ಶಿವಮೊಗ್ಗ, ಮಾ.27 ತಂತ್ರಜ್ಞಾನವನ್ನು ಬಳಸಿಕೊಂಡು ರಂಗಭೂಮಿಗೆ ಇನ್ನಷ್ಟು ಜೀವ ತುಂಬುವ ಕಾರ್ಯವನ್ನು ನಡೆಸುವ ಅಗತ್ಯವಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ.ಸಿದ್ರಾಮಣ್ಣ ಅವರು ಹೇಳಿದರು.
ವಿಶ್ವರಂಗ ಭೂಮಿ ದಿನಾಚರಣೆ ಅಂಗವಾಗಿ ಶಿವಮೊಗ್ಗ ರಂಗಾಯಣದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ಎಸ್.ಮಾಲತಿ ರಂಗೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾಂಸ್ಕøತಿಕ ರಂಗದಲ್ಲಿ ಇಡೀ ರಾಜ್ಯಕ್ಕೆ ಮಾರ್ಗದರ್ಶಕ ಸ್ಥಾನದಲ್ಲಿ ಶಿವಮೊಗ್ಗ ಜಿಲ್ಲೆಯಿದೆ. ಬದಲಾದ ಪರಿಸ್ಥಿತಿಯಲ್ಲಿ ರಂಗಕರ್ಮಿಗಳು ಸಂಕಷ್ಟದಲ್ಲಿದ್ದು, ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಲಾವಿದರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಮಾತ್ರವಲ್ಲದೆ ಸಾರ್ವಜನಿಕರು ಸಹ ಕೈಜೋಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಚಿಂತನೆ ನಡೆಯಬೇಕಾಗಿದೆ ಎಂದು ಹೇಳಿದರು.
ರಂಗಾಯಣ ನಿರ್ದೇಶಕ ಸಂದೇಶ ಜವಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಎಸ್. ಮಾಲತಿ ಅವರ ನೆನಪಿನಲ್ಲಿ ಈ ಬಾರಿ ವಿಶ್ವ ರಂಗಭೂಮಿ ದಿನಾಚರಣೆ ಆಯೋಜಿಸಲಾಗಿದೆ. ಮೂರು ದಿನಗಳ ಕಾಲ ನಾಟಕ ಪ್ರದರ್ಶನಗಳು, ರಂಗಗೀತೆಗಳ ಗಾಯನ, ವಿಚಾರಗೋಷ್ಟಿಗಳು ಮಾತ್ರವಲ್ಲದೆ ರಂಗ ಕಲಾವಿದರ ಸಮಾವೇಶವನ್ನು ಸಹ ಆಯೋಜಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಎಸ್.ಮಾಲತಿ ಅವರ ನೆನಪಿನಲ್ಲಿ ಜಯಪ್ರಕಾಶ್ ಮಾವಿನಕುಳಿ ಅವರು ಸಂಪಾದಿಸಿರುವ `ಬಹುಮುಖಿ’ ಪುಸ್ತಕವನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಪ್ರೊ. ಎಸ್.ಸಿ.ಗೌರಿಶಂಕರ್ ಅವರು ಎಸ್.ಮಾಲತಿ ಕುರಿತು ಮಾತನಾಡಿದರು.
ಗಮನ ಸೆಳೆದ ಕಲಾವಿದರ ಮೆರವಣಿಗೆ: ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಶಿವಪ್ಪ ನಾಯಕ ವೃತ್ತದಿಂದ ಆರಂಭವಾದ ಕಲಾವಿದರ ಮೆರವಣಿಗೆ ಗಮನ ಸೆಳೆಯಿತು. ವಿವಿಧ ವೇಷಭೂಷಣಗಳನ್ನು ಧರಿಸಿದ ಕಲಾವಿದರು ವಾದ್ಯ ಪರಿಕರಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿ ಶಿವಮೊಗ್ಗ ರಂಗಾಯಣದವರೆಗೆ ಆಗಮಿಸಿದರು.
ಸಭಾ ಕಾರ್ಯಕ್ರಮದ ಬಳಿಕ ರಂಗ ಪರಿವರ್ತನ ರಂಗಸಮಾಜ ಮೈಸೂರು ತಂಡದಿಂದ ಬೆಟ್ಟದ ಜೀವ ನಾಟಕ ಪ್ರದರ್ಶನ ನಡೆಯಿತು.
ರಂಗ ಸಮಾಜದ ಸದಸ್ಯ ಹಾಲಸ್ವಾಮಿ, ಶಿವಮೊಗ್ಗ ಕಲಾವಿದರ ಒಕ್ಕೂಟದ ಅಧ್ಯಕ್ಷ ಕೊಟ್ರಪ್ಪ ಹಿರೆಮಾಗಡಿ, ರಂಗಕರ್ಮಿ ಪುರುಷೋತ್ತಮ ತಲವಾಟ ಅವರು ಉಪಸ್ಥಿತರಿದ್ದರು. ಶಿವಮೊಗ್ಗ ರಂಗಾಯಣ ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಧನ್ಯವಾದ ಸಲ್ಲಿಸಿದರು. ಮಂಜುನಾಥ ಸ್ವಾಮಿ ಅವರು ಕಾರ್ಯಕ್ರಮ ನಿರೂಪಿಸಿದರು.