ಅನಾದಿ ಕಾಲದಿಂದಲೂ ಮಾನವ ಪಶುಪಾಲನೆ ಮಾಡುವುದು ಒಂದು ಉಪಕಸುಬು ಅಗಿದ್ದು, ಇತ್ತೀಚೆಗೆ ಎಷ್ಟೋ ಜನ ರೈತರು ಪಶುಪಾಲನೆಯನ್ನೇ ತಮ್ಮ ಜೀವನಕ್ಕಾಗಿ ಅಳವಡಿಸಿಕೊಂಡಿದ್ದಾರೆ. ಪಶು ಪಾಲನೆಯಲ್ಲಿ ಹಾಲು, ಮೊಟ್ಟೆ, ಉಣ್ಣೆ, ಗೊಬ್ಬರ ಇವುಗಳನ್ನು ದೊರಕಿಸಿಕೊಳ್ಳುವುದರ ಜೊತೆಗೆ ಮಾಂಸದ ಉತ್ಪಾದನೆ ಕೂಡ ಸೇರಿದೆ. ಈ ದಿಶೆಯಲ್ಲಿ ಹಂದಿ ಸಾಕಣೆಯಿಂದ ಅಧಿಕ ಲಾಭ ಪಡೆಯಬಹುದಾಗಿದೆ.
ಪ್ರಾಣಿ ಜನ್ಯ ಆಹಾರಗಳಲ್ಲಿ ಹಂದಿ ಮಾಂಸಕ್ಕೆ ಒಂದು ವಿಶಿಷ್ಟ ಸ್ಥಾನವಿದೆ. ಆದು ಉತ್ತಮ ದರ್ಜೆಯ ಸಸಾರಜನಕ ಮತ್ತು ಅಪಾರ ಶಕ್ಥಿಯನ್ನು ಒದಗಿಸುವುದರೊಂದಿಗೆ ಅತ್ಯಂತ ರುಚಿಕರವಾದ ಮಾಂಸವೆಂದು ಹೆಸರುವಾಸಿಯಾಗಿದೆ. ಹಂದಿ ಮಾಂಸ ಶಾಖಾಹಾರಿಗಳಿಗೆ ಒಂದು ಉತ್ತಮ ಆಹಾರ ಪದಾರ್ಥ, ಕಡಿಮೆ ಬೆಲೆಯಲ್ಲಿ ದೊರೆಯುವುದು ಹಂದಿಯ ದೇಹದ ಹೆಚ್ಚಿನ ಭಾಗ ತಿನ್ನಲು ಅರ್ಹವಾಗಿದೆ. ಹಂದಿ ಮಾಂಸದಲ್ಲಿ ಹೆಚ್ಚು ಕೊಬ್ಬಿನ ಅಂಶವಿದ್ದು ನೀರಿನ ಅಂಶ ಕಡಿಮೆ, ತಿಂದವರಿಗೆ ಹೆಚ್ಚು ಶಕ್ತಿಯನ್ನು ನೀಡುತ್ತದೆ. ಪ್ರಪಂಚದ ಒಟ್ಟಾರೆ ಮಾಂಸದ ಉತ್ಪಾದನೆಯಲ್ಲಿ ಹಂದಿ ಮಾಂಸ ಶೇಖಡ 45 ರಷ್ಟಿದ್ದು ಇದು ಪಾಶ್ಯಾತ ರಾಷ್ಟ್ರಗಳಲ್ಲಿ ಅತ್ಯಂತ ಜನಪ್ರಿಯ ಮಾಂಸವೆನಿಸಿದೆ. ಇಂದಿನ ಪಶುಪಾಲನಾ ಪದ್ದತಿಗಳಲ್ಲಿ ಹಂದಿ ಸಾಕಾಣಿಕೆ ಇತರ ಪಶುಪಾಲನ ಪದ್ದತಿಗಳಿಗಿಂತ ಹೆಚ್ಚು ಲಾಭದಾಯಕ ಎಂದು ನಿರೂಪಿಸಿದೆ. ಶೀಘ್ರ ಭೆಳೆವಣಿಗೆ, ಉತ್ತಮ ಆಹಾರ ಪರಿವರ್ತನಾ ಸಾಮರ್ಥ್ಯ, ಹೆಚ್ಚು ಮಾಂಸ (ಶೇ 70-75 ರವರಗೆ,) ಆಧಿಕ ಸಂತಾನ ಸಾಮರ್ಥ್ಯ, ಹೆಚ್ಚಿನ ಬೇಡಿಕೆ ಇಷ್ಟಲ್ಲಾ ಹಂದಿ ಸಾಕಾಣಿಯನ್ನು ಜನಪ್ರಿಯವಾಗಿಸಿದೆ.
ಅದು ಹೇಗೆ?
ಸಾಮಾನ್ಯವಾಗಿ ಹಂದಿ ಎಂದರೆ ಯಾರಿಗೇ ಆಗಲಿ ಸದ್ಬಾವನೆ ಹುಟ್ಟುವುದಿಲ್ಲ. ಅದೊಂದು ನಿರುಪಯುಕ್ತ ಪ್ರಾಣಿ ಎಂದು ಮೂದಲಿಸುವವರೇ ಹೆಚ್ಚು. ಕಸ, ಕಡ್ಡಿ, ಕೊಚ್ಚೆ ಮೊದಲಾದೆಡೆ ಓಡಾಡಿ ಯಾರಿಗೂ ಬೇಡವಾದ ಸಾಕಷ್ಟು ವಸ್ತುಗಳನ್ನು ತಿಂದು ಪೌಷ್ಟಿಕ ಆಹಾರ ನೀಡುವ ಹಂದಿ ಸಾಕಣೆಗೆ ಹೆಚ್ಚು ಶ್ರಮ ಪಡಬೇಕಾಗಿಲ್ಲ. ಹಂದಿ ತಿಂದದ್ದೆಲ್ಲ ಮೈಗೂಡಿ, ಮಾಂಸವಾಗಿ ಪ್ರಯೋಜನಕ್ಕೆ ಬರುತ್ತದೆ.

ನಮ್ಮ ದೇಶ ಹಾಗೂ ರಾಜ್ಯದಲ್ಲಿ ಹಂದಿ ಸಾಕಣೆ
ವಿದೇಶಗಳಲ್ಲಿ ಹಂದಿ ಸಾಕಣೆ ಪದ್ದತಿಗಳು ನವೀನಗೊಂಡು ಅಭಿವೃದ್ದಿ ಹೊಂದಿದೆ. ಉತ್ತಮ ತಳಿಯ ಹಂದಿಗಳಿಗೆ ಅಲ್ಲಿ ಭಾರೀ ಬೇಡಿಕೆ ಇದೆ. ನಮ್ಮ ದೇಶದಲ್ಲಿ ಹಂದಿ ಸಾಕಣೆ ಇನ್ನೂ ಶೈಶವಾವಸ್ಥೆಯಲ್ಲಿಯೇ ಇದೆ. ಹಳೆಯ ಪದ್ದತಿಯ ಸಾಕಣೆಯೇ ಮುಂದುವರೆದಿದ್ದು, ಮಾಂಸಕ್ಕಾಗಿ ಹಂದಿ ಸಾಕಣೆಯನ್ನು ವ್ಯವಸ್ಥಿತ ರೀತಿಯಲ್ಲಿ ಕೈಗೊಳ್ಳುವುದು ತೀರಾ ಅವಶ್ಯಕವಾಗಿದೆ. ಇಲ್ಲಿ ಹೆಚ್ಚಾಗಿ ಹಂದಿ ಸಾಕುವರು ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದವರ ಕಸುಬಾಗಿರುತ್ತದೆ. ನಮ್ಮ ರಾಜ್ಯ ಕರ್ನಾಟಕದಲ್ಲಿ ಕೂಡಾ ಹಂದಿ ಸಾಕಣೆ ಅಭಿವೃದ್ದಿ ಇತ್ತೀಚಿನ ಗಮನಾರ್ಹವಾಗಿದ್ದು ಹೆಚ್ಚು ರೈತರು ಇದರಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

