ಶಿವಮೊಗ್ಗ, ಜುಲೈ. 24 ಲಿಂಗತ್ವ ಅಲ್ಪಸಂಖ್ಯಾತರ ಹಾಗೂ ದಮನಿತ ಮಹಿಳೆಯರ ಸಾಮಾಜಿಕ ಹಾಗೂ ಆರ್ಥಿಕ ಸ್ವಾವಲಂಬನೆಗೆ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ತಿಳಿಸಿದರು.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಹಾಗೂ ದಮನಿತ ಮಹಿಳೆಯರ ಜೀವನ ಮಟ್ಟ ಸುಧಾರಿಸಲು ವಿವಿಧ ಇಲಾಖೆಗಳ ಮಧ್ಯೆ ಸಮನ್ವಯತೆ ಮತ್ತು ಯೋಜನೆಗಳ ಅನುಷ್ಟಾನಕ್ಕಾಗಿ ರಚಿಸಲಾದ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿದರು.
ಗುರುತಿನ ಚೀಟಿ, ಪಡಿತರ ಚೀಟಿ, ಆಧಾರ ಕಾರ್ಡ್ ಇತ್ಯಾದಿ ಮತದಾರರ ಕಾರ್ಡ್ ಇತ್ಯಾದಿಗಳನ್ನು ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ದಮನಿತ ಮಹಿಳೆಯರು ಪಡೆದುಕೊಳ್ಳಲು ನೆರವು ನೀಡಬೇಕು. ನಿವೇಶನ ಇದ್ದವರಿಗೆ ವಸತಿ ಯೋಜನೆಗಳ ಅಡಿಯಲ್ಲಿ ಮನೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಈಗಾಗಲೇ ಮನೆ ನಿರ್ಮಾಣ ಕುರಿತಾಗಿ 80ಪ್ರಸ್ತಾವನೆಗಳನ್ನು ರಾಜೀವ್ಗಾಂಧಿ ಹೌಸಿಂಗ್ ಕಾರ್ಪೊರೇಶನ್ಗೆ ಸಲ್ಲಿಸಲಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಮಂಜೂರಾತಿಯನ್ನು ಪಡೆದುಕೊಳ್ಳಬೇಕು. ಆರೋಗ್ಯ ಸೇವೆಗಳು, ಪಿಂಚಣಿ ಸೇರಿಂದಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ಸೌಲಭ್ಯಗಳು ಇವರಿಗೆ ಸಿಗುವುದನ್ನು ಖಾತ್ರಿಪಡಿಸಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ದಮನಿತ ಮಹಿಳೆಯರಿಗೆ ಅವರ ಶೈಕ್ಷಣಿಕ ಹಿನ್ನೆಲೆ ಅನುಗುಣವಾಗಿ ವೃತ್ತಿ ತರಬೇತಿಯನ್ನು ಉದ್ಯೋಗ ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆ ಮೂಲಕ ನೀಡಬೇಕು. ಇದಕ್ಕಾಗಿ ಆಸಕ್ತರ ಸಭೆಯನ್ನು ಕರೆದು ಸಮಾಲೋಚನೆ ನಡೆಸಬೇಕು. ಸಣ್ಣಪುಟ್ಟ ಸ್ವಯಂ ಉದ್ಯೋಗ ಕೈಗೊಳ್ಳಲು ಮುಂದೆ ಬರುವವರಿಗೆ ಚೈತನ್ಯ ಯೋಜನೆ, ಉದ್ಯೋಗಿನಿ ಯೋಜನೆಗಳ ಅಡಿಯಲ್ಲಿ ಸಾಲ ಸೌಲಭ್ಯ ಒದಗಿಸಬೇಕು. ಸಾಲ ಒದಗಿಸಲು ಬ್ಯಾಂಕುಗಳಿಗೆ ಸೂಚನೆ ನೀಡಲಾಗುವುದು ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ 439 ಲಿಂಗತ್ವ ಅಲ್ಪಸಂಖ್ಯಾತರಿದ್ದು, 22 ಫಲಾನುಭವಿಗಳು ಮೈತ್ರಿ ಯೋಜನೆಯಡಿಯಲ್ಲಿ ಪಿಂಚಣಿ ಸೌಲಭ್ಯ ಪಡೆಯುತ್ತಿದ್ದಾರೆ. 74 ಫಲಾನುಭವಿಗಳಿಗೆ 20ಸಾವಿರ ರೂ. ಪ್ರೋತ್ಸಾಹಧನ, 20ಫಲಾನುಭವಿಗಳಿಗೆ 25ಸಾವಿರ ರೂ ಸಾಲ ಮತ್ತು ಸಹಾಯಧನ ಒದಗಿಸಲಾಗಿದ್ದು, ಒಟ್ಟು 94 ಮಂದಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ ಸೌಲಭ್ಯ ಪಡೆದಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶೇಷಪ್ಪ ಅವರು ಮಾಹಿತಿ ನೀಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸರಸ್ವತಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಶಿವರಾಮೇಗೌಡ, ಅಪರ ಜಿಲ್ಲಾಧಿಕಾರಿ ಅನುರಾಧ, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.