ಶಿವಮೊಗ್ಗ ಜುಲೈ 02 : ಒಂದು ಸಾಹಿತ್ಯ ಸಂಗ್ರಹಕ್ಕೆ ಪೂರಕ ಸೌಲಭ್ಯ ಮತ್ತು ಅನುಕೂಲಗಳು ಇಲ್ಲದ ಕಾಲದಲ್ಲಿ ಸಮಗ್ರ ವಚನ ಸಾಹಿತ್ಯವನ್ನು ಸಂರಕ್ಷಿಸುವ ಕೆಲಸ ಮಾಡಿದ ಫ.ಗು.ಹಳಕಟ್ಟಿಯವರು ಸ್ಮರಣೀಯರು ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಇಂದು ಏರ್ಪಡಿಸಲಾಗಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ(ಡಾ.ಫ.ಗು.ಹಳಕಟ್ಟಿರವರ ಜನ್ಮದಿನ)ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆಲ್ಲ ಸಾಹಿತ್ಯ ಸಂಗ್ರಹಣೆ ಮತ್ತು ಮುದ್ರಣ ಬಹಳ ಕಷ್ಟ ಇತ್ತು. ಪೇಪರ್, ಲೇಖನ ಸಾಮಗ್ರಿ, ಮುದ್ರಣ ಸೇರಿದಂತೆ ಇತರೆ ಸೌಲಭ್ಯಗಳು ಇರಲಿಲ್ಲ. ಅಂತಹ ಕಷ್ಟಕರ ಸ್ಥಿತಿಯಲ್ಲೂ ಫ.ಗು.ಹಳಕಟ್ಟಿಯವರು ವಚನ ಸಾಹಿತ್ಯವನ್ನು ಸಂರಕ್ಷಿಸುವ ಕೆಲಸ ಮಾಡಿರುವುದು ಉನ್ನತವಾದ ಕೆಲಸ. ಅವರ ಜನ್ಮದಿನದಂದು ನಾಡು, ನೆಲ, ಜಲ ಮತ್ತು ಭಾಷೆ ಸಂರಕ್ಷಣೆ ಕುರಿತು ಸಹ ಯೋಚನೆ ಮಾಡಬೇಕಾಗಿದೆ. ಸರ್ಕಾರದ ವತಿಯಿಂದ ಇದೇ ಮೊದಲ ವರ್ಷ ಅವರ ಜನ್ಮದಿನ ಪ್ರಯುಕ್ತ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಆಚರಿಸುವಂತೆ ಆಗಲಿ ಎಂದರು.
ಕರ್ನಾಟಕ ಸಂಘದ ಅಧ್ಯಕ್ಷರಾದ ಎಂ.ಎನ್.ಸುಂದರರಾಜ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಇಡೀ ಸಾಹಿತ್ಯ ವಲಯದಲ್ಲಿ ವಚನ ಸಾಹಿತ್ಯ ಪ್ರಮುಖ ಪಾತ್ರ ವಹಿಸುತ್ತದೆ. ಇದು ಜನ ಸಾಮಾನ್ಯರ ಸಾಹಿತ್ಯ. ಇಂತಹ ವಚನಗಳ ಒಂದು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಹೊರತಂದ ಏಕೈಕ ವ್ಯಕ್ತಿ ಫ.ಗು.ಹಳಕಟ್ಟಿಯವರು. ಹಿಂದೆ ಕೇವಲ 40 ವಚನ ಸಾಹಿತಿಗಳ ಮಾಹಿತಿ ಲಭ್ಯವಿತ್ತು. ಆದರೆ ಇವರು 250 ಕ್ಕೂ ಹೆಚ್ಚು ವಚನಕಾರರ ಸಾಹಿತ್ಯ ಸಂಗ್ರಹಿಸಿ ಪರಿಚಯಿಸಿದ್ದಾರೆ.
ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು 1880 ರ ಜುಲೈ 2 ರಂದು ಧಾರವಾಡದಲ್ಲಿ ಜನಿಸಿದರು. ಶಿಕ್ಷಣ ಮುಗಿಸಿ ವಕೀಲರಾದ ಇವರು ಬೇರೆ ಬೇರೆ ಕಾರಣಗಳಿಗೆ ಹಳ್ಳಿಗಳ ಮನೆಗಳು, ಮಠ ಮಂದಿರಗಳಲ್ಲಿ ಬಟ್ಟೆಗಳಲ್ಲಿ ಕಟ್ಟುಗಳನ್ನು ಕಟ್ಟಿರುವುದನ್ನು ಕಂಡು ಕುತೂಹಲಗೊಂಡು ಅದರಲ್ಲಿದ್ದ ತಾಳೆಗರಿಯಲ್ಲಿನ ಸಾಹಿತ್ಯವನ್ನು ಸಂಗ್ರಹಿಸಿದರು. ಸುಮಾರು 1500 ಅಂತಹ ಕಟ್ಟುಗಳನ್ನು ಸಂಗ್ರಹಿಸಿ, ಸ್ವತಃ ತಮ್ಮ ಕೈಬರಹದಿಂದ 25 ಸಾವಿರಕ್ಕೂ ಹೆಚ್ಚು ವಚನಗಳನ್ನು ದಾಖಲಿಸಿದ್ದಾರೆ. ಅವರ ಕೈ ಸವೆದು ರಕ್ತ ಬರುವವರೆಗೆ ವಚನಗಳನ್ನು ಕಾಪಿ ಮಾಡಿದ್ದುಂಟು. ಆಗ ಮುದ್ರಣಕ್ಕಾಗಿ ಮಂಗಳೂರಿನಲ್ಲಿ ಕ್ರಿಶ್ಚಿಯನ್ ಮಿಷನರಿಗೆ ಸೇರಿದ ಒಂದು ಮುದ್ರಣಾಲಯ ಮಾತ್ರ ಇತ್ತು. ಅಲ್ಲಿಗೆ ತಾವು ಕೈಯಲ್ಲಿ ಬರೆದಂತಹ ವಚನಗಳನ್ನು ಮುದ್ರಣಕ್ಕೆ ಕಳುಹಿದಾಗ ಅವರು ಸಹ ಮುದ್ರಣ ಮಾಡದೇ ವಾಪಸ್ ಕಳುಹಿಸುತ್ತಾರೆ. ಆಗ ತಮಗೆ ಬಂದೊಗಿದ್ದ ಬಡತನದ ನಡುವೆಯೂ ಬಿಜಾಪುರದಲ್ಲಿ ಇದ್ದಂತಹ ಒಂದು ಮನೆಯನ್ನು ಮಾರಾಟ ಮಾಡಿ ತಾವೇ ಮುದ್ರಣ ಸ್ಥಾಪಿಸುತ್ತಾರೆ.
ನಂತರ ಶಿವಾನುಭವ ಗ್ರಂಥಮಾಲಿಕೆ ಸೇರಿದಂತೆ ವಚನ ಸಾಹಿತ್ಯದ 75 ಪುಸ್ತಕ ಪ್ರಕಟಿಸುತ್ತಾರೆ. ಶಿವಾನುಭವ ಎಂಬ ಮಾಸಿಕ ಮತ್ತು ನವಕರ್ನಾಟಕ ಎಂಬ ವಾರ ಪತ್ರಿಕೆ ತೆರೆದು ಅದರ ಮೂಲಕ ವಚನ ಸಾಹಿತ್ಯ ಪ್ರಚುರಪಡಿಸುತ್ತಾರೆ. ಕೆಲವು ಮಠಾಧೀಶರು ನೆರವು ನೀಡುತ್ತಾರೆ. ವೈಯಕ್ತಿಕ ಜೀವನದಲ್ಲಿ ಹಣಕಾಸು ಸೇರಿದಂತೆ ಅನೇಕ ಕಷ್ಟಕಾರ್ಪಣ್ಯಗಳು ಬಂದರೂ ವಿಚಲಿತರಾಗದೆ 25 ವರ್ಷ ಪತ್ರಿಕೆ ನಡೆಸಿ ವಚನ ಸಾಹಿತ್ಯ ಪ್ರಚಾರ ಮಾಡುತ್ತಾರೆ. ಕರ್ನಾಟಕ ವಿಶ್ವವಿದ್ಯಾಲಯ ಇವರನ್ನು ಗುರುತಿಸಿ ಡಾಕ್ಟರೇಟ್ ಪದವಿ ಪ್ರದಾನ ಮಾಡುತ್ತದೆ.
ಬಸವಣ್ಣನವರ ವಚನಗಳನ್ನು ಇಂಗ್ಲಿಷ್‍ಗೆ ತರ್ಜುಮೆ ಮಾಡುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ವಚನ ಸಾಹಿತ್ಯ ಪರಿಚಯಿಸಿದವರಲ್ಲಿ ಇವರು ಮೊದಲಿಗರು. ವಚನ ಸಾಹಿತ್ಯ ಸಂಗ್ರಹಿಸುವ ಮೂಲಕ ಒಂದು ವಿಶ್ವವಿದ್ಯಾಲಯ ಅಥವಾ ಸರ್ಕಾರ ಮಾಡಬಹುದಾದ ಕೆಲಸ ಇವರು ಮಾಡಿದ್ದಾರೆ. ಇಂತಹವರ ಜನ್ಮದಿನ ಪ್ರಯುಕ್ತ ವಚನ ಸಾಹಿತ್ಯ ಸಂಗ್ರಹ ದಿನಾಚರಣೆಯನ್ನು ಸರ್ಕಾರ ಮಾಡುತ್ತಿರುವುದಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು.
(ಫೋಟೊ ಇದೆ)