ಹಂದಿಗಳಿಂದ ಉಪಯೋಗಗಳು

  1. ಹಂದಿ ಮಾಂಸ ಶಾಖಾಹಾರಿಗಳಿಗೆ ಒಂದು ಉತ್ತಮ ಆಹಾರ ಪದಾರ್ಥ, ಕಡಿಮೆ ಬೆಲೆಯಲ್ಲಿ ದೊರೆಯುವುದು ಹಂದಿಯ ದೇಹದ ಹೆಚ್ಚಿನ ಭಾಗ ತಿನ್ನಲು ಅರ್ಹವಾಗಿದೆ. ಹಂದಿ ಮಾಂಸದಲ್ಲಿ ಹೆಚ್ಚು ಕೊಬ್ಬಿನ ಅಂಶವಿದ್ದು ನೀರಿನ ಅಂಶ ಕಡಿಮೆ, ತಿಂದವರಿಗೆ ಹೆಚ್ಚು ಶಕ್ತಿಯನ್ನು ನೀಡುತ್ತದೆ.
  2. ಶೇಕಡಾ ಮಾಂಸ ಒದಗಿಸುವಿಕೆ ಹಂದಿ ಜಾತಿಯಲ್ಲಿ ಸುಮಾರು ಶೇಕಡಾ 70 ರಷ್ಟು ಇರುತ್ತದೆ. ಮತ್ತು ಈ ಮಟ್ಟ ಬೇರೆ ಜಾನುವಾರು ಜಾತಿಗಳಿಗೆ ಹೋಲಿಸಿದಲ್ಲಿ ಅಧಿಕವಾಗಿರುತ್ತದೆ. ಇದನ್ನು ಲಾಭಗಳಿಕೆಯ ಕೋನದಲ್ಲಿ ಹೇಳುವುದಾದಲ್ಲಿ 100 ಕೆ.ಜಿ. ಜೀವಂತ ಹಂದಿಯ ಮಾಂಸ ಒದಗಿಸುವ ಸಾಮಥ್ರ್ಯ 140 ಕೆ.ಜಿ. ಜೀವಂತ ಕುರಿ ಅಥವಾ ಮೇಕೆ (ಆಡು) ಗೆ ಸಮವಾಗಿರುತ್ತದೆ.
  3. ಹಂದಿಯ ಕೂದಲಿನಿಂದ ಉತ್ತಮ ಬ್ರಷ್‍ಗಳನ್ನು ತಯಾರಿಸಬಹುದಾಗಿದೆ.
  4. ಮೂಳೆಗಳಿಂದ ಕೃತಕ ಗೊಬ್ಬರವನ್ನು ತಯಾರಿಸುತ್ತಾರೆ.
  5. ಹಂದಿ ಗೊಬ್ಬರ ವ್ಯವಸಾಯಕ್ಕೆ ಉತ್ತಮ ಗೊಬ್ಬರವಾಗಿದೆ.
  6. ಹಂದಿಯ ಗ್ರಂಥಿಗಳಿಂದ ಕೆಲವು ಔಷಧಗಳನ್ನು ತಯಾರಿಸುತ್ತಾರೆ.
  7. ಹಂದಿಯ ಕೊಬ್ಬಿನಿಂದ ಔಷಧಿ ಮಿಶ್ರಣ, ಮೇಣದ ಬತ್ತಿ ತಯಾರಿಕೆಗೆ ಉಪಯೋಗಿಸುತ್ತಾರೆ.

ಹಂದಿ ತಳಿಗಳು

  1. ಸ್ಥಳೀಯ : ಇವು ಗಾತ್ರದಲ್ಲಿ ಸಣ್ಣವಾಗಿದ್ದು, ಕಪ್ಪು ಬಣ್ಣವಿದ್ದು ನೋಡಲು ಅಷ್ಟೇನೂ ಆಕರ್ಶಕವಾಗಿಲ್ಲ. ಇವು ಅಲೆಮಾರಿಗಳಾಗಿದ್ದು, ಸಿಕ್ಕಿದ್ದು ತಿಂದುಕೊಂಡು ಜೀವಿಸುತ್ತವೆ. ಸಾಕುವುದಕ್ಕೆ ಅಷ್ಟೇನು ಯೋಗ್ಯವಾಗಿರುವುದಿಲ್ಲ.
  2. ವಿದೇಶಿ : ಹೆಚ್ಚು ಬಳಕೆಯಲ್ಲಿರುವ ಹಾಗೂ ರೈತರಿಗೆ ಸಾಕಲು ಇಷ್ಟ ಪಡುವ ವಿದೇಶಿ ತಳಿಗಳಲ್ಲಿ ಲಾರ್ಜ ವೈಟ್ ಯಾರ್ಕ್‍ಶೈರ್, ಲ್ಯಾಂಡರೇಸ್, ಹ್ಯಾಂಪ್‍ಶೈರ್ ಹಾಗೂ ಸ್ಯಾಡಲ್ ಬ್ಯಾಕ್ ಮುಖ್ಯವಾದವುಗಳು.
    ಲಾರ್ಜ ವೈಟ್ ಯಾರ್ಕ್‍ಶೈರ್ ಇಂಗ್ಲೆಂಡ್ ದೇಶದ ತಳಿ. ಬಣ್ಣ ಬಿಳುಪು, ಉತ್ತಮ ದರ್ಜೆ ಮಾಂಸ ನೀಡುವುದು. ಒಂದು ಹೆರಿಗೆಗೆ 10 ರಿಂದ 12 ಮರಿಗಳನ್ನು ಕೊಡಬಲ್ಲದು. ನಮ್ಮ ದೇಶದ ಹವಾಮಾನಕ್ಕೆ ಹೊಂದಿಕೊಳ್ಳುವುದು.
    ಡೆನ್ಮಾರ್ಕದ ತಳಿ ಲ್ಯಾಂಡರೇಸ್ ತಳಿ, ಉದ್ದನೆಯ ದೇಹ ಹೊಂದಿದ್ದು ಬಣ್ಣ ಅಚ್ಚು ಬಿಳುಪು, ಗಿಡ್ಡನೆಯ, ತೆಳ್ಳನೆಯ ಕಾಲುಗಳಿರುತ್ತವೆ. ಉತ್ತಮ ಮಾಂಸ ದೊರಕಿಸುವುದು.
    ಸ್ಯಾಡಲ್ ಬ್ಯಾಕ್ ತಳಿಯನ್ನು ಮೈದಾನದ ಪ್ರದೇಶದಲ್ಲಿ ಸಾಕಬಹುದಾಗಿದ್ದು ಭುಜದಲ್ಲಿ ಹಾಗೂ ಮುಂಗಾಲುಗಳವರೆಗೆ ಬಿಳಿಯ ಪಟ್ಟಿಯನ್ನು ಹೊಂದಿರುತ್ತವೆ ಹಾಗೂ ಉಳಿದ ದೇಹದ ಭಾಗ ತುಸು ಕಪ್ಪಾಗಿರುತ್ತದೆ.

