ಸಾಗರ: ಭಕ್ತಿ ಪ್ರಾಧಾನ್ಯತೆಯ ಸಂಗೀತವನ್ನು ಸಮಾಜದ ಎಲ್ಲ ಸ್ತರಗಳಿಗೂ ತಲುಪಿಸುವ ಶಕ್ತಿಯು ದಾಸ ಸಾಹಿತ್ಯ ಪರಂಪರೆಗೆ ಇದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ, ನಗರಸಭೆ ಸದಸ್ಯ ಟಿ.ಡಿ.ಮೇಘರಾಜ್ ಅಭಿಪ್ರಾಯಪಟ್ಟರು.
ಸಾಗರದ ಸೇವಾಸಾಗರ ಶಾಲೆಯ ಅಜಿತ ಸಭಾಭವನದಲ್ಲಿ ಹೊಸಂತೆಯ ಶ್ರೀ ಗಾಂಧಾರ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಭಾನುವಾರ ಆಯೋಜಿಸಿದ್ದ ಶ್ರೀ ಪುರಂದರದಾಸರ ಹಾಗೂ ನಾದಬ್ರಹ್ಮ ಶ್ರೀ ತ್ಯಾಗರಾಜರ ಆರಾಧನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದಾಸಸಾಹಿತ್ಯ ಪರಂಪರೆಯಲ್ಲಿ 4 ಲಕ್ಷಕ್ಕೂ ಹೆಚ್ಚು ಕೀರ್ತನೆಗಳನ್ನು ಕಾಣಬಹುದಾಗಿದೆ. ದಾಸ ಸಾಹಿತ್ಯದ ಸಂದೇಶಗಳು ಜೀವನಮಾರ್ಗದರ್ಶಿಯಾಗಿವೆ. ಭಗವಂತನ ಸಾಕ್ಷಾತ್ಕಾರಕ್ಕೆ ಭಕ್ತಿಯೇ ಪ್ರಮುಖ. ಅಂತಹ ಭಕ್ತಿ ಪ್ರಾಮುಖ್ಯತೆಯನ್ನು ದಾಸ ಶ್ರೇಷ್ಠರು ಕೀರ್ತನೆಯಲ್ಲಿ ಸಾರಿದ್ದಾರೆ ಎಂದು ತಿಳಿಸಿದರು.
ಶತಗೋಷ್ಠಿ ಗಾಯನದಂತಹ ಕಾರ್ಯಕ್ರಮ ಆಯೋಜಿಸಿರುವ ಅನಿತಾ ವೆಂಕಟೇಶ್ ಅವರ ಪ್ರಯತ್ನ ಅಭಿನಂದನೀಯ. ಇಂತಹ ವೇದಿಕೆಗಳು ಹಳೇ ತಲೆಮಾರಿನ ವಿದ್ವಾಂಸರನ್ನು ಹಾಗೂ ಸಂಗೀತ ಕ್ಷೇತ್ರಕ್ಕೆ ಕಾಲಿಡುತ್ತಿರುವ ಯುವ ಪ್ರತಿಭೆಗಳನ್ನು ಒಟ್ಟುಗೂಡಿಸಲು ಸಾಕ್ಷಿಯಾಗಿದೆ. ಇದರಿಂದ ಶ್ರೇಷ್ಠ ದಾಸ ಸಾಹಿತ್ಯ ಪರಂಪರೆ ಹಾಗೂ ಶಾಸ್ತ್ರೀಯ ಸಂಗೀತ ಪರಂಪರೆ ಮುಂದಿನ ಪೀಳಿಗೆಗೆ ಉತ್ಕøಷ್ಟ್ರ ರೀತಿಯಲ್ಲಿ ವರ್ಗಾವಣೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ವಿದ್ವಾನ್ ಹೊಸಹಳ್ಳಿ ವೆಂಕಟರಾಮ್ ಮಾತನಾಡಿ, ಸಾಗರಕ್ಕೂ ನನಗೂ ಅವಿನಾಭಾವ ಸಂಬಂಧವಿದ್ದು, ನಾಲ್ಕೈದು ದಶಕಗಳ ಹಿಂದೆ ನಮ್ಮ ಗುರುಗಳಾದ ಲಾಲ್ಗುಡಿ ಜಂiÀiರಾಮ್ ಅವರಿಗೆ “ಸಂಗೀತ ಸಾಗರ” ಪ್ರಶಸ್ತಿ ನೀಡಿ ಅಭಿನಂದಿಸಲಾಗಿತ್ತು. ಅನೇಕ ಬಾರಿ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಗರಕ್ಕೆ ಬಂದಿದ್ದೇನೆ. ಕಲಾಪೋಷಕರ ಪ್ರೋತ್ಸಾಹದಿಂದ ಉತ್ತಮ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ ಎಂದು ಹೇಳಿದರು.
