ಶಂಕರಘಟ್ಟ, ಫೆ. 11: ಸಮಾಜದ ಎಲ್ಲ ವರ್ಗಗಳು ಶೋಷಣೆಗಳಿಂದ ಮುಕ್ತವಾಗಿ ಬದುಕಲು ಅರಿವು ಅಗತ್ಯ. ದಾರ್ಶನಿಕರಾಗಿದ್ದ ಬುದ್ಧ-ಬಸವ-ಅಂಬೇಡ್ಕರ್ ಸಮಾಜದ ಸಮಸ್ಯೆಗಳನ್ನು ನಿವಾರಿಸಲು ಆತ್ಮದ ಅರಿವು ದಿವ್ಯೌಷಧಿಯಾಗಿದೆಯೆಂದು ಸಾರಿದವರು. ಆ ಮೂಲಕ ಸಮಸಮಾಜವನ್ನು ಕಟ್ಟ ಬಯಸಿದವರು ಎಂದು ವೀರಾಪುರ ಹಿರೇಮಠದ ಡಾ.ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯರು ಅಭಿಪ್ರಾಯಪಟ್ಟರು.

ಅವರು ಕುವೆಂಪು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ವಿಶ್ವವಿದ್ಯಾಲಯ ಕಾಲೇಜಿನ ಸಹಯೋಗದಲ್ಲಿ ಏರ್ಪಡಿಸಿದ್ದ ಅಂಬೇಡ್ಕರ್ ಚಿಂತನ-ಮಂಥನ ವಿಶೇಷ ಉಪನ್ಯಾಸ ಮಾಲಿಕೆಯಲ್ಲಿಬುದ್ಧ-ಬಸವ-ಅಂಬೇಡ್ಕರ್ ಕಟ್ಟ ಬಯಸಿದ ಸಮಾಜ’’ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಬುದ್ಧ-ಬಸವ-ಅಂಬೇಡ್ಕರ್ ಅವರು ಜಾತಿ-ಧರ್ಮಗಳಿಂದ ಮೀರಿದ ಬೆಳಕುಗಳು. ಜಗತ್ತಿನ ಮಹಾನ್ ದಾರ್ಶನಿಕರು. ಶಿಕ್ಷಣ ಮತ್ತು ಸಂಸ್ಕಾರಗಳಿಂದ ವ್ಯಕ್ತಿ ಪರಿಪೂರ್ಣನಾಗುತ್ತಾನೆಂದು ಸಾರಿದವರು. ಸಮಸಮಾಜದ ನಿರ್ಮಾಣಕ್ಕಾಗಿ ಸಂಪೂರ್ಣ ಸಮರ್ಪಿಸಿಕೊಂಡವರು. ಅವರುಗಳ ಬದುಕು-ಚಿಂತನೆಗಳು ಸರ್ವಕಾಲಕ್ಕೂ ಅನುಕರಣೀಯ ಎಂದು ತಿಳಿಸಿದರು.

ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ, ಬುದ್ಧ-ಬಸವ-ಅಂಬೇಡ್ಕರ್ ಅವರು ಸಾಮರಸ್ಯಭರಿತ ಸಮಾಜದ ನಿರ್ಮಾಣಕ್ಕಾಗಿ ಹೋರಾಡಿದವರು. ಇವರುಗಳ ಚಿಂತನೆಗಳು ವ್ಯಕ್ತಿ-ಸಮಾಜದ ಅಂಕು ಡೊಂಕುಗಳನ್ನು ತಿದ್ದುವಂತಹವು. ಕುವೆಂಪು ವಿವಿಯಲ್ಲಿ ಬುದ್ಧ-ಬಸವ-ಅಂಬೇಡ್ಕರ್ ಅವರ ಚಿಂತನೆಗಳ ಕುರಿತ ಡಿಪ್ಲೋಮಾ ಪದವಿಯನ್ನು ಮುಂದಿನ ದಿನಗಳಲ್ಲಿ ಆರಂಭಿಸಲಾಗುವುದು ಎಂದರು.

ಕನಕಶ್ರೀ ಪ್ರಶಸ್ತಿ ಪುರಸ್ಕೃತ ಜಾನಪದ ಗಾಯಕ ಯುಗಧರ್ಮರಾಮಣ್ಣ, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್‌ ಮಾತನಾಡಿದರು. ಪ್ರಾಂಶುಪಾಲ ಡಾ.ಎಚ್.ಎಂ.ಧರ್ಮೇಗೌಡ ಡಾ.ವಸಂತಕುಮಾರ್, ನಾಗರಾಜ್ ಜಿ. ಕಾಲೇಜಿನ ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

error: Content is protected !!