ಸಹ್ಯಾದ್ರಿ ಉತ್ಸವದ ಅಂಗವಾಗಿ ಆಯೋಜಿಸಲಾಗಿರುವ ಹೆಲಿಟೂರ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಹೆಲಿಪ್ಯಾಡ್ನಿಂದ ಹೊರಟು ಶಿವಮೊಗ್ಗ ನಗರವನ್ನು ಆಗಸದಿಂದ ವೀಕ್ಷಿಸುವ ಅಪರೂಪದ ಅವಕಾಶ ಇದಾಗಿದೆ.
ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಹೆಲಿಟೂರ್ಗೆ ಚಾಲನೆ ನೀಡಿದರು. ಹೆಲಿಪ್ಯಾಡ್ ಬಳಿ ಟಿಕೆಟ್ ಬುಕ್ಕಿಂಗ್ ಲಭ್ಯವಿದ್ದು, ಜಾಲಿ ರೈಡ್ಗೆ 2500 ಹಾಗೂ ಅಡ್ವೆಂಚರ್ ರೈಡ್ಗೆ 3ಸಾವಿರ ರೂ. ನಿಗದಿಪಡಿಸಲಾಗಿದೆ.
ಇದೇ ಮೊದಲ ಬಾರಿಗೆ ಹೆಲಿಕಾಪ್ಟರ್ನಲ್ಲಿ ಹಾರಾಡುವ ಅವಕಾಶ ಲಭಿಸಿದೆ. ಬಹಳ ಸಂತಸ ಎನಿಸುತ್ತಿದೆ. ಮೇಲಿನಿಂದ ಶಿವಮೊಗ್ಗ ನಗರವನ್ನು ನೋಡುವುದು ವಿಶೇಷ ಅನುಭವ. ನದಿ, ಸ್ಟೇಡಿಯಂ, ಮೆಗ್ಗಾನ್ ಆಸ್ಪತ್ರೆಯನ್ನು ಮೇಲಿನಿಂದ ನೋಡಲು ಸಾಧ್ಯವಾಯಿತು.’’ ಇದು ಹೆಲಿಕಾಪ್ಟರ್ನಲ್ಲಿ ಹಾರಾಡಿ ಬಂದ 80ರ ಹರೆಯದ ಶಿವಮೊಗ್ಗ ನಿವಾಸಿ ಸರೋಜಾ ಅವರ ಅನುಭವದ ಮಾತು.
ಸಹ್ಯಾದ್ರಿ ಉತ್ಸವದಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಹೆಲಿಟೂರ್ ಆಯೋಜಿಸಿರುವುದು ಸ್ವಾಗತಾರ್ಹ. ನಾವು ನಮ್ಮ ಊರಿನಲ್ಲೇ ವಿಮಾನ ಯಾನ ಕೈಗೊಳ್ಳಲು ಇದರಿಂದ ಸಾಧ್ಯವಾಯಿತು. ಇದೊಂದು ವಿಶೇಷ ಅನುಭವ’’ ಇದು ಸರೋಜಾ ಅವರ ಮಗ ಗಂಗಾಧರ ಅವರ ಸಂತಸದ ನುಡಿ.
ಪ್ಯಾರಾ ಗ್ಲೈಡಿಂಗ್: ನವಿಲೆ ಕ್ರಿಕೆಟ್ ಮೈದಾನದ ಬಳಿ ಸಾಹಸ ಪ್ರಿಯರಿಗಾಗಿ ಪ್ಯಾರಾ ಗ್ಲೈಡಿಂಗ್ ಆಯೋಜಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಪ್ಯಾರಾ ಗ್ಲೈಡಿಂಗ್ ಆಯೋಜಿಸಲಾಗುತ್ತಿದ್ದು, ಥ್ರಿಲ್ಲಿಂಗ್ ಅನುಭವ ನೀಡಿತು ಎಂದು ಪ್ಯಾರಾ ಗ್ಲೈಡಿಂಗ್ ಹಾರಾಟ ನಡೆಸಿದ ಗಣೇಶ್ ಅವರ ಮಾತು.