ಶಿವಮೊಗ್ಗ ಆಗಸ್ಟ್ 04 : ರಸ್ತೆ ಸುರಕ್ಷತಾ ನಿಯಮಗಳ ಸಮರ್ಪಕ ಪಾಲನೆಯಿಂದ ಅಪಘಾತಗಳನ್ನು ತಪ್ಪಿಸಬಹುದಾಗಿದ್ದು, ವಿದ್ಯಾರ್ಥಿಗಳು, ಹದಿಹರೆಯದ ಯುವಜನತೆಗೆ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕೆಂದು ಜಿ.ಪಂ ಸಿಇಓ ಎಂ.ಎಲ್.ವೈಶಾಲಿ ತಿಳಿಸಿದರು.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸಾರಿಗೆ ಇಲಾಖೆ ವತಿಯಿಂದ ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ‘ರಸ್ತೆ ಸುರಕ್ಷತಾ ಆಂದೋಲನ’ ಕುರಿತಾದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿ, ಪ್ರೌಢಶಾಲಾ ಶಿಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ನಿಯಮಗಳ ಕುರಿತಾದ ಮಾಹಿತಿ ರವಾನೆ ಮಾಡುವ ಉದ್ದೇಶದಿಂದ ಈ ಕಾರ್ಯಾಗಾರ ನಡೆಸುತ್ತಿರುವುದು ಉತ್ತಮ ಕಾರ್ಯ ಎಂದರು.
ವಾಹನ ಚಾಲನೆ ವೇಳೆ ಎಲ್ಲರೂ ಜಾಗೃತರಾಗಿರಬೇಕು. ಹಾಗೂ ಎಲ್ಲಾ ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಚಾಲನೆಯಲ್ಲಿನ ನಿರ್ಲಕ್ಷ್ಯದಿಂದಾಗಿ ಅಪಘಾತಗಳು ಸಂಭವಿಸಿ ಹೆಚ್ಚಿನ ಸಾವು ನೋವುಗಳಾಗುತ್ತಿವೆ. ನಾವು ಎಚ್ಚರವಾಗಿದ್ದರೂ ಎದುರಿನ ಚಾಲಕ ಸರಿಯಿಲ್ಲದಿದ್ದರೂ ಅಪಘಾತವಾಗುವ ಸಂಭವ ಹೆಚ್ಚಿರುವುದರಿಂದ ಎಲ್ಲ ರೀತಿಯ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು.
ಕೆಲ ಕಾಲೇಜು ವಿದ್ಯಾರ್ಥಿಗಳು, ಹದಿವಯಸ್ಸಿನ ಮಕ್ಕಳು ಅತಿ ವೇಗವಾಗಿ ವಾಹನ ಚಾಲನೆ ಮಾಡುವುದು, ಟ್ರಾಫಿಕ್ ಸೂಚನೆಗಳನ್ನು ಉಲ್ಲಂಘಿಸುವುದು ಸೇರಿದಂತೆ ನಿಯಮಗಳನ್ನು ಪಾಲಿಸದೇ ಅಪಘಾತಕ್ಕೀಡಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಇದನ್ನು ತಪ್ಪಿಸಲು ಪ್ರೌಢಶಾಲಾ ಹಂತದಿಂದಲೇ ಶಿಕ್ಷಕರು ವಿದ್ಯಾರ್ಥಿಗಳಿಗೆ, ಶಾಲಾ ಬಸ್ಸುಗಳ ಚಾಲಕರಿಗೆ ಸಂಚಾರಿ ನಿಯಮಗಳ ಕುರಿತು ಮಾಹಿತಿ ರವಾನೆ ಮಾಡುತ್ತಿರುವುದು ಉತ್ತಮ ಪ್ರಯತ್ನವಾಗಿದೆ. ಈ ರೀತಿಯ ಪ್ರಯತ್ನದಿಂದಾಗಿ ಸುರಕ್ಷಿತ ನಿಯಮಗಳ ಶಿಸ್ತುಬದ್ದ ಪಾಲನೆ ಸಾಧ್ಯವಾಗಲಿದೆ ಎಂದು ಆಶಿಸಿದರು.
