ಧಾರ್ಮಿಕ ವಿಧಿವಿಧಾನ ಆರಂಭ | ಮೊದಲ ದಿನ ದರ್ಶನ ಪಡೆಯಲು ಜನರ ಹರಸಾಹಸ
ಸಾಗರ: ಶಕ್ತಿದೇವತೆ ಶ್ರೀ ಮಾರಿಕಾಂಬೆ ಜಾತ್ರೆಗೆ ಮಂಗಳವಾರ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. 9 ದಿನಗಳ ಕಾಲ ಜರುಗುವ ತಾಯಿಯ ಜಾತ್ರೆಗೆ ಸಾಂಪ್ರಾದಾಯಿಕ ವಿಧಿ ವಿಧಾನಗಳು ಬೆಳಗ್ಗೆ ಬ್ರಾಹ್ಮೀ ಮಹೂರ್ತದಲ್ಲಿ ನಡೆಯಿತು. ಮೊದಲ ದಿನವೇ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದರು.
ಬೆಳಗಿನ ಜಾವ 3 ಗಂಟೆಗೆ ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಹಾಗಣಪತಿ ದೇವಾಲಯದಲ್ಲಿ ತಾಯಿ ಮಾರಿಕಾಂಬೆಯ ತಾಳಿ ಮತ್ತು ಆಭರಣಗಳಿಗೆ ಪೂಜೆ ಸಲ್ಲಿಸಿ ವಿಧಿವಿಧಾನ ನೇರವೇರಿಸಲಾಯಿತು.

ನಂತರ ಪುರೋಹಿತ ರಮೇಶ ಭಟ್ಟರ ಮನೆಯಲ್ಲಿ ಪೂಜಾ ಕಾರ್ಯಕ್ರಮ ನಡೆದವು.
ಮಂಗಳವಾದ್ಯಗಳೊಂದಿಗೆ ಸಾಗರ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ಬಂದ ದೇವಿಯ ಆಭರಣಗಳನ್ನು ತವರುಮನೆಗೆ ತರಲಾಯಿತು. ತವರುಮನೆಯಲ್ಲಿ ಪ್ರತಿಷ್ಠಾಪಿಸಿದ್ದ ನಯನ ಮನೋಹರವಾದ ಶ್ರೀ ಮಾರಿಕಾಂಬೆ ವಿಗ್ರಹಕ್ಕೆ ವಿವಿಧ ಸಾಂಪ್ರಾದಾಯಿಕ ಆಚರಣೆಗಳನ್ನು ನಡೆಸಿ ಆಭರಣಗಳನ್ನು ತೊಡಿಸಲಾಯಿತು.
ತಾಯಿಯ ವಿಗ್ರಹಕ್ಕೆ ಭಾರಿ ಗಾತ್ರದ ಹಾರ ಸೇರಿದಂತೆ ವೈವಿಧ್ಯಮಯ ಹೂವಿನ ಅಲಂಕಾರ ನಡೆಸಿ ಮಹಾಮಂಗಳಾರತಿ ನೆರವೇರಿಸಲಾಯಿತು. ನಂತರ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಮೆರವಣಿಗೆಯಲ್ಲಿ ಕೇರಳದ ಕಲಾತಂಡದವರು ಚಂಡೆವಾದನ ನಡೆಸಿಕೊಟ್ಟರು.
ಫೆ. 19ರಿಂದ ಶ್ರೀ ಮಾರಿಕಾಂಬೆ ದೇವಿಯನ್ನು ಗಂಡನ ಮನೆ ಆವರಣದಲ್ಲಿ ಕೂರಿಸಲಾಗುತ್ತದೆ. ಫೆ. 26 ರವರೆಗೂ ಸಾರ್ವಜನಿಕರ ದರ್ಶನಕ್ಕೆ ಸಕಲ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಹಿರಿಯ ನಾಗರೀಕರಿಗೆ ಹಾಗೂ ವಿಕಲಚೇತನರಿಗೂ ಅನುಕೂಲವಾಗುವ ರೀತಿಯಲ್ಲಿ ಜಾತ್ರಾ ಸಮಿತಿ ಅಗತ್ಯ ಕ್ರಮ ಕೈಗೊಂಡಿದೆ.