ಹಂದಿಗಳಿಗೆ ಮನೆ (ಗೂಡು)
ಹಂದಿಗಳನ್ನು ಮಳೆ, ಗಾಳಿ ಮತ್ತು ನೇರ ಸೂರ್ಯಕಿರಣಗಳಿಂದ ರಕ್ಷಣೆ ಮಾಡಲು ಅವುಗಳಿಗೆ ವಸತಿ ವ್ಯವಸ್ಥೆ ಮಾಡಬೇಕಾಗುತ್ತದೆ. ಕಟ್ಟಡ ನಿರ್ಮಿಸುವಾಗ ಗಮನಿಸಬೇಕಾದ ಅಂಶಗಳೆಂದರೆ ಮನುಷ್ಯನು ವಾಸಿಸುವ ಮನೆಯಿಂದ ಕನಿಷ್ಟ 15 ಮೀಟರ್ ಅಂತರದಲ್ಲಿ ಇರಬೇಕು, ಮನೆಯನ್ನು ಎತ್ತರವಾದ, ಸಮತಟ್ಟಾದ ಸ್ಥಳದಲ್ಲಿ ನಿರ್ಮಿಸಬೇಕು. ಮನೆಯ ಉದ್ದನೆಯ ಭಾಗ ಪೂರ್ವ-ಪಶ್ಚಿಮ ದಿಕ್ಕಿನಲ್ಲಿದ್ದು, ಒಳಗಡೆ ಸರಾಗವಾಗಿ ಗಾಳಿ ಮತ್ತು ಬೆಳಕು ಬರುವಂತಿರಬೇಕು. ಸ್ಥಳೀಯವಾಗಿ ಕಡಿಮೆ ಖರ್ಚಿನಲ್ಲಿ ಲಭ್ಯವಾಗುವ ಕಲ್ಲು ಚಪ್ಪಡಿ ನೆಲಕ್ಕೆ ಉಪಯೋಗಿಸಬಹುದು. ಪ್ರತಿಯೊಂದು ಹಂದಿಗೆ ನಿಲ್ಲಲು, ಮಲಗಲು ಸಾಕಷ್ಟು ಸ್ಥಳಾವಕಾಶ ಸಿಗಬೇಕು. ಸ್ವಚ್ಚ ಕುಡಿಯುವ ನೀರು ಹಾಗೂ ವಿದ್ಯುಚ್ಚಕ್ತಿಯ ಲಭ್ಯತೆಯಿರಬೇಕು. ಆಹಾರ ಸೇವಿಸುವ ಮತ್ತು ನೀರು ಕುಡಿಯುವ ಸ್ಥಳ ಪ್ರತ್ಯೇಕವಾಗಿರಬೇಕು. ವಿವಿಧ ಹಂತಗಳಲ್ಲಿರುವ ಹಂದಿಗಳಿಗೆ ಪ್ರತ್ಯೇಕವಾಗಿ ವಿಂಗಡಿಸಲು ವಿಭಾಗಗಳಿರಬೇಕು. ನೆಲ ಹಾಸಿಗೆಯನ್ನು ಯಾವಾಗಲೂ ಸ್ವಚ್ಚವಾಗಿ ಮತ್ತು ಒಣದಾಗಿ ಇಡಬೇಕು. ಬೀಜದ ಹಂದಿ ಮನೆ, ಬರಡು ಹಂದಿ ಮನೆಯಿಂದ ದೂರವಿರಬೇಕು. ಸಣ್ಣ ಹಂದಿ ಮರಿಗಳು ತಾಯಿಯ ಕೆಚ್ಚಲಿನಿಂದ ಹಾಲು ಕುಡಿಯುವಾಗ, ತಾಯಿಯಿಂದ ತುಳಿತಕ್ಕೆ ಒಳಗಾಗದಂತೆ 1 ಅಥವಾ 2 ಸಾಲಿನ ವಿಭಾಗಗಳು ಭೂಮಿಯಿಂದ 2.5 ಸೆ.ಮಿ. ಎತ್ತರದಲ್ಲಿ ರೇಲಗಾರ್ಡ್ ಹಾಕಬೇಕು. ಹಂದಿಗಳ ಮನೆಯಲ್ಲಿ ಸ್ವಚ್ಚತೆ ಮತ್ತು ಸುಚಿತ್ವ ಕಾಪಾಡಲು ನೆಲ ಹಾಸಿಗೆ ತೊಳೆದ ನಂತರ ನೀರು ಹಾದು ಹೋಗಲು ಹಿಂದುಗಡೆ ಕಾಲುವೆ ನಿರ್ಮಿಸಬೇಕು. ಬೀಜದ ಹಂದಿಗಳನ್ನು ಒಂದು ಕೊಠಡಿಯಲ್ಲಿ ಒಂದನ್ನು ಮಾತ್ರ ಇಡಬೇಕು. ಬೆಳೆಯುತ್ತಿರುವ ಮತ್ತು ಗರ್ಭಧರಿಸಿಲ್ಲದ ಹಂದಿಗಳನ್ನು ಪ್ರತಿ ಒಂದು ಕೊಠಡಿಯಲ್ಲಿ 3 ರಿಂದ 10 ಮಾತ್ರ ಇಡಬೇಕು. 8 ವಾರದಿಂದ 6 ತಿಂಗಳ ವಯಸ್ಸಿನ ಹಂದಿಗಳನ್ನು ಒಂದು ಕೊಠಡಿಯಲ್ಲಿ 5-10 ಹಂದಿಗಳು ಇಡಬಹುದು. ಇದು ಕೊಠಡಿಯ ವಿಸ್ತೀರ್ಣಕ್ಕೆ ಅನುಗುಣವಾಗಿರಬೇಕು.

