ಶಿವಮೊಗ್ಗ, ಜೂನ್ 07: : ಮುಂಗಾರು ಮಳೆ ಪ್ರಾರಂಭಕ್ಕಿಂತ ಪೂರ್ವದಲ್ಲಿ ಶಿವಮೊಗ್ಗ ನಗರದ ಎಲ್ಲಾ ಚರಂಡಿ, ರಾಜಕಾಲುವೆಗಳಲ್ಲಿ ಮಳೆ ನೀರು ಚರಂಡಿಗಳಲ್ಲಿ ಸರಾಗವಾಗಿ ಹರಿಯುವಂತೆ ಮುನ್ನೆಚ್ಚರಿಗೆ ಕ್ರಮವಾಗಿ ಹೂಳನ್ನು ತೆಗೆಯಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ತಿಳಿಸಿದ್ದಾರೆ.
ಈಗಾಗಲೇ ಟ್ಯಾಂಕ್ ಮೊಹಲ್ಲಾ, ಬಸವನಗುಡಿ, ಗಾಂಧಿನಗರ, ವೆಂಕಟೇಶನಗರ, ಹೊಸಮನೆ, ಅಶೋಕನಗರ, ಅಣ್ಣಾನಗರ, ಮಾರ್ನಾಮಿ ಬೈಲು, ಆರ್.ಎಂ.ಎಲ್.ನಗರ, ಇಲಿಯಾಸ್ ನಗರ, ವಿದ್ಯಾನಗರ, ಸವಾಯಿಪಾಳ್ಯ, ಇನ್ನಿತರ ಸ್ಥಳಗಳಲ್ಲಿ ಸುಮಾರು 7.86 ಕಿ.ಮೀ. ಉದ್ದ ಮಳೆನೀರು ಕಾಲುವೆಗಳಲ್ಲಿ ತುಂಬಿರುವ ಹೂಳನ್ನು ತೆಗೆಯಲಾಗಿದೆ.
ಶಾಂತಮ್ಮ ಲೇಔಟ್, ಎನ್.ಟಿ.ರಸ್ತೆ, ಕುಂಬಾರಕೇರಿ, ಹೊಸಮನೆ, ವೆಂಕಟೇಶನಗರ, ಟ್ಯಾಂಕ್ಮೊಹಲ್ಲ ಹಾಗೂ ಬಸವನಗುಡಿ ರಾಜ ಕಾಲುವೆ ಹೂಳೆತ್ತುವ ಕಾಮಗಾರಿ ಪ್ರಗತಿಯಲ್ಲಿದ್ದು, ಟೆಂಪೋಸ್ಟ್ಯಾಂಡ್ನಿಂದ ಕನಕವಿದ್ಯಾ ಸಂಸ್ಥೆ ಮೂಲಕ ಆರ್.ಎಮ್.ಎಲ್.ನಗರದ ವರೆಗಿನ, ಮಲ್ಲಿಕಾರ್ಜುನನಗರ (ಪದ್ಮಾ ಟಾಕೀಸ್) ಅಂಬೇಡ್ಕರ್ನಗರ, ಕೆರೆ ಅಂಗಳ ಮೂಲಕ ಟಿಪ್ಪುನಗರ ಚಾನಲ್ ವರೆಗಿನ ರಾಜ ಕಾಲುವೆ ಹೂಳೆತ್ತು ಕಾಮಗಾರಿಯನ್ನು ಜೂನ್ 15ರೊಳಗಾಗಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಪರೀಶೀಲಿಸಿ, ಚರಂಡಿ, ರಾಜ ಕಾಲುವೆಗಳಲ್ಲಿ ಎತ್ತಿರುವ ಹೂಳನ್ನು ಅಲ್ಲೇ ರಾಶಿ ಹಾಕದೆ, ಸೂಕ್ತ ಜಾಗಕ್ಕೆ ಸಾಗಿಸಿ ವಿಲೇವಾರಿ ಮಾಡುವಂತೆ ಹಾಗೂ ಮಳೆ ನೀರು ಚರಂಡಿ, ಕಾಲುವೆಗಳಲ್ಲಿ ಸರಾಗವಾಗಿ ಹರಿದು ಹೋಗುವಂತೆ ಕೆಲಸ ನಿರ್ವಹಿಸಲು ಸೂಚನೆ ನೀಡಿಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.