ದೇವಿಯ ಹರಕೆ ಸಲ್ಲಿಸಲು ಜಾತ್ರಾ ಸಮಿತಿಯು ಪೂರಕ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ. ಉಡಿಸೇವೆ, ತುಲಾಭಾರ ಸೇರಿದಂತೆ ಭಕ್ತರು ಹರಕೆ ಸಲ್ಲಿಸಲು ಪ್ರತ್ಯೇಕ ಕೌಂಟರ್‍ಗಳನ್ನು ಮಾಡಲಾಗಿದೆ.
9 ದಿನಗಳ ವೈವಿಧ್ಯ ಪೂಜಾ ವಿಧಿ ವಿಧಾನಗಳ ನಂತರ ಫೆ. 26ರಂದು ರಾತ್ರಿ 10.30ಕ್ಕೆ ರಾಜಬೀದಿ ಉತ್ಸವ ನಡೆಯುತ್ತದೆ. ಶ್ರೀ ಮಾರಿಕಾಂಬ ದೇವಿಯನ್ನು ವನಕ್ಕೆ ಬಿಟ್ಟು ಬರುವ ಮೂಲಕ ಜಾತ್ರೆಯು ಸಂಪನ್ನಗೊಳ್ಳುತ್ತದೆ.
ಜಾತ್ರೆಗೆ ಆಗಮಿಸುವ ಸಾರ್ವಜನಿಕರಿಗೆ ಜಾತ್ರಾ ಸಮಿತಿಯಿಂದ ಮಧ್ಯಾಹ್ನ ಮತ್ತು ರಾತ್ರಿ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯ ಸಂಘ ಸಂಸ್ಥೆಗಳು ಸಹ ಉಚಿತವಾಗಿ ಪಾನೀಯ, ಉಪಾಹಾರ ಹಾಗೂ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿರುತ್ತವೆ.
ರಾತ್ರಿಯಿಂದಲೇ ಕ್ಯೂ:
ತವರುಮನೆಯಲ್ಲಿ ಶ್ರೀ ಮಾರಿಕಾಂಬೆ ದರ್ಶನಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೋಮವಾರ ರಾತ್ರಿಯಿಂದಲೇ ಸರದಿ ಸಾಲಿನಲ್ಲಿ ನಿಂತಿದ್ದರು. ಸೋಮವಾರ ರಾತ್ರಿ 11ಕ್ಕೆ ನಿಧಾನವಾಗಿ ಜನ ಸೇರಲು ಆರಂಭಿಸಿದರು. ಬೆಳಗಿನ ವೇಳೆಗೆ ಸರದಿ ಸಾಲಿನ ಉದ್ದವು ಸಾಗರ ಪಟ್ಟಣದ ಟೌನ್‍ಪೊಲೀಸ್ ಠಾಣೆ ದಾಟಿ ಸೇವಾಸಾಗರ ಶಾಲೆವರೆಗೂ ತಲುಪಿತ್ತು.
