ಶಿವಮೊಗ್ಗ. ಜೂನ್.6 : ಅತಿಸಾರ ಬೇದಿಗೆ ಶುಚಿತ್ವದ ಕೊರತೆಯೆ ಕಾರಣವಾಗಿದ್ದು ಶುಚಿತ್ವ ಬೆಳೆಸಿಕೊಳ್ಳುವ ಮೂಲಕ ಇಂತಹ ಮಾರಕ ರೋಗಗಳಿಂದ ಜನತೆ ತಮ್ಮನ್ನು ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಶೀಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ ಕಾಂತೇಶ್ ಸಲಹೆ ನೀಡಿದರು.
ಅವರು ಬಾಪೂಜಿ ನಗರದ ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇತ್ತೀಚೆಗೆ ಆಯೋಜಿಸಿದ್ದ ಅತಿಸಾರ ಬೇದಿ ನಿಯಂತ್ರಣಾ ಜಾಗ್ರತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಪಂಚದಾದ್ಯಂತ ಪ್ರತಿ ದಿನ ಸಾವಿರಕ್ಕೂ ಹೆಚ್ಚು ಮಕ್ಕಳು ಅತಿಸಾರದಿಂದ ಸಾವಿಗೀಡಾಗುತ್ತಿದ್ದು ಅದನ್ನು ತಡೆಗಟ್ಟುವ ಕ್ರಮಗಳನ್ನು ಜನತೆ ಅರಿಯ ಬೇಕಿದೆ ಎಂದರು.
ಅತಿಸಾರಕ್ಕೆ ಒಳಗಾದವರು ನಿರ್ಜಲಿಕರಣಗೊಂಡು ನಿತ್ರಾಣರಾಗುತ್ತಾರೆ. ಈ ಕಾರಣದಿಂದ ಅವರಿಗೆ ಸರಿಯಾದ ನೀರು, ಓಆರ್ಎಸ್ ದ್ರಾವಣವನ್ನು ನೀಡುತ್ತಿರಬೇಕು. ಒಂದು ಬಾರಿ ತಯಾರಿಸಿದ ಓಆರ್ಎಸ್ ದ್ರಾವಣ 24ಗಂಟೆಗಳ ಕಾಲ ಮಾತ್ರ ಬಳಕೆಗೆ ಯೋಗ್ಯವಾಗಿರುತ್ತದೆ. ಏನನ್ನೇ ತಿನ್ನುವ ಹಾಗೂ ಮಕ್ಕಳಿಗೆ ತಿನ್ನಿಸುವ ಮೊದಲು ಸರಿಯಾದ ವಿಧಾನದಲ್ಲಿ ಕೈ ತೊಳೆಯಬೇಕು. ಮಕ್ಕಳಿಗೆ ಬಾಟಲಿ ಹಾಲನ್ನು ನೀಡದೆ ನೇರವಾಗಿ ಎದೆ ಹಾಲನ್ನು ಎರಡು ವರ್ಷಗಳವರೆಗೂ ನೀಡಬೇಕು. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಸೂಕ್ತ ಪೌಷ್ಟಿಕಾಂಶಯುಕ್ತ ಆಹಾರ ನೀಡುವುದು. ಪರಿಸರ ನೈರ್ಮಲ್ಯ ಕಾಪಾಡಿಕೊಳ್ಳುವುದು, ಶುದ್ಧ ಕುಡಿಯುವ ನೀರಿನ ಬಳಕೆ ಹಾಗೂ ಆಹಾರದ ಮೇಲೆ ನೊಣ ಹಾಗೂ ಇತ್ಯಾದಿ ಕೀಟಗಳು ಕೂರದಂತೆ ಜಾಗ್ರತೆ ವಹಿಸುವುದರಿಂದ ಅತಿಸಾರದಿಂದ ಮುಕ್ತವಾಗಬಹುದು ಎಂದು ಅವರು ಹೇಳಿದರು.
ಇಂತಹ ಮುನ್ನೆಚ್ಚರಿಕೆಗಳ ಜೊತೆಗೆ ಸೂಕ್ತ ಚಿಕಿತ್ಸೆಯು ಸಹ ಅಗತ್ಯವಿದ್ದು ರೋಗಕ್ಕೆ ತುತ್ತಾದ ಮಕ್ಕಳು ಅಥವಾ ರೋಗಿಗಳನ್ನು ಸ್ಥಳಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಓಆರ್ಎಸ್ ಹಾಗೂ ಜಿಂಕ್ ಮಾತ್ರೆಗಳ ಬಳಕೆಯ ಪ್ರಾತ್ಯಕ್ಷತೆ ತೋರಿಸಿ ವಿತರಿಸಿ ಜಿಲ್ಲಾ ಪಂಚಾಯತ್ ಸಿಇಓ ಕೆ. ಶಿವರಾಮೇಗೌಡ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ರಾಜೇಶ್ ಸುರಗಿಹಳ್ಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶೇಷಪ್ಪ ಹಾಗೂ ಸ್ಥಳಿಯ ಆರೋಗ್ಯಾಧಿಕಾರಿಗಳು ಹಾಗೂ ಮುಂತಾದ ಗಣ್ಯರು ಹಾಜರಿದ್ದರು.