ಜಿಲ್ಲೆಯ ಜನರ ಆಶೋತ್ತರ ಹಾಗೂ ನಿರೀಕ್ಷೆಗಳಿಗೆ ಪೂರಕವಾಗಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಸಾಧ್ಯವಾಗುವ ಎಲ್ಲಾ ಕ್ರಮಗಳನ್ನು ಅನುಸರಿಸಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.
ಅವರು ಇಂದು ಜಿಲ್ಲೆಯ ಸರ್ವಾಂಗೀಣ ವಿಕಾಸಕ್ಕಾಗಿ ಹಾಗೂ ಮುಂದಿನ 2ದಶಕಗಳ ಅವಧಿಯ ದೂರದೃಷ್ಟಿಯನ್ನಿಟ್ಟುಕೊಂಡು ಕೈಗೊಳ್ಳಬಹುದಾದ ಯೋಜನೆಗಳ ಕುರಿತು ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು, ವ್ಯಾಪಾರಿಗಳು, ವಿದ್ಯಾವಂತ ಯುವಜನರು, ಸಮಾಜಸೇವೆ, ಶಿಕ್ಷಣ ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಖ್ಯಾತನಾಮರಾಗಿರುವ ಗಣ್ಯರೊಂದಿಗೆ ನಮ್ಮ ಕನಸಿನ ಶಿವಮೊಗ್ಗ ತಂಡವು ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವ ಉದ್ಧೇಶದಿಂದಾಗಿ ಆಯೋಜಿಸಿದ್ದ ಡಿಜಿಟಲ್ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಬಹುಮುಖ್ಯವಾಗಿ ಜಿಲ್ಲೆಯ ವಿದ್ಯಾವಂತ ಯುಜನತೆ ಹಾಗೂ ಎಲ್ಲಾ ಸ್ಥರದ ನಿರುದ್ಯೋಗಿಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.
ಅದಕ್ಕಾಗಿ ಜನಸಂಪರ್ಕಕ್ಕೆ ಅತ್ಯಗತ್ಯವಾಗಿರುವ ವಿಮಾನ ನಿಲ್ದಾಣ, ರೈಲು ಸಂಪರ್ಕ, ರಸ್ತೆಸಾರಿಗೆ ಹಾಗೂ ಬೃಹತ್ ಸೇತುವೆಗಳ ನಿರ್ಮಾಣ, ಶಿಕ್ಷಣ, ಪ್ರವಾಸೋದ್ಯಮ, ನೀರಾವರಿ, ಕೈಗಾರಿಕೆ ಮುಂತಾದ ಕ್ಷೇತ್ರಗಳ ಅಭಿವೃದ್ಧಿಗೆ ಕ್ರಮವಹಿಸಲಾಗಿದೆ ಎಂದರು.
ಸತತ 25ವರ್ಷಗಳ ನಂತರ ರಾಜ್ಯ ಮತ್ತು ಕೇಂದ್ರದಲ್ಲಿ ಏಕರೀತಿಯ ಸರ್ಕಾರ ರಚನೆಯಾಗಿರುವುದು ಕೂಡ ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಹಾಯಕವಾಗಿದೆ ಎಂದ ಅವರು ಶಿವಮೊಗ್ಗದಲ್ಲಿ ರೈಲ್ವೆ ಕೋಚಿಂಗ್ ಸೆಂಟರ್ ಮತ್ತು ಟರ್ಮಿನಲ್ ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಿಂದಾಗಿ ಸಾಕಷ್ಟು ಜನರಿಗೆ ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ಇಷ್ಟೇ ಅಲ್ಲದೆ ಈಗಾಗಲೇ ತಿರುಪತಿ, ಚೆನ್ನೈನಂತಹ ಮೆಟ್ರೊಪಾಲಿಟನ್ ಸಿಟಿಗಳಿಗೆ ರೈಲು ಸಂಪರ್ಕ ಕಲ್ಪಿಸಲಾಗಿದೆ. ಆದಾಗ್ಯೂ ರೈಲು ವೇಳಾಪಟ್ಟಿಯಲ್ಲಿ ಜನರಿಗೆ ಅನುಕೂಲವಾಗುವಂತೆ ಸಮಯ ಹೊಂದಾಣಿಕೆ ಮಾಡಬೇಕಾದ ತುರ್ತು ಅಗತ್ಯವಿದೆ. ಇದಲ್ಲದೆ ಮಲೆನಾಡಿನಿಂದ ಬಯಲುಸೀಮೆಗೆ ರೈಲು ಸಂಪರ್ಕ ಕಲ್ಪಿಸಲು ಉದ್ಧೇಶಿಸಿದ್ದು ಶಿವಮೊಗ್ಗ – ರಾಣೇಬೆನ್ನೂರು ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ವರ್ತುಲ ರಸ್ತೆ ಕಾಮಗಾರಿ ಭರದಿಂದ ಸಾಗಿದೆ. ರೈಲ್ವೆ ನಿಲ್ದಾಣದ ಎದುರು ಭಾಗದಲ್ಲಿ ನಿಂತೇ ಹೋಗಿದ್ದ ರಿಂಗ್ ರೋಡ್ ಕಾಮಗಾರಿ ಆರಂಭಗೊಂಡಿದೆ. ಅದಕ್ಕಾಗಿ ಸರ್ಕಾರ ಈಗಾಗಲೇ 12ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದೆ. ಅಲ್ಲದೆ ಶಿವಮೊಗ್ಗ ರೈಲ್ವೆ ನಿಲ್ದಾಣದ ಅಭಿವೃಧ್ಧಿ ಕಾಮಗಾರಿಯನ್ನೂ ಕೈಗೆತ್ತಿಕೊಳ್ಳಲಾಗಿದೆ. ಅಲ್ಲದೆ ಹೊಸನಗರ ಸಾಗರ ತೀರ್ಥಹಳ್ಳಿ ತಾಲೂಕುಗಳಿಗೆ ಸಂಪರ್ಕ ಒದಗಿಸುವ ಅರಸಾಳು ರೈಲು ನಿಲ್ದಾಣವನ್ನು ಮಾಲ್ಗುಡಿ 400ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ ಅಲ್ಲದೆ ಸುಮಾರು 25ಕೋಟಿ ವೆಚ್ವದಲ್ಲಿ ಮಾಲ್ಗುಡಿ ಹೆರಿಟೇಜ್ ಬಿಲ್ಡಿಂಗ್ ನಿರ್ಮಾಣ ಮಾಡಲಾಗಿದೆ ಎಂದರು.
ಇನ್ನೂ ಒಂದೆರೆಡು ದಿನಗಳಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
ಮುಖ್ಯ ಮಂತ್ರಿಗಳ ತವರು ಜಿಲ್ಲೆಯಿಂದ ರಾಜಧಾನಿಗೆ ಸಂಪರ್ಕ ಕಲ್ಪಿಸುವ 5000ಕೋಟಿ ರೂ.ಗಳ ವೆಚ್ಚದ ಶಿವಮೊಗ್ಗ-ತುಮಕೂರು ಚತುಷ್ಪಥ ರಸ್ತೆಯ ಅಂತಿಮ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. 600 ಕೋಟಿ ವೆಚ್ಚದ ಚಿತ್ರದುರ್ಗ – ಶಿವಮೊಗ್ಗ ಹೆದ್ದಾರಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.
ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರು ಒದಗಿಸಲು ಹಾಗೂ ನೀರಾವರಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಿ ಶಾಶ್ವತ ನೀರಾವರಿ ಸೌಲಭ್ಯ ಒದಗಿಸಲು ಸಣ್ಣ ಮತ್ತು ಭಾರೀ ನೀರಾವರಿ ಇಲಾಖೆಯಿಂದ ಸಹಸ್ರಾರು ಕೋಟಿ ರೂ.ಗಳ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಬಹಮುಖ್ಯವಾಗಿ 1500ಕೋಟಿ ರೂ.ಗಳ ವೆಚ್ವದಲ್ಲಿ ತುಂಗಾನದಿಯಿಂದ ಅಂಜನಾಪುರ, ಉಡುಗುಣಿ, ತಾಳಗುಂದ ಮತ್ತು ಹೊಸೂರು ಹೋಬಳಿಗಳ ನೂರಾರು ಕೆರೆಗಳಿಗೆ ನೀರು ಒದಗಿಸುವ ಯೋಜನೆ, ಸೊರಬ ತಾಲೂಕಿನ ಮೂಗೂರು-ಮೂಡಿ-ಕಚವಿ ನೀರಾವರಿ ಯೋಜನೆಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ಬೈಂದೂರಿನಲ್ಲಿ 200ಕೋಟಿ ರೂ.ಗಳ ವೆಚ್ಚದಲ್ಲಿ ಬೈಂದೂರು – ಸೌಕೂರು – ಸಿದ್ಧಾಪುರ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಅಲ್ಲದೆ ಬೈಂದೂರು ಸಮುದ್ರಕ್ಕೆ ಹೊಂದಿಕೊಂಡಿದ್ದರೂ ಅಲ್ಲಿನ ಜನ ಕುಡಿಯುವ ನೀರಿಗೆ ಪರಿತಪಿಸುತ್ತಿದ್ದಾರೆ.
