ಶಿವಮೊಗ್ಗ: ಸೇವಾ ಕ್ಷೇತ್ರದಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವ ಅಂತರಾಷ್ಟ್ರೀಯ ರೋಟರಿ ಸೇವಾ ಸಂಸ್ಥೆಗಳು ಬಡವರ ಪಾಲಿಗೆ ಕಾಮಧೇನು ಕಲ್ಪವೃಕ್ಷ ಇದ್ದಂತೆ ಎಂದು ರೋಟರಿ ಜಿಲ್ಲೆ ಮಾಜಿ ಜಿಲ್ಲಾ ಗವರ್ನರ್ ಎಂ.ಜಿ.ರಾಮಚಂದ್ರಮೂರ್ತಿ ಹೇಳಿದರು.
ಶಿವಮೊಗ್ಗ ಮಿಡ್‍ಟೌನ್ ನೇತೃತ್ವದಲ್ಲಿ “ಶಿವಮೊಗ್ಗ ಮಲೆನಾಡು ರೋಟರಿ ಕ್ಲಬ್ ಸ್ಥಾಪನೆ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದವರಿಗೆ ನೆರವು ಒದಗಿಸುವ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಯೋಜನೆಗಳನ್ನು ಅನುಷ್ಠಾನ ಮಾಡುತ್ತ ರೋಟರಿ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಪ್ರಗತಿಗೆ ಸಹಕಾರ ನೀಡುತ್ತಿವೆ ಎಂದು ತಿಳಿಸಿದರು.
ರೋಟರಿ ಜಿಲ್ಲೆ 3182ರಲ್ಲಿ ಈಗಾಗಲೇ 86 ಕ್ಲಬ್‍ಗಳಿದ್ದು, ಈ ವರ್ಷದಲ್ಲಿ 4 ಹೊಸ ಕ್ಲಬ್‍ಗಳು ಉದಯವಾಗಿವೆ. ಅದರಲ್ಲಿ 90ನೇ ಕ್ಲಬ್ ಆಗಿ ಶಿವಮೊಗ್ಗ ಮಲೆನಾಡು ರೋಟರಿ ಕ್ಲಬ್ ಕೂಡ ಒಂದಾಗಿದೆ. ಈ ಕ್ಲಬ್ ಕೂಡ ಉತ್ತಮವಾಗಿ ಸಾಮಾಜಿಕ ಸೇವಾ ಕಾರ್ಯಗಳನ್ನು ಮುನ್ನಡೆಸಬೇಕು ಎಂದು ಆಶಿಸಿದರು.
ಶಿವಮೊಗ್ಗ ಮಲೆನಾಡು ರೋಟರಿ ಕ್ಲಬ್ ನೂತನ ಸಂಸ್ಥಾಪಕ ಅಧ್ಯಕ್ಷರಾಗಿ ಮಂಜುಳರಾಜು, ಕಾರ್ಯದರ್ಶಿಯಾಗಿ ಕಿಶನ್ ಎನ್.ಪಟ್‍ಕುಳೆ ಅವರು ನೂತನ ಕಾರ್ಯಕಾರಿ ಮಂಡಳಿಯೊಂದಿಗೆ ಅಧಿಕಾರ ಸ್ವೀಕರಿಸಿದರು. ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ನೂತನ ತಂಡಕ್ಕೆ ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ನೂತನ ಕ್ಲಬ್ ಸ್ಥಾಪನೆಗೆ ಸಾರಥ್ಯ ವಹಿಸಿ ಸಂಪೂರ್ಣ ಸಲಹೆ ನೀಡಿದ ಮಾಜಿ ಸಹಾಯಕ ಗವರ್ನರ್ ಉದಯ್‍ಪೇಟೆಯವರು ಕ್ಲಬ್ ಸ್ಥಾಪನೆಗೆ ಶ್ರಮ ವಹಿಸಿದ ಹಾಗೂ ಸಹಕಾರ ನೀಡಿದ ಎಲ್ಲ ಸದಸ್ಯರಿಗೂ ಧನ್ಯವಾದ ಸಲ್ಲಿಸಿದರು.
ವಲಯ 10ರ ಮಾಜಿ ಸಹಾಯಕ ಗವರ್ನರ್ ಎಂ.ಪಿ.ಆನಂದಮೂರ್ತಿ ಮಾತನಾಡಿ, ನೂತನ ಕ್ಲಬ್‍ನಿಂದ ಅನೇಕ ಸಮಾಜಮುಖಿ ಕಾರ್ಯಗಳು ನಡೆಯಬೇಕು. ವರ್ಷ ವರ್ಷದಿಂದ ಉತ್ತಮವಾಗಿ ಕ್ಲಬ್ ಬೆಳೆಯಬೇಕು. ಅತಿ ಹೆಚ್ಚು ಸೇವಾ ಕಾರ್ಯಗಳು ನಡೆಯಬೇಕು ಎಂದು ಹೇಳಿದರು.
ಮಿಡ್‍ಟೌನ್ ಕ್ಲಬ್‍ನ ಹರ್ಷ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಕಾರ್ಯದರ್ಶಿ ಅನಿಲ್ ಪಿ.ಶೆಟ್ಟಿ, ವಲಯ ಸೇನಾನಿ ಕೆ.ಪಿ.ಶೆಟ್ಟಿ, ರಾಜಶೇಖರ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‍ಕುಮಾರ್ ಎಚ್.ಎಲ್.ರವಿ, ರವೀಂದ್ರನಾಥ ಐತಾಳ್, ಸುಬ್ಬೇಗೌಡ, ಕೆ.ಬಿ.ರವಿಶಂಕರ್, ಡಾ. ಗುಡದಪ್ಪ ಕಸಬಿ, ವೀರಣ್ಣ ಹುಗಿ, ಸಿ.ರಾಜು ಉಪಸ್ಥಿತರಿದ್ದರು.