
ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ ಅಭಿಪ್ರಾಯ
ಶಿವಮೊಗ್ಗ : ವಯಸ್ಸು ದೇಹಕ್ಕಲ್ಲ, ಮನಸ್ಸಿಗೆ ಮಾತ್ರ, ಹಾಗಾಗಿ ನಿತ್ಯ ಮನಸ್ಸಿಗೆ ಮುದ ನೀಡುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ದೇಹಾರೋಗ್ಯವನ್ನು ಕಾಪಾಡಿಕೊಳ್ಳುವಂತೆ ನಿವೃತ್ತ ನೌಕರರಿಗೆ ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ ಸಲಹೆ ನೀಡಿದರು.
ಸರ್ಜಿ ಫೌಂಡೇಶನ್, ಸರ್ಜಿ ಆಸ್ಪತ್ರೆಗಳ ಸಮೂಹ ಹಾಗೂ ಜಿಲ್ಲಾ ಸರಕಾರಿ ನಿವೃತ್ತ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ನಿವೃತ್ತ ನೌಕರರಿಗೆ ಶನಿವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಸರಕಾರದ ನಿಯಮಾನುಸಾರ ಸರಕಾರಿ ಸೇವೆಯಲ್ಲಿ 60 ರ ನಂತರ ನಿವೃತ್ತಿಯಷ್ಟೇ. ನಿವೃತ್ತಿ ಅನ್ನುವುದು ದೇಹಕ್ಕೆ ಸಂಬಂಧಿಸಿದ್ದೇ ಹೊರತು ಮನಸ್ಸಿಗಲ್ಲ. ಮನೆಯಲ್ಲಿಯೇ ನಿತ್ಯವೂ ಸಣ್ಣಪುಟ್ಟ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಬೇಸರ ಕಳೆದುಕೊಳ್ಳಬಹುದು, ಗಾರ್ಡನ್ನಲ್ಲಿ ಒಂದಷ್ಟು ಕೆಲಸ, ಪುಸ್ತಕ ಓದುವುದು, ಇಲ್ಲವೇ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು, ನಿಮಗೆ ವೃತ್ತಿ ಜೀವನದಲ್ಲಿದ್ದ ಅನುಭವವನ್ನು ಯುವ ಸಮೂಹಕ್ಕೆ , ಸಮಾಜಕ್ಕೆ ಧಾರೆ ಎರೆಯುವಂತಹ ಕೆಲಸ, ಕಾರ್ಯಗಳಲ್ಲಿ ತೊಡಗಿಕೊಂಡರೆ ಆರೋಗ್ಯ ಸದೃಢವಾಗಿರುತ್ತದೆ, ನೆಮ್ಮದಿಯೂ ಲಭಿಸುತ್ತದೆ ಎಂದರು.
ವರನಟ ಡಾ.ರಾಜ್ ಕುಮಾರ್ ಅವರು ತಮ 45 ನೇ ವಯಸ್ಸಿನಲ್ಲಿ ಹಾಡುಗಾರಿಕೆಯನ್ನು ಆರಂಭಿಸಿ, ಬಹುದೊಡ್ಡ ಸಾಧನೆ ಮಾಡುವ ಮೂಲಕ ಇಂದಿಗೂ ಚಿತ್ರ ರಸಿಕರ, ಸಂಗೀತ ಪ್ರಿಯರ ಜನಮಾನಸದಲ್ಲಿ ಉಳಿದಿದ್ದಾರೆ, ಈ ವಯಸ್ಸಿನಲ್ಲಿ ಹಾಡೋದು ಸಾಧ್ಯಾನಾ ಎಂದುಕೊಂಡಿದ್ದರೆ ಅದು ಸಾಧ್ಯವಿರುತ್ತಿರಲ್ಲ, ಹಾಗೆಯೇ ವಿಶ್ವದ ಶ್ರೇಷ್ಠ ವಿಜ್ಞಾನಿ, ಬಲ್್ಬ ಅನ್ನು ಕಂಡು ಹಿಡಿದ ಥಾಮಸ್ ಆಲ್ವಾ ಎಡಿಸನ್ ಅವರು ಕೂಡ, 64 ನೇ ವಯಸ್ಸಿನಲ್ಲಿ ತಮ್ಮ ಕಾರ್ಖಾನೆಗಳೆಲ್ಲವೂ ಬೆಂಕಿಗಾಹುತಿಯಾದಾಗ ಧೃತಿಗೆಡದೇ ಮತ್ತೆ ಕಾರ್ಖಾನೆಗಳನ್ನು ನಿರ್ಮಿಸುತ್ತಾರೆ. ನಿವೃತ್ತಿಯ ವಯಸ್ಸಾಗಿದೆ ಎಂದು ಸುಮ್ಮನೆ ಕುಳಿತಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ನಿವೃತ್ತಿಯ ನಂತರ ಮಾನಸಿಕ ಸದೃಢರಾದರೆ ಮಾತ್ರ ನೆಮ್ಮದಿ ಜೀವನ ಕಾಣಲು ಸಾಧ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಯುವ ಮುಖಂಡ , ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ.ಕಾಂತೇಶ್ ಮಾತನಾಡಿ, ಡಾ.ಧನಂಜಯ ಸರ್ಜಿ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಅವರಿಗೆ ಹೃದಯಪೂರ್ವಕ ಸ್ವಾಗತ. ಅವರ ಅನುಭವವನ್ನು ಪಕ್ಷ ಬಳಸಿಕೊಳ್ಳಲಿದ್ದು, ಎಲ್ಲರೂ ಸಂಘಟಿತರಾಗಿ, ಒಟ್ಟಿಗೆ ಬೆಳೆಯೋಣ ಎಂದು ಆಶಿಸಿದರು.
ಈ ಸಂದರ್ಭ ಡಾ.ಧನಂಜಯ ಸರ್ಜಿ ಅವರನ್ನು ಗೌರವಿಸಲಾಯಿತು.
ಜಿಲ್ಲಾ ಸರಕಾರಿ ನಿವೃತ್ತ ನೌಕರರ ಸಂಘದ ಡಿ.ಎಂ.ಚಂದ್ರಶೇಖರ್ ಮತ್ತಿತರರು ಭಾಗವಹಿಸಿದ್ದರು.