ಪಂಚರತ್ನ ಕೃತಿಗಳ ಶತಕಂಠಗೋಷ್ಠಿ ಗಾಯನದಲ್ಲಿ ಭಾಗವಹಿಸುತ್ತಿರುವ ಪ್ರತಿಯೊಬ್ಬರು ತ್ಯಾಗರಾಜರಿಗೆ ಭಕ್ತಿ ಸಮರ್ಪಿತ ರೀತಿಯಲ್ಲಿ ಗಾಯನ ನಡೆಸಬೇಕು. ಗುರುಗಳ ಪರಿಶ್ರಮದ ಪ್ರತಿಫಲವಾಗಿ ಎಲ್ಲರಿಗೂ ಇಂತಹ ಪುಣ್ಯದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ಸಿಕ್ಕಿದೆ. ಇಂತಹ ಪ್ರಯತ್ನ ಇತರೆ ಕಲಾಸಕ್ತರಿಗೂ ಪ್ರೇರಕಶಕ್ತಿ ಎಂದು ತಿಳಿಸಿದರು.
ಶ್ರೀ ಗಾಂಧಾರ ಸಂಗೀತ ಸಭಾ ಟ್ರಸ್ಟ್ ಅಧ್ಯಕ್ಷೆ ಅನಿತಾ ವೆಂಕಟೇಶ್ ಮಾತನಾಡಿ, ದಶಸಂಭ್ರಮದ ಪ್ರಯುಕ್ತ ಗುರುಗಳ ಮಾರ್ಗದರ್ಶನದಲ್ಲಿ ವಿಶೇಷವಾಗಿ ಪಂಚರತ್ನ ಕೃತಿಗಳ ಗಾಯನ ಕಾರ್ಯಕ್ರಮ ರೂಪಿಸಲು ಸಾಧ್ಯವಾಗಿರುವುದು ಜೀವನದ ಪುಣ್ಯ. ನಿರಂತರ ಆಲೋಚನೆ ಮತ್ತು ಶ್ರಮದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.
ಶ್ರೀರಾಮದೇವರ ಮತ್ತು ಸದ್ಗುರು ಶ್ರೀ ತ್ಯಾಗರಾಜರ ಮೂರ್ತಿಗಳಿಗೆ ಅಭಿಷೇಕದ ಜತೆಯಲ್ಲಿ ಗಾಯನದ ಮೂಲಕ ಪೂಜೆ ಸಲ್ಲಿಸುವ ರೀತಿಯಲ್ಲಿ ಕಾರ್ಯಕ್ರಮ ರೂಪಿಸಲಾಯಿತು. ಎಲ್ಲರ ಸಹಕಾರ ಹಾಗೂ ಪ್ರೋತ್ಸಾಹದಿಂದ ಕಾರ್ಯಕ್ರಮ ಉತ್ತಮವಾಗಿ ಮೂಡಿಬಂದಿತು ತಿಳಿಸಿದರು.
ಶತಕಂಠಗೋಷ್ಠಿ ಸಹಕಾರ: ಹೊಸಹಳ್ಳಿ ಜಿ.ಅನಂತ ಅವಧಾನಿ ಮತ್ತು ಶಿಷ್ಯವೃಂದ, ವಿದುಷಿ ಅನಿತಾ ವೆಂಕಟೇಶ್ ಶಿಷ್ಯವೃಂದ, ಮತ್ತೂರು ಗೋಪಾಲ, ಜೆ.ಅರುಣ್, ರಾಜಲಕ್ಷ್ಮೀ, ಜಯಶ್ರೀ ನಾಗರಾಜ್, ಎಸ್.ಆರ್.ನಾಗರಾಜ್, ಸೀತಾ ಬಾಪಟ್, ಚಂಪಕ ಶ್ರೀಧರ್ ಇವರೆಲ್ಲರ ಶಿಷ್ಯವೃಂದದವರು ಶತಗೋಷ್ಠಿಯಲ್ಲಿ ಭಾಗಿಯಾಗಿದ್ದರು.
