News Next

ಶಿವಮೊಗ್ಗ, ಸೆ.02 : ಶರಾವತಿ ಮೂಲವನ್ನು ಪಾರಂಪರಿಕ ತಾಣ ಎಂದು ಗುರುತಿಸಲು ತೀರ್ಥಹಳ್ಳಿ ತಾಲೂಕು ಪಂಚಾಯತ್ ಜೀವ ವೈವಿಧ್ಯ ಸಮಿತಿ ನಿರ್ಣಯ ಕೈಗೊಳ್ಳಬೇಕು ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದರು.
ಅವರು ಸೋಮವಾರ ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥಕ್ಕೆ ತಜ್ಞರ ತಂಡದೊಂದಿಗೆ ಭೇಟಿ ನೀಡಿ ಸ್ಥಳೀಯರು ಹಾಗೂ ಅಧಿಕಾರಿಗೊಂದಿಗೆ ಸಮಾಲೋಚನೆ ನಡೆಸಿದರು.ಶರಾವತಿ ನದಿಮೂಲ ಸುತ್ತ ಇರುವ ಗುಡ್ಡ ಸೂಕ್ಷ್ಮ ಸ್ಥಿತಿಯಲ್ಲಿದೆ. ನದಿಮೂಲದ ಪುಷ್ಕರಣೆ, ಕೆರೆಯ ಅಭಿವೃದ್ಧಿ ಮಾಡಿ ಭೂಕುಸಿತ ಆಗದಂತೆ ಎಚ್ಚರಿಕೆ ವಹಿಸಬೇಕು. ಇಲ್ಲಿ ಏಕ ಜಾತಿ ನಡುತೋಪು ಕಟಾವು ಮಾಡಿ ಪವಿತ್ರ ವನ ನಿರ್ಮಾಣವಾಗಬೇಕು. ಭೂ ಕುಸಿತದಿಂದ ಹಲವು ಕಡೆ ಅರಣ್ಯ ನಾಶವಾಗಿದೆ. ನಡುತೋಪು ನಿರ್ಮಾಣ ಬೇಡ ಎಂದು ತಜ್ಞರು ಎಚ್ಚರಿಕೆ ನೀಡುತ್ತಾ ಬಂದಿದ್ದಾರೆ ಎಂದು ಹೇಳಿದರು.
ಕುಮದ್ವತಿ ನದಿ ಜನ್ಮ ತಾಳುವ ಹೊಸನಗರ ತಾಲೂಕು ಬಿಲ್ವೇಶ್ವರ ದೇವಾಲಯದ ಹಿಂದೆ ಇರುವ ಈ ಹಿಂದೆ ಒಣಗಿದ್ದ ಪುಷ್ಕರಣಿ ಈಗ ಸಮೃದ್ಧವಾಗಿದೆ. ಇಲ್ಲಿರುವ ಕೆರೆಗಳನ್ನು ಪುನಶ್ಚೇತನಗೊಳಿಸಲು ಕ್ರಮ ಕೈಗೊಳ್ಳುವಂತೆ ಇಲ್ಲಿಗೆ ಭೇಟಿ ನೀಡಿದ ಅವರು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಬಳಿಕ ಹುಂಚ ಗ್ರಾಮ ಪಂಚಾಯತ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹುಂಚ ಹಸಿರು ಬೆಟ್ಟವನ್ನು ಸೂಕ್ಷ್ಮ ಪರಿಸರ ಪ್ರದೇಶ ಎಂದು ಗುರುತಿಸಲು ಜೀವವೈವಿಧ್ಯ ಸಮಿತಿ ನಿರ್ಣಯ ಕೈಗೊಂಡಿದೆ. ಹುಂಚದ ಹಸಿರು ಬೆಟ್ಟವನ್ನು ಉಳಿಸಲು ಸ್ಥಳೀಯರು ನಿರಂತರ ಹೋರಾಟ ನಡೆಸಿದ್ದಾರೆ ಎಂದು ಅವರು ಹೇಳಿದರು.

error: Content is protected !!