ಶಿವಮೊಗ್ಗ, ಜೂನ್.27 : ಯಾವುದೇ ದೊರೆ ಅಥವಾ ಅರಸ ಜನರ ನೆನಪಿನಲ್ಲಿ ಉಳಿಯುವುದು ಅವರ ವ್ಯಕ್ತಿತ್ವ ಮತ್ತು ಕಾರ್ಯಗಳಿಂದಾಗಿಯೆ ಹೊರತು ವೈಭವ ಮತ್ತು ಸಮೃದ್ಧಿಯಿಂದಲ್ಲ. ವ್ಯಕ್ತಿತ್ವ ಹಾಗೂ ಉತ್ತಮ ಅಭಿವೃದ್ಧಿ ಕಾರ್ಯಗಳಿಂದ ಜನರ ಮನಸ್ಸಿನಲ್ಲಿ ಇಂದಿಗೂ ಬದುಕುಳಿದಿರುವ ಅರಸ ಕೆಂಪೇಗೌಡ ಎಂದು ಜಿಲ್ಲಾಧಿಕಾರಿ ಕೆ.ಎ ದಯಾನಂದ್ ಹೇಳಿದರು.
ಅವರು ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಬ್ಬ ಅರಸ ಹೆಚ್ಚೆಂದರೆ ಸಾಮ್ರಾಟನಾಗಬಲ್ಲ ಆದರೆ ನಾಡಪ್ರಭು ಎಂದು ಹೆಸರು ಪಡೆಯುವುದು ಆತ ಸಂಪಾದಿಸಿದ ಜನರ ಪ್ರೀತಿ ಮತ್ತು ತೊಡಗಿಸಿಕೊಂಡಿದ್ದ ಕಾರ್ಯವನ್ನು ಬಿಂಬಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಇಂದಿನ ನೀರಿನ ಅಭಾವದ ಪರಿಸ್ಥಿತಿಯನ್ನು ಮೊದಲೇ ಊಹಿಸಿ ಸುಮಾರು ಮುನ್ನೂರಕ್ಕೂ ಹೆಚ್ಚು ಕೆರೆಗಳನ್ನು ಕಟ್ಟಿಸಿದ್ದರು. ಆದರೆ ಅವುಗಳನ್ನು ನಾವಿಂದು ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದೇವೆ. ಅವುಗಳನ್ನು ಉಳಿಸಿಕೊಂಡಿದ್ದರೆ ಶರಾವತಿಯ ನೀರಿನ ಮೇಲೆ ನಮ್ಮ ಆಲೋಚನೆ ಬರುತ್ತಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಅವರು ಕಟ್ಟಿದ್ದ ಸ್ಮಾರ್ಟ್ ನಗರ ಇಂದು ಅವರು ಹಾಕಿದ್ದ ಮಿತಿಯನ್ನು ಮೀರಿ ಆಧುನಿಕತೆ ಭರಾಟೆಯಲ್ಲಿ ವಿರೂಪವಾಗಿ ಬೆಳೆಯುತ್ತಿದೆ. ನಾವು ಅದರತ್ತ ಗಮನಹರಿಸಿ ಅದನ್ನು ಸುಂದರವಾಗಿಯೇ ಉಳಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಮಹಾನ್ ವ್ಯಕ್ತಿಗಳನ್ನು ಕೇವಲ ಜಾತಿ ಆಧಾರದಿಂದ ಗುರುತಿಸುವ ಮನಸ್ಥಿತಿಗಳು ಬದಲಾಗಿ ಅವರನ್ನು ವಿಶ್ವಚೇತನರನ್ನಾಗಿ ಕಾಣಬೇಕು. ಅವರು ಎಲ್ಲರಿಗೂ ಸೇರಿದ ವ್ಯಕ್ತಿಗಳು ಅವರ ಮಾದರಿಯನ್ನು ನಾವು ಅನುಸರಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಜಿಲ್ಲಾ ಒಕ್ಕಲಿಗ ಸಂಘದ ಅಧ್ಯಕ್ಷ ಕಡಿದಾಳ್ ಗೋಪಾಲ್, ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಅಶ್ವಿನಿ. ಎಂ, ಅಪರ ಜಿಲ್ಲಾಧಿಕಾರಿ ಅನುರಾಧ, ಆದಿಚುಂಚನಗಿರಿ ಶಾಖಾ ಮಠದ ಪ್ರಸನ್ನನಾಥ ಸ್ವಾಮೀಜಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.

error: Content is protected !!