ಸಾರಿಗೆ ಅಧಿಕಾರಿ ಜೆ.ಪಿ.ಗಂಗಾಧರ್ ಮಾತನಾಡಿ, ನಿಮ್ಮ ರಸ್ತೆ ಸುರಕ್ಷತಾ ಕ್ರಮಗಳು ನಿಮ್ಮ ಕುಟುಂಬದ ರಕ್ಷಣೆ ಮಾಡುತ್ತದೆ. ಆದ್ದರಿಂದ ಯಾರೇ ಸ್ವಯಂ ಚಾಲಿತ ವಾಹನ ಓಡಿಸುವವರು ತಮ್ಮ ಅಮೂಲ್ಯ ಜೀವದ ಬಗ್ಗೆ ಹಾಗೂ ರಸ್ತೆಯಲ್ಲಿರುವವರ ಬಗ್ಗೆ ಅತ್ಯಂತ ಜಾಗರೂಕರಾಗಿರಬೇಕು. ಮಕ್ಕಳನ್ನು ಸರಿದಾರಿಗೆ ತರುವ ಶಕ್ತಿ ಶಾಲಾ ಶಿಕ್ಷಕರಲ್ಲಿದೆ. ಆದ್ದರಿಂದ ಇಂದು ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ರಸ್ತೆ ಸುರಕ್ಷತೆ ನಿಯಮಗಳ ಕುರಿತು ಈ ಕಾರ್ಯಾಗಾರ ನಡೆಸಲಾಗುತ್ತಿದೆ. ಶಿಕ್ಷಕರು ಬೋಧನೆಯೊಂದಿಗೆ ಈ ನಿಯಮಗಳ ಕುರಿತು ಸಹ ಮಕ್ಕಳಿಗೆ ತಿಳಿ ಹೇಳಿದಲ್ಲಿ ಬಹಳ ಅನುಕೂಲವಾಗಲಿದೆ.
ಶಾಲಾ ಶಿಕ್ಷಕರು ಮಕ್ಕಳು ಶಾಲೆಗೆ ಬೈಕ್ಗಳನ್ನು ತರುವುದಕ್ಕೆ ಕಡಿವಾಣ ಹಾಕಬೇಕು. ಹಾಗೂ ಪೋಷಕರಿಂದ ತಮ್ಮ ಮಕ್ಕಳಿಗೆ 18 ವರ್ಷ ತುಂಬುವವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ವಾಹನ ಓಡಿಸಲು ಬಿಡುವುದಿಲ್ಲವೆಂಬ ಲಿಖಿತ ಒಪ್ಪಿಗೆ ಪತ್ರ ಪಡೆಯಬೇಕು. ಸ್ವಯಂಚಾಲಿತ ವಾಹನ ಓಡಿಸುವ ಯಾವುದೇ ತಮ್ಮ ಮತ್ತು ಇತರರ ಅಮೂಲ್ಯ ಜೀವನ ಕಾಪಾಡಲು ವಾಹನ ಚಾಲನೆ ಪರವಾನಗಿ, ವಿಮೆ, ಅರ್ಹತಾ ಪತ್ರ, ವಾಯು ಮಾಲಿನ್ಯ ಪತ್ರವನ್ನು ಕಡ್ಡಾಯವಾಗಿ ತಮ್ಮ ಜೊತೆ ಹೊಂದಿರಬೇಕು. ಹೀಗೆ ಹೊಂದಿರುವವರು ಮಾತ್ರ ಅರ್ಹ ವಾಹನ ಚಾಲಕರು. ತಮ್ಮ ವಾಹನ ಚಾಲನೆ ದಾಖಲೆಗಳನ್ನು ಸಕಾಲದಲ್ಲಿ ಊರ್ಜಿತಗೊಳಿಸಬೇಕು. ಹಾಗೂ ಎಲ್ಲ ರೀತಿಯ ರಸ್ತೆ ಸುರಕ್ಷತಾ ನಿಯಮಗಳ ಪಾಲನೆಯೊಂದಿಗೆ ತಾಳ್ಮೆಯಿಂದ ವಾಹನ ಓಡಿಸಬೇಕೆಂದು ಕಿವಿಮಾತು ಹೇಳಿದರು.
ಸಮಗ್ರ ಶಿಕ್ಷಣ ಕರ್ನಾಟಕದ ಜಿಲ್ಲಾ ಯುವಜನ ಉಪ ಸಮನ್ವಯಾಧಿಕಾರಿ ಉಮಾ ಮಹೇಶ್ ಮಾತನಾಡಿ, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಆರ್ಟಿಓ ಇಲಾಖೆ ಅಧಿಕಾರಿ, ಸಿಬ್ಬಂದಿಗಳು, ಶಿವಮೊಗ್ಗ, ಭದ್ರಾವತಿ ತಾಲ್ಲೂಕಿನ ಪ್ರೌಢಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಜರಿದ್ದರು.
(ಫೋಟೊ ಇದೆ)