ಶ್ರೀ ಗಾಂಧಾರ ಸಂಗೀತ ಸಭಾ ಟ್ರಸ್ಟ್ ಖಜಾಂಚಿ ಕೃಷ್ಣಮೂರ್ತಿ ಶ್ಯಾನುಬೋಗ್, ಕಾರ್ಯದರ್ಶಿ ವೆಂಕಟೇಶ್ ಶ್ಯಾನುಬೋಗ್, ಅಂಜನ್ ವಿ ಶ್ಯಾನುಬೋಗ್, ವಿಜಯಲಕ್ಷ್ಮೀ ಕಂಪ್ಲಿ ಇದ್ದರು.
ಶ್ರೀ ಪುರಂದರದಾಸರ ಹಾಗೂ ನಾದಬ್ರಹ್ಮ ಶ್ರೀ ತ್ಯಾಗರಾಜರ ಆರಾಧನಾ ಕಾರ್ಯಕ್ರಮದಲ್ಲಿ ಪಿಳ್ಳಾರಿ ಗೀತೆಗಳ ಮತ್ತು ಘನರಾಗ ಪಂಚರತ್ನ ಕೃತಿಗಳ ಶತಕಂಠಗೋಷ್ಠಿ ಗಾಯನ ಅತ್ಯಂತ ಯಶಸ್ವಿಯಾಗಿ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ವಿದ್ವಾಂಸರು ಹಾಗೂ ಶಾಸ್ತ್ರೀಯ ಸಂಗೀತ ಕಲಿಕಾ ವಿದ್ಯಾರ್ಥಿಗಳು ಶತಕಂಠಗೋಷ್ಠಿಯಲ್ಲಿ ಗಾಯನದಲ್ಲಿ ಧ್ವನಿಯಾದರು. ಶ್ರೀ ಗಾಂಧಾರ ಸಂಗೀತ ಸಭಾ ಟ್ರಸ್ಟ್‍ನ 30ಕ್ಕೂ ಹೆಚ್ಚು ಮಕ್ಕಳನ್ನು ಒಳಗೊಂಡಂತೆ 100ಕ್ಕೂ ಹೆಚ್ಚು ಗಾಯಕರು ಪಾಲ್ಗೊಂಡಿದ್ದರು. ಪುರೋಹಿತ ಸತೀಶ್ ಅಯ್ಯಂಗಾರ್ ನೇತೃತ್ವದಲ್ಲಿ ಶ್ರೀ ರಾಮದೇವರ ಮತ್ತು ಸದ್ಗುರು ಶ್ರೀ ತ್ಯಾಗರಾಜ ಸ್ವಾಮಿಗಳ ಮೂರ್ತಿಗಳಿಗೆ ಪಂಚರತ್ನ ಕೃತಿಗಳ ಗಾಯನ ಸಂದರ್ಭದಲ್ಲಿ ಪಂಚಾಮೃತ ಅಭಿಷೇಕ ಮತ್ತು ಪೂಜೆ ನೆರವೇರಿತು.
ಪುರಂದರದಾಸರು, ಕನಕದಾಸರು, ತ್ಯಾಗರಾಜರು ಕೀರ್ತನಾ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಹೊಸ ಪೀಳಿಗೆ ಸಂಗೀತದ ಅಭ್ಯಾಸದಲ್ಲಿ ತೊಡಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಕಲಿಕೆ ಮತ್ತು ಗ್ರಹಿಕೆ ಎರಡು ಸಂಗತಿಗಳು ಕಲಾವಿದರಿಗೆ ಬಹುಮುಖ್ಯವಾಗಿದೆ. ಸಾಮೂಹಿಕವಾಗಿ ಹಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಶ್ಲಾಘನೀಯ.

error: Content is protected !!