ಶಿವಮೊಗ್ಗ. ಮೇ 20 : ಕಳೆದ ಏಪ್ರಿಲ್ 23ರಂದು ನಡೆದ ಶಿವಮೊಗ್ಗ ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯವು ಮೇ 23ರಂದು ಬೆಳಿಗ್ಗೆ 8ಗಂಟೆಯಿಂದ ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ನಡೆಯಲಿದ್ದು, ಮತಎಣಿಕೆ ಕಾರ್ಯವು ವ್ಯವಸ್ಥಿತವಾಗಿ ನಡೆಯಲು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಮಾತನಾಡುತ್ತಿದ್ದರು. ರಾಜ್ಯದ ಕೆಲವು ಮತಕ್ಷೇತ್ರಗಳಲ್ಲಿ ಶಿವಮೊಗ್ಗ ಕ್ಷೇತ್ರವೂ ಕೂಡ ಸೂಕ್ಷ್ಮ ಪ್ರದೇಶವೆಂದು ಚುನಾವಣಾ ಆಯೋಗ ಗುರುತಿಸಿರುವ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ತುಕಡಿಯನ್ನು ನಿಯೋಜಿಸಲಾಗಿದೆ ಎಂದರು.
ಮತಎಣಿಕೆ ಕಾರ್ಯಕ್ಕೆ ನಿಯೋಜಿಸಲಾಗುವ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಜಿಲ್ಲಾ ಚುನಾವಣಾ ಶಾಖೆಯಿಂದ ಗುರುತಿನ ಪತ್ರ ನೀಡಲಾಗುವುದು. ಗುರುತಿನ ಚೀಟಿ ಹೊಂದಿರದ ಯಾವುದೇ ವ್ಯಕ್ತಿಗೆ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದವರು ತಿಳಿಸಿದರು.
ಮತಎಣಿಕೆ ಕಾರ್ಯಕ್ಕೆ ಆಗಮಿಸಲಿರುವ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಪಾವತಿಸಿ ಪಡೆಯಬಹುದಾದ ಉಪಹಾರ ಗೃಹ ವ್ಯವಸ್ಥೆ, ವಾಹನ ನಿಲುಗಡೆಗೆ ಕಲ್ಪಿಸಲಾಗಿದೆ. ಅಲ್ಲದೆ ಗುರುತಿನ ಚೀಟಿ ಹೊಂದಿದ ಯಾವುದೇ ರಾಜಕೀಯ ಪಕ್ಷಗಳ ಮುಖಂಡರು ಮೊಬೈಲ್ ತೆಗೆದುಕೊಂಡು ಹೋಗುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮಾಧ್ಯಮ ಪ್ರತಿನಿಧಿಗಳು ತಮ್ಮ ಮಾಧ್ಯಮ ಕೇಂದ್ರದಲ್ಲಿದ್ದು ಮೊಬೈಲ್ ಬಳಸಲು ಯಾವುದೇ ಆಕ್ಷೇಪಣೆ ಇರುವುದಿಲ್ಲ ಎಂದವರು ನುಡಿದರು.
ಮತ ಎಣಿಕೆಗೆ ಮುನ್ನ ಅಂದು ಬೆಳಿಗ್ಗೆ 7ಗಂಟೆಯಿಂದ ಸ್ಟ್ರಾಂಗ್ ರೂಂಗಳ ಬಾಗಿಲುಗಳನ್ನು ತೆರೆಯಲಾಗುವುದು. ಎಂಟು ಗಂಟೆಗೆ ಸರಿಯಾಗಿ ಸರ್ವೀಸ್ ಓಟ್ಸ್ ಹಾಗೂ ಪೋಸ್ಟಲ್ ಓಟುಗಳನ್ನು ಹಾಗೂ ಮತಯಂತ್ರಗಳ ಎಣಿಕೆಯನ್ನು ಏಕಕಾಲಕ್ಕೆ ಆರಂಭಿಸಲಾಗುವುದು ಎಂದರು.
ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೂ ಅನ್ವಯವಾಗುವಂತೆ ಚುನಾವಣಾ ಆಯೋಗದ ನಿರ್ದೇಶನದಂತೆ ಆಯ್ದ ಕೆಲವು ವಿವಿ ಪ್ಯಾಟ್‍ಗಳ ಮತಗಳನ್ನು ರಾeಕೀಯ ಪಕ್ಷಗಳ ನಿಯೋಜಿತ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಚುನಾವಣಾಧಿಕಾರಿಗಳು ಎಣಿಸುವರು. ಪ್ರತಿ ಸುತ್ತಿನ ಮತಎಣಿಕೆ ಪೂರ್ಣಗೊಂಡಾಗ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಹಿ ಮಾಡಬೇಕಾಗುವುದು. ಆಕ್ಷೇಪಣೆಗಳಿದ್ದಲ್ಲಿ ತಕ್ಷಣ ಮತಎಣಿಕೆ ಸಿಬ್ಬಂಧಿಗಳಿಗೆ ತಮ್ಮ ಅಸಮ್ಮತಿ ಸೂಚಿಸಿ ಪುನರ್ ಎಣಿಕೆಗೆ ಬೇಡಿಕೆ ಸಲ್ಲಿಸಬಹುದಾಗಿದೆ. ಸಹಿ ಹಾಕಿದ ನಂತರ ಪುನರ್ ಎಣಿಕೆಗೆ ಅವಕಾಶವಿರುವುದಿಲ್ಲ ಎಂದವರು ತಿಳಿಸಿದರು.
ಮತಎಣಿಕೆಯ ಈ ಎಲ್ಲಾ ಪ್ರಕ್ರಿಯೆಗಳಲ್ಲಿ ರಾಜಕೀಯ ಪಕ್ಷಗಳ ನಿಯೋಜಿತ ಪ್ರತಿನಿಧಿಗಳು ಸಿಬ್ಬಂಧಿಗಳೊಂದಿಗೆ ಸಮಾಧಾನವಾಗಿ ವ್ಯವಹರಿಸಬೇಕು. ಮತ ಎಣಿಕೆ ಕಾರ್ಯ ಮುಕ್ತಾಯಗೊಳ್ಳುವವರೆಗೆ ಯಾವುದೇ ಒತ್ತಡಕ್ಕೆ ಒಳಗಾಗದೇ ಅಧಿಕಾರಿಗಳೊಂದಿಗೆ ಸಂಯಮದಿಂದ ಸಹಕರಿಸುವಂತೆ ಅವರು ಸೂಚಿಸಿದರು.
ಚುನಾವಣೆಗೆ ಸ್ಪರ್ಧಿಸಿರುವ ಪ್ರತಿ ಅಭ್ಯರ್ಥಿಯು ತಮ್ಮ ಚುನಾವಣಾ ವೆಚ್ಚದ ಲೆಖ್ಖಪತ್ರಗಳನ್ನು ಜೂನ್ 22ರೊಳಗಾಗಿ ಜಿಲ್ಲಾ ಚುನಾವಣೆ ಶಾಖೆಯ ಲೆಖ್ಖ ಪರಿವೀಕ್ಷಕರಿಗೆ ಒಪ್ಪಿಸುವಂತೆ ಅವರು ಇದೇ ಸಂದರ್ಭದಲ್ಲಿ ನುಡಿದರು.
ಸಭೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು, ಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.