ಶಿವಮೊಗ್ಗ: ಸಸಿಗಳನ್ನು ನೆಡುವ ಜತೆಯಲ್ಲಿ ನಿರಂತರವಾಗಿ ಪಾಲನೆ ಪೋಷಣೆ ಮಾಡಬೇಕಿರುವುದು ಸಹ ಎಲ್ಲರ ಕರ್ತವ್ಯ. ಸಸಿಗಳನ್ನು ನೆಡುವವರು ಪೋಷಣೆಯ ಬಗ್ಗೆಯು ಆದ್ಯತೆ ನೀಡಬೇಕು ಎಂದು ರೋಟರಿ ಶಿವಮೊಗ್ಗ ಪೂರ್ವ ಉಪಾಧ್ಯಕ್ಷ ಜಿ.ವಿಜಯ್ಕುಮಾರ್ ಹೇಳಿದರು.
ವಿಶ್ವ ಪ್ರಕೃತಿ ಸಂರಕ್ಷಣಾ ದಿನದ ಪ್ರಯುಕ್ತ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ರಾಜೇಂದ್ರ ನಗರದ ಬಡಾವಣೆಗಳಲ್ಲಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಪರಿಸರ ಮಾಲಿನ್ಯ ಆಗದಂತೆ ಎಚ್ಚರಿಕೆ ವಹಿಸಬೇಕು. ಜಲ, ವಾಯು ಮಾಲಿನ್ಯವನ್ನು ತಡೆಗಟ್ಟಬೇಕು. ಪರಿಸರ ಸಂರಕ್ಷಣೆ ದೃಷ್ಠಿಯಿಂದ ಹೆಚ್ಚು ಹೆಚ್ಚು ಗಿಡಗಳನ್ನು ನೆಡಬೇಕು ಎಂದು ತಿಳಿಸಿದರು.
ಐಎಂಎ ಮಾಜಿ ಅಧ್ಯಕ್ಷ ಡಾ. ಪರಮೇಶ್ವರ್ ಶಿಗ್ಗಾಂವ್ ಮಾತನಾಡಿ, ಮಕ್ಕಳು ಜನ್ಮದಿನ, ಪೋಷಕರ ವಿವಾಹ, ಜನ್ಮದಿನ ಸೇರಿದಂತೆ ಸಸಿಗಳನ್ನು ನೆಡಬೇಕು. ಅವುಗಳನ್ನು ಪೋಷಣೆ ಮಾಡಬೇಕು. ಪರಿಸರ ಸಂರಕ್ಷಣೆ ಕಾರ್ಯವು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕಿಶೋರ್ ಕುಮಾರ್ ಮಾತನಾಡಿ, ಪ್ರಸ್ತಕ ಸಾಲಿನಲ್ಲಿ ಎಲ್ಲ ಬಡಾವಣೆಗಳಲ್ಲಿ ಅತಿ ಹೆಚ್ಚು ಸಸಿಗಳನ್ನು ನೆಡುವ ಮುಖಾಂತರ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸುವ ವಿಶೇಷ ಕಾರ್ಯವನ್ನು ರೋಟರಿ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ರಾಜೇಂದ್ರ ನಗರದ ಬಡಾವಣೆಗಳಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡಲಾಯಿತು. ರೋಟರಿ ಇಂಟರಾಕ್ಟ್ ಕ್ಲಬ್, ರೋಟರಿ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳು ಭಾಗವಹಿಸಿದ್ದರು.
ರೋಟರಿ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಚಂದ್ರಶೇಖರಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಚಾರ್ಯ ಸೂರ್ಯನಾರಾಯಣ ರಾವ್, ಇಂಟರಾಕ್ಟ್ ಕ್ಲಬ್ ಅಧ್ಯಕ್ಷ ಅಕ್ಷಿತ್, ಕಾರ್ಯದರ್ಶಿ ಗಾನವಿ, ನರಸಿಂಹಯ್ಯ, ಪ್ರಶಾಂತ್, ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.