ಹಂದಿಗಳ ಸಂತತಿ
ಸಂತಾನಕ್ಕಗಿ ಆರಿಸುವ ಹಂದಿ ತಾನು ಈಯುವ ಮರಿಗಳನ್ನು ಸಾಕುವ ಸಾಮಥ್ರ್ಯ ಹೊಂದಿರಬೇಕು. ಹಾಲು ಉಣಿಸಲು ವಿಶಾಲವಾದ ಕೆಚ್ಚಲಿರಬೇಕು. ಹೆಣ್ಣು ಹಂದಿ 6 ತಿಂಗಳ ವಯಸ್ಸಿಗೆ ಬೆದೆ ಬಂದರೂ ಅದನ್ನು ಒಂದು ವರ್ಷವಾದಾಗ ಮಾತ್ರ ಸಂತತಿಗಾಗಿ ಬಿಡಬೇಕು. ಬೆದೆ ಕಾಲ 2-3 ದಿನಗಳಿರುತ್ತದೆ. ಬೆದೆಯ ಎರಡನೇ ದಿನ ಗಂಡು ಹಂದಿ ಜೊತೆ ಬಿಡಬೇಕು. ಹಂದಿಯ ಗರ್ಭದ ಅವಧಿ ಮೂರುವರೆ ತಿಂಗಳು. ಹಂದಿ ಮರಿಗಳು 2-21/2 ತಿಂಗಳು ತಾಯಿ ಹಾಲನ್ನು ಕುಡಿಯುತ್ತವೆ. ಸಂತಾನೋತ್ಪತ್ತಿ ಸಂಧರ್ಭದಲ್ಲಿ ಗಂಡು ಹಂದಿಯನ್ನು ಒಂದು ಹೆಣ್ಣು ಹಂದಿಯೊಡನೆ ಮಾತ್ರ ಬಿಡಬೇಕು. ಮರಿಗಳನ್ನು 6 ತಿಂಗಳವರೆಗೆ ಸಾಕಿದ ಮೇಲೆ ಮಾರಬಹುದು.
ಗರ್ಭಧರಿಸಿದ ಹಂದಿಯ ಪಾಲನೆ
ಹಂದಿಗೆ ಗರ್ಭ ಕಟ್ಟಿಸಿದ ದಿನಾಂಕ ಬರೆದಿಡುವುದರಿಂದ ಮರಿ ಹಾಕುವ ದಿನಾಂಕ ಕಂಡುಕೊಳ್ಳಲು ಸುಲಭವಾಗುತ್ತದೆ. ಹಂದಿಗಳ ಸರಾಸರಿ ಗರ್ಭಾವಸ್ಥೆಯ ಅವಧಿ 112 ರಿಂದ 116 ದಿವಸಗಳು. ಗರ್ಭಧರಿಸಿದ ಹಂದಿಗಳನ್ನು ಕಂದ (ಗರ್ಭಪಾತ) ಹಾಕಿದ ಹಂದಿಗಳೊಂದಿಗೆ ಬೆರೆಸಬಾರದು. ಅವುಗಳಿಗೆ ಗಾಬರಿ ಪಡಿಸಬಾರದು, ಹೊಡೆಯಬಾರದು, ಒಂದು ಹಂದಿ ಇನ್ನೊಂದರೊಂದಿಗೆ ಜಗಳ ಆಡುವುದಕ್ಕೆ ಅವಕಾಶ ಕೊಡಬಾರದು. ಗರ್ಭಧರಿಸಿದ ಹಂದಿಗಳಿಗೆ ಮರಿಹಾಕುವ 2-3 ವಾರಗಳ ಮೊದಲು ಜಂತುನಾಶಕ ಔಷಧಿ ಕುಡಿಸಬೇಕು. ದೇಹ, ಕೆಚ್ಚಲು ಮತ್ತು ಕೊಳ್ಳಗಳ (ಸಂದಿಗಳ) ಮಧ್ಯೆ ಸೇರಿಕೊಂಡಿರುವ ಹೊಲಸನ್ನು ಸಾಬೂನಿನ ನೀರಿನಿಂದ ತೊಳೆದು ಮರಿ ಹಾಕುವ ಮನೆಗೆ 10 ದಿನ ಮೊದಲು ಸೇರಿಸಬೇಕು. ಹಂದಿಯ ಜಾಸ್ತಿ ಬೆಳೆದ ಗೊರಸು ಕತ್ತರಿಸಬೇಕು. ಇದರಿಂದ ಮರಿಗಳು ತಾಯಿಯ ತುಳಿತಕ್ಕೊಳಗಾದಾಗ ಹೆಚ್ಚು ಗಾಯವಾಗುವುದಿಲ್ಲ. ಮರಿ ಹಾಕುವ ಹಂದಿಗೆ ಸುಲಭವಾಗುವುದಕ್ಕೆ ಗೋಡೆಯಿಂದ ಅರ್ಧ ಅಡಿ ಜಾಗ ಬಿಟ್ಟು ಕಬ್ಬಿಣದ ಪೈಪಿನ (ಫೆರೋಯಿಂಗ ಕ್ರೇಟ್) ರಕ್ಷಣಾ ಕಂಬಿಗಳನ್ನು ಹೇರ್ ಪಿನ್ ಮಾದರಿಯಲ್ಲಿ ಬಗ್ಗಿಸಿ ಭೂಮಿಯಲ್ಲಿ 15 ರಿಂದ 20 ಸೆ.ಮಿ. ಆಳವಾಗಿ ಹೂಳಬೇಕು. ಇದರಿಂದ ಹಂದಿ ಮರಿಗಳು ತಾಯಿ ತುಳಿತಕ್ಕೆ ಸಿಕ್ಕಿ ಒದ್ದಾಡುವುದನ್ನು ತಪ್ಪಿಸಬಹುದು. ಮರಿ ಹಾಕುವ ಹಂದಿ ಮನೆ ನಿರ್ಜಂತುಗೊಳಿಸಲು ಶೇಕಡಾ 2 ರ ಫಿನಾಲ ದ್ರಾವಣ ಸಿಂಪರಣೆ ಮಾಡಿ, ಒಂದು ವಾರದ ಕಾಲ ಖಾಲಿ ಬಿಡಬೇಕು. ಮರಿ ಹಾಕುವ ಲಕ್ಷಣಗಳಾದ ಮೊಲೆತೊಟ್ಟಿನಲ್ಲಿ ಹಾಲು ಶೇಕರಣೆಗೊಂಡಿದ್ದು ಕಾಣಿಸಿಕೊಂಡಾಗ ದಿನದ 24 ಗಂಟೆಗಳ ಕಾಲ ಮರಿ ಹಾಕುವ ಕಾರ್ಯದ ಮೇಲೆ ನಿಗಾವಹಿಸಿ. ಅಶಕ್ತ ಮರಿಗಳಿಗೆ ತಾಯಿಯಿಂದ ಹಾಲು ಕುಡಿಯಲು ಸಹಾಯ ಮಾಡಬೇಕು. ಉಗುರು ಬೆಚ್ಚನೆಯ ನೀರಿನಿಂದ ಮರಿಹಾಕಿದ ಹಂದಿಯನ್ನು ಸ್ವಚ್ಚಗೊಳಿಸಬೇಕು. ಮಾಸಚೀಲ, ಸತ್ತ ಮರಿ, ಹೊಲಸಾಗಿರುವ ಮೇವಿನ ಹಾಸಿಗೆ ತೆಗೆದು ಭೂಮಿಯಲ್ಲಿ ಹೂಳಬೇಕು. ಮರಿ ಹಾಕಿದ ಹಂದಿಗೆ ನಿಗದಿ ಪಡಿಸಿದ ಪೂರ್ಣ ಪ್ರಮಾಣದ ದಾಣಿ ಮಿಶ್ರಣ ಮೊದಲನೇ ಒಂದು ವಾರದಲ್ಲಿ ಕೊಡಬಾರದು. ಹಂತ ಹಂತವಾಗಿ ದಾಣಿ ಮಿಶ್ರಣ ಪ್ರಮಾಣವನ್ನು ಹೆಚ್ಚಿಸಬೇಕು. ಇದರಿಂದ ಮರಿಗಳಲ್ಲಿ ಬೇಧಿ ಪ್ರಮಾಣ ತಗ್ಗಿಸಬಹುದು. ಹಂದಿಗಳು ಮರಿ ಹಾಕುವ ಮನೆಯಲ್ಲಿ ಹುಲ್ಲಿನ ಹಾಸನ್ನು ಒದಗಿಸಬೇಕು.

