ಶಿವಮೊಗ್ಗ ನಗರದಲ್ಲಿ ನೆರೆ ಪರಿಸ್ಥಿತಿ ಸಂಪೂರ್ಣವಾಗಿ ಇಳಿದಿದ್ದು, ಪುನರ್ ವಸತಿ ಸೇರಿದಂತೆ ಪರಿಹಾರ ಕಾಮಗಾರಿಗಳನ್ನು ಚುರುಕುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ತಿಳಿಸಿದ್ದಾರೆ.
ಕಳೆದ ನಾಲ್ಕು ದಿನಗಳಲ್ಲಿ ನೆರೆ ಪೀಡಿತ ಪ್ರದೇಶಗಳಿಂದ 250 ಕುಟುಂಬಗಳ ಸುಮಾರು 1675 ಜನರನ್ನು ರಕ್ಷಿಸಲಾಗಿದೆ. ಇವರಲ್ಲಿ 556ಮಂದಿಯನ್ನು ಬೋಟ್ಗಳ ಸಹಾಯದಿಂದ ನೆರೆ ಪೀಡಿತ ಸ್ಥಳದಿಂದ ರಕ್ಷಿಸಲಾಗಿದೆ. ನಗರದಲ್ಲಿ ತೆರೆಯಲಾಗಿರುವ 15 ಪರಿಹಾರ ಕೇಂದ್ರಗಳಲ್ಲಿ 2500 ಮಂದಿ ಸಂತ್ರಸ್ತರು ಆಶ್ರಯ ಪಡೆದಿದ್ದು, ಅವರಿಗೆ ಬಿಸಿಯೂಟ, ಬಟ್ಟೆ, ಚಪ್ಪಲ್, ಸ್ಯಾನಿಟರಿ ಪ್ಯಾಡ್ಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಒದಗಿಸಲಾಗುತ್ತಿದೆ. ಇನ್ನು 7ರಿಂದ 10ದಿನಗಳ ಕಾಲ ನೆರೆ ಪರಿಹಾರ ಕೇಂದ್ರಗಳು ಮುಂದುವರೆಯುವ ಸಾಧ್ಯತೆಯಿದ್ದು, ಈ ಕೇಂದ್ರಗಳಲ್ಲಿ ಇನ್ನಷ್ಟು ಉತ್ತಮ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಮಕ್ಕಳಿಗೆ ಆಟವಾಡುವ ಸಾಮಾಗ್ರಿಗಳು, ಪೇಪರ್, ಟಿವಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಪರಿಹಾರ ಕೇಂದ್ರಗಳಲ್ಲಿ ನೆಲೆಸಿರುವ ಸಂತ್ರಸ್ತರಲ್ಲಿ ಬಹುತೇಕ ಮಂದಿ ತಮ್ಮ ಎಲ್ಲವನ್ನೂ ಕಳೆದುಕೊಂಡಿದ್ದು, ಅವರಿಗೆ ಮಾನಸಿಕವಾಗಿ ಧೈರ್ಯ ತುಂಬಲು ಕೌನ್ಸಿಲಿಂಗ್ ಮಾಡಲಾಗುವುದು. ಇದಕ್ಕಾಗಿ ಎಲ್ಲಾ ಪರಿಹಾರ ಕೇಂದ್ರಗಳಲ್ಲಿ ತಜ್ಞರನ್ನು ನಿಯೋಜಿಸಲಾಗುವುದು. ಸಂತ್ರಸ್ತರ ನೆರವಿಗೆ ಸಾಧನ ಸಾಮಾಗ್ರಿಗಳನ್ನು ನೀಡುವಂತೆ ಮನವಿ ಮಾಡಲಾಗಿದ್ದು, ಮಹಾನಗರ ಪಾಲಿಕೆ ಕಚೇರಿಯಲ್ಲಿ ಸ್ವೀಕಾರ ಕೇಂದ್ರ ತೆರೆಯಲಾಗಿದೆ. ಈಗಾಗಲೇ ಹಲವು ಮಂದಿ ನೆರವು ಒದಗಿಸುತ್ತಿದ್ದು, ಇನ್ನಷ್ಟು ನೆರವಿನ ಅಗತ್ಯವಿದೆ ಎಂದು ಅರು ಹೇಳಿದ್ದಾರೆ.
ಹಾನಿ: ಶಿವಮೊಗ್ಗ ನಗರದಲ್ಲಿ ನೆರೆಯಿಂದಾಗಿ 5ಸಾವಿರಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು, ಇದರಲ್ಲಿ ಕಚ್ಚಾ ಮನೆಗಳು ಸಂಪೂರ್ಣ ಹಾನಿಗೀಡಾಗಿವೆ. ಮಹಾನಗರ ಪಾಲಿಕೆ ವ್ಯಾಪ್ತಿಯ ಸುಮಾರು 60ಶೇಕಡಾ ದಷ್ಟು ರಸ್ತೆಗಳು ಹಾನಿಗೀಡಾಗಿದ್ದು, ಸೇತುವೆ, ಮೋರಿಗಳು, ಕಟ್ಟಡಗಳು ಸೇರಿದಂತೆ ಸಾರ್ವಜನಿಕ ಆಸ್ತಿಪಾಸ್ತಿಗೆ ಅಪಾರ ನಷ್ಟ ಉಂಟಾಗಿದೆ. ಪ್ರಾಥಮಿಕವಾಗಿ ಸುಮಾರು 150ಕೋಟಿ ರೂ. ಹಾನಿ ಅಂದಾಜಿಸಲಾಗಿದೆ. ಮಂಗಳವಾರದ ಒಳಗಾಗಿ ನಾಶನಷ್ಟದ ಬಗ್ಗೆ ನಿಖರ ಮಾಹಿತಿ ಒದಗಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ವ್ಯವಸ್ಥಿತ ಪರಿಹಾರ ಕಾರ್ಯ: ಪರಿಹಾರ ಹಾಗೂ ಪುನರ್ವಸತಿ ಕಾರ್ಯ ಅತ್ಯಂತ ಸವಾಲಿನಿಂದ ಕೂಡಿದ್ದು, ವ್ಯವಸ್ಥಿತವಾಗಿ ಪರಿಹಾರ ಕಾರ್ಯವನ್ನು ಕೈಗೊಳ್ಳಲು 10ನೋಡಲ್ ಅಧಿಕಾರಿಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ. ಪರಿಹಾರ ಕೇಂದ್ರ, ಆರೋಗ್ಯ ಮತ್ತು ಸ್ವಚ್ಛತೆ, ನೀರು ಪೂರೈಕೆ ಮತ್ತು ಪರೀಕ್ಷೆ, ಪರಿಹಾರ ವರದಿಗಳು, ಕೌಶಲ್ಯ ತರಬೇತಿ, ನಾಶಗೊಂಡಿರುವ ದಾಖಲೆಗಳನ್ನು ಮತ್ತೆ ಸಿದ್ಧಪಡಿಸುವುದು, ಪುನರ್ವಸತಿ ಕಾರ್ಯ ಸೇರಿದಂತೆ ಹಲವು ಕ್ಷೇತ್ರಗಳನ್ನು ಗುರುತಿಸಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.