— ಕರ್ನಾಟಕದ ಅತಿದೊಡ್ಡ ಜಾತ್ರೆಗಳಲ್ಲಿ ಸಾಗರದ ಮಾರಿಕಾಂಬೆ ಜಾತ್ರೆಯು ಪ್ರಮುಖ. 16 ಅಡಿ ಎತ್ತರದ ತಾಯಿ ಮಾರಿಕಾಂಬೆ ಮೂರ್ತಿಯು ಅತ್ಯಂತ ವೈಶಿಷ್ಟವಾಗಿದ್ದು. ಎಲ್ಲ ಸಮುದಾಯದ ಜನರು ಒಟ್ಟುಗೂಡಿ ಪೂಜೆ ಸಲ್ಲಿಸುವುದು ವಿಶೇಷ. ಲಕ್ಷಾಂತರ ಭಕ್ತರು ಪಾಲ್ಗೊಳ್ಳುವುದರಿಂದ ಸಮಿತಿ ಸಕಲ ಕ್ರಮಗಳನ್ನು ಕೈಗೊಂಡಿದೆ. | ನಾಗೇಂದ್ರ ಎಸ್.ಕುಮುಟಾ, ಶ್ರೀ ಮಾರಿಕಾಂಬ ಜಾತ್ರಾ ಸಮಿತಿ ಖಜಾಂಚಿ —
ಮಳಿಗೆ ವ್ಯವಸ್ಥಿತ ನಿರ್ಮಾಣ
ಮಾರಿಕಾಂಬ ಜಾತ್ರೆ ಹಿನ್ನೆಲೆಯಲ್ಲಿ ಮಳಿಗೆ ಹಾಕಲು ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಸ್ಟಾಲ್ ಹಾಕಲು ಎಲ್ಲಿಯೂ ಗುಂಡಿ ತೆಗೆದಿಲ್ಲ. ರಸ್ತೆ ಪಕ್ಕದಲ್ಲಿ ಸಿದ್ಧಪಡಿಸಿದ ಕಬ್ಬಿಣದ ಕಂಬಗಳನ್ನು ನಿಲ್ಲಿಸಿ ಪೆಂಡಾಲ್ ಹಾಕಿಕೊಂಡಿದ್ದಾರೆ. ಇದರಿಂದ ತೆರವುಗೊಳಿಸುವ ಸಂದರ್ಭದಲ್ಲಿ ರಸ್ತೆಗೆ ಯಾವುದೇ ಹಾನಿಯಾಗಿರುವುದಿಲ್ಲ. ಈಗಾಗಲೇ ಬಹುತೇಕ ಮಳಿಗೆಗಳು ತೆರೆಯಲಾಗಿದೆ. 9 ದಿನಗಳ ಕಾಲ ಜಾತ್ರೆ ಹಿನ್ನೆಲೆಯಲ್ಲಿ ಹೆಚ್ಚಿನ ವ್ಯಾಪಾರ ವಹಿವಾಟು ನಡೆಯಲಿದೆ. ದೇವಿಯ ದರ್ಶನ ಪಡೆಯಲು ಆಗಮಿದ ಭಕ್ತರು ಮಳಿಗೆಗಳಲ್ಲಿ ಅಗತ್ಯ ವಸ್ತುಗಳ ಖರೀದಿಯಲ್ಲಿ ನಿರತರಾಗಲಿದ್ದಾರೆ.
— ಗಣಪತಿ ಕೆರೆ ಆಕರ್ಷಣೆ ಇತ್ತೀಚಿಗೆ ಸಾಗರ ನಗರದ ಗಣಪತಿ ಕೆರೆಯನ್ನು ಸ್ವಚ್ಛಗೊಳಿಸಲಾಗಿತ್ತು. ಇದೀಗ ಗಣಪತಿ ಕೆರೆಯಲ್ಲಿ ಮಾಡಿರುವ ಬೋಟಿಂಗ್ ವ್ಯವಸ್ಥೆಯು ಜಾತ್ರೆಯ ವಿಶೇಷ ಆಕರ್ಷಣೆಯಾಗಿರಲಿದೆ. ಜಾತ್ರೆ ಆರಂಭಕ್ಕೂ ಎರಡು ದಿನ ಮುಂಚಿತವಾಗಿಯೇ ಜನರು ಬೋಟಿಂಗ್ ಎಂಜಾಯ್ ಮಾಡಲು ಬರುತ್ತಿದ್ದಾರೆ. ಜಾತ್ರೆಯ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನೀರಿಕ್ಷೆಯಿದೆ. ಸ್ವಚ್ಛಗೊಳಿಸಿರುವ ಕೆರೆಯಲ್ಲಿ ಜನರು ವಿಹಾರ ಮಾಡಲು ಉತ್ಸುಕತೆ ತೋರುತ್ತಿದ್ದಾರೆ. ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವಯೋಮಾನದ ಜನರು ಸಹ ಬೋಟಿಂಗ್ ಎಂಜಾಯ್ ಮಾಡುತ್ತಿದ್ದಾರೆ. ಕೆರೆಯ ಸುತ್ತಲೂ ವಿದ್ಯುತ್ ಅಲಂಕಾರ ವ್ಯವಸ್ಥೆ ಮಾಡಿರುವುದರಿಂದ ರಾತ್ರಿ 9ವರೆಗೂ ಬೋಟಿಂಗ್‍ಗೆ ಅವಕಾಶವಿದೆ. ಮುರ್ಡೇಶ್ವರದ ಸುಬ್ರಹ್ಮಣ್ಯ ಮತ್ತು ತಂಡದವರು ಜವಾಬ್ದಾರಿ ವಹಿಸುತ್ತಿದ್ದಾರೆ. ಕೆರೆಯ ತುದಿಯಿಂದ ಸ್ವಲ್ಪ ದೂರದವರೆಗೂ ನಿರ್ಮಿಸಿರುವ ವಾಕಿಂಗ್ ಪಾಥ್ ಆಕರ್ಷಣೆಯಿಂದ ಕೂಡಿದೆ. ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಫೋಟೋ ತೆಗೆದುಕೊಂಡು ಸಂತಸ ಪಡುತ್ತಿದ್ದಾರೆ. —
ಫೆ. 19ರ ಕಾರ್ಯಕ್ರಮ
ಸಾಗರ ನಗರದ ತಿಲಕ್ ರಸ್ತೆಯಲ್ಲಿರುವ ಶ್ರೀ ಮಾರಿಕಾಂಬ ಕಲಾ ವೇದಿಕೆಯಲ್ಲಿ ಫೆ. 19ರ ಸಂಜೆ 7ಕ್ಕೆ ಸಾಂಸ್ಕøತಿಕ ಸಿರಿ ಉತ್ಸವಕ್ಕೆ ಶಾಸಕ ಹರತಾಳು ಹಾಲಪ್ಪ ಚಾಲನೆ ನೀಡಲಿದ್ದಾರೆ. ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವ ಕೆ.ಎಸ್.ಈಶ್ವರಪ್ಪ, ಕೋಟ ಶ್ರೀನಿವಾಸ ಪೂಜಾರಿ, ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಗೌರವ ಉಪಸ್ಥಿತರಿರುವರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶಾಸಕ ಕುಮಾರ್ ಬಂಗಾರಪ್ಪ, ಎಂಎಲ್‍ಸಿ ಆಯನೂರು ಮಂಜುನಾಥ್, ಆರ್.ಪ್ರಸನ್ನಕುಮಾರ್, ಭೋಜೆಗೌಡ, ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಉಪಸ್ಥಿತರಿರುವರು. ಶ್ರೀ ಮಾರಿಕಾಂಬ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ ಅಧ್ಯಕ್ಷತೆ ವಹಿಸುವರು. ಸಾಹಿತಿ ಡಾ. ನಾ.ಡಿಸೋಜಾ, ಡಿಸಿ ಕೆ.ಬಿ.ಶಿವಕುಮಾರ್, ಎಸ್‍ಪಿ ಕೆ.ಎಂ.ಶಾಂತರಾಜ್ ಹಾಜರಿರುವರು.
—- ಸಾಂಸ್ಕøತಿಕ ಕಾರ್ಯಕ್ರಮ ಶ್ರೀ ಮಾರಿಕಾಂಬ ಕಲಾವೇದಿಕಯಲ್ಲಿ ಫೆ. 19ರ ಸಂಜೆ 5.30ರಿಂದ ಬೆಂಗಳೂರಿನ ಭೂಮಿಕಾ ಅವರಿಂದ ಭರತನಾಟ್ಯ, 6ರಿಂದ ವಿಶಾಲ್ ಹರಿಕಿರಣ್ ಅವರಿಂದ ಕೂಚುಪುಡಿ, 6.30ರಿಂದ ಸಾಯಿ ಗ್ರೂಪ್ ಡ್ಯಾನ್ಸ್ ಸಾಗರ ತಂಡದಿಂದ ನೃತ್ಯ, ರಾತ್ರಿ 8ರಿಂದ ಎಚ್.ಎಲ್.ರಾಘವೇಂದ್ರ ವೃಂದದಿಂದ ರಸಮಂಜರಿ, ರಾತ್ರಿ 9.30ರಿಂದ ಉಡುಪಿಯ ಡಾ. ಅಭಿಷೇಕ್‍ಕರೋಡ್ಕಲ್ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. —-

error: Content is protected !!