ಹಂದಿ ಮರಿಗಳ ಪಾಲನೆ
ಹಂದಿ ಮರಿಗಳು ಹುಟ್ಟಿದ ಕೂಡಲೆ ಅದರ ಮೂಗು, ಬಾಯಿ, ಕಣ್ಣು ಮತ್ತು ಕಿವಿಗಳಿಂದ ಪೆÇರೆ ಲೊಳೆಯನ್ನು ತೆಗೆದು ಬಟ್ಟೆ ಅಥವಾ ಗೋಣಿಚೀಲದಿಂದ ಮೈಯನ್ನು ಒರಸಿ ಒಣಗಿಸಬೇಕು. ಹೊಕ್ಕಳ ಹುರಿಯನ್ನು ದೇಹದಿಂದ 3 ಸೆ.ಮಿ. ಬಿಟ್ಟು ತುಕ್ಕು ರಹಿತ ಹರಿತವಾದ ಉಪಕರಣದಿಂದ ಕತ್ತರಿಸಬೇಕು. ನಂತರ ಆ ಸ್ಥಳಕ್ಕೆ ಟಿಂಕ್ಚರ್ ಆಯೋಡಿನ್ ದ್ರಾವಣವನ್ನು ಲೇಪಿಸಿ, ದಾರದಿಂದ ಕಟ್ಟಬೇಕು. ಮರಿಗಳಿಗೆ ಚಳಿಯಿಂದ ರಕ್ಷಣೆ ನೀಡಲು ಒಂದು ವಿದ್ಯುತ್ ದೀಪದ ಉಷ್ಣತೆ ನೀಡಲು ವ್ಯವಸ್ಥೆ ಮಾಡಬೇಕು. ಹುಟ್ಟಿದ ಮರಿಗಳಿಗೆ ಸಾಧ್ಯವಾದಷ್ಟು ಬೇಗನೆ ಗಿಣ್ಣ ಹಾಲು ಕುಡಿಸುವುದರಿಂದ ರೋಗ ನಿರೋಧಕ ಶಕ್ತಿ ನೀಡಲು ಸಹಾಯವಾಗುತ್ತದೆ. ಗಿಣ್ಣದ ಹಾಲು ಲಭ್ಯವಿಲ್ಲದಾಗ ಬದಲಿ ಗಿಣ್ಣದ ಹಾಲು ತಯಾರಿಸಲು ಒಂದು ಮೊಟ್ಟೆಯ ಹಳದಿಯಿರುವ ಭಾಗ ಹಾಗೂ ಆಕಳ ಹಾಲು 1 ಕಿ.ಗ್ರಾಂ ಕಾಯಿಸಿ ಆರಿಸಿದ ಹಾಲಿನಲ್ಲಿ ಮಿಶ್ರಣ ಮಾಡಿ ಕುಡಿಸುವುದು. ಮರಿ ಹಂದಿಗಳನ್ನು ಗುರುತಿಸಲು ಕಿವಿಯ ವಿವಿಧ ಸ್ಥಳಗಳಲ್ಲಿ ಕತ್ತರಿಸಿ ಸಂಖ್ಯೆಗಳನ್ನು ನೀಡುವುದು. ಹಂದಿ ಮರಿ ಹುಟ್ಟಿದಾಗ 4 ಜೊತೆ ಸೂಜಿ ಹಲ್ಲು ಇರುತ್ತವೆ. ಸೂಜಿ ಹಲ್ಲುಗಳು ತಾಯಿ ಕೆಚ್ಚಲು ಮತ್ತು ಮೊಲೆ ತೊಟ್ಟಿಗೆ ಗಾಯಗೊಳಿಸುವುದರಿಂದ ಇವುಗಳನ್ನು ಹುಟ್ಟಿದ ಮೊದಲನೆ ವಾರದಲ್ಲಿ ವಸಡಿಗೆ ಗಾಯ ಆಗದಂತೆ ಕತ್ತರಿಸಿ ತೆಗೆಯಬೇಕು.
ಹಂದಿಯ ಪಾಲನೆ
ಪ್ರತಿದಿನ ನಿಗದಿತ ಸಮಯದಲ್ಲಿ ಆಹಾರ ಒದಗಿಸಬೇಕು. ಗೊದಲಿಯಲ್ಲಿ ಉಳಿದ ಆಹಾರ ತೆಗೆದು, ಗೊದಲಿ ಸ್ವಚ್ಚಪಡಿಸಿ ನಂತರ ತಾಜ ಆಹಾರ ಕೊಡಬೇಕು. ಆಹಾರ ಸೇವನೆ ಮಾಡುವಾಗ ಎಲ್ಲ ಹಂದಿಗಳ ನಿಗಾ ಇಡಬೇಕು. ಅಸ್ವಸ್ಥ ಹಂದಿಗಳನ್ನು ಹಿಂಡಿನಿಂದ ಬೇರ್ಪಡಿಸಬೇಕು. ಗಂಡು : ಹೆಣ್ಣುಗಳ ಅನುಪಾತ 1:10 ಇರಬೇಕು. ಗಂಡು ಹಂದಿಗೆ ಸಂವರ್ಧನೆ (ಃಡಿeeಜiಟಿg) ಗೆ ಮೊದಲು ಆಹಾರ ಕೊಡಬಾರದು. ನಿಯಮಿತ ವ್ಯಾಯಾಮದಿಂದ ಹಂದಿಗಳು ಚುರುಕಾಗಿರುತ್ತವೆ. ಸಲಗವನ್ನು ವಾರದಲ್ಲಿ ಎರಡು ಸಲ ಮಾತ್ರ ಸಂಕೀರ್ಣ ಕ್ರಿಯೆಗೆ ಬಳಸಬೇಕು. ದೇಹದ ತೂಕ ಸಮವಾಗಿ ಇರುವ ಹಂದಿಗಳನ್ನು ಗುಂಪಾಗಿ ವಿಂಗಡಿಸಬೇಕು. ಬೀಜದ ಹಂದಿ ಜೊತೆ ಗರ್ಭಧರಿಸಿದ ಹಂದಿಗಳನ್ನು ಇಡಬಾರದು. ಮರಿ ಹಾಕುವ 4 ರಿಂದ 6 ದಿವಸಗಳ ಮೊದಲು ಹಂದಿಯನ್ನು ಪ್ರತ್ಯೇಕವಾದ ಕೊಠಡಿಗೆ ಬದಲಾಯಿಸಬೇಕು. ಹಂದಿ ಮರಿ ಹುಟ್ಟಿದ 4 ನೇ ವಾರಗಳ ನಂತರ 3 ತಿಂಗಳಿಗೊಮ್ಮೆ ಜಂತು ಹುಳುಗಳ ನಾಶ ಮಾಡುವ ಔಷಧ ಕುಡಿಸಬೇಕು. ಕಬ್ಬಿಣದ ಸಲ್ಫೇಟ್ ದ್ರಾವಣವನ್ನು ಕಾಕಂಬಿಯೊಂದಿಗೆ ಅಥವ ಬೆಲ್ಲದ ನೀರಿನೊಂದಿಗೆ ಬೆರೆಸಿ ಹಂದಿಯ ಮೊಲೆಗಳಿಗೆ ಲೇಪನ ಮಾಡಿ ಮರಿಗಳನ್ನು ಹಾಲು ಕುಡಿಯಲು ಬಿಡುವುದರಿಂದ ರಕ್ತಹೀನತೆಯಿಂದ ಸಾಯುವ ಮರಿಗಳ ಪ್ರಮಾಣ ಕಡಿಮೆ ಮಾಡಬಹುದು. ನಿಗದಿತ ವೇಳೆಯಲ್ಲಿ ಕ್ರಿಮಿನಾಶಕ ಸಿಂಪರಣೆಯಿಂದ ಪರೋಪಜೀವಿಗಳನ್ನು ನಿಯಂತ್ರಿಸಬಹುದು.