ಆದ್ದರಿಂದ ಕೇಂದ್ರ ಪುರಸ್ಕ್ರತ ನಮಾಮಿ ಗಂಗೆ ಯೋಜನೆಯಡಿ ಈ ಪ್ರದೇಶದ ಪ್ರತಿ ಮನೆಮನೆಗೆ ನಲ್ಲಿ ನೀರು ಒದಗಿಸಲು ಉದ್ಧೇಶಿಸಲಾಗಿದೆ ಎಂದರು.
ಕೊರೋನ ಸೋಂಕಿನಿಂದಾಗಿ ದೂರದ ಊರುಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವ ಉದ್ಯೋಗಿಗಳು ತಮ್ಮ ತವರಿಗೆ ಹಿಂದಿರುಗಿ ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ. ಅಂತಹವರಿಗೆ ಇಂಟರ್ ನೆಟ್ ಸೇವೆ ಒದಗಿಸಲು ಕ್ರಮವಹಿಸಲಾಗಿದೆ. ಅಲ್ಲದೆ ಜಿಯೊ. ಏರ್ಟೆಲ್ ಮತ್ತು ವೊಡಾಫೋನ್ ನಂತಹ ಖಾಸಗಿ ಟೆಲಿಕಾಂ ಕಂಪನಿಗಳೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಈಗಾಗಲೇ 60ಟವರ್ ಗಳು ಸ್ಥಾಪನೆಗೊಂಡಿವೆ. ಉಳಿದಂತೆ ಮಲೆನಾಡು ಭಾಗದಲ್ಲಿ ಅರಣ್ಯ, ವಿದ್ಯುತ್ ಮುಂತಾದ ಸಮಸ್ಯೆಗಳಿಂದಾಗಿ ಟವರ್ ನಿರ್ಮಾಣ ಕಾರ್ಯಕ್ಕೆ ಹಿನ್ನೆಡೆಯಾಗಿತ್ತು. ಆ ಎಲ್ಲಾ ಸಮಸ್ಯೆಗಳನ್ನು ಇತ್ಯರ್ಥಪಡಿಸಲಾಗಿದ್ದು ಅಲ್ಪಾವಧಿಯಲ್ಲಿ ಇನ್ನೂ 60ಟವರ್ ಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.
ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ವಿಶೇಷ ಗಮನಹರಿಸಲಾಗಿದೆ. ಜೋಗದ ಅಭಿವೃದ್ಧಿಗಾಗಿ ಪ್ರಾಧಿಕಾರಕ್ಕೆ 10ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ. ಅಲ್ಲದೆ ಉಡುಗುಣಿ, ನಗರ ಕೋಟೆ, ಶಿವಪ್ಪನಾಯಕನ ಅರಮನೆ, ಕವಲೇದುರ್ಗ ಮುಂತಾದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದೆ ಎಂದರು.
