿ ತಮ್ಮ ಆದಾಯ ಹೆಚ್ಚಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಬಾಂಬೂ ಮಿಷನ್ ಯೋಜನೆಯಡಿ ಬಿದಿರನ್ನು ಕೃಷಿ ಅರಣ್ಯದಲ್ಲಿ ಬೆಳೆಸಲು ಕಾರ್ಯಕ್ರಮ ರೂಪಿತವಾಗಿದೆ.
ಕರ್ನಾಟಕ ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ವಿಭಾಗ, ಶಿವಮೊಗ್ಗ ವ್ಯಾಪ್ತಿಯಲ್ಲಿನ ವಲಯಗಳಾದ ಶಿವಮೊಗ್ಗ, ಸಾಗರ, ಶಿಕಾರಿಪುರ ಮತ್ತು ಸೊರಬ ಸಸ್ಯಕ್ಷೇತ್ರಗಳಲ್ಲಿ 61480 ಸಂಖ್ಯೆBambusa Balcooa (ಬಂಬುಸ ಬಾಲ್ಕೂ-ಭೀಮಾ ಬಿದಿರು), ಃBambusa nutans, Bambusa tulda ಜಾತಿಯ ಮುಳ್ಳುರಹಿತ ಅಂಗಾಂಶ ಕೃಷಿ ಪದ್ದತಿಯಲ್ಲಿ ಬೆಳೆಸಿದ ಬಿದಿರು ಸಸಿಗಳನ್ನು 2021 ರ ಮಳೆಗಾಲದಲ್ಲಿ ಜಮೀನಿನಲ್ಲಿ ನಾಟಿ ಮಾಡಲು ಉಚಿತವಾಗಿ ವಿತರಿಸಲಾಗುತ್ತಿದ್ದು ಆಸಕ್ತ ರೈತರು ತಮ್ಮ ಹೆಸರು, ಜಮೀನಿನ ಸ.ನಂ, ಆರ್ಟಿಸಿ, ಆಧಾರ್ ಕಾರ್ಡ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಐಎಫ್ಎಸ್ಸಿ ಕೋಡ್ ಸಂಖ್ಯೆ, ಬೇಕಾಗುವ ಸಸಿಗಳ ಸಂಖ್ಯೆಯೊಂದಿಗೆ ಈ ಕೆಳಗಿನ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮೂಲಕ ಅಥವಾ ಕಚೇರಿಗೆ ನೇರವಾಗಿ ಭೇಟಿ ನೀಡುವ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ.
ಮುಂದಿನ ವರ್ಷಗಳಲ್ಲಿ ರೈತರ ಜಮೀನಿನಲ್ಲಿ ಬದುಕುಳಿದ ಸಸಿಗಳಿಗೆ ಬಂಬೂ ಮಿಷನ್ ಯೋಜನೆಯಡಿ ರೂ.60/-, ಕೆಎಪಿವೈ ಯೋಜನೆಯಡಿ ಪ್ರತಿ ಸಸಿಗೆ ರೂ.125(ಮೂರು ವರ್ಷಗಳಲ್ಲಿ), ಎಂಜಿಎನ್ಆರ್ಇಜಿಎ ಯೋಜನೆಯಡಿ ನೆಡುತೋಪು ನಿರ್ಮಾಣದ ಪೂರ್ಣ ಹಣ, ಎಸ್ಎಂಎಎಫ್ ಯೋಜನೆಯಡಿ ರೂ.35/-(ಮೂರು ವರ್ಷಗಳಲ್ಲಿ) ರಂತೆ ಯಾವುದಾದರೂ ಒಂದು ಯೋಜನೆಯಡಿ ಫಲಾನುಭವಿಗಳ ಖಾತೆಗೆ ನೇರವಾಗಿ ಪ್ರೋತ್ಸಾಹಧನ ಜಮೆ ಮಾಡಲಾಗುವುದು.
ಮೊದಲು ನೋಂದಾಯಿಸಿದವರಿಗೆ ಮೊದಲ ಆದ್ಯತೆಯಲ್ಲಿ ಬಿದಿರು ಸಸಿಗಳನ್ನು ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಾಮಾಜಿಕ ಅರಣ್ಯ ವಿಭಾಗ ಶಿವಮೊಗ್ಗ ಮೊ.ಸಂ: 8722189622, 08182-223900. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಸಾಮಾಜಿಕ ಅರಣ್ಯ ಉಪ-ವಿಭಾಗ, ಶಿವಮೊಗ್ಗ ಹಾಗೂ ಸಾಗರ 9449154665, 08183-228986. ವಲಯ ಅರಣ್ಯಾಧಿಕಾರಿಗಳು ಶಿವಮೊಗ್ಗ 9448761481, 08182-251053. ವಲಯ ಅರಣ್ಯಾಧಿಕಾರಿಗಳು ಸಾಗರ 9482700799, 08183228986. ವಲಯ ಅರಣ್ಯಾಧಿಕಾರಿಗಳು ಶಿಕಾರಿಪುರ 9380024101, 08187-222809. ವಲಯ ಅರಣ್ಯಾಧಿಕಾರಿಗಳು ಸೊರಬ 9380671178, 08184-272101 ನ್ನು ಸಂಪರ್ಕಿಸಬಹುದು ಎಂದು ಶಿವಮೊಗ್ಗ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ReplyForward |