ಸಾಗರದ ಶ್ರೀ ಮಾರಿಕಾಂಬ ಜಾತ್ರಾ ಪ್ರಯುಕ್ತ ಗುಬ್ಬಿಯ ಬಿಎಸ್‍ಆರ್ ನಾಟಕ ಕಂಪನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಗರ ವೃತ್ತಿರಂಗಭೂಮಿಯನ್ನು ಪ್ರಾಮುಖ್ಯತೆ ನೀಡುತ್ತ ಬಂದಿದೆ. ಕಲಾ ಪರಂಪರೆಯನ್ನು ನಿರಂತರವಾಗಿ ಪೋಷಿಸಿಕೊಂಡು ಬಂದಿದೆ. ಇಲ್ಲಿನ ಜಾತ್ರೆಗಳಲ್ಲಿ ಕಂಪನಿ ನಾಟಕಗಳು ಸದಾ ನಡೆಯುತ್ತಿದ್ದವು. ಗುಬ್ಬಿ ವೀರಣ್ಣನವರ ವಂಶಸ್ಥರು ಕನ್ನಡಿಗರ ಬಳಿಗೆ ನಾಟಕಗಳನ್ನು ಕೊಂಡೊಯ್ಯುತ್ತಿದ್ದಾರೆ ಎಂದು ತಿಳಿಸಿದರು.
ನಾನು ಬಾಲ್ಯದ ದಿನಗಳಲ್ಲಿ ಗುಬ್ಬಿ ವೀರಣ್ಣ ನಾಟಕಗಳನ್ನು ನೋಡಲು ಬರುತ್ತಿದ್ದೆ. ನಾಟಕವು ಪ್ರೇಕ್ಷಕರಿಂದ ತುಂಬಿ ಟಿಕೆಟ್ ಸಿಗುವುದು ಕಷ್ಟ ಆಗುತ್ತಿದ್ದ ದಿನಗಳಿದ್ದವು. ಕೊನೆಯ ಸಾಲಿನಲ್ಲಿ ಮಣ್ಣಿನ ದಿಣ್ಣೆಗಳಲ್ಲಿ ಕುಳಿತು ನಾಟಕ ನೋಡುತ್ತಿದ್ದೆ. ನಾಟಕಗಳಿಗೆ ಪ್ರೇಕ್ಷಕರು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.
ನಾಟಕ ಮನೋರಂಜನೆಗಾಗಿ ಮಾತ್ರವಲ್ಲದೇ ಬದುಕಿಗೆ ಪಾಠವನ್ನು ಕಲಿಸುತ್ತದೆ. ನಾಟಕದಲ್ಲಿ ಸಾಮಾಜಿಕ ಅಂಶಗಳನ್ನು ಜನರಿಗೆ ತಿಳಿಸುವ ಕೆಲಸ ಆಗುತ್ತಿದೆ. ವೃತ್ತಿ ರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿಗಳೆರಡು ಕನ್ನಡ ಭಾಷೆಯನ್ನು ಉಳಿಸುವಲ್ಲಿ ಚಳವಳಿಯನ್ನೇ ನಡೆಸಿದೆ ಎಂದು ತಿಳಿಸಿದರು.
ರಂಗ ಸಂಘಟಕ ಮೈಕಲ್ ಡಿಸೋಜಾ ಮಾತನಾಡಿ, ನಮ್ಮ ತಂದೆಯವರು ನಾಟಕ ಕಂಪನಿಗಳಲ್ಲಿ ತೊಡಗಿಸಿಕೊಂಡಿದ್ದರು. ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು. ಜಾತ್ರಾ ಸಂದರ್ಭದಲ್ಲಿ ನಾಟಕ ಕಂಪನಿಗಳನ್ನು ಕರೆಸಿದ್ದೇವೆ ಎಂದು ತಿಳಿಸಿದರು. ಶ್ರೀ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ಪ್ರಚಾರ ಸಮಿತಿಯ ಸಂಚಾಲಕ ರವಿ ನಾಯ್ಡು, ನಗರಸಭೆ ಸದಸ್ಯ ಲಿಂಗರಾಜು ಉಪಸ್ಥಿತರಿದ್ದರು.
–*—
ಗುಬ್ಬಿ ವೀರಣ್ಣ ಅವರ ಮರಿಮೊಮ್ಮಗ ಪ್ರಶಾಂತ್ ಗುಬ್ಬಿ ನೇತೃತ್ವದಲ್ಲಿ ಬಿ.ಎಸ್.ಆರ್.ನಾಟಕ ಸಂಘವು 13-14 ವರ್ಷಗಳಿಂದ ರಾಜ್ಯಾದ್ಯಂತ ನಾಟಕ ಪ್ರದರ್ಶನ ನೀಡುತ್ತ ಬರುತ್ತಿದೆ. ಅತ್ಯಂತ ಸಾಮಾಜಿಕ ಕಳಕಳಿಯುಳ್ಳ ಸಂದೇಶಗಳನ್ನು ಹಾಸ್ಯದ ಮೂಲಕ ನೀಡುತ್ತಿದೆ. ರಾಜಣ್ಣ ಜೇವರ್ಗಿ ರಚನೆಯ ಕಾಗಕ್ಕ ಗುಬ್ಬಕ್ಕ ನಾಟಕವು ಇತ್ತೀಚೆಗೆ ಬನಶಂಕರಿಯಲ್ಲಿ 45 ದಿನಗಳ ಕಾಲ ಅತ್ಯದ್ಭುತವಾಗಿ ಫುಲ್ ಹೌಸ್ ಪ್ರದರ್ಶನ ಕಂಡಿತ್ತು. ಹಾಸ್ಯಮಯ ನಾಟಕ ಕಾಗಕ್ಕ ಗುಬ್ಬಕ್ಕದಲ್ಲಿ ವೇದಮೂರ್ತಿ, ಮೃತ್ಯುಂಜಯ ಹಿರೇಮಠ, ಶ್ಯಾಮರಾವ್ ಬೋಸ್ಲೆ, ಹರೀಶ್, ಕುಮಾರ್, ರಾಘವೇಂದ್ರ, ಮಹಾಂತೇಶ್, ಅಂಬಿಕಾ, ಸುಜಾತಾ, ಪ್ರಿಯದರ್ಶಿನಿ, ರೇಣುಕಾ ಮತ್ತಿತರರು ಅಭಿನಯಿಸುತ್ತಿದ್ದಾರೆ. ಸಂಪೂರ್ಣ ಹಾಸ್ಯಮಯ ನಾಟಕ ಆಗಿರುವ “ಕಾಗಕ್ಕ ಗುಬ್ಬಕ್ಕ” ನೋಡುಗರ ಮೆಚ್ಚುಗೆ ಪಡೆಯುತ್ತಿದೆ.

error: Content is protected !!