ಶಿವಮೊಗ್ಗ: ರೋಟರಿ ಸಂಸ್ಥೆಯು ಸಾವಿರಾರು ಕ್ಲಬ್‌ಗಳ ಮುಖಾಂತರ ವಿಶ್ವಾದ್ಯಂತ ಸಮಾಜಮುಖಿ ಕೆಲಸಗಳನ್ನು ನಡೆಸುತ್ತಿದ್ದು, ನಿಸ್ವಾರ್ಥ ಮನೋಭಾವದಿಂದ ಕಾರ್ಯ ನಿರ್ವಹಿಸುತ್ತಿದೆ ಎಂದು ರೋಟರಿ ಪಿಡಿಜಿ, ಮಾಜಿ ಗವರ್ನರ್ ಡಾ. ಭರತೇಶ್ ಆದಿರಾಜ್ ಹೇಳಿದರು.

ಶಿವಮೊಗ್ಗ ನಗರದ ಸವಳಂಗ ರಸ್ತೆಯಲ್ಲಿರುವ ರೋಟರಿ ಯುವ ಕೇಂದ್ರದಲ್ಲಿ ಆಯೋಜಿಸಿದ್ದ “ರೋಟರಿ ಕ್ಲಬ್ ಶಿವಮೊಗ್ಗ 2023-24ರ ಪದಾಧಿಕಾರಿಗಳ ಪದವಿ ಸ್ವೀಕಾರ” ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ರೋಟರಿ ಸಂಸ್ಥೆಯು ನಿರಂತರವಾಗಿ ಸೇವಾ ಕಾರ್ಯಗಳನ್ನು ನಡೆಸುತ್ತಿದೆ. ಕಷ್ಟದಲ್ಲಿ ಇರುವ ಬಡವರಿಗೆ ನೆರವು ಒದಗಿಸಲಾಗುತ್ತಿದೆ. ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸುವ ಹಾಗೂ ಅಭಿವೃದ್ಧಿಪಡಿಸುವ ವಿಶೇಷ ಯೋಜನೆಗಳನ್ನು ರೋಟರಿ ಅನುಷ್ಠಾನ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಉತ್ತಮ ಸೇವೆ ನಡೆಸಬೇಕು ಎಂದು ಆಶಿಸಿದರು.

ರೋಟರಿ ಕ್ಲಬ್ ಶಿವಮೊಗ್ಗ 2023-24ರ ಅಧ್ಯಕ್ಷ ಸೆಂಥಿಲ್ ವೇಲನ್ ಅವರು ಮಾತನಾಡಿ, ನಾಲ್ಕೈದು ದಶಕಗಳ ಹಿನ್ನೆಲೆ ಹೊಂದಿರುವ ರೋಟರಿ ಕ್ಲಬ್ ಶಿವಮೊಗ್ಗ ಈವರೆಗೂ ಅತ್ತ್ಯುತ್ತಮ ಕಾರ್ಯ ಚಟುವಟಿಕೆಗಳಿಂದ ನಡೆದುಕೊಂಡು ಬಂದಿದ್ದು, ಪ್ರಸ್ತಕ ಸಾಲಿನಲ್ಲಿಯೂ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಸರ್ಕಾರಿ ಶಾಲೆಗಳ ಅಭಿವೃದ್ದಿ, ಸಾರ್ವಜನಿಕರಿಗೆ ಉಪಯುಕ್ತ ಆರೋಗ್ಯ ಜಾಗೃತಿ ಶಿಬಿರ ಹಾಗೂ ಉಚಿತ ತಪಾಸಣಾ ಶಿಬಿರಗಳನ್ನು ನಡೆಸಲು ಕಾರ್ಯಕ್ರಮ ರೂಪಿಸಲಾಗುವುದು. ಹೆಚ್ಚಿನ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.

ರೋಟರಿ ಪಿಡಿಜಿ, ಮಾಜಿ ಗವರ್ನರ್ ಡಾ. ಭರತೇಶ್ ಆದಿರಾಜ್ ಅವರು ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಮಾಜಿ ಅಧ್ಯಕ್ಷ ಎನ್.ವಿ.ಭಟ್ ಅವರಿಂದ ನೂತನ ಅಧ್ಯಕ್ಷ ಸೆಂಥಿಲ್ ವೇಲನ್ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು.

ರೋಟರಿ ವಲಯ 10ರ ಸಹಾಯಕ ಗವರ್ನರ್ ರಾಜೇಂದ್ರ ಪ್ರಸಾದ್, ವಲಯ 10ರ ಜೋನಲ್ ಲೆಫ್ಟಿನೆಂಟ್ ಮಲ್ಲೇಶ್.ಸಿ.ಎನ್., ರೋಟರಿ ಕ್ಲಬ್ ಶಿವಮೊಗ್ಗ 2023-24ರ ಕಾರ್ಯದರ್ಶಿ ರವಿ ಪಾಟೀಲ್, ಮಾಜಿ ಅಧ್ಯಕ್ಷ ಎನ್.ವಿ.ಭಟ್, ಮಾಜಿ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಭಟ್, ಕೆ.ಸೂರ್ಯನಾರಾಯಣ ಉಡುಪ, ರಾಕೇಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು.

error: Content is protected !!