ಹಂದಿ ಆಹಾರ
ಹಂದಿಯ ಸಾಕಣೆಯಲ್ಲಿ ತಗಲುವ ಒಟ್ಟು ವೆಚ್ಚದಲ್ಲಿ ಶೇಕಡಾ 70 ರಿಂದ 80 ಭಾಗ ಆಹಾರಕ್ಕಾಗಿ ಖರ್ಚಾಗುತ್ತದೆ. ಹಂದಿ ಸಾಕಣೆಯಲ್ಲಿ ತೊಡಗುವವರು ಆಹಾರದ ವೆಚ್ಚವನ್ನು ಕಡಿಮೆ ಮಾಡಿ ಹೆಚ್ಚು ನಿವ್ವಳ ಲಾಭ ಸಂಪಾದಿಸಲು ಸುಲಭ ದರದಲ್ಲಿ ಸ್ಥಳೀಯವಾಗಿ ದೊರೆಯುವ ಆಹಾರ ಪದಾರ್ಥಗಳನ್ನೇ ಹಂದಿಯ ಆಹಾರವಾಗಿ ಉಪಯೋಗಿಸಬೇಕು. ಹಂದಿಗಳನ್ನು ಸರ್ವಭಕ್ಷಕ ಪ್ರಾಣಿಗಳೆಂದು ಕರೆಯಬಹುದು. ಏಕೆಂದರೆ, ಇವು ಸಸ್ಯಜನ್ಯ ಹಾಗೂ ಪ್ರಾಣಿಜನ್ಯ ಆಹಾರ ಪದಾರ್ಥಗಳೆರಡನ್ನೂ ತಿನ್ನುತ್ತವೆ ಆದರೆ ಹಸು, ಎಮ್ಮೆ, ಕುರಿ, ಮೇಕೆಗಳು ತಿನ್ನುವ ಹೆಚ್ಚು ನಾರಿನಂಶವಿರುವ ಆಹಾರವನ್ನು ಹಂದಿಗಳು ತಿಂದು ಜೀರ್ಣಮಾಡಿಕೊಳ್ಳುವ ಶಕ್ತಿ ಹೊಂದಿಲ್ಲ. ಆದ್ದರಿಂದ ಇವು ಕೋಳಿ ಮತ್ತು ಮನುಷ್ಯನು ತಿನ್ನುವ ಆಹಾರವನ್ನೇ ಅವಲಂಬಿಸಿರುತ್ತವೆ. ಹಂದಿಗಳಿಗೆ ಕೊಡುವ ಆಹಾರವನ್ನು ಎರಡು ಭಾಗಗಳಾಗಿ ವರ್ಗೀಕರಿಸಬಹುದು: ಸ್ಥೂಲ ಆಹಾರ ಮತ್ತು ಉತ್ಪಾದನಾ ಆಹಾರ.
ಸ್ಥೂಲ ಆಹಾರ
ಸ್ಥೂಲ ಆಹಾರವು ಶರೀರದ ದೈನಂದಿನ ಚಟುವಟಿಕೆಗಳಿಗೆ ಹಾಗೂ ಜೀವರಸಾಯನ ಕ್ರಿಯೆಗಳಿಗೆ ಅತಿ ಮುಖ್ಯ. ಈ ಆಹಾರದಲ್ಲಿ ಕಂಡುಬರುವ ಮುಖ್ಯ ಸಾಮಾಗ್ರಿಗಳೆಂದರೆ ಕಾಳು ಕಡಿಗಳು, ಕಟಾವಿನ ನಂತರ ಬರುವ ಚಿಗುರು ಮೇವು, ದ್ವಿದಳ ಧಾನ್ಯಗಳನ್ನು ಒಕ್ಕಣೆ ಮಾಡಿದನಂತರ ಉಳಿದ ಹೊಟ್ಟು, ಗೆಡ್ಡೆ-ಗೆಣಸು, ಕತ್ತಾಳೆ ಗೆಡ್ಡೆ, ಕಬ್ಬಿನ ತೊಂಡೆ, ಹುಣಿಸೇ ಬೀಜ, ಅಕ್ಕಿಯ ತೌಡು ಮತ್ತು ಗೋಧಿಯ ತೌಡು ಇತ್ಯಾದಿ.
ಈ ಆಹಾರಗಳಲ್ಲದೆ ಹೋಟೆಲ್, ಹಾಸ್ಟೆಲ್ ಹಾಗೂ ಅಡುಗೆ ಮನೆಯಿಂದ ದೊರೆಯುವ ಅಳಿದುಳಿದ ಆಹಾರ ಪದಾರ್ಥಗಳು, ತರಕಾರಿಗಳು ಹಾಗೂ ಊಟದ ನಂತರ ಉಳಿಯುವ ಆಹಾರ ಮತ್ತು ತರಕಾರಿ ಮಾರುಕಟ್ಟೆಯಿಂದ ಉಳಿಯುವ ಹಸಿರೆಲೆ, ಕಾಯಿ ಪಲ್ಲೆಗಳು, ಹಣ್ಣು ಹಂಪಲುಗಳು ಮತ್ತು ಹಣ್ಣಿನ ರಸದ ಅಂಗಡಿಯಿಂದ ಬರುವ ಅನೇಕ ಹಣ್ಣುಗಳ ಸಿಪ್ಪೆ ಹಾಗೂ ರಸ ತೆಗೆದುಳಿದ ಕಾಂಡ ಪದಾರ್ಥಗಳನ್ನು ಹಂದಿಗಳಿಗೆ ಕೊಡುವುದು ಒಳ್ಳೆಯದು. ಈ ಕ್ರಮ ಅನುಸರಿಸಿದರೆ ಹಂದಿಗಳ ಒಟ್ಟು ಆಹಾರದ ಶೇಕಡಾ 50 ಭಾಗ ಆಹಾರ ಬೇಡಿಕೆಯನ್ನು ಪೂರೈಸಬಹುದು. ಮಿಕ್ಕ ಆಹಾರವನ್ನು ಧಾನ್ಯ ಮಿಶ್ರಣದ ಮೂಲಕ ಕೊಡಬಹುದು. ಈ ಸ್ಥೂಲ ಆಹಾರ ಪದಾರ್ಥಗಳನ್ನು ಹಂದಿಗಳಿಗೆ ತಿನ್ನುವಷ್ಟು ಕೊಡಬೇಕು. ಹೆಚ್ಚಿನ ಉತ್ಪತ್ತಿಗೋಸ್ಕರ ನಿಯೋಜಿತವಾದ ಉತ್ಪಾದನಾ ಆಹಾರವನ್ನು ನಿಗದಿಪಡಿಸಿದ ಪ್ರಮಾಣದಲ್ಲಿ ಕೊಡಬೇಕು.