ಇಷ್ಟೆ ಅಲ್ಲದೆ ಕಲ್ಲೂರು ಮಂಡ್ಲಿಯಲ್ಲಿ ಚಾರಣ, ಸಾಹಸ ಕ್ರೀಡೆಗಳಿಗೆ ಉತ್ತೇಜನ, ಜೋಗದಲ್ಲಿ ಜಿಪ್ ಲೈನ್ ಅಳವಡಿಕೆ, ಖಾಸಗಿ ಸಹಭಾಗಿತ್ವದಲ್ಲಿ ಕೊಡಚಾದ್ರಿ ಕೊಲ್ಲೂರು ನಡುವೆ ಕೇಬಲ್ ಕಾರ್ ಅಳವಡಿಕೆಗೆ ಉದ್ದೇಶಿಸಲಾಗಿದೆ ಎಂದರು. ಈ ಎಲ್ಲಾ ಕೆಲಸಗಳಿಗೆ ಪೂರಕವಾಗಿ 425ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಿಗಂಧೂರು-ಕಳಸವಳ್ಳಿ ಸೇತುವೆ ನಿರ್ಮಾಣ ಕಾರ್ಯ ಕಳಸಪ್ರಾಯವೆನಿಸಿದೆ ಎಂದರು.
ಕಾರ್ಮಿಕರ ನೆರವಿಗಾಗಿ ಇಎಸ್ಐ ಆಸ್ಪತ್ರೆ ನಿರ್ಮಾಣಕ್ಕೆ ಎಲ್ಲಾ ರೀತಿಯ ಪ್ರಯತ್ನ ಮುಂದುವರೆದಿದ್ದು ಶೀಘ್ರದಲ್ಲಿ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಅನುದಾನ ಬಳಸಿಕೊಂಡು ಗಾಜನೂರಿನಲ್ಲಿ 100ಎಕರೆ ಪ್ರದೇಶದಲ್ಲಿ ಜೈವಿಕ ಉದ್ಯಾನವನ ನಿರ್ಮಾಣ ಮಾಡಲಾಗುವುದು ಎಂದರು.
ಸಂವಾದದಲ್ಲಿ ಭಾಗವಹಿಸಿದ್ದ ಅನೇಕರು ಸಂಸದರಿಗೆ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ತಮ್ಮ ಸಲಹೆ-ಸೂಚನೆಗಳನ್ನು ನೀಡಿದರು.
ಅವುಗಳಲ್ಲಿ ಪ್ರಮುಖವಾಗಿ…
- ಟೂರಿಸಂ ಸರ್ಕ್ಯೂಟ್, ಟೂರಿಸಂ ಇನ್ಫಾರ್ಮೇಶನ್ ಸೆಂಟರ್ ಮಾಡಿ. -ಲಕ್ಷ್ಮೀನಾರಾಯಣ ಕಾಶಿ
- ಸ್ಥಳೀಯ ವ್ಯವಹಾರಸ್ಥರ ಅನುಕೂಲಕ್ಕಾಗಿ ಆನ್ಲೈನ್ ಟ್ರೇಡಿಂಗ್ ಗೆ ಅವಕಾಶ ನೀಡಿ. – ವಾಸುದೇವ
- ಕೈಗಾರಿಕಾ ವಸಾಹತು ಪ್ರದೇಶ ಅಭಿವೃದ್ಧಿ. ಕೈಗಾರಿಕಾ ಪ್ರದೇಶ ವಿಸ್ತರಿಸಿ. ಕಡಿಮೆ ಬೆಲೆಗೆ ಭೂಮಿ ನೀಡಿ. – ಶರತ್ ಭೂಪಾಳಂ.
- ಫುಡ್ ಪ್ರೋಸೆಸಿಂಗ್ ಯುನಿಟ್ ಬೇಕು. ಮಹಿಳಾ ಉದ್ಯೋಗಾವಕಾಶಕ್ಕೆ ಒತ್ತು ನೀಡಿ. – ಡಾ.ಲಕ್ಷ್ಮೀದೇವಿ ಗೋಪಿನಾಥ್
- VISL/MPM ರೋಗ ಗ್ರಸ್ಥ ಘಟಕಗಳ ಅಭಿವೃದ್ಧಿಪಡಿಸಿ. – ರಾಜೇಶ್ ಭದ್ರಾವತಿ.
ಕಾರ್ಯಕ್ರಮದ ಅರಂಭದಲ್ಲಿ ಎಸ್.ದತ್ತಾತ್ರಿ ಸ್ವಾಗತಿಸಿದರು. ಹೆಚ್.ಎಸ್.ಮೋಹನ್ ನಿರೂಪಿಸಿ, ಅ.ನ.ವಿಜಯೇಂದ್ರರಾವ್ ವಂದಿಸಿದರು.