ಉತ್ಪಾದನಾ ಆಹಾರ
ಇದನ್ನು ಸಮತೋಲನ ಆಹಾರ ಅಥವಾ ಧಾನ್ಯ ಮಿಶ್ರಣವೆಂದೂ ಕರೆಯುತ್ತಾರೆ. ಉತ್ಪಾದನಾ ಆಹಾರದಲ್ಲಿ ನಾರಿನಾಂಶ ಶೇಕಡಾ 6 ಕ್ಕಿಂತ ಕಡಿಮೆ ಇರುತ್ತದೆ. ಸಸಾರಜನಕದ ಅಂಶ ಶೇಕಡಾ 16 ರಿಂದ 22 ಇರುತ್ತದೆ. ಈ ಆಹಾರವು ಹೆಚ್ಚು ಶಕ್ತಿಯುತವಾಗಿ ಹಾಗೂ ರುಚಿಕರವಾಗಿರುತ್ತದೆ. ಈ ಆಹಾರವನ್ನು ತಯಾರಿಸುವಾಗ ನಮ್ಮಲ್ಲಿ ದೊರೆಯುವ ಮೆಕ್ಕೆ ಜೋಳ, ಗೋಧಿ, ಸಜ್ಜೆ, ನವಣಿ, ರಾಗಿ, ಅಕ್ಕಿ ತೌಡು, ಗೋಧಿ ತೌಡು, ದ್ವಿದಳ ಧಾನ್ಯಗಳ ನುಚ್ಚು, ಕಡಲೆಕಾಯಿ ಹಿಂಡಿ, ಸೋಯಾ, ಅಗಸೆ ಹಿಂಡಿ, ಹತ್ತಿಕಾಳು ಹಿಂಡಿ, ಕುದುರೆ ಮಸಾಲೆ ಸೊಪ್ಪಿನ ಇಲ್ಲವೇ ಅಗಸೆ ಸೊಪ್ಪಿನ ಪುಡಿ, ಮೀನಿನ ಪುಡಿ, ಮೂಳೆಯ ಪುಡಿ ಜೀವಸತ್ವಗಳು, ಅಡಿಗೆ ಉಪ್ಪು ಹಾಗೂ ಇನ್ನಿತರ ಬೆಳವಣಿಗೆಯನ್ನು ಪ್ರೇರೇಪಿಸುವ ಮತ್ತು ಬೇಡದ ಸೂಕ್ಷ್ಮಾಣು ಜೀವಿಗಳ ವೃದ್ಧಿಯನ್ನು ತಡೆಗಟ್ಟುವ ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಬೆರೆಸಬೇಕು.

ವಿವಿಧ ರೀತಿಯ ಸಮತೋಲನ ಆಹಾರ ತಯಾರಿಕೆ (ಶೇಕಡಾವಾರು)
ವಿವರ ಮಾದರಿ 1 ಮಾದರಿ 2 ಮಾದರಿ 3
ಅ) ಮುಸುಕಿನ ಜೋಳ 60 50 35
ಆ) ಕಡಲೆಕಾಯಿ ಹಿಂಡಿ 20 20 20
ಇ) ಸೋಯಾ ಹಿಂಡಿ/ಮೀನಿನ ಪುಡಿ 8 5 5
ಈ) ಗೋಧಿ ಬೂಸ 9.5 22.5 37.5
ಉ) ಖನಿಜಾಂಶದ ಪುಡಿ 2.5 2.5 2.5
ಊ) ಜೀವಸತ್ವಗಳು + + +

ಹಂದಿಗೆ ತಗಲುವ ರೋಗಗಳು-ಮುಂಜಾಗ್ರತೆ ಕ್ರಮಗಳು.
ಹಂದಿ ಜಾತಿಯ ತಳಿಗಳು ರೋಗ ರುಜಿನಗಳಿಗೆ ಸಾಮಾನ್ಯವಾಗಿ ಉತ್ತಮ ತಡೆಯುವ ಸಾಮಥ್ರ್ಯವನ್ನು ಹೊಂದಿದ್ದು ಕಡಿಮೆ ಖರ್ಚಿನ ಲಸಿಕೆ ಹಾಗೂ ಔಷಧಿಯಿಂದ ಹೆಚ್ಚು ಉತ್ಪಾದನೆ ಮಾಡಬಲ್ಲವು. ವಿದೇಶಿ ತಳಿಗಳು ಕೂಡ ಅತೀ / ಲಘು ಉಷ್ಣದ ವಾತಾವರಣಗಳಿಗೆ ಹೊಂದಿಕೊಳ್ಳುವ ಸಾಮಥ್ರ್ಯವನ್ನು ಹೊಂದಿವೆ. ಸಾಕು ಹಂದಿಗಳಿಗೆ ರೋಗ ತಗಲದಂತೆ ಅವುಗಳ ಗೂಡನ್ನು ಸ್ವಚ್ಚವಾಗಿಡಬೇಕು. ತಿಂಡಿ, ತಿನಿಸುಗಳು ಸಾಧ್ಯವಾದಷ್ಟು ಶುದ್ದವಿರಬೇಕು. ಮುಖ್ಯವಾಗಿ ಜ್ವರ, ದೊಡ್ಡರೋಗ, ಕಾಲು ಬಾಯಿ ಜ್ವರ ತಗಲುತ್ತವೆ. ಇವೆಲ್ಲವುಗಳಿಗೆ ಲಸಿಕೆ ಹಾಕಿಸಬೇಕು, ಸಿಡುಬು, ಪ್ಲೇಗು ಹಂದಿಯನ್ನು ಬಾದಿಸುತ್ತವೆ. ರೋಗಗ್ರಸ್ತ ಹಂದಿಗಳನ್ನು ಆರೋಗ್ಯವಂತ ಹಂದಿಗಳಿಂದ ಬೇರೆ ಇಡಬೇಕು. ಹಂದಿಯ ಕೋಣೆಯಲ್ಲಿ ಕಜ್ಜಿ, ಹೇನು, ಜಿಗಟೆ, ಉಣ್ಣೆ ಕಂಡಲ್ಲಿ ಹತೋಟಿ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಹಂದಿ ಅಭಿವೃದ್ದಿ ಯೋಜನೆಗಳು ಹಾಗೂ ಉದ್ದೇಶಗಳು
ನಮ್ಮ ದೇಶ ಹಾಗೂ ರಾಜ್ಯದಲ್ಲಿ ಹಂದಿ ಅಭಿವೃದ್ದಿಗಾಗಿ ಯೋಜನೆಗಳನ್ನು ರೂಪಿಸಲಾಗಿದ್ದು. ಹಂದಿ ಸಾಕಲು ಆಶಿಸುವ ರೈತರಿಗೆ ಸರಕಾರಿ ಇಲಾಖೆಯಿಂದ ಉತ್ತಮ ತಳಿಯ ಮರಿಗಳನ್ನು ನಿಗದಿತ ಬೆಲೆಯಲ್ಲಿ ಸರಬರಾಜು ಮಾಡಲಾಗುತ್ತದೆ. ಸಾಕುವವರಿಗೆ ತಾಂತ್ರಿಕ ನೆರವು ಕೂಡ ಕೊಡಲಾಗುತ್ತದೆ. ಬ್ಯಾಂಕುಗಳು ಆರ್ಥಿಕ ಸಹಾಯವನ್ನು ಸಾಲರೂಪದಲ್ಲಿ ನೀಡುತ್ತದೆ.

ಉದ್ದೇಶಗಳು
ರಾಜ್ಯದಲ್ಲಿ ಹಂದಿ ಸಾಕಣೆ ಅಭಿವೃದ್ದಿ ಯೋಜನೆಯ ಮುಖ್ಯ ಉದ್ದೇಶಗಳು

  1. ಖಾಸಗಿಯಾಗಿದ್ದುಕೊಂಡು ಮರಿ ಮಾಡುವವರಿಗೆ ಉತ್ತಮ ನಿರ್ದಿಷ್ಟ ತಳಿಗಳನ್ನು ಒದಗಿಸುವುದು.
  2. ಕಡಿಮೆ ದರಗಳಲ್ಲಿ, ಹಂದಿಗಳನ್ನು ಸಾಕುವ ಉದ್ದೇಶಕ್ಕಾಗಿ ದುರ್ಬಲ ವರ್ಗದವರಿಗೆ ಒದಗಿಸುವುದು.
  3. ನಿರ್ದಿಷ್ಟ ತಳಿಯ ವಿದೇಶಿ ಗಂಡು ಹಂದಿಗಳನ್ನು ಸ್ಥಳೀಯ ತಳಿಗಳೊಂದಿಗೆ ಸಂವರ್ಧನೆಗಾಗಿ ರೈತರಿಗೆ ಒದಗಿಸುವುದು.
  4. ಸಾರ್ವಜನಿಕರಿಗೆ ಶುದ್ದವಾದ ಹಾಗೂ ಸಂಪೂರ್ಣವಾದ ಹಂದಿಯ ಮಾಂಸವನ್ನು ಒದಗಿಸುವುದು.
  5. ತಳಿ ಅಭಿವೃದ್ದಿಯಲ್ಲಿ ಆಸಕ್ತಿಯಿರುವ ರೈತ ಜನರಿಗೆ ಉಚಿತವಗಿ ಶಿಕ್ಷಣ ನೀಡುವುದು.
  6. ಹಂದಿ ಮರಿ ಹಾಕಿಸುವವರಿಗೆ ಅದರಲ್ಲಿ ಖಾಸಗಿ ಜನರಿಗೆ ವಿಸ್ತರಣಾ ಸೇವಾ ಸೌಲಭ್ಯವನ್ನು ನೀಡುವುದು.

ನಮ್ಮ ರಾಜ್ಯದಲ್ಲಿ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಒಳ್ಳೆಯ ವಿದೇಶಿ ತಳಿಗಳನ್ನು ಸಾಕಲಾಗುತ್ತಿದೆ. ಬೆಂಗಳೂರು ಬಳಿಯ ಹೆಸರುಘಟ್ಟ ಹಾಗೂ ಕೊಡಗಿನ ಕೂಡಿಗೆಗಳಲ್ಲಿ ತಳಿ ಸಂವರ್ಧನಾ ಅಥವಾ ಉತ್ಪಾದನಾ ಕೇಂದ್ರಗಳಿರುತ್ತವೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ, ಪಶುವೈದ್ಯಕೀಯ ಕಾಲೇಜಿನಲ್ಲಿ ಹಂದಿ ತಳಿ ಕೇಂದ್ರವಿರುತ್ತದೆ.

ಹಂದಿಗಳ ಮಾರುಕಟ್ಟೆ ಮತ್ತು ಆರ್ಥಿಕತೆ
ಉತ್ತಮವಾದ ಬೆಲೆಯು ಸಿಗುವ ಸಮಯಕ್ಕೆ ಹಂದಿಗಳು ಮಾರುಕಟ್ಟೆಗೆ ಸಿದ್ಧವಾಗುವಂತೆ ಬೆಳೆಸಬೇಕು. ಸರಿಯಾದ ರೀತಿಯಲ್ಲಿ ಆಹಾರ ಕೊಡುವುದರ ಜೊತೆಗೆ ರೋಗಗಳನ್ನು ನಿಯಂತ್ರಿಸುವುದರಿಂದ 6-8 ತಿಂಗಳಲ್ಲಿ ಹಂದಿಗಳು ಮಾರುಕಟ್ಟೆಗೆ ಸಿದ್ಧವಾಗುತ್ತವೆ. ಈ ವೇಳೆಗೆ ಸುಮಾರು 80-90 ಕಿ.ಗ್ರಾಂ ದೈಹಿಕ ತೂಕವನ್ನು ಗಳಿಸಬಲ್ಲವು.
ಮಾರುಕಟ್ಟೆಯಲ್ಲಿ ಹಂದಿಗಳಿಗೆ ಸಿಗುವ ಬೆಲೆಯು ಹಲವಾರು ಅಂಶಗಳನ್ನು ಅವಲಂಬಿಸಿದೆ. ಇವುಗಳಲ್ಲಿ ಹಂದಿಯ ಮಾಂಸದ ಗುಣಮಟ್ಟ , ಬೇಡಿಕೆ ಮತ್ತು ಮಾರುಕಟ್ಟೆಗೆ ಬರುವ ಹಂದಿಗಳ ಸಂಖ್ಯೆ ಮುಖ್ಯವಾದ ಅಂಶಗಳು
ಬದಲಾಗುತ್ತಿರುವ ಸನ್ನಿವೇಶಗಳಿಗೆ ಅನುಗುಣವಾಗಿ ಮಾಂಸವನ್ನು ಉತ್ಪಾದಿಸಬೇಕಾಗುತ್ತದೆ. ಅಂದರೆ ಹಿಂದಿನ ದಿನಗಳಲ್ಲಿ ಹೆಚ್ಚು ಕೊಬ್ಬು ಇರುವ ಮಾಂಸವನ್ನು ಬಯಸುತ್ತಿದ್ದ ಜನರು ಈಗ ಕಡಿಮೆ ಕೊಬ್ಬು ಇರುವಂತಹ ಮಾಂಸವನ್ನು ಇಷ್ಟಪಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಉತ್ಪಾದಕರು ಮಾಂಸದ ಗುಣಮಟ್ಟವನ್ನು ನಿಯಂತ್ರಿಸುವುದು ಮುಖ್ಯ. ಎಳೆಯ ವಯಸ್ಸಿನ ಹಂದಿಗಳಲ್ಲಿ ಕೊಬ್ಬಿನ ಅಂಶ ಕಡಿಮೆ ಇರುತ್ತದೆ. ಮತ್ತು ವಯಸ್ಸಾದಂತೆ ಕೊಬ್ಬು ಶೇಖರಣೆ ಪ್ರಾರಂಭವಾಗುತ್ತದೆ. ಆದ್ದರಿಂದ ಸುಮಾರು 80-90 ಕಿ.ಗ್ರಾಂ ದೈಹಿಕ ತೂಕವಿರುವ ಹಂದಿಗಳು ಇಂದಿನ ಬೇಡಿಕೆಗೆ ತಕ್ಕ ಮಾಂಸವನ್ನು ಪೂರೈಸಬಲ್ಲವು. ಇದಲ್ಲದೆ ಹಂದಿಗಳಿಗೆ ವಯಸ್ಸಾದಂತೆ ಪ್ರತಿ ಕಿ.ಗ್ರಾಂ ಮಾಂಸದ ಉತ್ಪಾದನೆಗೆ ಬೇಕಾಗುವ ಆಹಾರದ ಪ್ರಮಾಣವೂ ಜಾಸ್ತಿಯಾಗುತ್ತದೆ. ಆದ್ದರಿಂದ ಹಂದಿಗಳನ್ನು 6-8 ತಿಂಗಳ ವಯಸ್ಸಿನಲ್ಲಿ ಮಾರುವುದರಿಮದ ಬೇಡಿಕೆಗೆ ತಕ್ಕ ಮಾಂಸವನ್ನು ಪೂರೈಸಬಹುದಲ್ಲದೆ ಹೆಚ್ಚು ಲಾಭವನ್ನು ಗಳಿಸಬಹುದು.

ಡಾ|| ಸತೀಶ,ಜಿ.ಎಂ.,
ಸಹಾಯಕ ಪ್ರಾಧ್ಯಾಪಕರು
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ
ಮೊಬೈಲ್ ಸಂಖ್ಯೆ :- 94482 24595

error: Content is protected !!